
ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆತಿಥೇಯ ಶ್ರೀಲಂಕಾ ಮೊದಲ ಇನ್ನಿಂಗ್ಸ್ನಲ್ಲಿ ಗೌರವಾನ್ವಿತ ಮೊತ್ತ ಕಲೆಹಾಕಿದೆ ಎಂದರೆ ಅದಕ್ಕೆ ಕಾರಣ ಯುವ ಆಟಗಾರ ಸೋನಲ್ ದಿನುಷಾ. ಭಾರತದ ಬಲಿಷ್ಠ ಬೌಲರ್ಗಳ ಎದುರು ಅದ್ಭುತವಾಗಿ ಬ್ಯಾಟಿಂಗ್ ಮಾಡಿದ ಈ 25 ವರ್ಷದ ಆಲ್‌ರೌಂಡರ್ ತಂಡವನ್ನು ರಕ್ಷಿಸಿದ್ದಲ್ಲದೆ, ಚೊಚ್ಚಲ ಟೆಸ್ಟ್ ಶತಕವನ್ನು ಬಾರಿಸಿದರು. ಸೋನಲ್ 167 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 100 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಶ್ರೀಲಂಕಾ ಕೇವಲ 59 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿದ್ದಾಗ ಕ್ರೀಸ್‌ಗೆ ಬಂದ ಸೋನಲ್ ದಿನುಷಾ, ನಿರೋಷನ್ ಡಿಕ್ವೆಲ್ಲಾ ಅವರೊಂದಿಗೆ ಅದ್ಭುತ ಶತಕದ ಪಾಲುದಾರಿಕೆಯನ್ನು ಹಂಚಿಕೊಂಡಿದಲ್ಲದೆ ತಂಡದ ಇನ್ನಿಂಗ್ಸ್ ಸ್ಥಿರಗೊಳಿಸಿದರು.
ಸೋನಲ್ ದಿನುಷಾ ಮತ್ತು ಡಿಕ್ವೆಲ್ಲಾ ಇಬ್ಬರೂ ಶತಕದ ಪಾಲುದಾರಿಕೆಯನ್ನು ಹಂಚಿಕೊಂಡಿದಲ್ಲದೆ 6ನೇ ವಿಕೆಟ್ಗೆ 146 ರನ್‌ಗಳ ಜೊತೆಯಾಟ ಕಟ್ಟಿದರು. ಸೋನಲ್ ಮತ್ತು ಡಿಕ್ವೆಲ್ಲಾ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಸ್ವೀಪ್ ಶಾಟ್ ಬಳಸಿ ಸಾಕಷ್ಟು ರನ್ ಗಳಿಸಿದರು. ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ ಮತ್ತು ಮಾನವ್ ಸುತಾರ್ ಉತ್ತಮ ಲೆಂಗ್ತ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದರು, ಆದರೆ ಸೋನಲ್ ಮತ್ತು ಡಿಕ್ವೆಲ್ಲಾ ಸ್ವೀಪ್ ಶಾಟ್ ಆಡುವ ಮೂಲಕ ಈ ತ್ರಿವಳಿ ಸ್ಪಿನ್ನರ್ಗಳ ಲಯ ಕಳೆದರು. ಆದಾಗ್ಯೂ ಡಿಕ್ವೆಲ್ಲಾಗೆ ಶತಕ ಪೂರೈಸಲು ಸಾಧ್ಯವಾಗಲಿಲ್ಲ, ಆದರೆ ಸೋನಲ್ ಶತಕ ಬಾರಿಸುವಲ್ಲಿ ಯಶಸ್ವಿಯಾದರು.
11 ವರ್ಷಗಳ ನಂತರ ಭಾರತದ ವಿರುದ್ಧ ಆರನೇ ಕ್ರಮಾಂದಲ್ಲಿ ಬ್ಯಾಟಿಂಗ್ ಮಾಡಿ ಶತಕ ಬಾರಿಸಿದ ಸಾಧನೆಯನ್ನು ಸೋನಲ್ ದಿನುಷಾ ಮಾಡಿದ್ದಾರೆ. ಈ ಹಿಂದೆ ದಿನೇಶ್ ಚಾಂಡಿಮಲ್ 2015 ರಲ್ಲಿ ಈ ಸಾಧನೆ ಮಾಡಿದ್ದರು. ಇವರಿಬ್ಬರಿಗೂ ಮೊದಲು 1985 ರಲ್ಲಿ ಅರ್ಜುನ ರಣತುಂಗ 6ನೇ ಕ್ರಮಾಂದಲ್ಲಿ ಶತಕದ ಇನ್ನಿಂಗ್ಸ್ ಆಡಿದ್ದರು
ಸೋನಾಲ್ ದಿನುಷಾ ಅವರ ವೃತ್ತಿಜೀವನ ಇತ್ತೀಚೆಗೆ ಆರಂಭವಾಗಿದ್ದು, ಇದು ಅವರ ನಾಲ್ಕನೇ ಟೆಸ್ಟ್ ಪಂದ್ಯವಾಗಿದೆ. ಈ 4 ಟೆಸ್ಟ್ ಪಂದ್ಯಗಳಲ್ಲಿ ಅವರು 57.2 ಸರಾಸರಿಯಲ್ಲಿ 286 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಒಂದು ಅರ್ಧಶತಕವೂ ಸೇರಿದೆ.
ಗಾಲೆ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಒಂದು ಹಂತದಲ್ಲಿ ಫಾಲೋ-ಆನ್ ಹೇರುವ ಸ್ಥಿತಿಯಲ್ಲಿತ್ತು. ಆದರೆ ಸೋನಲ್-ಡಿಕ್ವೆಲ್ಲಾ ಜೊತೆಯಾಟ ಎಲ್ಲವನ್ನೂ ಬದಲಾಯಿಸಿತು. ಆದಾಗ್ಯೂ, ಭಾರತ ಇನ್ನೂ 178 ರನ್‌ಗಳ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು. ಮಾನವ್ ಸುತಾರ್ ಟೀಂ ಇಂಡಿಯಾ ಪರ ನಾಲ್ಕು ವಿಕೆಟ್ ಕಬಳಿಸಿದರೆ, ರವೀಂದ್ರ ಜಡೇಜಾ ಮೂರು ವಿಕೆಟ್ ಪಡೆದರು. ಕುಲ್ದೀಪ್, ಕೃಷ್ಣ ಮತ್ತು ಸಿರಾಜ್ ತಲಾ ಒಂದು ವಿಕೆಟ್ ಪಡೆದರು.