430 ರನ್‌ಗಳ ಗುರಿಯನ್ನೂ ಬಿಡಲಿಲ್ಲ ಲಂಕಾ! ಬ್ರೂಕ್ ದ್ವಿಶತಕ ವ್ಯರ್ಥ, ಕೊನೆಯ ಓವರ್‌ನಲ್ಲಿ ರೋಚಕ ಗೆಲುವು

ಶ್ರೀಲಂಕಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ದಾಖಲೆಯ 430 ರನ್‌ಗಳ ಬೃಹತ್ ಗುರಿಯನ್ನು ಇಂಗ್ಲೆಂಡ್ ವಿರುದ್ಧ ಬೆನ್ನಟ್ಟಿ ಐತಿಹಾಸಿಕ ಗೆಲುವು ಸಾಧಿಸಿದೆ. ಜನಿತ್ ಲಿಯಾನಗೆ ಕೊನೆಯ ಓವರ್‌ನಲ್ಲಿ ಸಿಕ್ಸರ್ ಸಿಡಿಸಿ ಪಂದ್ಯವನ್ನು ಗೆಲ್ಲಿಸಿದರು. ಹ್ಯಾರಿ ಬ್ರೂಕ್ ಅವರ ದ್ವಿಶತಕ ವ್ಯರ್ಥವಾಯಿತು. ಅವಿಷ್ಕಾ ಫರ್ನಾಂಡೊ, ಪವನ್ ರತ್ನಾಯಕೆ ಮತ್ತು ದಾಸುನ್ ಶನಕ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಲಂಕಾ ಈ ಅಭೂತಪೂರ್ವ ಚೇಸ್ ಪೂರ್ಣಗೊಳಿಸಿತು. ಇದು ವಿಶ್ವ ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆಗಳಲ್ಲಿ ಒಂದಾಗಿದೆ.

430 ರನ್‌ಗಳ ಗುರಿಯನ್ನೂ ಬಿಡಲಿಲ್ಲ ಲಂಕಾ! ಬ್ರೂಕ್ ದ್ವಿಶತಕ ವ್ಯರ್ಥ, ಕೊನೆಯ ಓವರ್‌ನಲ್ಲಿ ರೋಚಕ ಗೆಲುವು
ಶ್ರೀಲಂಕಾ ತಂಡ
Image Credit source: PTI

Updated on: Oct 22, 2026 | 10:46 PM

ಏಕದಿನ ಕ್ರಿಕೆಟ್‌ನಲ್ಲಿ 429 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದರೆ ಗೆಲುವು ಬಹುತೇಕ ಖಚಿತ ಎಂದೇ ಭಾವಿಸಲಾಗುತ್ತದೆ. ಆದರೆ ಪಾಕಿಸ್ತಾನದ ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕ್ರಿಕೆಟ್ ಇತಿಹಾಸವೇ ಬದಲಾಗಿದೆ. ಇಂಗ್ಲೆಂಡ್ ನೀಡಿದ್ದ ಬರೋಬ್ಬರಿ 430 ರನ್‌ಗಳ ಗುರಿಯನ್ನು ಶ್ರೀಲಂಕಾ ತಂಡ ಇನ್ನೂ ಒಂದು ಎಸೆತ ಬಾಕಿ ಇರುವಾಗಲೇ ಬೆನ್ನಟ್ಟುವ ಮೂಲಕ ಐತಿಹಾಸಿಕ ಗೆಲುವು ದಾಖಲಿಸಿದೆ. ಪಂದ್ಯದ ಕೊನೆಯ ಓವರ್‌ನಲ್ಲಿ ಶ್ರೀಲಂಕಾ ಗೆಲುವಿಗೆ ಎಂಟು ರನ್‌ಗಳ ಅಗತ್ಯವಿತ್ತು. ಮೊದಲ ಎಸೆತದಲ್ಲಿ ಒಂದು ರನ್ ಗಳಿಸಿದ ತಂಡ, ಬಳಿಕ ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಜನಿತ್ ಲಿಯಾನಗೆ ಮಾತ್ರ ಎದೆಗುಂದಲಿಲ್ಲ. ಜೋಶ್ ಟಂಗ್ ಎಸೆದ ಐದನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ಶ್ರೀಲಂಕಾಗೆ ಸ್ಮರಣೀಯ ಗೆಲುವು ತಂದುಕೊಟ್ಟರು.

ಈ ಗೆಲುವಿನೊಂದಿಗೆ ಶ್ರೀಲಂಕಾ ತನ್ನ ಏಕದಿನ ಕ್ರಿಕೆಟ್ ಇತಿಹಾಸದ ಅತ್ಯಧಿಕ ಗುರಿ ಬೆನ್ನಟ್ಟಿದ ಸಾಧನೆ ಮಾಡಿತು. ಮತ್ತೊಂದೆಡೆ, ಇಂಗ್ಲೆಂಡ್ ಪರ ಹ್ಯಾರಿ ಬ್ರೂಕ್ ಸಿಡಿಸಿದ ಅಮೋಘ ದ್ವಿಶತಕವೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ಅತ್ಯಧಿಕ ರನ್ ಚೇಸ್

ಏಕದಿನ ಕ್ರಿಕೆಟ್‌ನಲ್ಲಿ ಬೃಹತ್ ಮೊತ್ತವನ್ನು ಬೆನ್ನಟ್ಟುವುದು ಸುಲಭದ ಮಾತಲ್ಲ. ಆದರೆ ಶ್ರೀಲಂಕಾ ತಂಡ 430 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ವಿಶ್ವ ಕ್ರಿಕೆಟ್‌ನ ಗಮನ ಸೆಳೆದಿದೆ. 2006 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ 435 ರನ್‌ಗಳ ಗುರಿಯನ್ನು ಬೆನ್ನಟ್ಟಿ ಏಕದಿನ ಕ್ರಿಕೆಟ್‌ನಲ್ಲಿ ದಾಖಲೆ ನಿರ್ಮಿಸಿತ್ತು. ಇದೀಗ ಇಂಗ್ಲೆಂಡ್ ವಿರುದ್ಧ 430 ರನ್‌ಗಳನ್ನು ಬೆನ್ನಟ್ಟಿರುವ ಶ್ರೀಲಂಕಾ, ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧ 406 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಭಾರತವನ್ನು ಹಿಂದಿಕ್ಕಿದೆ. ಈ ಮೂಲಕ ಶ್ರೀಲಂಕಾ ತನ್ನ ಏಕದಿನ ಕ್ರಿಕೆಟ್ ಇತಿಹಾಸದ ಅತ್ಯಧಿಕ ರನ್ ಚೇಸಿಂಗ್ ಸಾಧನೆಯನ್ನು ದಾಖಲಿಸಿದೆ.

ರತ್ನಾಯಕೆ ಶತಕದ ಇನ್ನಿಂಗ್ಸ್

430 ರನ್‌ಗಳ ಬೃಹತ್ ಗುರಿ ಶ್ರೀಲಂಕಾ ತಂಡದ ಮೇಲೆ ಭಾರಿ ಒತ್ತಡ ಸೃಷ್ಟಿಸಿತ್ತು. ಆರಂಭದಲ್ಲೇ ಕಮಿಂದು ಮೆಂಡಿಸ್ 18 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ನಾಯಕ ಕುಶಾಲ್ ಮೆಂಡಿಸ್ ಯಾವುದೇ ರನ್ ಗಳಿಸದೆ ರನೌಟ್ ಆಗಿದ್ದು ತಂಡಕ್ಕೆ ಮತ್ತೊಂದು ಆಘಾತ ನೀಡಿತು. ಆದರೆ ಬಳಿಕ ಕ್ರೀಸ್‌ಗೆ ಬಂದ ಅವಿಷ್ಕಾ ಫರ್ನಾಂಡೊ ಮತ್ತು ಪವನ್ ರತ್ನಾಯಕೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಎರಡನೇ ವಿಕೆಟ್‌ಗೆ ಕೇವಲ 137 ಎಸೆತಗಳಲ್ಲಿ 166 ರನ್‌ಗಳನ್ನು ಸೇರಿಸಿ ತಂಡದ ಗೆಲುವಿನ ಆಸೆಯನ್ನು ಜೀವಂತವಾಗಿಟ್ಟರು.

ಅವಿಷ್ಕಾ ಫರ್ನಾಂಡೊ 97 ರನ್ ಗಳಿಸಿ ಶತಕದಿಂದ ಕೇವಲ ಮೂರು ರನ್ ದೂರದಲ್ಲಿ ಔಟಾದರು. ಮತ್ತೊಂದೆಡೆ, ಪವನ್ ರತ್ನಾಯಕೆ ಭರ್ಜರಿ 130 ರನ್ ಸಿಡಿಸಿ ತಂಡದ ಚೇಸಿಂಗ್‌ಗೆ ಬಲ ತುಂಬಿದರು. ಬಳಿಕ ದಾಸುನ್ ಶನಕ ಕೂಡ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಪವನ್ ರತ್ನಾಯಕೆ ಜೊತೆಗೂಡಿ ಕೇವಲ 79 ಎಸೆತಗಳಲ್ಲಿ 133 ರನ್‌ಗಳ ಜೊತೆಯಾಟವಾಡಿದರು. ಶನಕ ಕೇವಲ 37 ಎಸೆತಗಳಲ್ಲಿ 73 ರನ್ ಗಳಿಸಿ ಇಂಗ್ಲೆಂಡ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು.

ಕೊನೆಯ ಓವರ್‌ ಹೀರೋ ಜನಿತ್

ಪವನ್ ರತ್ನಾಯಕೆ ಮತ್ತು ದಾಸುನ್ ಶನಕ ವಿಕೆಟ್ ಕಳೆದುಕೊಂಡ ಬಳಿಕ ಪಂದ್ಯದ ರೋಚಕತೆ ಮತ್ತಷ್ಟು ಹೆಚ್ಚಾಯಿತು. ಆದರೆ ಜನಿತ್ ಲಿಯಾನಗೆ ಮಾತ್ರ ಒತ್ತಡಕ್ಕೆ ಮಣಿಯಲಿಲ್ಲ. ಕೇವಲ 27 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ನೆರವಿನಿಂದ ಅಜೇಯ 61 ರನ್ ಸಿಡಿಸಿದ ಅವರು, ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂತಿಮ ಓವರ್‌ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ಶ್ರೀಲಂಕಾದ ಐತಿಹಾಸಿಕ ಗೆಲುವಿಗೆ ಮುದ್ರೆ ಒತ್ತಿದರು.

ಹ್ಯಾರಿ ಬ್ರೂಕ್ ದ್ವಿಶತಕ ವ್ಯರ್ಥ!

ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಈ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 116 ಎಸೆತಗಳಲ್ಲಿ 202 ರನ್ ಸಿಡಿಸಿದ ಅವರು, ಏಕದಿನ ಕ್ರಿಕೆಟ್ ಇತಿಹಾಸದ ಅತ್ಯಂತ ವೇಗದ ದ್ವಿಶತಕ ಸಿಡಿಸಿದ ದಾಖಲೆ ಸೃಷ್ಟಿಸಿದರು. ಬ್ರೂಕ್ ಅವರ ಸ್ಫೋಟಕ ಇನ್ನಿಂಗ್ಸ್‌ನ ನೆರವಿನಿಂದ ಇಂಗ್ಲೆಂಡ್ ಬೃಹತ್ ಮೊತ್ತ ಕಲೆಹಾಕಿತ್ತು. ಆದರೆ ಶ್ರೀಲಂಕಾದ ಬ್ಯಾಟರ್‌ಗಳ ಅಬ್ಬರದ ಮುಂದೆ ಆ ಮೊತ್ತವೂ ಸಾಕಾಗಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us