IND vs NZ: 4-1 ಅಂತರದಿಂದ ಸರಣಿ ಗೆದ್ದು ಟಿ20 ವಿಶ್ವಕಪ್​ಗೆ ರೆಡಿ ಎಂದ ಟೀಂ ಇಂಡಿಯಾ

India vs New Zealand T20 series: 2026ರ ಟಿ20 ವಿಶ್ವಕಪ್‌ಗೂ ಮುನ್ನ ಭಾರತ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು 4-1 ಅಂತರದಿಂದ ಗೆದ್ದಿದೆ. ತಿರುವನಂತಪುರದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ 271 ರನ್ ಗಳಿಸಿದ ಭಾರತ 46 ರನ್‌ಗಳಿಂದ ಜಯಗಳಿಸಿತ್ತು. ಈ ಸರಣಿ ಗೆಲುವು ಟಿ20 ವಿಶ್ವಕಪ್‌ಗೆ ತಂಡಕ್ಕೆ ಉತ್ತಮ ಆತ್ಮವಿಶ್ವಾಸ ನೀಡಿದೆ. ಆರಂಭಿಕ ಮೂರು ಪಂದ್ಯಗಳನ್ನು ಭಾರತ ಗೆದ್ದಿದ್ದರೂ, ನಾಲ್ಕನೇ ಪಂದ್ಯವನ್ನು ನ್ಯೂಜಿಲೆಂಡ್ ಗೆದ್ದುಕೊಂಡಿತ್ತು.

IND vs NZ: 4-1 ಅಂತರದಿಂದ ಸರಣಿ ಗೆದ್ದು ಟಿ20 ವಿಶ್ವಕಪ್​ಗೆ ರೆಡಿ ಎಂದ ಟೀಂ ಇಂಡಿಯಾ
Team India

Updated on: Jan 31, 2026 | 10:51 PM

2026 ರ ಟಿ20 ವಿಶ್ವಕಪ್‌ಗೆ (T20 World Cup 2026) ಮೊದಲು ನ್ಯೂಜಿಲೆಂಡ್ ವಿರುದ್ಧ ತನ್ನ ಕೊನೆಯ ಟಿ20 ಸರಣಿಯನ್ನು ಆಡಿದ ಭಾರತ (India vs New Zealand) ತಂಡ ಐದು ಪಂದ್ಯಗಳ ಟಿ20ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿತು. ಭಾರತ ಈಗಾಗಲೇ ಮೊದಲ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯನ್ನು ತನ್ನದಾಗಿಸಿಕೊಂಡಿತ್ತು. ಆದಾಗ್ಯೂ, ಕಿವೀಸ್ ನಾಲ್ಕನೇ ಪಂದ್ಯವನ್ನು ಗೆಲ್ಲುವ ಮೂಲಕ ಭಾರತಕ್ಕೆ ದಿಟ್ಟ ಉತ್ತರ ನೀಡಿತ್ತು. ಇದೀಗ ಐದನೇ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿರುವ ಟೀಂ ಇಂಡಿಯಾ, ಸರಣಿ ಗೆಲುವಿನೊಂದಿಗೆ ಟಿ20 ವಿಶ್ವಕಪ್​ಗೆ ಕಾಲಿಡುತ್ತಿದೆ. ತಿರುವನಂತಪುರದ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 271 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 225 ರನ್​ಗಳಿಗೆ ಆಲೌಟ್ ಆಗುವ ಮೂಲಕ 46 ರನ್‌ಗಳಿಂದ ಪಂದ್ಯವನ್ನು ಸೋತಿತು.

ಕಿಶನ್ ಚೊಚ್ಚಲ ಟಿ20 ಶತಕ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ ತಂಡದ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 271 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ತಂಡದ ಪರ ಎಂದಿನಂತೆ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಇನ್ನಿಂಗ್ಸ್ ಆರಂಭಿಸಿದರಾದರೂ ಇಬ್ಬರೂ 42 ರನ್‌ಗಳೊಳಗೆ ಔಟಾದರು. ನಂತರ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ, ಕೇವಲ 43 ಎಸೆತಗಳಲ್ಲಿ 6 ಬೌಂಡರಿ ಮತ್ತು 10 ಸಿಕ್ಸರ್‌ಗಳ ಸಹಿತ 103 ರನ್​ಗಳ ಸಿಡಿಲಬ್ಬರದ ಶತಕ ಸಿಡಿಸಿದರು.

ಅರ್ಧಶತಕ ಬಾರಿಸಿದ ಸೂರ್ಯ

ಇತ್ತ ಸೂರ್ಯಕುಮಾರ್ ಯಾದವ್ ಕೂಡ ನಾಯಕನ ಇನ್ನಿಂಗ್ಸ್ ಆಡಿ 30 ಎಸೆತಗಳಲ್ಲಿ 63 ರನ್ ಬಾರಿಸಿದರು. ಹಾರ್ದಿಕ್ ಪಾಂಡ್ಯ 17 ಎಸೆತಗಳಲ್ಲಿ 42 ರನ್​ಗಳ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಏತನ್ಮಧ್ಯೆ, ನ್ಯೂಜಿಲೆಂಡ್ ಬೌಲರ್‌ಗಳಾದ ಲಾಕಿ ಫರ್ಗುಸನ್ ಮತ್ತು ಕೈಲ್ ಜೇಮಿಸನ್ ತಲಾ ಎರಡು ವಿಕೆಟ್ ಪಡೆದರಾದರೂ, ಕಿವೀಸ್​ನ ಯಾವ ಬೌಲರ್​ಗೂ ರನ್​ ವೇಗಕ್ಕೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ.

IND vs NZ: ಕೊಹ್ಲಿ ದಾಖಲೆ ಮುರಿದು ವಿಶ್ವ ದಾಖಲೆ ನಿರ್ಮಿಸಿದ ಸೂರ್ಯಕುಮಾರ್

ಭಾರತದ ಬೌಲರ್​ಗಳ ಪರಾಕ್ರಮ

ಈ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಕೂಡ ಉತ್ತಮ ಆರಂಭವನ್ನೇ ನೀಡಿತು. ಆರಂಭಿಕ ಫಿನ್ ಅಲೆನ್ 38 ಎಸೆತಗಳಲ್ಲಿ 80 ರನ್ ಗಳಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು. ರಚಿನ್ ರವೀಂದ್ರ ಕೂಡ 17 ಎಸೆತಗಳಲ್ಲಿ 30 ರನ್​ಗಳ ಕಾಣಿಕೆ ನೀಡಿದರು. ಇಬ್ಬರೂ ಎರಡನೇ ವಿಕೆಟ್‌ಗೆ 100 ರನ್‌ಗಳ ಜೊತೆಯಾಟ ನೀಡಿದರು. ಆದರೆ ಆ ನಂತರ, ಭಾರತೀಯ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಅರ್ಷದೀಪ್ ಸಿಂಗ್ ಐದು ವಿಕೆಟ್, ಅಕ್ಷರ್ ಪಟೇಲ್ ಮೂರು ಮತ್ತು ವರುಣ್ ಚಕ್ರವರ್ತಿ ಒಂದು ವಿಕೆಟ್ ಪಡೆದರು. ಪರಿಣಾಮವಾಗಿ, ನ್ಯೂಜಿಲೆಂಡ್ 19.4 ಓವರ್‌ಗಳಲ್ಲಿ 225 ರನ್‌ಗಳಿಗೆ ಆಲೌಟ್ ಆಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:44 pm, Sat, 31 January 26