ಮೂಢನಂಬಿಕೆಯೋ, ಕಾಕತಾಳೀಯವೊ… ಹೋಟೆಲ್ ಬದಲಿಸಿದ ಟೀಮ್ ಇಂಡಿಯಾ

India vs New zealand: ಟಿ20 ವಿಶ್ವಕಪ್​ನ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನ ಫೈನಲ್ ಮ್ಯಾಚ್​ನಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಚಾಂಪಿಯನ್ ಪಟ್ಟ ಅಲಂಕರಿಸಲಿದೆ.

ಮೂಢನಂಬಿಕೆಯೋ, ಕಾಕತಾಳೀಯವೊ... ಹೋಟೆಲ್ ಬದಲಿಸಿದ ಟೀಮ್ ಇಂಡಿಯಾ
Team India

Updated on: Mar 08, 2026 | 8:10 AM

T20 World Cup 2026: ಟಿ20 ವಿಶ್ವಕಪ್ ಫೈನಲ್‌ಗೆ ಮುನ್ನ ಭಾರತ ತಂಡ ಅಹಮದಾಬಾದ್‌ನಲ್ಲಿರುವ ಹೋಟೆಲ್ ಅನ್ನು ಬದಲಾಯಿಸಿದೆ. ಇದರ ಬೆನ್ನಲ್ಲೇ ಇದು ಕಾಕತಾಳೀಯವೊ ಅಥವಾ ಮೂಢನಂಬಿಕೆಯೋ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಏಕೆಂದರೆ ಈ ಹಿಂದಿನ ಪಂದ್ಯಗಳ ವೇಳೆ ಭಾರತ ತಂಡ ಐಟಿಸಿ ನರ್ಮದಾ (ITC Narmada) ಹೋಟೆಲ್‌ನಲ್ಲಿ ಉಳಿದುಕೊಂಡಿತ್ತು. ಈ ವೇಳೆ ಸೌತ್ ಆಫ್ರಿಕಾ ವಿರುದ್ಧ ಸೋಲನುಭವಿಸಿದ್ದರು.

ಇದಕ್ಕೂ ಮುನ್ನ 2023ರ ಏಕದಿನ ವಿಶ್ವಕಪ್​ ಫೈನಲ್ ಪಂದ್ಯದ ವೇಳೆಯೂ ಇದೇ ಹೋಟೆಲ್​ನಲ್ಲಿ ತಂಗಿದ್ದರು. ಆ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೃದಯವಿದ್ರಾವಕ ಸೋಲನ್ನು ಅನುಭವಿಸಿತ್ತು. ಹೀಗಾಗಿಯೇ ಟೀಮ್ ಇಂಡಿಯಾ ಇದೀಗ ಫೈನಲ್​ ಪಂದ್ಯಕ್ಕೂ ಮುನ್ನ ಹೋಟೆಲ್ ಬದಲಾಯಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಅದರಂತೆ ಇದೀಗ ಟೀಮ್ ಇಂಡಿಯಾ ಆಟಗಾರರು ತಾಜ್ ಸ್ಕೈಲೈನ್ (Taj Skyline) ಹೋಟೆಲ್‌ನಲ್ಲಿ ತಂಗಿದ್ದಾರೆ. ಅತ್ತ ನ್ಯೂಝಿಲೆಂಡ್ ತಂಡವು ಐಟಿಸಿ ನರ್ಮದಾ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ.

ಈ ಹೋಟೆಲ್ ಬದಲಾವಣೆಗೆ ಐಸಿಸಿ ಶಿಷ್ಟಾಚಾರದ ಕಾರಣ ಎಂಬ ಮಾತು ಕೂಡ ಕೇಳಿ ಬಂದಿದೆ. ಏಕೆಂದರೆ ಫೈನಲ್ ತಲುಪಿದ ಮೊದಲ ತಂಡಕ್ಕೆ (ನ್ಯೂಝಿಲೆಂಡ್) ಐಟಿಸಿ ನರ್ಮದಾ ಹೋಟೆಲ್ ಹಂಚಿಕೆಯಾಗಿತ್ತು. ಹೀಗಾಗಿ ಭಾರತ ತಂಡ ಬೇರೆ ಹೋಟೆಲ್‌ಗೆ ಹೋಗಬೇಕಾಯಿತು ಎಂದು ಹೇಳಲಾಗಿದೆ.

ಇದಾಗ್ಯೂ ಟೀಮ್ ಇಂಡಿಯಾ ಸಿಬ್ಬಂದಿ ವರ್ಗದಲ್ಲಿರುವ ವ್ಯಕ್ತಿಯೋರ್ವರು ಅಪಶಕುನಗಳ ಬಗ್ಗೆ ಹೆಚ್ಚಿನ ನಂಬಿಕೆಯುಳ್ಳವರು. ಅವರ ಸಲಹೆ ಮೇರೆಗೆ ಈ ಬದಲಾವಣೆ ಮಾಡಲಾಗಿದೆ. ಈ ಹಿಂದೆ ಕೂಡ ಅವರು ಇಂತಹ ಸಲಹೆಗಳನ್ನು ನೀಡಿದ್ದರು.

ಇದಕ್ಕೆ ತಾಜಾ ಉದಾಹರಣೆ, ಟೀಮ್ ಇಂಡಿಯಾ ಚಂದ್ರಗ್ರಹಣದ ವೇಳೆ ಅಭ್ಯಾಸ ನಡೆಸದೇ ಇರುವುದು. ಭಾರತೀಯ ಆಟಗಾರರು ಚಂದ್ರಗ್ರಹಣದ ದಿನದಂದು ತಡವಾಗಿ ಅಭ್ಯಾಸಕ್ಕೆ ಹಾಜರಾಗಿದ್ದರು.

ಅಭ್ಯಾಸದ ಮೂಲ ವೇಳಾಪಟ್ಟಿಯಂತೆ ಸಂಜೆ 6:00 ಗಂಟೆಗೆ ಆರಂಭವಾಗಬೇಕಿದ್ದ ತರಬೇತಿಯು, ಗ್ರಹಣದ ಹಿನ್ನೆಲೆಯಲ್ಲಿ ಸಂಜೆ 7:20ಕ್ಕೆ ಆರಂಭಿಸಲಾಯಿತು. ಹಿಂದೂ ಸಂಪ್ರದಾಯದಲ್ಲಿ, ಗ್ರಹಣದ ಸಮಯದಲ್ಲಿ ಯಾವುದರೂ ಪ್ರಮುಖ ಕಾರ್ಯದಲ್ಲಿ ನಿರತರಾಗುವುದು ಒಳಿತಲ್ಲ ಎಂದು ನಂಬಲಾಗುತ್ತದೆ. ಈ ಸಲಹೆಯನ್ನು ಕೂಡ ಇದೇ ಸಿಬ್ಬಂದಿ ನೀಡಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ: ಏನಾದ್ರು ಹೊಸ ಡೈಲಾಗ್ ಹೇಳ್ರಪ್ಪಾ… ಸೂರ್ಯಕುಮಾರ್ ಯಾದವ್ ತಿರುಗೇಟು

ಇದೀಗ ಅದೇ ಸಿಬ್ಬಂದಿ ಹೋಟೆಲ್ ಬದಲಾವಣೆಯೊಂದಿಗೆ ಬ್ಯಾಡ್ ಲಕ್ ಹೋಗಲಾಡಿಸಲು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಈ ಸಲಹೆಯಂತೆ ಟೀಮ್ ಇಂಡಿಯಾ ಹೋಟೆಲ್ ಬದಲಿಸಿದ್ದು, ಈ ಮೂಲಕ ಲಕ್ ಅನ್ನು ಕೂಡ ಬದಲಾಯಿಸುವ ವಿಶ್ವಾಸದಲ್ಲಿದೆ.

 

Follow Us