ಐಸಿಸಿ ಟಿ20 ವಿಶ್ವಕಪ್ 2022 (T20 World Cup) ಟೂರ್ನಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಮೊದಲ ಸೆಮಿ ಫೈನಲ್ ಪಂದ್ಯ ನಡೆದಿದ್ದು ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿರುವ ಪಾಕಿಸ್ತಾನ (New Zealand vs Pakistan) ತಂಡ ಫೈನಲ್ಗೆ ಎಂಟ್ರಿ ಕೊಟ್ಟಿದೆ. ಇಂದು ಅಡಿಲೇಡ್ನ ಓವಲ್ನಲ್ಲಿ ದ್ವಿತೀಯ ಸೆಮಿ ಫೈನಲ್ ಪಂದ್ಯ ಆಯೋಜಿಸಲಾಗಿದ್ದು ಭಾರತ ಹಾಗೂ ಇಂಗ್ಲೆಂಡ್ (India vs England) ತಂಡಗಳು ಮುಖಾಮುಖಿ ಆಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ಟೀಮ್ ಎರಡನೇ ತಂಡವಾಗಿ ಫೈನಲ್ ತಲುಪಿ ಪಾಕ್ ವಿರುದ್ಧ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿದೆ. ಅಡಿಲೇಡ್ನಲ್ಲಂತು ಹೈವೋಲ್ಟೇಜ್ ಪಂದ್ಯ ನಡೆಯುವುದರಲ್ಲಿ ಅನುಮಾನವಿಲ್ಲ.
ಗೆಲ್ಲುವ ವಿಶ್ವಾಸದಲ್ಲಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಈಗಾಗಲೇ ನಾವು ಇಂಗ್ಲೆಂಡ್ ವಿರುದ್ಧ ಗೆದ್ದಿದ್ದೇವೆ ಎಂದಿದ್ದಾರೆ. ಭಾರತ ತಂಡ ಅಡಿಲೇಡ್ನ ಓವಲ್ ಮೈದಾನದಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಗೆದ್ದಿದೆ. ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶಕ್ಕೆ ಸೋಲುಣಿಸಿವೆ. ಈ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಎದುರಾಗಿರುವ ಉಭಯ ತಂಡಗಳಿಗೆ ಅಡಿಲೇಡ್ ಮೈದಾನ ಯಾರಿಗೆ ವರವಾಗಲಿದೆ ಎಂಬುದು ರೋಚಕತೆ ಸೃಷ್ಟಿಸಿದೆ. 2014ರ ವಿಶ್ವಕಪ್ ಟೂರ್ನಿಯ ನಂತರ ಭಾರತ ತಂಡವು ಫೈನಲ್ ಪ್ರವೇಶಿಸಿಲ್ಲ. ಅಲ್ಲದೇ 2013ರ ನಂತರ ಯಾವುದೇ ಐಸಿಸಿ ಟ್ರೋಫಿಯನ್ನೂ ಜಯಿಸಿಲ್ಲ. ರೋಹಿತ್ ನಾಯಕತ್ವಕ್ಕೆ ಇದೊಂದು ಉತ್ತಮ ಅವಕಾಶವಾಗಿದೆ.
ಭಾರತದ ಪ್ರಮುಖ ಅಸ್ತ್ರ ಬ್ಯಾಟರ್ಗಳೇ. ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಅಮೋಘ ಫಾರ್ಮ್ನಲ್ಲಿದ್ದಾರೆ. ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಹಾಗೂ ರಿಷಭ್ ಪಂತ್ ಅಥವಾ ದಿನೇಶ್ ಕಾರ್ತಿಕ್ ಪೈಕಿ ಯಾರಿಗೆ ಸ್ಥಾನ ಸಿಗುತ್ತೊ ಅವರು ಕೂಡ ಇಂದಿನ ಪಂದ್ಯದಲ್ಲಿ ಅಬ್ಬರಿಸಿದರೆ ಇಂಗ್ಲೆಂಡ್ಗೆ ಸವಾಲಾಗುವುದು ಖಚಿತ. ಈ ಬಾರಿಯ ಟೂರ್ನಿಯಲ್ಲಿ ಭಾರತದ ಬೌಲರ್‌ಗಳು ಉತ್ತಮ ಆರಂಭ ಒದಗಿಸಿದ್ದಾರೆ. ಆದರೆ, ಮಧ್ಯಮ ಓವರ್ ಮತ್ತು ಡೆತ್ ಓವರ್ನಲ್ಲಿ ಇನ್ನಷ್ಟು ಸುಧಾರಣೆಯ ಅಗತ್ಯ ಕಂಡಿತ ಇದೆ.
ಇತ್ತ ಇಂಗ್ಲೆಂಡ್ ಪರ ಬ್ಯಾಟರ್ ಡೇವಿಡ್ ಮಲಾನ್, ಬೌಲರ್ ಮಾರ್ಕ್ವುಡ್ ಗಾಯಗೊಂಡಿದ್ದು ತಂಡಕ್ಕೆ ಹಿನ್ನಡೆ ಆಗುವುದರಲ್ಲಿ ಅನುಮಾವಿಲ್ಲ. ಅಲ್ಲದೇ, ಬ್ಯಾಟರ್ಗಳು ಸ್ಥಿರ ಪ್ರದರ್ಶನ ನೀಡದೇ ಇರುವುದು ಕೂಡ ಮೈನಸ್ ಆಗಿದೆ. ಅಲೆಕ್ಸ್ ಹೇಲ್ಸ್, ನಾಯಕ ಜೋಸ್ ಬಟ್ಲರ್, ಆಲ್ರೌಂಡರ್ಗಳಾದ ಬೆನ್ ಸ್ಟೋಕ್ಸ್, ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ ಸಿಡಿಯಬೇಕಿದೆ. ಬೌಲಿಂಗ್ನಲ್ಲಿ ಕ್ರಿಸ್ ವೋಕ್ಸ್, ಸ್ಯಾಮ್ ಕರ್ರನ್, ಡೇವಿಡ್ ವಿಲ್ಲೆ ವಿಕೆಟ್ ಉದುರಿಸಬೇಕಿದೆ.
ಅಡಿಲೇಡ್ ಪಿಚ್ ಬ್ಯಾಟರ್‌ಗಳಿಗೆ ಹೆಚ್ಚು ಅಚ್ಚುಮೆಚ್ಚು. ಬ್ಯಾಟ್ಗೆ ಚೆಂಡು ನೇರವಾಗಿ ಸುಲಭವಾಗಿ ಬರುವ ಕಾರಣ ದೊಡ್ಡ ಮೊತ್ತದ ಪಂದ್ಯವನ್ನು ನಿರೀಕ್ಷಿಸಬಹುದಾಗಿದೆ. ಬೌಲರ್‌ಗಳು ಇಲ್ಲಿ ಕಠಿಣ ಸವಾಲನ್ನು ಎದುರಿಸಲಿದ್ದಾರೆ. ಭಾರತ- ಇಂಗ್ಲೆಂಡ್ ತಂಡಗಳು ಟಿ20 ವಿಶ್ವಕಪ್‌ನಲ್ಲಿ ಮೂರು ಬಾರಿ ಮುಖಾಮುಖಿಯಾಗಿವೆ. 2007, 2009 ಮತ್ತು 2012ರಲ್ಲಿ ಪರಸ್ಪರ ವಿರುದ್ಧ ಆಡಿವೆ. ಗುರುವಾರ ಆಡಿದರೆ ನಾಲ್ಕು ಬಾರಿ ಮುಖಾಮುಖಿಯಾದಂತಾಗುತ್ತದೆ. ಈವರೆಗಿನ ವಿಶ್ವಕಪ್‌ನ ಮೂರು ಪಂದ್ಯಗಳಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಎರಡು ಬಾರಿ ಜಯ ಸಾಧಿಸಿದೆ ಮತ್ತು ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಒಂದು ಬಾರಿ ಗೆಲುವು ಕಂಡಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಪಂದ್ಯವು ಮಧ್ಯಾಹ್ನ 1:30 ಕ್ಕೆ ಪ್ರಾರಂಭವಾಗಲಿದ್ದು, ಟಾಸ್ 1 ಗಂಟೆಗೆ ನಡೆಯಲಿದೆ. ನೇರ ಪ್ರಸಾರವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ವಿವಿಧ ಚಾನಲ್‌ಗಳಲ್ಲಿ ನಡೆಯಲಿದೆ. ಲೈವ್ ಸ್ಟ್ರೀಮಿಂಗ್ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಇರುತ್ತದೆ. ಹಾಗೆಯೇ TV9Kannada.com ನಲ್ಲಿ ಈ ಪಂದ್ಯದ ಲೈವ್ ನವೀಕರಣಗಳನ್ನು ಸಹ ಓದಬಹುದು.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದಿನೇಶ್ ಕಾರ್ತಿಕ್, ರಿಷಭ್ ಪಂತ್ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ದೀಪಕ್ ಹೂಡಾ, ಹರ್ಷಲ್ ಪಟೇಲ್, ಯುಜ್ವೇಂದ್ರ ಚಹಲ್.
ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ನಾಯಕ/ವಿಕೆಟ್‌ಕೀಪರ್), ಬೆನ್ ಸ್ಟೋಕ್ಸ್, ಅಲೆಕ್ಸ್ ಹೇಲ್ಸ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಫಿಲ್ ಸಾಲ್ಟ್, ಡೇವಿಡ್ ಮಲಾನ್, ಸ್ಯಾಮ್ ಕರನ್, ಮಾರ್ಕ್ ವುಡ್, ಮೋಯಿನ್ ಅಲಿ, ಕ್ರಿಸ್ ವೋಕ್ಸ್, ಡೇವಿಡ್ ವಿಲಿ, ಆದಿಲ್ ರಶೀದ್, ಟೈಮಲ್ ಮಿಲ್ಸ್, ಕ್ರಿಸ್ ಜೋರ್ಡಾನ್.
Published On - 7:50 am, Thu, 10 November 22