2025ರ ಚಾಂಪಿಯನ್ಸ್ ಟ್ರೋಫಿಗಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) 544 ಕೋಟಿ ರೂ. ($ 65 ಮಿಲಿಯನ್) ಮೊತ್ತದ ಬಜೆಟ್ ಅನ್ನು ಅನುಮೋದಿಸಿದೆ ಎಂದು ಕ್ರಿಕ್ಬಝ್ ವರದಿ ಮಾಡಿದೆ. ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆಯೋಜಿಸಲಿರುವ ಈ ಟೂರ್ನಿಯ ಸಿದ್ಧತೆಗಳಿಗಾಗಿ ಹಾಗೂ ಪ್ರಶಸ್ತಿಗಳಿಗಾಗಿ ಈ ಮೊತ್ತವನ್ನು ವಿನಿಯೋಗಿಸಲಾಗುತ್ತದೆ.
ಕೊಲಂಬೊದಲ್ಲಿ ನಡೆದ ಐಸಿಸಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅನುಮೋದಿಸಲಾದ ಬಜೆಟ್ನಲ್ಲಿ, ಪಂದ್ಯಾವಳಿಯ ಕಾರ್ಯಾಚರಣೆಗಳಿಗಾಗಿ ₹292 ಕೋಟಿ ರೂ. ($35 ಮಿಲಿಯನ್), ಬಹುಮಾನ ಮೊತ್ತಕ್ಕಾಗಿ ₹167 ಕೋಟಿ ರೂ. ($20 ಮಿಲಿಯನ್) ಮತ್ತು ಉತ್ಪಾದನಾ ವೆಚ್ಚಕ್ಕಾಗಿ ₹83 ಕೋಟಿ ರೂ. ($10 ಮಿಲಿಯನ್) ನಿಗದಿ ಮಾಡಲಾಗಿದೆ. ಅದರಂತೆ 544 ಕೋಟಿ ರೂ. ಬಜೆಟ್ನಲ್ಲಿ ಮುಂಬರುವ ಚಾಂಪಿಯನ್ಸ್ ಟ್ರೋಫಿ ಜರುಗಲಿದೆ.
ಚಾಂಪಿಯನ್ಸ್ ಟ್ರೋಫಿ ಟೂರ್ನಿಗಾಗಿ ತಾತ್ಕಾಲಿಕ ದಿನಾಂಕ ನಿಗದಿ ಮಾಡಲಾಗಿದೆ. ಅದರಂತೆ ಮುಂದಿನ ವರ್ಷ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಆದರೆ ಈ ಟೂರ್ನಿಯಲ್ಲಿ ಭಾರತ ತಂಡ ಪಾಲ್ಗೊಳ್ಳಲಿದೆಯಾ ಎಂಬುದೇ ಪ್ರಶ್ನೆ. ಏಕೆಂದರೆ ಈ ಟೂರ್ನಿ ಪಾಕಿಸ್ತಾನದಲ್ಲಿ ನಡೆಯಲಿದ್ದು, ಪಾಕ್ನಲ್ಲಿ ಟೂರ್ನಿ ಆಯೋಜನೆಗೊಳ್ಳುವುದಾದರೆ ಭಾರತ ತಂಡವು ಹಿಂದೆ ಸರಿಯುವ ಸಾಧ್ಯತೆಯಿದೆ.
2006 ರ ಬಳಿಕ ಭಾರತ ತಂಡವು ಪಾಕಿಸ್ತಾನಕ್ಕೆ ತೆರಳಿಲ್ಲ. ಆದರೆ ಮುಂದಿನ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿರುವುದರಿಂದ ಇದೀಗ ಭಾರತ ತಂಡ ಪಾಕ್ಗೆ ತೆರೆಳಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಐಸಿಸಿ ಟೂರ್ನಿಗಳನ್ನು ಸ್ಥಳಾಂತರಿಸಬೇಕಿದ್ದರೆ ನಿರ್ದಿಷ್ಠ ಕಾರಣಗಳಿರಬೇಕಾಗುತ್ತದೆ.
ಇಲ್ಲಿ ಬಿಸಿಸಿಐ ಟೂರ್ನಿಯನ್ನು ಸ್ಥಳಾಂತರಿಸಲು ಸುರಕ್ಷತೆಯ ಕಾರಣಗಳನ್ನು ನೀಡಿದರೂ, ಅದಕ್ಕೆ ಇತರೆ ಕ್ರಿಕೆಟ್ ಮಂಡಳಿಗಳೂ ಕೂಡ ಕೈ ಜೋಡಿಸಬೇಕಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶ್, ಶ್ರೀಲಂಕಾ, ಅಫ್ಘಾನಿಸ್ತಾನ್, ಇಂಗ್ಲೆಂಡ್, ನ್ಯೂಝಿಲೆಂಡ್ ತಂಡಗಳು ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಿದೆ.
ಇತ್ತ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸಿದರೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಹೆಚ್ಚಿನ ನಷ್ಟಯುಂಟಾಗುವ ಸಾಧ್ಯತೆಯಿದೆ. ಏಕೆಂದರೆ ಭಾರತದ ಪ್ರತಿ ಪಂದ್ಯಗಳಿಗೆ ಇತರೆ ತಂಡಗಳನ್ನು ಯುಎಇ ಅಥವಾ ಶ್ರೀಲಂಕಾಗೆ ಕಳುಹಿಸಬೇಕಾಗುತ್ತದೆ. ಈ ಸಮಸ್ಯೆಯನ್ನು ಪಾಕ್ ಕ್ರಿಕೆಟ್ ಮಂಡಳಿ ಐಸಿಸಿಯ ಮುಂದಿಡಲಿದೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಿಂದ ಟೀಮ್ ಇಂಡಿಯಾ ಹಿಂದೆ ಸರಿದರೆ, ಯಾವ ತಂಡಕ್ಕೆ ಚಾನ್ಸ್?
ಇದರ ನಡುವೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಲಾಹೋರ್ ಅನ್ನು ಕೇಂದ್ರೀಕರಿಸಿ ಭಾರತದ ಪಂದ್ಯಗಳನ್ನು ಆಯೋಜಿಸಲು ಪ್ಲ್ಯಾನ್ ರೂಪಿಸಿದೆ. ಈ ಮೂಲಕ ಟೀಮ್ ಇಂಡಿಯಾಗೆ ಎಲ್ಲಾ ರೀತಿಯ ಸುರಕ್ಷತೆಯನ್ನು ಒದಗಿಸಲಿದ್ದೇವೆ ಎಂಬ ವಾದವನ್ನು ಐಸಿಸಿ ಮುಂದಿಡಲಿದ್ದಾರೆ. ಹೀಗಾಗಿ 2025 ರ ಚಾಂಪಿಯನ್ಸ್ ಟ್ರೋಫಿಯನ್ನು ಸ್ಥಳಾಂತರಿಸಲು ಬಿಸಿಸಿಐ ಯಾವ ಕಾರಣಗಳನ್ನು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.