
T20 World Cup 2026: ಟಿ20 ವಿಶ್ವಕಪ್ನ ಆರಂಭದಿಂದಲೂ ಈ ಬಾರಿ ಭಾರತ ತಂಡ ಚಾಂಪಿಯನ್ ಪಟ್ಟಕ್ಕೇರಲ್ಲ ಎಂದು ಭವಿಷ್ಯ ನುಡಿಯುತ್ತಾ ಬಂದಿದ್ದ ಪಾಕಿಸ್ತಾನ್ ಕ್ರಿಕೆಟಿಗ ಮೊಹಮ್ಮದ್ ಅಮಿರ್ ಇದೀಗ ಪೇಚಿಗೆ ಸಿಲುಕಿದ್ದಾರೆ. ಅದರಲ್ಲೂ ಸೆಮಿಫೈನಲ್ ತಲುಪಲ್ಲ ಎಂದಿದ್ದ ಅಮಿರ್ ಲೆಕ್ಕಾಚಾರವನ್ನು ಟೀಮ್ ಇಂಡಿಯಾ ತಲೆ ಕೆಳಗೆ ಮಾಡಿತ್ತು.
ಇದಾಗ್ಯೂ ಸೆಮಿಫೈನಲ್ನಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ ಗೆದ್ದೇ ಗೆಲ್ಲುತ್ತೆ ಎಂದು ಮೊಹಮ್ಮದ್ ಅಮಿರ್ ಖಾಸಗಿ ಚಾನೆಲ್ನಲ್ಲಿ ಹೇಳಿಕೊಂಡಿದ್ದರು. ಆದರೆ ಅಲ್ಲೂ ಕೂಡ ಅವರ ಲೆಕ್ಕಾಚಾರ ತಲೆಕೆಳಗಾಯಿತು. ಇಂಗ್ಲೆಂಡ್ ವಿರುದ್ಧ 7 ರನ್ಗಳ ಜಯದೊಂದಿಗೆ ಟೀಮ್ ಇಂಡಿಯಾ ಫೈನಲ್ಗೇರಿತು.
ಇನ್ನು ಫೈನಲ್ ಪಂದ್ಯದಲ್ಲಿ ಗೆಲ್ಲುವ ಫೇವರೇಟ್ ತಂಡ ಯಾವುದು ಎಂಬ ಪ್ರಶ್ನೆಗೂ ಮೊಹಮ್ಮದ್ ಅಮಿರ್ ಕಡೆಯಿಂದ ಬಂದಂತಹ ಉತ್ತರ ನ್ಯೂಝಿಲೆಂಡ್. ಭಾರತ ತಂಡವನ್ನು ನ್ಯೂಝಿಲೆಂಡ್ ಸೋಲಿಸಿಯೇ ಸೋಲಿಸುತ್ತದೆ ಎಂದು ಪಾಕ್ ಕ್ರಿಕೆಟಿಗ ಭವಿಷ್ಯ ನುಡಿದಿದ್ದರು. ಈ ಭವಿಷ್ಯವನ್ನು ಕೂಡ ಟೀಮ್ ಇಂಡಿಯಾ ಸುಳ್ಳಾಗಿಸಿದೆ.
ಅಹಮದಾಬಾದ್ನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಫೈನಲ್ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 255 ರನ್ಗಳು. ಈ ಮೂಲಕ ಭಾರತ ತಂಡ ಗೆಲುವನ್ನು ಮೊದಲ ಇನಿಂಗ್ಸ್ನಲ್ಲೇ ಖಚಿತಪಡಿಸಿಕೊಂಡಿದ್ದರು.
ಇನ್ನು ಈ ಬೃಹತ್ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ತಂಡ 19 ಓವರ್ಗಳಲ್ಲಿ ಕೇವಲ 159 ರನ್ಗಳಿಸಿ ಆಲೌಟ್ ಆಗಿತ್ತು. ಈ ಮೂಲಕ ಟೀಮ್ ಇಂಡಿಯಾ 96 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಗೆಲುವಿನ ಬೆನ್ನಲ್ಲೇ ಖಾಸಗಿ ಚಾನೆಲ್ನ ಕಾರ್ಯಕ್ರಮದ ನಡುವೆ ಮೊಹಮ್ಮದ್ ಅಮಿರ್ ಜೊತೆ ವ್ಯಕ್ತಿಯೋರ್ವರು ಪಂದ್ಯದ ಫಲಿತಾಂಶದ ಬಗ್ಗೆ ಕೇಳಿದ್ದಾರೆ.
ನಿಮ್ಮ ಭವಿಷ್ಯ ಸುಳ್ಳಾಗಿದೆ, ಭಾರತ ತಂಡ ಗೆಲುವು ದಾಖಲಿಸಿದೆ. ಈ ಬಗ್ಗೆ ಈಗ ನೀವೇನು ಹೇಳುತ್ತೀರಾ ಎಂಬ ಪ್ರಶ್ನೆಯನ್ನು ಅಮಿರ್ ಮುಂದಿಡಲಾಗಿತ್ತು.
ಈ ಸರಳ ಪ್ರಶ್ನೆಗೆ ಕುಪಿತಗೊಂಡ ಮೊಹಮ್ಮದ್ ಅಮಿರ್, “ಅವರು (ಭಾರತ) ಗೆದ್ದರೆ ಟ್ರೋಫಿಯನ್ನು ನನ್ನ ಮನೆಗೆ ತರುವುದಿಲ್ಲ, ಅವರ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ ಅಷ್ಟೆ,” ಎಂದು ಕಿಡಿಕಾರಿದ್ದಾರೆ.
ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು. ಇದೀಗ ಮೊಹಮ್ಮದ್ ಅಮಿರ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.