ಏಷ್ಯಾಕಪ್ ಗೆದ್ದ ಬೆನ್ನಲ್ಲೇ ಮೋಹಿತ್ ಉಲ್ವಾಗೆ ಬಂಪರ್ ಗಿಫ್ಟ್: ರಾತ್ರೋರಾತ್ರಿ ಟಿ20 ತಂಡಕ್ಕೆ ಆಯ್ಕೆ!

ಕ್ರಿಕೆಟ್‌ನಲ್ಲಿ ಅದೃಷ್ಟ ಬದಲಾಗಲು ಒಂದೇ ಒಂದು ಇನ್ನಿಂಗ್ಸ್ ಸಾಕು ಎಂಬುದಕ್ಕೆ ಯುವ ಆಟಗಾರ ಮೋಹಿತ್ ಉಲ್ವಾ ತಾಜಾ ಉದಾಹರಣೆಯಾಗಿದ್ದಾರೆ. ಪಾಕಿಸ್ತಾನ್ ವಿರುದ್ಧದ ಅಂಡರ್-19 ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟ ಕೆಲವೇ ಗಂಟೆಗಳಲ್ಲಿ, 18 ವರ್ಷದ ಮೋಹಿತ್ ಅವರಿಗೆ ಸೌರಾಷ್ಟ್ರ ಹಿರಿಯರ ತಂಡದಿಂದ ಚೊಚ್ಚಲ ಬುಲಾವ್ ಲಭಿಸಿದೆ. 

ಏಷ್ಯಾಕಪ್ ಗೆದ್ದ ಬೆನ್ನಲ್ಲೇ ಮೋಹಿತ್ ಉಲ್ವಾಗೆ ಬಂಪರ್ ಗಿಫ್ಟ್: ರಾತ್ರೋರಾತ್ರಿ ಟಿ20 ತಂಡಕ್ಕೆ ಆಯ್ಕೆ!
Mohit Ulva
Image Credit source: BCCI

Updated on: Nov 15, 2026 | 7:50 AM

ಪಾಕಿಸ್ತಾನ್ ವಿರುದ್ಧದ ಅಂಡರ್-19 ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟ ಕೆಲವೇ ಗಂಟೆಗಳಲ್ಲಿ, 18 ವರ್ಷದ ಯುವ ಕ್ರಿಕೆಟಿಗ ಮೋಹಿತ್ ಉಲ್ವಾ ಅವರಿಗೆ ಸೌರಾಷ್ಟ್ರ ಹಿರಿಯರ ತಂಡದಿಂದ ಚೊಚ್ಚಲ ಬುಲಾವ್ ಲಭಿಸಿದೆ. ಈ ಮೂಲಕ ಪ್ರಸ್ತುತ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗೆ ಅವರು ನೇರವಾಗಿ ಆಯ್ಕೆಯಾಗಿದ್ದಾರೆ.

ಒಮಾನ್‌ನ ಮಸ್ಕತ್‌ನಲ್ಲಿ ನಡೆದ 2026ರ ಅಂಡರ್-19 ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ನೀಡಿದ್ದ 338 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ ಒಂದು ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಬಲಗೈ ವೇಗದ ಬೌಲರ್ ಆಗಿ ತಂಡಕ್ಕೆ ಆಯ್ಕೆಯಾಗಿದ್ದ ಮೋಹಿತ್ ಉಲ್ವಾ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು.

Loading...

ಕೇವಲ 26 ಎಸೆತಗಳಲ್ಲಿ ಅಜೇಯ 49 ರನ್ ಸಿಡಿಸಿದ ಉಲ್ವಾ, ಕೊನೆಯ ಎಸೆತದಲ್ಲಿ ಗೆಲುವಿಗೆ 3 ರನ್ ಬೇಕಿದ್ದಾಗ ಫೋರ್ ಬಾರಿಸಿ ಭಾರತಕ್ಕೆ 1 ವಿಕೆಟ್‌ನ ಐತಿಹಾಸಿಕ ಜಯ ತಂದುಕೊಟ್ಟರು. ಈ ಕೆಚ್ಚೆದೆಯ ಆಟಕ್ಕಾಗಿ ಅವರಿಗೆ ‘ಪಂದ್ಯಶ್ರೇಷ್ಠ’ ಪ್ರಶಸ್ತಿಯೂ ಒಲಿಯಿತು.

ಸೌರಾಷ್ಟ್ರ ಹಿರಿಯರ ತಂಡಕ್ಕೆ ಆಯ್ಕೆ:

ಮೋಹಿತ್ ಉಲ್ವಾ ಅವರ ಈ ಅಮೋಘ ಪ್ರದರ್ಶನವನ್ನು ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ (SCA) ತಕ್ಷಣವೇ ಗುರುತಿಸಿ ಗೌರವಿಸಿದೆ. ಪ್ರಸ್ತುತ ನಡೆಯುತ್ತಿರುವ ಪ್ರತಿಷ್ಠಿತ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ (SMAT) ಟಿ20 ಟೂರ್ನಿಯ ಸೌರಾಷ್ಟ್ರ ಹಿರಿಯರ ತಂಡಕ್ಕೆ ಅವರನ್ನು ಸೇರ್ಪಡೆಗೊಳಿಸಲಾಗಿದೆ.

ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಜಯದೇವ್ ಶಾ ಅವರು ಈ ಆಯ್ಕೆಯನ್ನು ಅಧಿಕೃತವಾಗಿ ಖಚಿತಪಡಿಸಿದ್ದು, ಒತ್ತಡದ ಸನ್ನಿವೇಶದಲ್ಲಿ ಮೋಹಿತ್ ತೋರಿದ ಧೈರ್ಯ ಮತ್ತು ಸಂಯಮವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ತಕ್ಷಣವೇ ಇಂದೋರ್‌ನಲ್ಲಿರುವ ಸೌರಾಷ್ಟ್ರ ಹಿರಿಯರ ತಂಡವನ್ನು ಸೇರಿಕೊಳ್ಳುವಂತೆ ಅವರಿಗೆ ಸೂಚಿಸಲಾಗಿದೆ.

ಟೆನಿಸ್ ಬಾಲ್ ಕ್ರಿಕೆಟ್‌ನಿಂದ ಟೀಮ್ ಇಂಡಿಯಾವರೆಗೆ!

ಗುಜರಾತ್‌ನ ಸುರೇಂದ್ರನಗರ ಮೂಲದ ಮೋಹಿತ್ ಉಲ್ವಾ ಅವರ ಕ್ರಿಕೆಟ್ ಪಯಣ ಅತ್ಯಂತ ಸ್ಫೂರ್ತಿದಾಯಕವಾಗಿದೆ. ಹಳ್ಳಿಯಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ಅವರು, ನಂತರ ಜಾಮ್‌ನಗರದ ಕ್ರಿಕೆಟ್ ಬಂಗಲೆಯಲ್ಲಿ ರವೀಂದ್ರ ಜಡೇಜಾ ಅವರ ಬಾಲ್ಯದ ಕೋಚ್ ಮಹೇಂದ್ರಸಿಂಹ ಚೌಹಾಣ್ ಅವರ ಬಳಿ ತರಬೇತಿ ಪಡೆದರು.

ಕಳೆದ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ಅಂಡರ್-19 ವಿರುದ್ಧದ ಯೂತ್ ಟೆಸ್ಟ್ ಪಂದ್ಯದಲ್ಲೂ 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು 92 ರನ್ ಗಳಿಸುವ ಮೂಲಕ ಮೋಹಿತ್ ತಮ್ಮ ಆಲ್‌ರೌಂಡ್ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಇದೀಗ ಹಿರಿಯರ ತಂಡಕ್ಕೆ ಆಯ್ಕೆಯಾಗುವ ಮೂಲಕ ತಮ್ಮ ವೃತ್ತಿಜೀವನದ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾ ಪ್ರವಾಸವಿಲ್ಲ… ಇಂಗ್ಲೆಂಡ್​ಗೆ 627 ಕೋಟಿ ರೂ. ನಷ್ಟದ ಭೀತಿ!

ಒಟ್ಟಿನಲ್ಲಿ, ಅಂಡರ್-19 ವೇದಿಕೆಯಲ್ಲಿ ತೋರಿದ ಈ ಅಮೋಘ ಪ್ರದರ್ಶನ ಮೋಹಿತ್ ಉಲ್ವಾ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿದೆ. ಇದೀಗ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಹಿರಿಯ ಆಟಗಾರರೊಂದಿಗೆ ಕಣಕ್ಕಿಳಿಯಲು ಸಜ್ಜಾಗಿರುವ ಈ ಯುವ ಪ್ರತಿಭೆ, ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್‌ನ ಭವಿಷ್ಯದ ತಾರೆಯಾಗಿ ಮಿಂಚುವ ಭರವಸೆ ಮೂಡಿಸಿದ್ದಾರೆ.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us