
ಎಸಿಸಿ ಪುರುಷರ ಅಂಡರ್-19 ಏಷ್ಯಾಕಪ್ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂದು ಭಾರತ ತಂಡ ಅಜೇಯ ಅಫ್ಘಾನಿಸ್ತಾನ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯ ಗೆದ್ದು ಫೈನಲ್ಗೆ ಲಗ್ಗೆ ಇಡುವುದು ಎರಡೂ ತಂಡಗಳ ಗುರಿಯಾಗಿದೆ. ಟೂರ್ನಿಯಲ್ಲಿ ಈವರೆಗೆ ಎರಡೂ ತಂಡಗಳ ಪ್ರದರ್ಶನ ವಿಭಿನ್ನವಾಗಿದೆ. ಭಾರತ ತಂಡ ಗ್ರೂಪ್ ‘ಎ’ನಲ್ಲಿ ಎರಡನೇ ಸ್ಥಾನ ಪಡೆದು ಸೆಮಿಫೈನಲ್ಗೆ ಪ್ರವೇಶಿಸಿದ್ದರೆ, ಅಫ್ಘಾನಿಸ್ತಾನ ಗ್ರೂಪ್ ‘ಬಿ’ನಲ್ಲಿ ಅಗ್ರಸ್ಥಾನ ಪಡೆದು ಅಂತಿಮ ನಾಲ್ಕರ ಘಟ್ಟ ತಲುಪಿದೆ.
ಭಾರತ ತಂಡ ನೇಪಾಳ ವಿರುದ್ಧ 10 ವಿಕೆಟ್ಗಳ ಭರ್ಜರಿ ಗೆಲುವಿನೊಂದಿಗೆ ಟೂರ್ನಿಯನ್ನು ಆರಂಭಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಮೂರು ವಿಕೆಟ್ಗಳ ಸೋಲು ಅನುಭವಿಸಿತ್ತು. ಇದಾದ ಬಳಿಕ ಯುಎಇ ವಿರುದ್ಧ ಭಾರತ ಅದ್ಭುತವಾಗಿ ಕಮ್ಬ್ಯಾಕ್ ಮಾಡಿತ್ತು. ಆರ್ಯವೀರ್ ಸೆಹ್ವಾಗ್ ಅವರ 160 ರನ್ ಹಾಗೂ ವಿನೀತ್ ವಿಕೆ ಅವರ 67 ರನ್ಗಳ ನೆರವಿನಿಂದ ಭಾರತ ಏಳು ವಿಕೆಟ್ ನಷ್ಟಕ್ಕೆ 309 ರನ್ ಕಲೆಹಾಕಿತ್ತು. ಗುರಿ ಬೆನ್ನಟ್ಟಿದ ಯುಎಇ ತಂಡವನ್ನು ಕಟ್ಟಿಹಾಕುವಲ್ಲಿ ನಾಲ್ಕು ವಿಕೆಟ್ ಪಡೆದ ಈಶಾನ್ ಸೂದ್ ಪ್ರಮುಖ ಪಾತ್ರ ವಹಿಸಿದ್ದರು. ಅಂತಿಮವಾಗಿ ಭಾರತ 70 ರನ್ಗಳ ಭರ್ಜರಿ ಜಯ ದಾಖಲಿಸಿತ್ತು.
ಇನ್ನೊಂದೆಡೆ ಅಫ್ಘಾನಿಸ್ತಾನ ತಂಡ ಗ್ರೂಪ್ ಹಂತದಲ್ಲಿ ಆಡಿದ ಮೂರೂ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 113 ರನ್ಗಳಿಂದ ಮಣಿಸಿದ್ದ ಅಫ್ಘಾನಿಸ್ತಾನ, ಬಳಿಕ ಮಲೇಷ್ಯಾ ವಿರುದ್ಧ 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತ್ತು. ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾವನ್ನು 106 ರನ್ಗಳಿಂದ ಸೋಲಿಸಿತ್ತು. ಈ ಗೆಲುವಿನಲ್ಲಿ 107 ರನ್ ಸಿಡಿಸಿದ ಸುಭಾನ್ ಜಖೇಲ್ ಹಾಗೂ ನಾಲ್ಕು ವಿಕೆಟ್ ಪಡೆದ ನೂರ್ ಅಲಿ ನಿಯಾಜಿ ಪ್ರಮುಖ ಪಾತ್ರ ವಹಿಸಿದ್ದರು.
ಇನ್ನು ಈ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಹೀಗಾಗಿ ಭಾರತ ಮೊದಲು ಬೌಲಿಂಗ್ ಮಾಡಲಿದೆ. ಅಫ್ಘಾನಿಸ್ತಾನ ತಂಡಕ್ಕೆ ಸೋಹೆಲ್ ಖಾನ್ ನಾಯಕತ್ವ ವಹಿಸಿದ್ದರೆ, ಭಾರತ ತಂಡವನ್ನು ಲಕ್ಷ್ಯ ರಾಜೇಶ್ ರೈಚಂದಾನಿ ಮುನ್ನಡೆಸುತ್ತಿದ್ದಾರೆ.
ಯೂತ್ ಏಕದಿನ ಕ್ರಿಕೆಟ್ನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳು ಈವರೆಗೆ ಒಟ್ಟು 13 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 11 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಅಫ್ಘಾನಿಸ್ತಾನ ಕೇವಲ ಎರಡು ಪಂದ್ಯಗಳಲ್ಲಿ ಜಯಗಳಿಸಿದೆ. ಹೀಗಾಗಿ ಮುಖಾಮುಖಿ ದಾಖಲೆಗಳಲ್ಲಿ ಟೀಮ್ ಇಂಡಿಯಾ ಸ್ಪಷ್ಟ ಮೇಲುಗೈ ಹೊಂದಿದೆ. ಇನ್ನು ಈ ವರ್ಷದ ಅಂಡರ್-19 ವಿಶ್ವಕಪ್ ಸೆಮಿಫೈನಲ್ನಲ್ಲೂ ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳು ಎದುರಾಗಿದ್ದವು. ಆ ಪಂದ್ಯದಲ್ಲಿ ಅಫ್ಘಾನಿಸ್ತಾನ ಭಾರತಕ್ಕೆ 310 ರನ್ಗಳ ಬೃಹತ್ ಗುರಿ ನೀಡಿತ್ತು. ಆದರೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ ಏಳು ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಇದೀಗ ಮತ್ತೊಮ್ಮೆ ಫೈನಲ್ ಪ್ರವೇಶಕ್ಕಾಗಿ ಎರಡೂ ತಂಡಗಳು ಕಣಕ್ಕಿಳಿದಿವೆ.
ಭಾರತದ ಕೈಯಲ್ಲಿದ್ದ ಗೆಲುವು ಕಸಿದ ಹಮ್ಜಾ; ಏಷ್ಯಾಕಪ್ನಲ್ಲಿ ಪಾಕ್ಗೆ ಜಯ
ಅಫ್ಘಾನಿಸ್ತಾನ: ಅಬ್ದುಲ್ಲಾ ನದರ್ಜಾನ್, ಫರಿದುಲ್ಲಾ ಎಹ್ಸಾಸ್, ಸುಭಾನ್ ಜಖೇಲ್, ನೋಮನ್ ಸಲಾರ್ಜೈ (ವಿಕೆಟ್ ಕೀಪರ್), ಶಾ ಫೈಸಲ್ ರಹೀಮಿ, ತಾಹಿರ್ ಸರ್ವಾರಿ, ಅಮೀರ್ ಹಮ್ಜಾ, ಸೊಹೈಲ್ ಖಾನ್ (ನಾಯಕ), ಮೊಹಮ್ಮದ್ ಅಲಿ, ಬಿಲಾಲ್ ಸಾಲಿಮಾನ್ಖೇಲ್ ಮತ್ತು ನೂರ್ ಅಲಿ ನಿಯಾಜಿ.
ಭಾರತ: ಲಕ್ಷ್ಯ ರಾಜೇಶ್ ರಾಯಚಂದಾನಿ (ನಾಯಕ), ಆರ್ಯವೀರ್ ಸೆಹ್ವಾಗ್, ವಿಕೆ ವಿನೀತ್, ಅರ್ಜುನ್ ರಜಪೂತ್, ಯಶವರ್ಧನ್ ಚೌಹಾಣ್, ಅನ್ವಯ್ ದ್ರಾವಿಡ್ (ವಿಕೆಟ್ ಕೀಪರ್), ಮನಲ್ ಚೌಹಾಣ್, ಮೋಹಿತ್ ಉಲಾವಾ, ಆರ್ಯನ್ ಸಾವಸಾನಿ, ಕಾವ್ಯಾ ಪಟೇಲ್, ಮತ್ತು ಇಶಾನ್ ಸೂದ್.
Published On - 10:31 am, Thu, 12 November 26