
ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಎಂದೂ ಕಾಣದ ರೋಚಕ ಹಾಗೂ ಅತ್ಯಂತ ಅಪರೂಪದ ದಾಖಲೆಯೊಂದಕ್ಕೆ ನೈಜೀರಿಯಾದ ಅಬುಜಾ ಕ್ರೀಡಾಂಗಣ ಸಾಕ್ಷಿಯಾಗಿದೆ. ಐಸಿಸಿ ಪುರುಷರ ಟಿ20 ವಿಶ್ವಕಪ್ ಆಫ್ರಿಕಾ ಸಬ್ ರೀಜನಲ್ ಕ್ವಾಲಿಫೈಯರ್ ಟೂರ್ನಿಯಲ್ಲಿ ಉಗಾಂಡ ತಂಡ ಕೇವಲ 5 ಎಸೆತಗಳಲ್ಲಿ ಪಂದ್ಯವನ್ನು ಮುಗಿಸಿ ಹೊಸ ಇತಿಹಾಸ ನಿರ್ಮಿಸಿದೆ.
ಅಬುಜಾ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಉಗಾಂಡ ಹಾಗೂ ಮೊಝಾಂಬಿಕ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮೊಝಾಂಬಿಕ್
ತಂಡಕ್ಕೆ ಉಗಾಂಡದ ಬೌಲರ್‌ಗಳು ನರಕದರ್ಶನ ಮಾಡಿಸಿದರು.
ಬ್ಯಾಟಿಂಗ್ ಆರಂಭಿಸಿದ ಮೊಝಾಂಬಿಕ್ ತಂಡ ಉಗಾಂಡದ ಘಾತಕ ಬೌಲಿಂಗ್ ದಾಳಿಗೆ ಸಂಪೂರ್ಣವಾಗಿ ತತ್ತರಿಸಿತು. ತಂಡದ ಯಾವುದೇ ಬ್ಯಾಟರ್ ಕೂಡ ಎರಡಂಕಿ ಮೊತ್ತ ದಾಟಲು ಸಾಧ್ಯವಾಗಲಿಲ್ಲ. ಪರಿಣಾಮ ಮೊಝಾಂಬಿಕ್ ತಂಡವು ಕೇವಲ 7.2 ಓವರ್‌ಗಳಲ್ಲಿ 19 ರನ್‌ಗಳಿಗೆ ಆಲೌಟ್ ಆಯಿತು. ಉಗಾಂಡದ ಪರ ಮಾರಕ ಬೌಲಿಂಗ್ ಪ್ರದರ್ಶಿಸಿದ ಜುಮಾ ಮಿಯಾಜಿ 4 ಓವರ್‌ಗಳಲ್ಲಿ ಕೇವಲ 7 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ಎನೋಕ್ ಕಸೈಜಾ 4 ರನ್‌ಗಳಿಗೆ 4 ವಿಕೆಟ್ ಪಡೆದು ಸಾಥ್ ನೀಡಿದರು.
ಗೆಲ್ಲಲು ಕೇವಲ 20 ರನ್‌ಗಳ ಸುಲಭ ಗುರಿ ಪಡೆದ ಉಗಾಂಡ ತಂಡಕ್ಕೆ ಪಂದ್ಯ ಮುಗಿಸಲು ಕೇವಲ 5 ಎಸೆತಗಳು ಬೇಕಾಯಿತು. ಮೊಝಾಂಬಿಕ್ನ ಬೌಲರ್ ಕ್ಯಾಮಿಲೊ ಕೊಸ್ಸಾ ಎಸೆದ ಮೊದಲ ಓವರ್‌ನಲ್ಲೇ ಉಗಾಂಡದ ಆರಂಭಿಕ ಆಟಗಾರರು ಅಬ್ಬರಿಸಿದರು.
ಇದನ್ನೂ ಓದಿ: ಇತಿಹಾಸ ಬರೆದ ಪೋರ್ಚುಗಲ್: ಟಿ20 ವಿಶ್ವಕಪ್ ಕ್ವಾಲಿಫೈಯರ್‌ಗೆ ಲಗ್ಗೆ!
ಕೇವಲ 5 ಎಸೆತಗಳಲ್ಲಿ ಪಂದ್ಯ ಮುಗಿಸಿದರೂ ಇದು ಟಿ20 ಕ್ರಿಕೆಟ್ನ ಅತ್ಯಂತ ವೇಗದ ಚೇಸಿಂಗ್ ಅಲ್ಲ. ಬದಲಾಗಿ ಇದು ಎರಡನೇ ಅತ್ಯಂತ ವೇಗದ ರನ್ ಚೇಸ್ ದಾಖಲೆಯಾಗಿದೆ. ಟಿ20 ಕ್ರಿಕೆಟ್ನಲ್ಲಿ ಸ್ಪೇನ್ ತಂಡವು ಐಲ್ ಆಫ್ ಮ್ಯಾನ್ ವಿರುದ್ಧ ಕೇವಲ 2 ಎಸೆತಗಳಲ್ಲಿ (0.2 ಓವರ್) ಪಂದ್ಯವನ್ನು ಗೆದ್ದು ವಿಶ್ವ ದಾಖಲೆ ಬರೆದಿದೆ. ಆ ಪಂದ್ಯದಲ್ಲಿ ಸ್ಪೇನ್ 9 ರನ್‌ಗಳ ಗುರಿಯನ್ನು ಬೆನ್ನಟ್ಟಿತ್ತು. ಇದೀಗ 5 ಎಸೆತಗಳಲ್ಲಿ ಭರ್ಜರಿ ಚೇಸ್ ಮಾಡುವ ಮೂಲಕ ಉಗಾಂಡ ತಂಡವು ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.