
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಬಹುನಿರೀಕ್ಷಿತ ಟಿ20 ಸರಣಿಯ ಮೊದಲ ಪಂದ್ಯಕ್ಕೆ ಲಕ್ನೋ ಸಜ್ಜಾಗಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿಯುವವರು ಯಾರು ಎಂಬುದೇ ಈಗ ದೊಡ್ಡ ಕುತೂಹಲ. ಅದರಲ್ಲೂ ಆರಂಭಿಕ ಜೋಡಿ ಯಾರೆಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಏಕೆಂದರೆ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಜೊತೆ ಆರಂಭಿಕ ಸ್ಥಾನಕ್ಕಾಗಿ ಯುವ ದಾಂಡಿಗ ವೈಭವ್ ಸೂರ್ಯವಂಶಿ ಪೈಪೋಟಿ ನಡೆಸುತ್ತಿದ್ದಾರೆ. ಹೀಗಾಗಿಯೇ ವಿಂಡೀಸ್ ವಿರುದ್ಧ ಈ ಮೂವರಲ್ಲಿ ಯಾರಿಗೆ ಸಿಗಲಿದೆ ಚಾನ್ಸ್? ಎಂಬ ಪ್ರಶ್ನೆಯನ್ನು ಸುದ್ದಿಗೋಷ್ಠಿಯಲ್ಲಿ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರ ಮುಂದಿಡಲಾಗಿತ್ತು.
ಈ ಪ್ರಶ್ನೆಗೆ ಉತ್ತರಿಸಿದ ಗೌತಮ್ ಗಂಭೀರ್, “ವೈಭವ್ ಅದ್ಭುತ ಪ್ರತಿಭೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ತಂಡದಲ್ಲಿ ಈಗಾಗಲೇ ದೀರ್ಘಕಾಲದಿಂದ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಆಟಗಾರರಿದ್ದಾರೆ. ಅವರಿಗೆ ನಾವು ನಿರಂತರ ಅವಕಾಶ ನೀಡಬೇಕಿದೆ. ನಾನು ವೈಭವ್ ಜೊತೆ ವೈಯಕ್ತಿಕವಾಗಿ ಮಾತನಾಡಿದ್ದೇನೆ ಮತ್ತು ಅವರು ತಮ್ಮ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ ಎಂದು ತಿಳಿಸಿದ್ದೇನೆ” ಎಂದಿದ್ದಾರೆ.
“ಅಲ್ಲದೆ, ಹೊರಗಿನ ಸೋಷಿಯಲ್ ಮೀಡಿಯಾ ಟ್ರೆಂಡ್‌ಗಳನ್ನು ನೋಡಿ ನಾವು ತಂಡವನ್ನು ಆಯ್ಕೆ ಮಾಡುವುದಿಲ್ಲ. ಬದಲಿಗೆ ಆಟಗಾರರ ಪ್ರದರ್ಶನ ಮತ್ತು ತಂಡದ ಅಗತ್ಯಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಗಂಭೀರ್ ಕಡಕ್ ಆಗಿ ಹೇಳಿದ್ದಾರೆ. ಇದರರ್ಥ ಇಂದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರೇ ಭಾರತದ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಹೊರಗಿನ ಭಾರಿ ಹೈಪ್ ಮತ್ತು ಸಾಮಾಜಿಕ ಜಾಲತಾಣಗಳ ಒತ್ತಡದ ನಡುವೆಯೂ, ಭಾರತ ತಂಡದ ಮ್ಯಾನೇಜ್‌ಮೆಂಟ್ ಸದ್ಯಕ್ಕೆ ತನ್ನ ಹಳೆಯ ಮತ್ತು ಅನುಭವಿ ಆರಂಭಿಕ ಜೋಡಿಗೆ ಮಣೆ ಹಾಕಲು ನಿರ್ಧರಿಸಿದೆ. ಹೀಗಾಗಿ, ಇಂದಿನ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವುದು ತೀರಾ ವಿರಳ ಎನ್ನಲಾಗಿದೆ.
ಭಾರತ ತಂಡದ ಬೌಲಿಂಗ್ ತರಬೇತುದಾರ ಕೋಚ್ ಮೋರ್ಕೆಲ್ ಕೂಡ ಗಂಭೀರ್ ಹೇಳಿಕೆಯನ್ನು ಬೆಂಬಲಿಸಿದ್ದಾರೆ. “ವೈಭವ್ ಅವರಿಗೆ ಪಂದ್ಯ ಆಡಲು ಸಿಗದಿದ್ದರೂ ಪರವಾಗಿಲ್ಲ. ಈ ವಯಸ್ಸಿನಲ್ಲಿ ಹಿರಿಯ ಆಟಗಾರರ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವುದು, ಅವರೊಂದಿಗೆ ಪ್ರಯಾಣಿಸುವುದು ಮತ್ತು ಅಂತರರಾಷ್ಟ್ರೀಯ ಮಟ್ಟದ ತರಬೇತಿ ಸೆಷನ್‌ಗಳಲ್ಲಿ ಭಾಗವಹಿಸುವುದೇ ಅವರಿಗೆ ದೊಡ್ಡ ಪಾಠ. ಇದು ಅವರ ಕ್ರಿಕೆಟ್ ಬೆಳವಣಿಗೆಯನ್ನು ಮತ್ತಷ್ಟು ವೇಗಗೊಳಿಸುತ್ತದೆ” ಎಂದು ಮೋರ್ಕೆಲ್ ಆಶಾವಾದ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಭಾರತ vs ಪಾಕಿಸ್ತಾನ್ ಟಿ20 ಪಂದ್ಯ ರದ್ದು!