
ಟಿ20 ಕ್ರಿಕೆಟ್‌ನಲ್ಲಿ ಅಬ್ಬರಿಸಿದ್ದ ಆಯ್ತು, ಐಪಿಎಲ್‌ನಲ್ಲಿ ಧೂಳೆಬ್ಬಿಸಿದ್ದೂ ಆಯ್ತು. ಇದೀಗ 15 ವರ್ಷದ ರನ್ ಮಷಿನ್ ವೈಭವ್ ಸೂರ್ಯವಂಶಿ ಏಕದಿನ ಕ್ರಿಕೆಟ್‌ನಲ್ಲಿ ಸಿಡಿಲಬ್ಬರ ಶುರು ಮಾಡಿದ್ದಾರೆ. ಈ ಸಿಡಿಲಬ್ಬರದೊಂದಿಗೆ ಶ್ರೀಲಂಕಾ ಬೌಲರ್ಗಳನ್ನು ಮನಬಂದಂತೆ ದಂಡಿಸಿದ ಯುವ ದಾಂಡಿಗ ಕೇವಲ 6 ರನ್ಗಳ ಅಂತರದಿಂದ ವಿಶ್ವ ದಾಖಲೆಯ ಶತಕವನ್ನು ಕೈಚೆಲ್ಲಿಕೊಂಡಿದ್ದಾರೆ.
ದಂಬುಲ್ಲಾದಲ್ಲಿ ನಡೆಯುತ್ತಿರುವ ಶ್ರೀಲಂಕಾ ಎ ವಿರುದ್ಧದ ಫೈನಲ್ ಪಂದ್ಯದಲ್ಲಿ ಟಾಸ್ ಸೋತಿರುವ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ತೂಫಾನ್ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಮೊದಲ ಓವರ್ನಿಂದಲೇ ಹೊಡಿಬಡಿ ಆಟಕ್ಕೆ ಒತ್ತು ನೀಡಿದ ವೈಭವ್ ಮೈದಾನದ ಮೂಲೆ ಮೂಲೆಗೂ ಚೆಂಡನ್ನಟ್ಟಿದ್ದಾರೆ. ಪರಿಣಾಮ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಮೂಡಿಬಂತು.
ಕೇವಲ 11 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ವೈಭವ್ ಸೂರ್ಯವಂಶಿ ಹಾಫ್ ಸೆಂಚುರಿ ಬಳಿಕ ಕೂಡ ತಮ್ಮ ಸಿಡಿಲಬ್ಬರ ಮುಂದುವರೆಸಿದ್ದರು. ಅದರಲ್ಲೂ ಆಫ್ ಸೈಡ್-ಲೆಗ್ ಸೈಡ್ನತ್ತ ಫೋರ್ ಸಿಕ್ಸ್ಗಳ ಸುರಿಮಳೆಗೈಯ್ಯುವ ಮೂಲಕ ಕೇವಲ 28 ಎಸೆತಗಳಲ್ಲಿ 94 ರನ್ ಚಚ್ಚಿದ್ದರು.
ಇನ್ನೇನು ಒಂದು ಎಸೆತದಲ್ಲಿ ಒಂದು ಸಿಕ್ಸ್ ಮೂಡಿ ಬಂದಿದ್ದರೆ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತೀ ವೇಗದ ಶತಕ ಸಿಡಿಸಿದ ವಿಶ್ವ ದಾಖಲೆ ವೈಭವ್ ಸೂರ್ಯವಂಶಿ ಪಾಲಾಗುತ್ತಿತ್ತು. ಆದರೆ ಬಿಗ್ ಶಾಟ್ ಹೊಡೆಯುವ ಯತ್ನದಲ್ಲಿ ವೈಭವ್ ಮಿಡ್ ಆನ್ನಲ್ಲಿದ್ದ ಫೀಲ್ಡರ್ಗೆ ಕ್ಯಾಚ್ ನೀಡಿದ್ದಾರೆ. ಈ ಮೂಲಕ ಚೊಚ್ಚಲ ಶತಕವನ್ನು ಕೈ ಚೆಲ್ಲಿಕೊಂಡಿದ್ದಾರೆ.
ಒಂದು ವೇಳೆ ವೈಭವ್ ಸೂರ್ಯವಂಶಿ 29ನೇ ಎಸೆತದಲ್ಲಿ ಕ್ಯಾಚ್ ನೀಡುವ ಬದಲು ಸಿಕ್ಸ್ ಬಾರಿಸಿದ್ದರೆ ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗದ ಶತಕ ಸಿಡಿಸಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಳ್ಳುತ್ತಿದ್ದರು.
ಈ ವಿಶ್ವ ದಾಖಲೆಯನ್ನು ಸರಿಗಟ್ಟಲು ವೈಭವ್ ಸೂರ್ಯವಂಶಿಗೆ ಉತ್ತಮ ಅವಕಾಶವಿತ್ತು. ಆದರೆ ತಾನೆದುರಿಸಿದ 29ನೇ ಎಸೆತದಲ್ಲಿ ವೈಭವ್ ಕ್ಯಾಚ್ ನೀಡಿದ್ದಾರೆ. ಇದರೊಂದಿಗೆ 29 ಎಸೆತಗಳಲ್ಲಿ 8 ಸಿಕ್ಸರ್ ಹಾಗೂ 10 ಫೋರ್ಗಳನ್ನು ಒಳಗೊಂಡ 94 ರನ್ಗಳ ಭರ್ಜರಿ ಇನಿಂಗ್ಸ್ ಕೂಡ ಕೊನೆಗೊಂಡಿದೆ.
ಇದನ್ನೂ ಓದಿ: 13 ಸಿಕ್ಸ್, 11 ಫೋರ್: ರೆಕಾರ್ಡ್ ಬ್ರೇಕಿಂಗ್ ಸೆಂಚುರಿ ಸಿಡಿಸಿದ ಮಿಚೆಲ್ ಓವನ್
ವೈಭವ್ ಸೂರ್ಯವಂಶಿ ಬಾರಿಸಿದ ಈ 94 ರನ್ಗಳ ಸ್ಫೋಟಕ ಇನಿಂಗ್ಸ್ ನೆರವಿನೊಂದಿಗೆ ಟೀಮ್ ಇಂಡಿಯಾ 12 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 144 ರನ್ ಕಲೆಹಾಕಿದೆ. ಸದ್ಯ ಕ್ರೀಸ್ನಲ್ಲಿ ರುತುರಾಜ್ ಗಾಯಕ್ವಾಡ್ ಹಾಗೂ ತಿಲಕ್ ವರ್ಮಾ ಬ್ಯಾಟಿಂಗ್ ಮುಂದುರೆಸಿದ್ದಾರೆ.