ಏಷ್ಯಾಕಪ್ 2022 ರಲ್ಲಿ (Asia Cup 2022) ವಿರಾಟ್ ಕೊಹ್ಲಿ ಬ್ಯಾಟ್ನಿಂದ ರನ್ಗಳು ಬರುತ್ತಿದ್ದು ಫಾರ್ಮ್ಗೆ ಮರಳಿದಂತೆ ಗೋಚರಿಸುತ್ತಿದೆ. ಐಸಿಸಿ ಟಿ20 ವಿಶ್ವಕಪ್ಗೂ ಮುನ್ನ ಕೊಹ್ಲಿಯ ಈ ಪ್ರದರ್ಶನ ಟೀಮ್ ಇಂಡಿಯಾಕ್ಕೆ ಖುಷಿ ತಂದಿದೆ. ಕಳೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 34 ಎಸೆತಗಳಲ್ಲಿ 35 ರನ್ ಗಳಿದರೆ, ಹಾಂಗ್ ಕಾಂಗ್ ವಿರುದ್ಧ 44 ಎಸೆತಗಳಲ್ಲಿ ಅಜೇಯ 59 ರನ್ ಸಿಡಿಸಿದ್ದರು. ಇಂದು ಪಾಕಿಸ್ತಾನ ವಿರುದ್ಧ ಸೂಪರ್ 4 ಹಂತದಲ್ಲಿ ಭಾರತ (India vs Pakistan) ಪುನಃ ಮುಖಾಮುಖಿ ಆಗಲಿದೆ. ಇಲ್ಲಿ ವಿರಾಟ್ ಕೊಹ್ಲಿ (Virat Kohli) ಮೇಲೆ ಎಲ್ಲರ ಕಣ್ಣಿದ್ದು ಯಾವರೀತಿ ಪ್ರದರ್ಶನ ನೀಡುತ್ತಾರೆ ಎಂಬುದನ್ನು ನೋಡಬೇಕಿದೆ. ಇದರ ನಡುವೆ ಕಿಂಗ್ ಕೊಹ್ಲಿ ನೂತನ ದಾಖಲೆಯ ಹೊಸ್ತಿಲಲ್ಲಿದ್ದಾರೆ.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 3 ಸಿಕ್ಸರ್ ಸಿಡಿಸಿದರೆ ವಿಶೇಷ ಶತಕದ ದಾಖಲೆ ನಿರ್ಮಾಣವಾಗಲಿದೆ. ಕೊಹ್ಲಿ ಬ್ಯಾಟ್ನಿಂದ ಇಂದು ಮೂರು ಸಿಕ್ಸ್ ಬಂದರೆ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ಸಿಕ್ಸರ್ ಬಾರಿಸಿದ ಸಾಧನೆ ಮಾಡಲಿದ್ದಾರೆ. ಈ ವಿಶೇಷ ದಾಖಲೆ ನಿರ್ಮಿಸಿದ ಭಾರತದ ಎರಡನೇ ಆಟಗಾರ ಎಂಬ ಕೀರ್ತಿಗೂ ಭಾಜನರಾಗಲಿದ್ದಾರೆ. ಜೊತೆಗೆ ಡೇವಿಡ್ ವಾರ್ನರ್, ಕ್ರಿಸ್ ಗೇಲ್ ಮತ್ತು ಇಯಾನ್ ಮಾರ್ಗನ್ ಸಾಲಿಗೆ ಸೇರಲಿದ್ದಾರೆ.
ಕೊಹ್ಲಿ ಸದ್ಯ 101 ಅಂತರರಾಷ್ಟ್ರೀಯ ಟಿ20 ಪಂದ್ಯದಲ್ಲಿ 97 ಸಿಕ್ಸರ್ ಬಾರಿಸಿದ್ದಾರೆ. ಭಾರತ ಪರ ಅತಿ ಹೆಚ್ಚು ಸಿಕ್ಸ್ ಸಿಡಿಸಿದವರ ಸಾಲಿನಲ್ಲಿ ರೋಹಿತ್ ಶರ್ಮಾ ಅವರಿದ್ದು 134 ಪಂದ್ಯಗಳಿಂದ 165 ಸಿಕ್ಸ್ ಸಿಡಿಸಿದ್ದಾರೆ. ಇದೀಗ ಕೊಹ್ಲಿ ಬ್ಯಾಟ್ನಿಂದ ಮೂರು ಸಿಕ್ಸರ್ ಬಂದರೆ ಚುಟುಕು ಮಾದರಿಯ ಕ್ರಿಕೆಟ್ನಲ್ಲಿ 100 ಸಿಕ್ಸರ್ ಬಾರಿಸಿದ ಭಾರತದ ಎರಡನೇ ಹಾಗೂ ವಿಶ್ವದ 10ನೇ ಆಟಗಾರ ಆಗಲಿದ್ದಾರೆ.
ಇಂದು ಭಾರತ–ಪಾಕ್ ಪಂದ್ಯ:
ಏಷ್ಯಾಕಪ್ 2022ರ ಸೂಪರ್ 4 ಹಂತದಲ್ಲಿ ಇಂದು ಎರಡನೇ ಪಂದ್ಯ ಆಯೋಜಿಸಲಾಗಿದ್ದು ಕ್ರಿಕೆಟ್ ಲೋಕದ ಬದ್ದವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿ ಆಗಲಿದೆ. ಈ ಬಾರಿಯ ಏಷ್ಯಾಕಪ್ನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಅಮೋಘ ಗೆಲುವು ಕಂಡಿರುವ ಟೀಮ್ ಇಂಡಿಯಾ ಜಯದ ನಾಗಾಲೋಟವನ್ನು ಮುಂದುವರೆಸುವ ತವಕದಲ್ಲಿದೆ. ಇತ್ತ ಲೀಗ್ ಹಂತದಲ್ಲಿ ಭಾರತ ವಿರುದ್ಧ ಸೋತ ಪಾಕಿಸ್ತಾನ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ. ಹೀಗಾಗಿ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.
ನಾಯಕ ರೋಹಿತ್ ಶರ್ಮಾ ತಂಡಕ್ಕೆ ಸ್ಫೋಟಕ ಆರಂಭ ಒದಗಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಕೂಡ ಫಾರ್ಮ್ಗೆ ಮರಳಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಆದರೆ, ಕೆಎಲ್ ರಾಹುಲ್ ಬ್ಯಾಟ್ ಸದ್ದು ಮಾಡುತ್ತಿಲ್ಲ. ಬೌಲಿಂಗ್ ವಿಭಾಗದಲ್ಲಿ ಕೂಡ ಬದಲಾವಣೆ ಆಗಲೇಬೇಕಿದೆ. ಅರ್ಶ್ದೀಪ್ ಸಿಂಗ್ ಹಾಗೂ ಆವೇಶ್ ಖಾನ್ ದುಬಾರಿಯಾಗುತ್ತಿದ್ದಾರೆ. ವಿಕೆಟ್ ಕೂಡ ಪಡೆದುಕೊಳ್ಳುತ್ತಿಲ್ಲ. ಹೀಗಾಗಿ ಭಾರತದ ಪ್ಲೇಯಿಂಗ್ ಇಲೆವೆನ್ನಲ್ಲಿ ಮುಖ್ಯ ಬದಲಾವಣೆ ನಿರೀಕ್ಷಿಸಲಾಗಿದೆ.
Published On - 8:58 am, Sun, 4 September 22