ಇಂಗ್ಲೆಂಡ್ ಚಾಂಪಿಯನ್ಸ್​ ವಿರುದ್ಧ ಸೋತ ‘ಇಂಡಿಯಾ’

ವರ್ಲ್ಡ್​ ಚಾಂಪಿಯನ್​ಶಿಪ್ ಆಫ್ ಲೆಜೆಂಡ್ಸ್ ಎಂಬುದು ನಿವೃತ್ತ ಅಂತರರಾಷ್ಟ್ರೀಯ ಕ್ರಿಕೆಟ್ ತಾರೆಗಳು ಭಾಗವಹಿಸುವ ಒಂದು ಪ್ರಮುಖ ಟಿ20 ಕ್ರಿಕೆಟ್ ಪಂದ್ಯಾವಳಿಯಾಗಿದೆ. ಪ್ರಸ್ತುತ ಇದರ ಮೂರನೇ ಆವೃತ್ತಿಯು ಯುಎಇಯ ಶಾರ್ಜಾ ಮತ್ತು ದುಬೈನಲ್ಲಿ ಜರುಗುತ್ತಿದೆ. ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಗೆದ್ದಿದ್ದ ಇಂಡಿಯಾ ಚಾಂಪಿಯನ್ಸ್ ತಂಡ 2ನೇ ಪಂದ್ಯದಲ್ಲಿ ಸೋಲನುಭವಿಸಿದೆ.

ಇಂಗ್ಲೆಂಡ್ ಚಾಂಪಿಯನ್ಸ್​ ವಿರುದ್ಧ ಸೋತ ಇಂಡಿಯಾ
India Champions
Image Credit source: WCL

Updated on: Oct 05, 2026 | 8:19 AM

ವರ್ಲ್ಡ್ ಚಾಂಪಿಯನ್ ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಇಂಗ್ಲೆಂಡ್ ಚಾಂಪಿಯನ್ಸ್ ತಂಡವು ಇಂಡಿಯಾ ಚಾಂಪಿಯನ್ಸ್ ವಿರುದ್ಧ 21 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಯುಎಇಯ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ಹಂಗಾಮಿ ನಾಯಕ ಹರ್ಭಜನ್ ಸಿಂಗ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ನಿಯಮಿತ ನಾಯಕ ಯುವರಾಜ್ ಸಿಂಗ್ ಅವರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಭಾರತೀಯ ಆಟಗಾರರಿಗೆ ಇಂಗ್ಲೆಂಡ್ ತಂಡದ ಬ್ಯಾಟರ್‌ಗಳು ಆರಂಭದಿಂದಲೇ ಕಠಿಣ ಸವಾಲೊಡ್ಡಿದರು.

ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಚಾಂಪಿಯನ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 192 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು. ಇಂಗ್ಲೆಂಡ್ ಪರ ನಾಯಕ ರವಿ ಬೋಪಾರ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 46 ಎಸೆತಗಳಲ್ಲಿ 5 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 83 ರನ್ ಚಚ್ಚಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.

ರವಿ ಬೋಪಾರ ಅವರಿಗೆ ಉತ್ತಮ ಸಾಥ್ ನೀಡಿದ ಸಮಿತ್ ಪಟೇಲ್ 44 ಎಸೆತಗಳಲ್ಲಿ 57 ರನ್ ಗಳಿಸಿ ಔಟಾದರು. ಭಾರತದ ಪರ ಬೌಲಿಂಗ್‌ನಲ್ಲಿ ಧವಳ್ ಕುಲಕರ್ಣಿ (2/32) ಮತ್ತು ಕರ್ನಾಟಕದ ಅಭಿಮನ್ಯು ಮಿಥುನ್ (2/27) ತಲಾ ಎರಡು ವಿಕೆಟ್ ಪಡೆದು ಗಮನ ಸೆಳೆದರು.

193 ರನ್​ಗಳ ಕಠಿಣ ಗುರಿ:

20 ಓವರ್​ಗಳಲ್ಲಿ 193 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಇಂಡಿಯಾ ಚಾಂಪಿಯನ್ಸ್ ತಂಡವು ಅಂತಿಮವಾಗಿ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 171 ರನ್‌ಗಳಷ್ಟೇ ಗಳಿಸಲು ಶಕ್ತವಾಯಿತು. ಭಾರತದ ಪರ ಅಂಬಟಿ ರಾಯುಡು 31 ಎಸೆತಗಳಲ್ಲಿ 47 ರನ್ ಗಳಿಸಿ ಏಕಾಂಗಿ ಹೋರಾಟ ಪ್ರದರ್ಶಿಸಿದರೆ, ಕೆಳ ಕ್ರಮಾಂಕದಲ್ಲಿ ಪಿಯೂಷ್ ಚಾವ್ಲಾ ಅಜೇಯ 34 ರನ್ ಗಳಿಸಿ ಜಯಕ್ಕಾಗಿ ಶ್ರಮಿಸಿದರು.

ಆದರೆ ಇಂಗ್ಲೆಂಡ್ ಪರ ನಿಖರ ದಾಳಿ ಸಂಘಟಿಸಿದ ಟೋಬಿ ರೋಲ್ಯಾಂಡ್-ಜೋನ್ಸ್, ಲಿಯಾಮ್ ಪ್ಲಂಕೆಟ್ ಮತ್ತು ರಯಾನ್ ಸೈಡ್‌ಬಾಟಮ್ ತಲಾ ಎರಡು ವಿಕೆಟ್ ಕಡಿಯುವ ಮೂಲಕ ಭಾರತದ ರನ್ ವೇಗಕ್ಕೆ ಬ್ರೇಕ್ ಹಾಕಿದರು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ಚಾಂಪಿಯನ್ಸ್ ಟೂರ್ನಿಯಲ್ಲಿ ತನ್ನ ವಿಜಯಯಾತ್ರೆಯನ್ನು ಮುಂದುವರಿಸಿದೆ.

ಇಂಡಿಯಾ ಚಾಂಪಿಯನ್ಸ್​​ ಪ್ಲೇಯಿಂಗ್ 11: ನಮನ್ ಓಜಾ (ವಿಕೆಟ್ ಕೀಪರ್), ಅಂಬಾಟಿ ರಾಯುಡು , ಸ್ಟುವರ್ಟ್ ಬಿನ್ನಿ ,
ರಾಬಿನ್ ಉತ್ತಪ್ಪ , ಯೂಸುಫ್ ಪಠಾಣ್ , ಇರ್ಫಾನ್ ಪಠಾಣ್ , ರಿಷಿ ಧವನ್ , ಪಿಯೂಷ್ ಚಾವ್ಲಾ , ಧವಲ್ ಕುಲಕರ್ಣಿ , ಹರ್ಭಜನ್ ಸಿಂಗ್ (ನಾಯಕ) , ಅಭಿಮನ್ಯು ಮಿಥುನ್.

ಇದನ್ನೂ ಓದಿ: ಪ್ರಯೋಗಗಳ ಕಾಲ ಮುಗಿಯಿತು: ಸ್ಪಷ್ಟ ಗುರಿ ತಿಳಿಸಿದ ಶುಭ್​ಮನ್ ಗಿಲ್

ಇಂಗ್ಲೆಂಡ್ ಚಾಂಪಿಯನ್ಸ್​​ ಪ್ಲೇಯಿಂಗ್ 11: ರವಿ ಬೋಪಾರ (ನಾಯಕ) , ಡೇವಿಡ್ ಮಲಾನ್ , ಜೊನಾಥನ್ ಟ್ರಾಟ್ , ಸಮಿತ್ ಪಟೇಲ್ , ಟೋಬಿ ರೋಲ್ಯಾಂಡ್-ಜೋನ್ಸ್ , ಫಿಲ್ ಮಸ್ಟರ್ಡ್ (ವಿಕೆಟ್ ಕೀಪರ್) , ಲಿಯಾಮ್ ಪ್ಲಂಕೆಟ್ , ಮಾಂಟಿ ಪನೇಸರ್ ,
ಅಜ್ಮಲ್ ಶಹಜಾದ್ , ರಯಾನ್ ಸೈಡ್‌ಬಾಟಮ್ , ಉಸ್ಮಾನ್ ಅಫ್ಜಾಲ್.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us