ಅಫ್ಘಾನಿಸ್ತಾನ್ ಭಾರತದಲ್ಲಿ ಯಾಕೆ ಪಂದ್ಯ ಆಯೋಜಿಸುತ್ತಿದೆ?

ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಐತಿಹಾಸಿಕ ಟಿ20 ಸರಣಿಯು ನಾಳೆಯಿಂದ (ಸೆಪ್ಟೆಂಬರ್ 13) ನವದೆಹಲಿಯಲ್ಲಿ ಆರಂಭವಾಗಲಿದೆ. ಭಾರತದಲ್ಲೇ ನಡೆಯಲಿರುವ ಈ ಸರಣಿಯ ಅಧಿಕೃತ ಆತಿಥ್ಯವನ್ನು ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿಯೇ  ವಹಿಸಿಕೊಂಡಿದೆ. ಅಂದರೆ, ಭಾರತ ತಂಡವು ತನ್ನದೇ ದೇಶದ ಮೈದಾನದಲ್ಲಿ ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ಆಯೋಜಿಸಿರುವ ಸರಣಿಯಲ್ಲಿ ಪ್ರವಾಸಿ ತಂಡವಾಗಿ ಕಣಕ್ಕಿಳಿಯುತ್ತಿದೆ!

ಅಫ್ಘಾನಿಸ್ತಾನ್ ಭಾರತದಲ್ಲಿ ಯಾಕೆ ಪಂದ್ಯ ಆಯೋಜಿಸುತ್ತಿದೆ?
ಅಫ್ಘಾನಿಸ್ತಾನ್
Image Credit source: GettyImages

Updated on: Sep 12, 2026 | 11:04 AM

ಸಾಮಾನ್ಯವಾಗಿ ಯಾವುದೇ ಒಂದು ಕ್ರಿಕೆಟ್ ಸರಣಿ ನಡೆಯುವಾಗ ಒಂದು ದೇಶ ಆತಿಥೇಯ ಆಗಿರುತ್ತದೆ, ಮತ್ತೊಂದು ದೇಶ ಪ್ರವಾಸಿ ತಂಡ ಆಗಿರುತ್ತದೆ. ಆದರೆ, ಭಾರತದ ಮೈದಾನದಲ್ಲಿ ಭಾರತದ ವಿರುದ್ಧವೇ ಅಫ್ಘಾನಿಸ್ತಾನ್ ಆತಿಥೇಯ ತಂಡವಾಗಿ ಕಣಕ್ಕಿಳಿಯುತ್ತಿರುವುದು ಜಾಗತಿಕ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಅಪರೂಪದ ವಿದ್ಯಮಾನವಾಗಿದೆ. ಅಂದರೆ ತನ್ನದೇ ಆದ ಸ್ವಂತ ತವರು ನೆಲದಲ್ಲಿ ಪಂದ್ಯ ಆಯೋಜಿಸಲು ಸಾಧ್ಯವಾಗದ ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿ, ಭಾರತವನ್ನು ತನ್ನ ತಾತ್ಕಾಲಿಕ ತವರನ್ನಾಗಿ ಮಾಡಿಕೊಂಡಿದೆ. ಇದರ ಹಿಂದೆ ಹಲವು ರಾಜತಾಂತ್ರಿಕ, ಭದ್ರತಾ ಮತ್ತು ಕ್ರೀಡಾ ಕಾರಣಗಳಿವೆ. ಆ ಕಾರಣಗಳಾವುವು ಎಂದು ನೋಡುವುದಾದರೆ…

ರಾಜಕೀಯ ಮತ್ತು ಭದ್ರತಾ ಸವಾಲುಗಳು:

ಅಫ್ಘಾನಿಸ್ತಾನದಲ್ಲಿ ಕಳೆದ ಹಲವು ದಶಕಗಳಿಂದ ಇರುವ ರಾಜಕೀಯ ಅಸ್ಥಿರತೆ, ಆಡಳಿತ ಬದಲಾವಣೆ ಮತ್ತು ಭದ್ರತಾ ಕಾಳಜಿಗಳು ಅಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ನಡೆಸಲು ದೊಡ್ಡ ತಡೆಯಾಗಿವೆ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮತ್ತು ಜಾಗತಿಕ ತಂಡಗಳು ಆಟಗಾರರ ಸುರಕ್ಷತೆಯ ಕಾರಣಕ್ಕಾಗಿ ಅಫ್ಘಾನಿಸ್ತಾನಕ್ಕೆ ಪ್ರಯಾಣಿಸಲು ಹಿಂಜರಿಯುತ್ತವೆ. ಹೀಗಾಗಿ, ಅಫ್ಘಾನಿಸ್ತಾನ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ತಟಸ್ಥ ವೇದಿಕೆಗಳನ್ನು ಅವಲಂಬಿಸುವುದು ಅನಿವಾರ್ಯವಾಗಿದೆ.

ಬಿಸಿಸಿಐ ಬೆನ್ನೆಲುಬು:

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾದ ಬಿಸಿಸಿಐ, ಅಫ್ಘಾನ್ ಕ್ರಿಕೆಟ್‌ನ ಬೆಳವಣಿಗೆಗೆ ಕೇವಲ ನೆರೆಹೊರೆಯ ದೇಶವಾಗಿ ಮಾತ್ರವಲ್ಲದೆ ಭದ್ರ ಬುನಾದಿಯಾಗಿ ನಿಂತಿದೆ. ಇದಕ್ಕೆ ಸಾಕ್ಷಿ, ಭಾರತದ ನೆಲದಲ್ಲಿ ಅಫ್ಘಾನಿಸ್ತಾನ್ ತಂಡವು ವೆಸ್ಟ್ ಇಂಡೀಸ್, ಐರ್ಲೆಂಡ್, ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ವಿರುದ್ಧ ಸರಣಿಗಳನ್ನು ಆಯೋಜಿಸಿರುವುದು. ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿಯು ಭಾರತದ ಕ್ರೀಡಾಂಗಣಗಳನ್ನು ತನ್ನ ‘ತಾತ್ಕಾಲಿಕ ತವರು ಮೈದಾನ’ ಎಂದು ಪರಿಗಣಿಸಿ, ಈ ಹಿಂದಿನಿಂದಲೂ ಹಲವು ಪ್ರಮುಖ ಸರಣಿಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿದೆ. ಬಿಸಿಸಿಐ ಈ ರೀತಿ ಮೂಲಸೌಕರ್ಯ ಹಾಗೂ ಕ್ರೀಡಾಂಗಣಗಳ ನೆರವು ನೀಡಿರುವುದು ಅಫ್ಘಾನಿಸ್ತಾನ್ ಕ್ರಿಕೆಟ್‌ನ ಇಂದಿನ ಅಭೂತಪೂರ್ವ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ.

ಉಚಿತ ಸೌಲಭ್ಯ:

ಅಫ್ಘಾನಿಸ್ತಾನ್ ತಂಡವು ಗ್ರೇಟರ್ ನೋಯ್ಡಾ, ಡೆಹ್ರಾಡೂನ್ ಮತ್ತು ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣಗಳನ್ನು ತನ್ನ ‘ತವರು ಮೈದಾನ’ ಆಗಿ ಬಳಸಿಕೊಳ್ಳಲು ಬಿಸಿಸಿಐ ಈ ಹಿಂದೆ ಉಚಿತವಾಗಿ ಅವಕಾಶ ಮಾಡಿಕೊಟ್ಟಿತ್ತು. ಬಿಸಿಸಿಐ ನೀಡಿದ ಈ ಪ್ರೋತ್ಸಾಹ ಮತ್ತು ಉದಾರತೆಯಿಂದಾಗಿ ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿಗೆ ಭಾರಿ ಪ್ರಮಾಣದ ಆರ್ಥಿಕ ಆದಾಯ ಒದಗಿಬಂತು. ಸಂಕ್ಷಿಪ್ತವಾಗಿ ಹೇಳುವುದಾದರೆ, ಅಫ್ಘಾನಿಸ್ತಾನ್ ಕ್ರಿಕೆಟ್ ಜಾಗತಿಕ ಮಟ್ಟದಲ್ಲಿ ಇಷ್ಟು ವೇಗವಾಗಿ ಬೆಳೆದು ನಿಲ್ಲುವಲ್ಲಿ ಬಿಸಿಸಿಐ ಪಾತ್ರ ಅತ್ಯಂತ ಮಹತ್ತರವಾದದ್ದು.

ಭಾರತ-ಅಫ್ಘಾನ್ ಬಾಂಧವ್ಯ:

ಇದು ಕೇವಲ ಕ್ರಿಕೆಟ್ ಮೈತ್ರಿ ಅಲ್ಲ, ಬದಲಿಗೆ ಭಾರತ ಮತ್ತು ಅಫ್ಘಾನಿಸ್ತಾನ್ ನಡುವಿನ ಬಲವಾದ ರಾಜತಾಂತ್ರಿಕ ಬಾಂಧವ್ಯದ ಸಂಕೇತವಾಗಿದೆ. ಪಾಕಿಸ್ತಾನ್ ಅಥವಾ ಯುಎಇ  ಗಿಂತಲೂ ಭಾರತದಲ್ಲಿ ಪಂದ್ಯ ಆಯೋಜಿಸುವುದು ತಮಗೆ ಹೆಚ್ಚು ಸುರಕ್ಷಿತ ಎಂಬುದು ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿಯ ನಂಬಿಕೆಯಾಗಿದೆ.

ಆರ್ಥಿಕ ಲಾಭ ಮತ್ತು ಪ್ರಾಯೋಜಕತ್ವ:

ಭಾರತದಲ್ಲಿ ಕ್ರಿಕೆಟ್‌ಗೆ ಇರುವ ಮಾರುಕಟ್ಟೆ ಮೌಲ್ಯ ಜಗತ್ತಿನ ಬೇರೆಲ್ಲೂ ಇಲ್ಲ. ಭಾರತದಲ್ಲಿ ಅಫ್ಘಾನಿಸ್ತಾನ್ ತನ್ನ ಪಂದ್ಯಗಳನ್ನು ಆಯೋಜಿಸುವುದರಿಂದ…

ಹೆಚ್ಚಿನ ಆದಾಯ: ಪಂದ್ಯದ ಪ್ರಸಾರ ಹಕ್ಕುಗಳು, ಟಿಕೆಟ್ ಮಾರಾಟ ಮತ್ತು ಸ್ಥಳೀಯ ಪ್ರಾಯೋಜಕತ್ವದ ಮೂಲಕ ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿಗೆ ಭಾರಿ ಆರ್ಥಿಕ ಲಾಭವಾಗುತ್ತದೆ.

ಪ್ರೇಕ್ಷಕರ ಬೆಂಬಲ: ಭಾರತೀಯ ಕ್ರೀಡಾಭಿಮಾನಿಗಳು ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ನಬಿ ಅವರಂತಹ ಅಫ್ಘಾನ್ ಆಟಗಾರರನ್ನು ತಮ್ಮದೇ ಆಟಗಾರರಂತೆ ಪ್ರೀತಿಸುತ್ತಾರೆ. ಇದರಿಂದಾಗಿ ಅಫ್ಘಾನ್ ತಂಡಕ್ಕೆ ಖಾಲಿ ಕ್ರೀಡಾಂಗಣದ ಬದಲು ತುಂಬಿದ ಗ್ಯಾಲರಿಯ ಸಮ್ಮುಖದಲ್ಲಿ ಆಡುವ ಸೌಭಾಗ್ಯ ಸಿಗುತ್ತದೆ.

ಈ ಸರಣಿಯ ಮಹತ್ವವೇನು?

ಈ ಬಾರಿ ನಡೆಯಲಿರುವ ಭಾರತ ಮತ್ತು ಅಫ್ಘಾನಿಸ್ತಾನ್ ನಡುವಿನ ಟಿ20 ಸರಣಿಯು ಕೇವಲ ಆಟವಲ್ಲ, ಅದೊಂದು ಇತಿಹಾಸ. ದೆಹಲಿಯ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದರೂ, ಟಾಸ್ ಪ್ರಕ್ರಿಯೆಯಿಂದ ಹಿಡಿದು ಪಂದ್ಯದ ಒಟ್ಟಾರೆ ಆಡಳಿತದ ಸಂಪೂರ್ಣ ಹಕ್ಕು ಮತ್ತು ಆದಾಯ ಅಫ್ಘಾನಿಸ್ತಾನ್ ಮಂಡಳಿಗೆ ಸೇರುತ್ತದೆ. ಭಾರತದಲ್ಲೇ ಇದ್ದುಕೊಂಡು ಭಾರತದ ವಿರುದ್ಧವೇ ಅಫ್ಘಾನಿಸ್ತಾನ್ ಆತಿಥ್ಯ ವಹಿಸುತ್ತಿರುವುದು ಕ್ರೀಡಾ ಜಗತ್ತಿನಲ್ಲಿ ಸ್ನೇಹ ಮತ್ತು ಸಹಕಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಇದನ್ನೂ ಓದಿ: ಮೊಹಮ್ಮದ್ ಸಿರಾಜ್​ಗೆ ಒಲಿದ ನಾಯಕತ್ವ

ಒಟ್ಟಾರೆಯಾಗಿ ಹೇಳುವುದಾದರೆ, ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿಯು ಭಾರತವನ್ನು ತನ್ನ ತವರು ಮೈದಾನವಾಗಿ ಬಳಸಿಕೊಳ್ಳುತ್ತಿರುವುದು ಕೇವಲ ಒಂದು ಸರಣಿಯ ಆಯೋಜನೆಯಲ್ಲ. ಬದಲಿಗೆ ಜಾಗತಿಕ ಕ್ರೀಡಾ ರಂಗದಲ್ಲಿ ಸ್ನೇಹ, ಸಹಕಾರ ಮತ್ತು ಮಾನವೀಯತೆಗೆ ಹಿಡಿದ ಕೈಗನ್ನಡಿಯಾಗಿದೆ. ತಾಯ್ನಾಡಿನ ಭದ್ರತಾ ಸವಾಲುಗಳು ಹಾಗೂ ರಾಜಕೀಯ ಅಸ್ಥಿರತೆಯ ಕಾರ್ಮೋಡಗಳ ನಡುವೆಯೂ, ಅಫ್ಘಾನ್ ಕ್ರಿಕೆಟ್ ಜಾಗತಿಕ ಮಟ್ಟದಲ್ಲಿ ಧ್ರುವತಾರೆಯಂತೆ ಮಿನುಗುತ್ತಿರುವುದರ ಹಿಂದೆ ಭಾರತ ಮತ್ತು ಬಿಸಿಸಿಐ ನೀಡಿದ ನಿರಂತರ ಬೆಂಬಲದ ಹಸ್ತವಿದೆ ಎಂಬುದು ಅಕ್ಷರಶಃ ಸತ್ಯ.

 

Loading...
Unable to load recommendations.
Follow Us