
ಚೆನ್ನೈನ ಎಂ.ಎ. ಚಿದಂಬರಂ (ಚೆಪಾಕ್) ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ದುಲೀಪ್ ಟ್ರೋಫಿ ಫೈನಲ್ ಪಂದ್ಯವು ಅಪರೂಪದ ರಣತಂತ್ರಕ್ಕೆ ಕ್ರಿಕೆಟ್ ಜಗತ್ತು ಸಾಕ್ಷಿಯಾಗಿದೆ. ಸೌತ್ ಝೋನ್ ವಿರುದ್ಧದ ಈ ಮಹತ್ವದ ಪಂದ್ಯದಲ್ಲಿ ಈಸ್ಟ್ ಝೋನ್ ಭಾರಿ ಮೊತ್ತ ಪೇರಿಸಿದರೂ ಇನಿಂಗ್ಸ್ ಡಿಕ್ಲೇರ್ ಘೋಷಿಸದೆ, ಬರೋಬ್ಬರಿ 708 ರನ್‌ಗಳಿಗೆ ಆಲೌಟ್ ಆಗುವವರೆಗೂ ಬ್ಯಾಟಿಂಗ್ ಮಾಡಿದೆ.
ಆಧುನಿಕ ಕ್ರಿಕೆಟ್‌ನಲ್ಲಿ ಇಷ್ಟೊಂದು ಬೃಹತ್ ಮೊತ್ತ ಬಂದಾಗ ಸಾಮಾನ್ಯವಾಗಿ ತಂಡಗಳು ಎದುರಾಳಿಯನ್ನು ಆಲೌಟ್ ಮಾಡಲು ಇನಿಂಗ್ಸ್ ಡಿಕ್ಲೇರ್ ಮಾಡುತ್ತವೆ. ಆದರೆ ಈಸ್ಟ್ ಝೋನ್ ತಂಡವು 163 ಓವರ್‌ಗಳ ಕಾಲ ಕ್ರೀಸ್‌ನಲ್ಲಿ ಕಚ್ಚಿ ಆಡಿದರು. ಅದರಲ್ಲೂ 2ನೇ ದಿನದಾಟದ ಅಂತ್ಯದವರೆಗೆ ಬ್ಯಾಟಿಂಗ್ ಮುಂದುವರೆಸಿದ್ದು ಎಲ್ಲರಿಗೂ ಅಚ್ಚರಿ ಎನಿಸಿತು. ವಿಚಿತ್ರ ಎನಿಸುವ ನಿರ್ಧಾರದ ಹಿಂದೆ ಭಾರತೀಯ ದೇಶಿ ಕ್ರಿಕೆಟ್‌ನ 60 ವರ್ಷಗಳ ಹಳೆಯ ನಿಯಮವೊಂದು ಅಡಗಿದೆ.
ಭಾರತೀಯ ಪ್ರಥಮ ದರ್ಜೆ ಕ್ರಿಕೆಟ್‌ನ ಫೈನಲ್ ಪಂದ್ಯಗಳಲ್ಲಿ ‘ಮೊದಲ ಇನಿಂಗ್ಸ್ ಮುನ್ನಡೆ’ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ವೇಳೆ 5 ದಿನಗಳ ಸುದೀರ್ಘ ಆಟದ ನಂತರವೂ ಪಂದ್ಯವು ಯಾವುದೇ ಸ್ಪಷ್ಟ ಫಲಿತಾಂಶವಿಲ್ಲದೆ ಡ್ರಾದಲ್ಲಿ ಅಂತ್ಯಗೊಂಡರೆ, ಮೊದಲ ಇನಿಂಗ್ಸ್‌ನಲ್ಲಿ ಯಾವ ತಂಡ ಗರಿಷ್ಠ ರನ್ ಗಳಿಸಿ ಮುನ್ನಡೆ ಸಾಧಿಸಿರುತ್ತದೆಯೋ ಆ ತಂಡವನ್ನೇ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ
ಈಸ್ಟ್ ಝೋನ್ ನಾಯಕ ಇಶಾನ್ ಕಿಶನ್ ಇದೇ ನಿಯಮವನ್ನು ಅಸ್ತ್ರವಾಗಿ ಬಳಸಿಕೊಂಡರು. ಈಸ್ಟ್ ಝೋನ್ ಬ್ಯಾಟಿಂಗ್ ಮಾಡಿದಷ್ಟೂ ಸೌತ್ ಝೋನ್ ವಲಯಕ್ಕೆ ಪಂದ್ಯ ಗೆಲ್ಲಲು ಸಿಗುವ ಸಮಯ ಕಡಿಮೆಯಾಗುತ್ತದೆ. ಜೊತೆಗೆ 708 ರನ್‌ಗಳ ಈ ಬೆಟ್ಟದಂತಹ ಮೊತ್ತವನ್ನು ದಾಟಿ ಮೊದಲ ಇನಿಂಗ್ಸ್ ಮುನ್ನಡೆ ಪಡೆಯುವುದು ಸೌತ್ ಝೋನ್ ತಂಡಕ್ಕೆ ಅತ್ಯಂತ ಕಠಿಣ ಸವಾಲಾಗಿದೆ.
ಈ ಪಂದ್ಯದಲ್ಲಿ ಈಸ್ಟ್ ಝೋನ್ ತಂಡವು ಸೌತ್ ಝೋನ್ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ ಬೇಗನೆ ಆಲೌಟ್ ಮಾಡಿದರೆ, ಅಂದರೆ 707 ರನ್‌ಗಳ ಒಳಗೆ ಆಲೌಟ್ ಮಾಡಿ ಪಂದ್ಯವನ್ನು ಡ್ರಾ ಮಾಡಿಕೊಂಡರೆ, ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಚಾಂಪಿಯನ್ ಪಟ್ಟ ಈಸ್ಟ್ ಝೋನ್ ತಂಡದ ಪಾಲಾಗಲಿದೆ. ಹೀಗಾಗಿಯೇ ಈಸ್ಟ್ ಝೋನ್ ತಂಡವು ಬೃಹತ್ ಮೊತ್ತ ಪೇರಿಸಿದರೂ ಡಿಕ್ಲೇರ್ ಘೋಷಿಸದೇ ಆಲೌಟ್ ಆಗುವವರೆಗೆ ಬ್ಯಾಟಿಂಗ್ ಮಾಡಿದೆ.
ಇದನ್ನೂ ಓದಿ: ಟೀಮ್ ಇಂಡಿಯಾ ಆಟಗಾರರು ಪದೇ ಪದೇ ಗಾಯಗೊಳ್ಳುತ್ತಿರುವುದು ಏಕೆ? ಇಲ್ಲಿದೆ ಉತ್ತರ
ಒಟ್ಟಾರೆಯಾಗಿ, ಈಸ್ಟ್ ಝೋನ್ ತಂಡವು ಕೇವಲ ರನ್ ಗಳಿಸಿಲ್ಲ, ಬದಲಿಗೆ ದುಲೀಪ್ ಟ್ರೋಫಿಯ ಚಾಂಪಿಯನ್ ಪಟ್ಟದ ಮೇಲೆ ತನ್ನ ಒಂದು ಕೈಯನ್ನು ಭದ್ರವಾಗಿ ಇರಿಸಿದೆ. ಸೌತ್ ಝೋನ್ ಈ ಪಂದ್ಯದಲ್ಲಿ ಪವಾಡ ಸದೃಶ ಬ್ಯಾಟಿಂಗ್ ಪ್ರದರ್ಶನ ನೀಡದ ಹೊರತು ಈಸ್ಟ್ ಝೋನ್ ಕೈಯಿಂದ ಟ್ರೋಫಿ ಕಸಿದುಕೊಳ್ಳುವುದು ಅಸಾಧ್ಯದ ಮಾತಾಗಿದೆ.
ಸಾಂಪ್ರದಾಯಿಕ ಕ್ರಿಕೆಟ್ ನಿಯಮಗಳನ್ನು ಅತ್ಯಂತ ಚಾಣಾಕ್ಷತನದಿಂದ ಬಳಸಿಕೊಂಡಿರುವ ಈಸ್ಟ್ ಝೋನ್, ಸೌತ್ ಝೋನ್ ತಂಡಕ್ಕೆ ಅಗ್ನಿಪರೀಕ್ಷೆ ಒಡ್ಡಿದೆ. ಕ್ರಿಕೆಟ್ ಇತಿಹಾಸದ ಪುಟ ಸೇರಲಿರುವ ಈ ಮಹಾ ಸಮರದಲ್ಲಿ ಸೌತ್ ಝೋನ್ ತಿರುಗೇಟು ನೀಡಲಿದೆಯೇ ಅಥವಾ ಈಸ್ಟ್ ಝೋನ್ ವಿಜಯದ ನಗೆ ಬೀರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.