ಇಂದು ಭಾರತ- ಪಾಕ್ ನಡುವೆ ಕ್ರಿಕೆಟ್ ಕದನ; ಮುಖಾಮುಖಿ ದಾಖಲೆ ಹೇಗಿದೆ?

ಮಹಿಳಾ ಏಷ್ಯಾಕಪ್‌ನಲ್ಲಿ ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ ದುಬೈನಲ್ಲಿ ನಡೆಯಲಿದೆ. ಸೆಮಿಫೈನಲ್‌ಗೆ ಪಾಕಿಸ್ತಾನಕ್ಕೆ ಈ ಪಂದ್ಯ ಮಹತ್ವದ್ದಾಗಿದೆ, ಆದರೆ ಭಾರತ ಈಗಾಗಲೇ ಅರ್ಹತೆ ಪಡೆದಿದೆ. ಟಿ20 ಮುಖಾಮುಖಿಗಳಲ್ಲಿ ಭಾರತ ಪಾಕ್ ವಿರುದ್ಧ ಪ್ರಾಬಲ್ಯ ಸಾಧಿಸಿದೆ. ದುಬೈ ಪಿಚ್ ಸ್ಪಿನ್ನರ್‌ಗಳಿಗೆ ಸಹಕಾರಿ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವುದು ಉತ್ತಮ. ಭಾರತ ಗೆಲುವಿನ ಫೇವರಿಟ್ ಆಗಿದೆ.

ಇಂದು ಭಾರತ- ಪಾಕ್ ನಡುವೆ ಕ್ರಿಕೆಟ್ ಕದನ; ಮುಖಾಮುಖಿ ದಾಖಲೆ ಹೇಗಿದೆ?
ಭಾರತ Vs ಪಾಕಿಸ್ತಾನ
Image Credit source: PTI

Updated on: Sep 05, 2026 | 6:09 PM

ಮಹಿಳಾ ಏಷ್ಯಾಕಪ್​ನಲ್ಲಿ ಇಂದು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಹೈವೋಲ್ಟೇಜ್ ಕದನ ನಡೆಯುತ್ತಿದೆ. ಉಭಯ ತಂಡಗಳ ನಡುವಿನ ಈ ಪಂದ್ಯಕ್ಕೆ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಆತಿಥ್ಯವಹಿಸುತ್ತದೆ. ಸೆಮಿಫೈನಲ್‌ ದೃಷ್ಟಿಯಿಂದ ಈ ಪಂದ್ಯ ಪಾಕ್ ತಂಡಕ್ಕೆ ಅಂತ್ಯತ ಮಹತ್ವದ್ದಾಗಿದೆ. ಏಕೆಂದರೆ ಇದುವರೆಗೆ 1 ಪಂದ್ಯವನ್ನಾಡಿರುವ ಪಾಕಿಸ್ತಾನ ಆ ಪಂದ್ಯವನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಇತ್ತ ಟೀಂ ಇಂಡಿಯಾ ಆಡಿರುವ ಎರಡು ಪಂದ್ಯಗಳನ್ನು ಗೆದ್ದು ಸೆಮಿಫೈನಲ್​ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.

ಹೀಗಾಗಿ ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ ಈ ಪಂದ್ಯವನ್ನು ಸೋತರೆ, ತನ್ನ ಕೊನೆಯ ಪಂದ್ಯದಲ್ಲಿ ಗೆಲ್ಲಲೇಬೇಕಾಗುತ್ತದೆ. ಇತ್ತ ಟೀಂ ಇಂಡಿಯಾಕ್ಕೆ ಇದು ಪ್ರತಿಷ್ಠಿಯೆ ಪಂದ್ಯವಾಗಿದೆ. ಹೀಗಾಗಿ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟವನ್ನು ಅಭಿಮಾನಿಗಳು ನಿರೀಕ್ಷಿಸಬಹುದು. ಆದರೆ ಅದಕ್ಕೂ ಮೊದಲು ಉಭಯ ತಂಡಗಳ ಟಿ20 ಮುಖಾಮುಖಿ ದಾಖಲೆ ಹೇಗಿದೆ? ದುಬೈ ಪಿಚ್ ಯಾರಿಗೆ ಸಹಕಾರಿಯಾಗಲಿದೆ ಎಂಬುದನ್ನು ನೋಡೋಣ.

ಮುಖಾಮುಖಿ ದಾಖಲೆ

ಮಹಿಳಾ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು 17 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 14 ಪಂದ್ಯಗಳಲ್ಲಿ ಗೆದ್ದಿದ್ದರೆ, ಪಾಕಿಸ್ತಾನ ಕೇವಲ 3 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಭಾರತ ತನ್ನ ಟಿ20 ಪಂದ್ಯಗಳಲ್ಲಿ ಶೇ. 82 ಕ್ಕಿಂತ ಹೆಚ್ಚು ಪಂದ್ಯಗಳನ್ನು ಪಾಕಿಸ್ತಾನ ವಿರುದ್ಧ ಗೆದ್ದಿದೆ. ಇದರರ್ಥ ಪಾಕಿಸ್ತಾನದ ವಿರುದ್ಧ ಭಾರತ ಮೇಲುಗೈ ಸಾಧಿಸಿರುವುದನ್ನು ಅಂಕಿಅಂಶಗಳಿಂದ ಸಾಭೀತಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಭಾರತವೇ ಗೆಲುವಿನ ಫೇವರೇಟ್ ಎನಿಸಿಕೊಂಡಿದೆ.

ಇನ್ನು ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ 13 ಬಾರಿ ಮುಖಾಮುಖಿಯಾಗಿದ್ದು, ಅವುಗಳಲ್ಲಿ 12 ಪಂದ್ಯಗಳಲ್ಲಿ ಭಾರತ ಗೆದ್ದಿದ್ದರೆ, ಪಾಕಿಸ್ತಾನ ಏಕೈಕ ಗೆಲುವು ಸಾಧಿಸಿದೆ. ಹಾಗೆಯೇ ಮಹಿಳಾ ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡು ಬಾರಿ ಮುಖಾಮುಖಿಯಾಗಿವೆ. 2012 ಮತ್ತು 2016 ರ ಫೈನಲ್‌ನಲ್ಲಿ ಭಾರತ ಕ್ರಮವಾಗಿ ಪಾಕಿಸ್ತಾನವನ್ನು 18 ಮತ್ತು 17 ರನ್‌ಗಳಿಂದ ಸೋಲಿಸಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತ್ತು.

ಏಷ್ಯಾಕಪ್ ಸೆಮಿಫೈನಲ್​ಗೆ ಭಾರತ ಮಹಿಳಾ ತಂಡ ಎಂಟ್ರಿ

ದುಬೈ ಪಿಚ್‌ ಯಾರಿಗೆ ಸಹಕಾರಿ?

ದುಬೈ ಪಿಚ್‌ನಲ್ಲಿ ಸಾಮನ್ಯವಾಗಿ ಸ್ಪಿನ್ ಬೌಲರ್‌ಗಳು ಹೆಚ್ಚಿನ ಲಾಭ ಪಡೆಯುತ್ತಾರೆ. ಇಲ್ಲಿಯವರೆಗೆ, 24 ಮಹಿಳಾ ಟಿ20 ಪಂದ್ಯಗಳು ಈ ಮೈದಾನದಲ್ಲಿ ನಡೆದಿದ್ದು, ಸ್ಪಿನ್ ಬೌಲರ್‌ಗಳು ಸರಿಸುಮಾರು 57% ವಿಕೆಟ್‌ಗಳನ್ನು ಪಡೆದಿದ್ದಾರೆ. ದೊಡ್ಡ ಬೌಂಡರಿಗಳಿಂದಾಗಿ ಆಟಗಾರ್ತಿಯರಿಗೆ ದೊಡ್ಡ ಹೊಡೆತಗಳನ್ನು ಹೊಡೆಯಲು ಕಷ್ಟಕರವಾಗಿಸುತ್ತದೆ. ಪ್ರಸ್ತುತ ನಡೆಯುತ್ತಿರುವ ಮಹಿಳಾ ಏಷ್ಯಾಕಪ್‌ನಲ್ಲೂ ಸ್ಪಿನ್ನರ್‌ಗಳು ಮೇಲುಗೈ ಸಾಧಿಸಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಎರಡೂ ತಂಡಗಳು ಹೆಚ್ಚಿನ ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಬಹುದು. ಆದಾಗ್ಯೂ ಈ ದುಬೈ ಪಿಚ್​ನಲ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್‌ ಮಾಡುವುದು ಅಷ್ಟು ಸುಲಭವಲ್ಲ. ಆದ್ದರಿಂದ ಟಾಸ್ ಗೆಲ್ಲುವುದು ಮತ್ತು ಮೊದಲು ಬ್ಯಾಟಿಂಗ್ ಆಯ್ಕೆ ಮಾಡುವುದು ಉತ್ತಮ ಆಯ್ಕೆಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:07 pm, Sat, 5 September 26

Loading...
Unable to load recommendations.
Follow Us