
ಮಹಿಳಾ ಪ್ರೀಮಿಯರ್ ಲೀಗ್ನ (Women’s Premier League) 4ನೇ ಆವೃತ್ತಿಯಲ್ಲಿ ಆರ್‌ಸಿಬಿ (RCB) ಅದ್ಭುತ ಆರಂಭ ಪಡೆದುಕೊಂಡಿದೆ. ಆಡಿದ ಎರಡೂ ಪಂದ್ಯಗಳನ್ನು ಗೆದ್ದಿರುವ ಸ್ಮೃತಿ ಮಂಧಾನ ಪಡೆ 4 ಪಾಯಿಂಟ್ಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ತನ್ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಕೊನೆಯ ಓವರ್ನ ಕೊನೆಯ ಎಸೆತದಲ್ಲಿ ಸೋಲಿಸಿದ್ದ ಆರ್‌ಸಿಬಿ, ಇದೀಗ ತನ್ನ ಎರಡನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು 9 ವಿಕೆಟ್ಗಳಿಂದ ಮಣಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುಪಿ ತಂಡ 144 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆರ್‌ಸಿಬಿ 12.1 ಓವರ್‌ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು.
ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದ ಆರಂಭದಿಂದಲೂ ಆರ್‌ಸಿಬಿ ಮೇಲುಗೈ ಸಾಧಿಸಿತು. ಹಿಂದಿನ ಪಂದ್ಯದಂತೆ ಈ ಪಂದ್ಯದಲ್ಲೂ ಇಂಗ್ಲಿಷ್ ವೇಗಿ ಲಾರೆನ್ ಬೆಲ್ ಬಿಗಿಯಾದ ಬೌಲಿಂಗ್ ದಾಳಿಯೊಂದಿಗೆ ಮೂರನೇ ಓವರ್‌ನಲ್ಲಿ ವಿಕೆಟ್ ಪಡೆದರು. ನಂತರ ಎಂಟನೇ ಓವರ್‌ನಲ್ಲಿ ದಾಳಿಗಿಳಿದ ಶ್ರೇಯಾಂಕ ಪಾಟೀಲ್ ನಾಯಕಿ ಮೆಗ್ ಲ್ಯಾನಿಂಗ್ ಮತ್ತು ಲಿಚ್‌ಫೀಲ್ಡ್ ಅವರನ್ನು ಒಂದೇ ಓವರ್‌ನಲ್ಲಿ ಔಟ್ ಮಾಡಿದರು. ಮುಂದಿನ ಓವರ್‌ನಲ್ಲಿ, ಡಿ ಕ್ಲರ್ಕ್ ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್‌ಗಳನ್ನು ಪಡೆದರು.
ಹೀಗಾಗಿ ಕೇವಲ ಎಂಟು ಎಸೆತಗಳಲ್ಲಿ, ಯುಪಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು ಮತ್ತು 50 ರನ್‌ಗಳ ಹೊತ್ತಿಗೆ ತಂಡದ ಅರ್ಧದಷ್ಟು ಆಟಗಾರ್ತಿಯರು ಪೆವಿಲಿಯನ್ ಸೇರಿಕೊಂಡರು. ಆದರೆ ಆ ನಂತರ ಜೊತೆಯಾದ ದೀಪ್ತಿ ಶರ್ಮಾ (ಅಜೇಯ 45) ಮತ್ತು ಡಿಯಾಂಡ್ರಾ ಡಾಟಿನ್ (ಅಜೇಯ 40) ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಆದಾಗ್ಯೂ, ಇಬ್ಬರಿಗೂ ಮುಕ್ತವಾಗಿ ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲ. ಕ್ರೀಸ್‌ನಲ್ಲಿ ಸಾಕಷ್ಟು ಸಮಯ ಕಳೆದರೂ ಹೊಡಿಬಡಿ ಆಟವನ್ನಾಡಲು ಆರ್‌ಸಿಬಿ ಬೌಲರ್ಗಳು ಅವಕಾಶ ನೀಡಲಿಲ್ಲ. ಅಂತಿಮವಾಗಿ ಈ ಜೋಡಿ ಅಜೇಯ 93 ರನ್‌ಗಳ ಪಾಲುದಾರಿಕೆಯನ್ನು ನಡೆಸಿ ತಂಡವನ್ನು 143 ರನ್ಗಳಿಗೆ ಕೊಂಡೊಯ್ದರು.
ಹಿಂದಿನ ಪಂದ್ಯದಂತೆಯೇ, ಬೆಂಗಳೂರಿನ ಆರಂಭಿಕ ಜೋಡಿ ಹ್ಯಾರಿಸ್ ಮತ್ತು ಮಂಧಾನ ಮತ್ತೊಮ್ಮೆ ಸ್ಫೋಟಕ ಆರಂಭವನ್ನು ನೀಡಿದರು. ಆದಾಗ್ಯೂ, ಮುಂಬೈ ವಿರುದ್ಧದ ಪಂದ್ಯದಲ್ಲಿ ಇಬ್ಬರೂ ಬಲವಾದ ಆರಂಭದ ನಂತರ ಔಟಾದರು, ಆದರೆ ಈ ಬಾರಿ ಅವರು ಹಾಗೆ ಮಾಡಲಿಲ್ಲ. ಅದರಲ್ಲೂ ಬೌಂಡರಿಗಳ ಮಳೆ ಸುರಿಸಲು ಶುರು ಮಾಡಿದ ಹ್ಯಾರಿಸ್ ಆರಂಭದಲ್ಲೇ ಯುಪಿ ಬೌಲರ್‌ಗಳನ್ನು ಹೈರಾಣಾಗಿಸಿದರು. ಡಿಯಾಂಡ್ರಾ ಡಾಟಿನ್ ಅವರ ಒಂದೇ ಓವರ್‌ನಲ್ಲಿ, ಅವರು ಮೂರು ಸಿಕ್ಸರ್‌ಗಳು ಮತ್ತು ಮೂರು ಬೌಂಡರಿಗಳ ಸಹಾಯದಿಂದ 32 ರನ್‌ಗಳನ್ನು ಕಲೆಹಾಕಿದರು. ಈ ಮೂಲಕ ಹ್ಯಾರಿಸ್ ಕೇವಲ 22 ಎಸೆತಗಳಲ್ಲಿ ಈ ಆವೃತ್ತಿಯ ವೇಗದ ಅರ್ಧಶತಕವನ್ನು ಪೂರೈಸಿದರು.
WPL 2026: ಆರ್‌ಸಿಬಿ ಸೇರಿದಂತೆ ಈ 3 ಪಂದ್ಯಗಳಿಗೆ ಸ್ಟೇಡಿಯಂಗೆ ವೀಕ್ಷಕರ ಪ್ರವೇಶ ನಿಷೇಧ
ಶತಕದತ್ತ ಸಾಗುತ್ತಿದ್ದ ಹ್ಯಾರಿಸ್ 12ನೇ ಓವರ್‌ನಲ್ಲಿ ಶಿಖಾ ಪಾಂಡೆ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಆದರೆ ಆ ಹೊತ್ತಿಗೆ ಆರ್‌ಸಿಬಿ 137 ರನ್ ಗಳಿಸಿತ್ತು. ಹ್ಯಾರಿಸ್ ಕೇವಲ 40 ಎಸೆತಗಳಲ್ಲಿ 5 ಸಿಕ್ಸರ್‌ಗಳು ಮತ್ತು 10 ಬೌಂಡರಿಗಳನ್ನು ಒಳಗೊಂಡಂತೆ 85 ರನ್‌ಗಳ ಅಬ್ಬರದ ಇನ್ನಿಂಗ್ಸ್ ಆಡಿದರು. ಇನ್ನಿಂಗ್ಸ್‌ನ 73ನೇ ಎಸೆತದಲ್ಲಿ, ಅಂದರೆ 12.1 ಓವರ್‌ಗಳಲ್ಲಿ ಜಯಗಳಿಸುವ ಮೂಲಕ ಆರ್‌ಸಿಬಿ ಸತತ 2ನೇ ಜಯ ದಾಖಲಿಸಿತು. ನಾಯಕಿ ಮಂಧಾನ 47 ರನ್ ಗಳಿಸಿ ಅಜೇಯರಾಗಿ ಉಳಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:38 pm, Mon, 12 January 26