ಐಸಿಸಿ ಮಹಿಳಾ ಟಿ20 ವಿಶ್ವಕಪ್ ತಂಡ ಪ್ರಕಟ; ಟೀಂ ಇಂಡಿಯಾದಿಂದ ಓರ್ವ ಆಟಗಾರ್ತಿಯ ಆಯ್ಕೆ!

Women‘s T20 World Cup 2023: ಇಡೀ ಪಂದ್ಯಾವಳಿಯಲ್ಲಿ ಒಟ್ಟು 136 ರನ್ ಗಳಿಸಿದ ಭಾರತದ ಸ್ಫೋಟಕ ಬ್ಯಾಟರ್ ಹಾಗೂ ವಿಕೆಟ್ ಕೀಪರ್ ರೀಚಾ ಘೋಷ್ ಐಸಿಸಿ ಟಿ20 ತಂಡದಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಆಟಗಾರ್ತಿ ಎನಿಸಿಕೊಂಡಿದ್ದಾರೆ.

ಐಸಿಸಿ ಮಹಿಳಾ ಟಿ20 ವಿಶ್ವಕಪ್ ತಂಡ ಪ್ರಕಟ; ಟೀಂ ಇಂಡಿಯಾದಿಂದ ಓರ್ವ ಆಟಗಾರ್ತಿಯ ಆಯ್ಕೆ!
ಟೀಂ ಇಂಡಿಯಾ

Updated on: Feb 27, 2023 | 4:21 PM

2023ರ ಮಹಿಳಾ ಟಿ20 ವಿಶ್ವಕಪ್​ಗೆ (Women’s T20 World Cup 2023) ಅದ್ಧೂರಿ ತೆರೆಬಿದ್ದಿದೆ. ಕಳೆದ ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಮತ್ತೊಮ್ಮೆ ಚಾಂಪಿಯನ್ ಆಗುವ ಮೂಲಕ ಟಿ20 ಚಾಂಪಿಯನ್ ಪಟ್ಟವನ್ನು ತನ್ನಲ್ಲೇ ಉಳಿಸಿಕೊಂಡಿದೆ. ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 16 ರನ್​ಗಳಿಂದ ಮಣಿಸಿದ ಆಸೀಸ್ ವನಿತಾ ತಂಡ 6ನೇ ಬಾರಿಗೆ ಟ್ರೋಫಿ ಎತ್ತಿಹಿಡಿಯಿತು. ಈ ಮೂಲಕ ಟೂರ್ನಿಗೂ ತೆರೆ ಬಿದ್ದಿತ್ತು. ಇದೀಗ ಐಸಿಸಿ ಅತ್ಯುತ್ತಮ ಟಿ20 ವಿಶ್ವಕಪ್ ತಂಡವನ್ನು (ICC T20 World Cup team) ಪ್ರಕಟಿಸಿದ್ದು, ಈ ತಂಡದಲ್ಲಿ ಟೀಂ ಇಂಡಿಯಾದ ಓರ್ವ ಆಟಗಾರ್ತಿ ಮಾತ್ರ ಸ್ಥಾನ ಪಡೆದಿದ್ದಾರೆ. ಇಡೀ ಪಂದ್ಯಾವಳಿಯಲ್ಲಿ ಒಟ್ಟು 136 ರನ್ ಗಳಿಸಿದ ಭಾರತದ ಸ್ಫೋಟಕ ಬ್ಯಾಟರ್ ಹಾಗೂ ವಿಕೆಟ್ ಕೀಪರ್ ರೀಚಾ ಘೋಷ್ (Richa Ghosh) ಐಸಿಸಿ ಟಿ20 ತಂಡದಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಇನ್ನುಳಿದಂತೆ ಐಸಿಸಿಯ ಪ್ಲೇಯಿಂಗ್ ಇಲೆವೆನ್‌ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯನ್ ತಂಡದ 4 ಆಟಗಾರ್ತಿಯರಿದ್ದರೆ, ರನ್ನರ್ ಅಪ್ ದಕ್ಷಿಣ ಆಫ್ರಿಕಾ ತಂಡದಿಂದ 3 ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ.

ಇನ್ನುಳಿದಂತೆ ಸೆಮಿಫೈನಲ್​ ಆಡಿದ ಇಂಗ್ಲೆಂಡ್‌ ತಂಡದಿಂದ ಇಬ್ಬರು ಆಟಗಾರ್ತಿಯರು ಹಾಗೂ ಭಾರತ ಮತ್ತು ವೆಸ್ಟ್ ಇಂಡೀಸ್‌ ತಂಡಗಳಿಂದ ತಲಾ ಒಬ್ಬೊಬ್ಬ ಆಟಗಾರ್ತಿಯರನ್ನು ತೆಗೆದುಕೊಳ್ಳುವುದರೊಂದಿಗೆ ಐಸಿಸಿ ಅತ್ಯಂತ ಮೌಲ್ಯಯುತ ಮಹಿಳಾ ಟಿ20 ವಿಶ್ವಕಪ್ ತಂಡವನ್ನು ಕಟ್ಟಿದೆ.

ರಿಚಾ ಪ್ರದರ್ಶನ

ಇನ್ನು ಈ ತಂಡದಲ್ಲಿ ಸ್ಥಾನ ಪಡೆದಿರುವ ರಿಚಾ ಬಗ್ಗೆ ಹೇಳಬೇಕೆಂದರೆ, ಇಡೀ ಟೂರ್ನಿಯಲ್ಲಿ ರಿಚಾ ಅವರ ಬ್ಯಾಟ್ ಅಷ್ಟೇನೂ ಅಬ್ಬರಿಸಲಿಲ್ಲ. ಆದರೆ ವಿಕೆಟ್‌ ಕೀಪರ್ ಆಗಿ ಅವರು ಉತ್ತಮ ಪ್ರದರ್ಶನ ನೀಡಿದರು. ರಿಚಾ ಹೊರತುಪಡಿಸಿ, 4 ಪಂದ್ಯಗಳಲ್ಲಿ 2 ಅರ್ಧಶತಕ ಸೇರಿದಂತೆ 151 ರನ್ ಗಳಿಸಿದ ಸ್ಮೃತಿ ಮಂಧಾನ ಐಸಿಸಿ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

CCL 2023: ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಸತತ 2ನೇ ಗೆಲುವು! ಪಾಯಿಂಟ್ ಪಟ್ಟಿಯಲ್ಲಿ ಯಾವ ಸ್ಥಾನ?

ಐಸಿಸಿ ತಂಡಕ್ಕೆ ಬ್ರಂಟ್ ನಾಯಕಿ

ಐಸಿಸಿ ತಂಡದ ನಾಯಕತ್ವವನ್ನು ಇಂಗ್ಲೆಂಡ್ ಸ್ಟಾರ್ ಆಟಗಾರ್ತಿ ಬ್ರಂಟ್‌ಗೆ ಹಸ್ತಾಂತರಿಸಲಾಗಿದೆ. ಅದೇ ಸಮಯದಲ್ಲಿ, ಟೂರ್ನಿಯಲ್ಲಿ 186 ರನ್ ಗಳಿಸಿದ ಬ್ರಿಟ್ಸ್ ಆರಂಭಿಕರಾಗಿ ಆಯ್ಕೆಯಾಗಿದ್ದಾರೆ. ಸತತ 2 ಅರ್ಧ ಶತಕಗಳನ್ನು ಬಾರಿಸುವ ಮೂಲಕ ದಕ್ಷಿಣ ಆಫ್ರಿಕಾವನ್ನು ಮೊದಲ ಬಾರಿಗೆ ಫೈನಲ್‌ಗೆ ಕರೆದೊಯ್ಯುವಲ್ಲಿ ಬ್ರಿಟ್ಸ್ ಯಶಸ್ವಿಯಾಗಿದ್ದರು. ಇದಲ್ಲದೆ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 55 ಎಸೆತಗಳಲ್ಲಿ 68 ರನ್ ಬಾರಿಸುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಪಡೆದಿದ್ದರು.

ಐಸಿಸಿ ಮಹಿಳಾ ಟಿ20 ವಿಶ್ವಕಪ್ ತಂಡ: ತಜ್ಮಿನ್ ಬ್ರಿಟ್ಸ್, ಅಲಿಸ್ಸಾ ಹೀಲಿ, ಲಾರಾ ವಾಲ್ಮಾರ್ಟ್, ನೇಟ್ ಸ್ಕಿವರ್ ಬ್ರಂಟ್, ಆಶ್ಲೇ ಗಾರ್ಡ್ನರ್, ರಿಚಾ ಘೋಷ್, ಸೋಫಿ ಎಕ್ಲೆಸ್ಟೋನ್, ರಾಮ್‌ಹಾರ್ಕ್, ಶಬ್ನಿಮ್ ಇಸ್ಮಾಯಿಲ್, ಡಾರ್ಸಿ ಬ್ರೌನ್, ಮೇಗನ್ ಶುಟ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:57 pm, Mon, 27 February 23