
2027ರ ಮಹಿಳಾ ಪ್ರೀಮಿಯರ್ ಲೀಗ್ ಅನ್ನು ಜನವರಿ 14 ರಿಂದ ಫೆಬ್ರವರಿ 7 ರವರೆಗೆ ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಆದರೆ ಅದಕ್ಕೂ ಮೊದಲು ಮಿನಿ ಹರಾಜು ನಡೆಯಬೇಕಿದೆ. ಕೆಲವೇ ದಿನಗಳ ಹಿಂದೆ ಬಿಸಿಸಿಐ, ಡಬ್ಲ್ಯೂಪಿಎಲ್ ಮಿನಿ ಹರಾಜಿನ ಬಗ್ಗೆ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿತ್ತು. ಅದರಂತೆ ಅಕ್ಟೋಬರ್ 28 ರಂದು ಕೇರಳದ ಕೊಚ್ಚಿಯಲ್ಲಿ ಈ ಮಿನಿ ಹರಾಜು ನಡೆಸುವುದಾಗಿ ಬಿಸಿಸಿಐ ಹೇಳಿತ್ತು. ಹೀಗಾಗಿ ಎಲ್ಲಾ ಐದು ಫ್ರಾಂಚೈಸಿಗಳು ಮಿನಿ ಹರಾಜಿಗೂ ಮುನ್ನ ತಂಡದಲ್ಲಿ ಉಳಿಸಿಕೊಂಡ ಹಾಗೂ ಬಿಡುಗಡೆ ಮಾಡಿದ ಆಟಗಾರ್ತಿಯರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಬೇಕಿತ್ತು. ಆ ಪ್ರಕಾರ, ಇಂದು ಅಂದರೆ ಸೆಪ್ಟೆಂಬರ್ 28 ರಂದು ಎಲ್ಲಾ ಐದು ಫ್ರಾಂಚೈಸಿಗಳು ತಮ್ಮ ತಂಡದಿಂದ ಬಿಡುಗಡೆ ಮಾಡಿದ ಹಾಗೂ ಉಳಿಸಿಕೊಂಡ ಆಟಗಾರ್ತಿಯರ ಪಟ್ಟಿಯನ್ನು ಪ್ರಕಟಿಸಿವೆ.
ಹಾಲಿ ಚಾಂಪಿಯನ್ ಆರ್ಸಿಬಿ ನಾಲ್ವರು ಆಟಗಾರ್ತಿಯರನ್ನು ತಂಡದಿಂದ ಬಿಡುಗಡೆ ಮಾಡಿದ್ದರೆ, ಹರ್ಮನ್ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ಆರು ಆಟಗಾರ್ತಿಯರನ್ನು ಕೈಬಿಟ್ಟಿದೆ. ಇನ್ನು ಆರ್ಸಿಬಿ ತಂಡದಿಂದ ಹೊರಬಿದ್ದ ಆಟಗಾರ್ತಿಯರು ಯಾರು ಎಂಬುದನ್ನು ನೋಡುವುದಾದರೆ.. ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಗ್ರೇಸ್ ಹ್ಯಾರಿಸ್, ಲಿನ್ಸೆ ಸ್ಮಿತ್, ಹೇಮಲತಾ ಮತ್ತು ಗೌತಮಿ ನಾಯಕ್ ಅವರನ್ನು ಬಿಡುಗಡೆ ಮಾಡಿದೆ. ಇದರ ಜೊತೆಗೆ ಸಮಾಧಾನಕರ ಸುದ್ದಿ ಎಂದರೆ ಕಳೆದ ಆವೃತ್ತಿಯಲ್ಲಿ ವೈಯಕ್ತಿಕ ಕಾರಣಗಳನ್ನು ನೀಡಿ ಡಬ್ಲ್ಯೂಪಿಎಲ್ನಿಂದ ಹಿಂದೆ ಸರಿದಿದ್ದ ಸ್ಟಾರ್ ಆಲ್ರೌಂಡರ್ ಎಲ್ಲಿಸ್ ಪೆರ್ರಿ ಈ ಆವೃತ್ತಿಯಲ್ಲಿ ಆಡುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಆರ್ಸಿಬಿ ಅವರನ್ನು ತಂಡದಲ್ಲೇ ಉಳಿಸಿಕೊಂಡಿದೆ.
ಗುಜರಾತ್ ಜೈಂಟ್ಸ್ ತಂಡದಿಂದ ಡ್ಯಾನಿ ವ್ಯಾಟ್-ಹಾಡ್ಜ್, ಆಯುಷಿ ಸೋನಿ, ಟೈಟಾಸ್ ಸಾಧು ಮತ್ತು ಶಿವಾನಿ ಸಿಂಗ್ ಹೊರಬಿದ್ದಿದ್ದಾರೆ. ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಲಾ ಆರು ಆಟಗಾರ್ತಿಯರನ್ನು ತಂಡದಿಂದ ಬಿಡುಗಡೆ ಮಾಡಿವೆ. ಯುಪಿ ವಾರಿಯರ್ಸ್ ತಂಡವು ಶ್ವೇತಾ ಸೆಹ್ರಾವತ್ ಸೇರಿದಂತೆ ಒಂಬತ್ತು ಆಟಗಾರ್ತಿಯರನ್ನು ಬಿಡುಗಡೆ ಮಾಡಿದೆ. ಜೆಮಿಮಾ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಲಾನಾ ಕಿಂಗ್, ಲಿಜೆಲ್ಲೆ ಲೀ, ಪ್ರಗತಿ ಸಿಂಗ್, ಸ್ನೇಹ್ ರಾಣಾ ಮತ್ತು ತಾನಿಯಾ ಭಾಟಿಯಾ ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.
ಮುಂದಿನ ವರ್ಷದ ಮಹಿಳಾ ಪ್ರೀಮಿಯರ್ ಲೀಗ್ ಜನವರಿ 14 ರಂದು ಆರಂಭವಾಗಲಿದ್ದು, ಫೆಬ್ರವರಿ 9 ರವರೆಗೆ ನಡೆಯಲಿದೆ. ಅದಕ್ಕೂ ಮುನ್ನ, ಅಕ್ಟೋಬರ್ 28 ರಂದು ಕೊಚ್ಚಿಯಲ್ಲಿ ಆಟಗಾರ್ತಿಯರ ಹರಾಜು ನಡೆಯಲಿದೆ. ಆ ಹರಾಜಿನಲ್ಲಿ ಇಂದು ಖಾಲಿಯಾಗಿರುವ ಸ್ಥಾನಗಳನ್ನು ತುಂಬುವ ಕೆಲಸವನ್ನು ಎಲ್ಲಾ ಫ್ರಾಂಚೈಸಿಗಳು ಮಾಡಲಿವೆ. ಇನ್ನು ಇಂದು ಬಿಡುಗಡೆಯಾದ ಆಟಗಾರ್ತಿಯರು ಕೂಡ ಹರಾಜಿನಲ್ಲಿ ಮತ್ತೆ ಭಾಗವಹಿಸಲಿದ್ದು, ಅವರು ಹೊಸ ತಂಡವನ್ನು ಸೇರುವ ಸಾಧ್ಯತೆಯಿದೆ.
Published On - 5:48 pm, Mon, 28 September 26