WTC ಫೈನಲ್​ಗೇರಲು ಪಾಕಿಸ್ತಾನ್ ತಂಡಕ್ಕೆ ಇದೆಯೇ ಅವಕಾಶ? ಇಲ್ಲಿದೆ ಲೆಕ್ಕಾಚಾರ!

ಕ್ರಿಕೆಟ್‌ನಲ್ಲಿ ಯಾವುದೂ ಅಸಾಧ್ಯವಲ್ಲ ಎಂಬ ಮಾತಿದೆ. ಆದರೆ, ಪ್ರಸ್ತುತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (WTC) ಅಂಕಪಟ್ಟಿಯನ್ನು ಗಮನಿಸಿದರೆ ಪಾಕಿಸ್ತಾನ್ ತಂಡದ ಹಣೆಬರಹ ಈಗಾಗಲೇ ನಿರ್ಧಾರವಾದಂತಿದೆ. ಸತತ ಸೋಲು ಹಾಗೂ ಸ್ಲೋ ಓವರ್ ರೇಟ್ ಪೆನಾಲ್ಟಿಗಳಿಂದ ಸಂಪೂರ್ಣ ತತ್ತರಿಸಿರುವ ಪಾಕ್ ಪಡೆ, ಮುಂಬರುವ ಫೈನಲ್ ಟಿಕೆಟ್ ಪಡೆಯಬೇಕಾದರೆ  ಪವಾಡವೇ ನಡೆಯಬೇಕು.

WTC ಫೈನಲ್​ಗೇರಲು ಪಾಕಿಸ್ತಾನ್ ತಂಡಕ್ಕೆ ಇದೆಯೇ ಅವಕಾಶ? ಇಲ್ಲಿದೆ ಲೆಕ್ಕಾಚಾರ!
Wtc - Pakistan
Image Credit source: GettyImages

Updated on: Aug 22, 2026 | 8:39 AM

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಸರಣಿಯಲ್ಲಿ ಪಾಕಿಸ್ತಾನ್ ತಂಡದ ಕಳಪೆ ಪ್ರದರ್ಶನ ಮುಂದುವರೆದಿದೆ. ಇತ್ತೀಚೆಗೆ ಹೆಡಿಂಗ್ಲೀಯಲ್ಲಿ ಇಂಗ್ಲೆಂಡ್ ವಿರುದ್ಧ ಎದುರಿಸಿದ ಇನ್ನಿಂಗ್ಸ್ ಮತ್ತು 103 ರನ್‌ಗಳ ಭೀಕರ ಸೋಲು ಪಾಕ್ ತಂಡವನ್ನು ಮತ್ತಷ್ಟು ಹೀನಾಯ ಸ್ಥಿತಿಗೆ ತಳ್ಳಿದೆ. ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಪಾಕಿಸ್ತಾನ್ ತಂಡಕ್ಕೆ ಫೈನಲ್​ಗೇರಲು ಅವಕಾಶ ಇದೆಯಾ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಈ ಕೆಳಗಿನಂತಿದೆ…

ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಪಾಕಿಸ್ತಾನ್ ತಂಡಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನ ಫೈನಲ್​ಗೇರಲು ಅವಕಾಶ ಇದೆಯಾ? ಈ ಪ್ರಶ್ನೆಗೆ ಫೈನಲ್​ ರೇಸ್​ನಲ್ಲಿ ಉಳಿಯಬಹುದು ಎಂಬ ಉತ್ತರ ಸಿಗುತ್ತಿದೆ. ಈ ಉತ್ತರ ಪಡೆಯಲು ಪಾಕ್ ಪಡೆ ಪವಾಡವನ್ನೇ ಸೃಷ್ಟಿಸಬೇಕು.

ಲೆಕ್ಕಾಚಾರದ ಪ್ರಕಾರ ಪಾಕಿಸ್ತಾನ್ ತಂಡ WTC ಫೈನಲ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿಲ್ಲ. ಆದರೆ, ಅವರ ಮುಂದಿರುವ ಹಾದಿ ಮಾತ್ರ ಅತ್ಯಂತ ಕಠಿಣವಾಗಿದೆ. ಸದ್ಯ ಪಾಕ್ ತಂಡದ ಪಾಯಿಂಟ್ಸ್ ಪರ್ಸೆಂಟೇಜ್ (PCT) ಶೇಕಡಾ 19.05 ರಿಂದ 22.22 ರಷ್ಟಕ್ಕೆ ಕುಸಿದಿದೆ. ಇದರ ಜೊತೆಗೆ ಸ್ಲೋ ಓವರ್ ರೇಟ್ ಕಾರಣದಿಂದಾಗಿ ಈಗಾಗಲೇ 8 ಪೆನಾಲ್ಟಿ ಪಾಯಿಂಟ್‌ಗಳನ್ನು ಕಳೆದುಕೊಂಡಿರುವುದು ತಂಡಕ್ಕೆ ದೊಡ್ಡ ಹೊಡೆತ ನೀಡಿದೆ.

ಇಲ್ಲಿ ಪಾಕಿಸ್ತಾನ್ ತಂಡ ಫೈನಲ್​ಗೆ ತಲುಪಬೇಕಿದ್ದರೆ ಮುಂದಿನ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕು. ಅಂದರೆ ಪಾಕ್ ಪಡೆಗೆ ಇನ್ನುಳಿದಿರುವುದು 7 ಮ್ಯಾಚ್​ಗಳು ಮಾತ್ರ. ಈ ಏಳು ಪಂದ್ಯಗಳಲ್ಲಿ ಗೆದ್ದರೆ ನೇರವಾಗಿ ಫೈನಲ್​ಗೇರುವುದಿಲ್ಲ. ಬದಲಾಗಿ ಫೈನಲ್​ ರೇಸ್​ನಲ್ಲಿ ಉಳಿಯಬಹುದು.

ಅಂದರೆ ಮುಂದಿನ 7 ಪಂದ್ಯಗಳಲ್ಲಿ ಜಯ ಸಾಧಿಸಿದರೂ ಇತರೆ ತಂಡಗಳ ಫಲಿತಾಂಶವನ್ನು ಅವಲಂಭಿಸಿ ಮಾತ್ರ ಫೈನಲ್​ಗೇರಲು ಸಾಧ್ಯ. ಆದರೆ ಅಂತಹದೊಂದು ಫಲಿತಾಂಶ ಕಷ್ಟಸಾಧ್ಯ. ಅಂದರೆ ಪಾಕಿಸ್ತಾನ್ ತಂಡಕ್ಕೆ ಫೈನಲ್​ಗೇರಲು ಸಾಧ್ಯವಿಲ್ಲ ಎಂದೇ ಹೇಳಬಹುದು. ಇದಕ್ಕೆ ಮುಖ್ಯವಾದ 5 ಕಾರಣಗಳು ಇಲ್ಲಿವೆ…

ಶೂನ್ಯ ತಪ್ಪುಗಳು: ಪಾಕಿಸ್ತಾನ್ ಮುಂದಿನ ಎಲ್ಲಾ 7 ಟೆಸ್ಟ್ ಪಂದ್ಯಗಳನ್ನು ಗೆಲ್ಲಲೇಬೇಕು. ಆಧುನಿಕ ಕ್ರಿಕೆಟ್‌ನಲ್ಲಿ, ಅದೂ ಕೂಡ ವಿದೇಶಿ ನೆಲದಲ್ಲಿ (ಇಂಗ್ಲೆಂಡ್ ವಿರುದ್ಧ) ಮತ್ತು ತಾಯ್ನಾಡಿನಲ್ಲಿ ಬಲಿಷ್ಠ ನ್ಯೂಝಿಲೆಂಡ್ ವಿರುದ್ಧ ಸತತವಾಗಿ ಎಲ್ಲಾ ಪಂದ್ಯಗಳನ್ನು ಗೆಲ್ಲುವುದು ಯಾವುದೇ ತಂಡಕ್ಕಾದರೂ ಅತ್ಯಂತ ಕಠಿಣ ಸವಾಲು. ಒಂದು ಪಂದ್ಯ ಸೋತರೂ ಅಥವಾ ಡ್ರಾ ಪಾಕ್ ಪಡೆಯ ಕಥೆ ಮುಗಿಯುತ್ತದೆ. ಅಂದರೆ ಮುಂದಿನ 7 ಪಂದ್ಯಗಳಲ್ಲೂ ಒಂದೇ ಒಂದು ತಪ್ಪು ಮಾಡದೇ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ ಪಾಕಿಸ್ತಾನ್ ತಂಡ.

ಪೆನಾಲ್ಟಿ ಪಾಯಿಂಟ್‌: ಪಾಕಿಸ್ತಾನ್ ಈಗಾಗಲೇ ಸ್ಲೋ ಓವರ್ ರೇಟ್ ಕಾರಣದಿಂದಾಗಿ 8 ಪೆನಾಲ್ಟಿ ಪಾಯಿಂಟ್‌ಗಳನ್ನು ಕಳೆದುಕೊಂಡಿದೆ. ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಪ್ರತಿ ಪಾಯಿಂಟ್ ಕೂಡ ಮುಖ್ಯ. ಈ ಭಾರಿ ದಂಡದ ಮೊತ್ತವು ಅವರ ಒಟ್ಟಾರೆ ಪಾಯಿಂಟ್ಸ್ ಪರ್ಸೆಂಟೇಜ್ (PCT) ಅನ್ನು ತೀರಾ ಕೆಳಕ್ಕೆ ಇಳಿಸಿದೆ. ಮುಂಬರುವ ಪಂದ್ಯಗಳಲ್ಲಿ ಮತ್ತೆ ಇಂತಹ ತಪ್ಪುಗಳಾದರೆ ಚೇತರಿಸಿಕೊಳ್ಳಲು ಸಾಧ್ಯವೇ ಇಲ್ಲ.

ಅತ್ಯಂತ ಕಳಪೆ ಪ್ರಸ್ತುತ ಫಾರ್ಮ್: ಇತ್ತೀಚೆಗೆ ಹೆಡಿಂಗ್ಲೀಯಲ್ಲಿ ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್ ಮತ್ತು 103 ರನ್‌ಗಳ ಹೀನಾಯ ಸೋಲು ಕಂಡಿರುವುದು ತಂಡದ ಆತ್ಮವಿಶ್ವಾಸವನ್ನು ಕುಗ್ಗಿಸಿದೆ. ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳು ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಇಂತಹ ಕಳಪೆ ಫಾರ್ಮ್‌ನಲ್ಲಿರುವ ತಂಡ ಸತತ ಗೆಲುವು ದಾಖಲಿಸುವುದು ಅತಿ ದೊಡ್ಡ ಮರೀಚಿಕೆ.

ಗರಿಷ್ಠ PCT ಮಿತಿ: ಪಾಕಿಸ್ತಾನ್ ತನ್ನ ಮುಂದಿನ ಎಲ್ಲಾ ಪಂದ್ಯಗಳನ್ನು ಗೆದ್ದರೂ ಸಹ, ಅವರ ಗರಿಷ್ಠ PCT ತಲುಪುವುದು ಕೇವಲ ಶೇ. 64.1 ಮಾತ್ರ. ಸಾಮಾನ್ಯವಾಗಿ WTC ಫೈನಲ್ ತಲುಪಲು ಕನಿಷ್ಠ ಶೇ. 65 ರಿಂದ 68 ರಷ್ಟು PCT ಬೇಕಾಗುತ್ತದೆ. ಹೀಗಾಗಿ ಎಲ್ಲ ಪಂದ್ಯ ಗೆದ್ದರೂ ಅವರಿಗೆ ಗ್ಯಾರಂಟಿ ಇರುವುದಿಲ್ಲ.

ಇತರೆ ತಂಡಗಳ ಮೇಲಿನ ಅವಲಂಬನೆ: ಪಾಕಿಸ್ತಾನ್ ಫೈನಲ್ ತಲುಪಬೇಕಾದರೆ ಸದ್ಯ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ (77.78%), ಸೌತ್ ಆಫ್ರಿಕಾ (75.00%) ಮತ್ತು ನ್ಯೂಝಿಲೆಂಡ್ (72.22%) ತಂಡಗಳು ತಮ್ಮ ಮುಂಬರುವ ಸರಣಿಗಳಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಬೇಕು. ಆದರೆ ಈ ತಂಡಗಳು ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದು, ಅವರು ಸರಣಿಗಳನ್ನು ಸತತವಾಗಿ ಸೋಲುವ ಸಾಧ್ಯತೆ ತೀರಾ ಕಡಿಮೆ ಇದೆ.

ಇದನ್ನೂ ಓದಿ: ಮಿಚೆಲ್ ಸ್ಟಾರ್ಕ್​ ಮಿಂಚಿನ ದಾಳಿಗೆ ವಿಶ್ವ ದಾಖಲೆಯೇ ಬೌಲ್ಡ್!

ಇದರರ್ಥ, ಪಾಕಿಸ್ತಾನ್ ತಂಡವು ತನ್ನ ಮುಂದಿನ 7 ಪಂದ್ಯಗಳಲ್ಲೂ ಪವಾಡ ಸದೃಶ ರೀತಿಯಲ್ಲಿ ಗೆದ್ದರೂ ಸಾಲದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್ ತಂಡಗಳು ಮುಂಬರುವ ಸರಣಿಗಳಲ್ಲಿ ಹೀನಾಯವಾಗಿ ಸೋಲಬೇಕಾಗುತ್ತದೆ. ಆದರೆ, ಪ್ರಸ್ತುತ ಭರ್ಜರಿ ಫಾರ್ಮ್‌ನಲ್ಲಿರುವ ಈ ಬಲಿಷ್ಠ ತಂಡಗಳು ಮುಂಬರುವ ಪಂದ್ಯಗಳಲ್ಲಿ ಸತತವಾಗಿ ಸೋಲುವ ಸಾಧ್ಯತೆ ತೀರಾ ವಿರಳ. ಹೀಗಾಗಿ, ಪಾಕಿಸ್ತಾನ್ ತಂಡದ 2027ರ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್ ಕನಸು ಬಹುತೇಕ ಕಮರಿದೆ ಎಂದೇ ಹೇಳಬಹುದು.

 

Loading...
Unable to load recommendations.
Follow Us