
ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಇನ್ನಿಂಗ್ಸ್ ಮತ್ತು 51 ರನ್‌ಗಳಿಂದ ಮಣಿಸಿದ ಆಸ್ಟ್ರೇಲಿಯಾ (Australia vs Bangladesh) ಸರಣಿ ಸೋಲಿನಿಂದ ಪಾರಾಗಿದೆ. ಪೂರ್ಣ ಎರಡು ದಿನವೂ ನಡೆಯದ ಈ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ, ಬಾಂಗ್ಲಾದೇಶ ತಂಡಕ್ಕೆ ಎರಡು ಇನ್ನಿಂಗ್ಸ್ಗಳಲ್ಲಿ 100 ರನ್‌ಗಳ ಗಡಿ ದಾಟಲು ಬಿಡಲಿಲ್ಲ. ಈ ಗೆಲುವಿನೊಂದಿಗೆ ಮೊದಲ ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಂಡ ಆಸ್ಟ್ರೇಲಿಯಾ ಡಬ್ಲ್ಯೂಟಿಸಿ ಫೈನಲ್ (WTC Final ) ರೇಸ್‌ನಲ್ಲಿ ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳುವುದರ ಜೊತೆಗೆ ಟೀಂ ಇಂಡಿಯಾಕ್ಕೂ ನೆರವಾಗಿದೆ.
ಎರಡನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಇನ್ನಿಂಗ್ಸ್ ಮತ್ತು 51 ರನ್‌ಗಳ ಗೆಲುವಿನಿಂದಾಗಿ ಡಬ್ಲ್ಯೂಟಿಸಿ ಪಾಯಿಂಟ್‌ಗಳ ಪಟ್ಟಿಯಲ್ಲಿ ಬಾಂಗ್ಲಾದೇಶದ ಪಿಸಿಟಿ (ಪಾಯಿಂಟ್ ಶೇಕಡಾವಾರು) ಕುಸಿತ ಕಂಡಿದ್ದು, ಇದು ಟೀಂ ಇಂಡಿಯಾಗೆ ಲಾಭವಾಗಿದೆ. ಡಬ್ಲ್ಯೂಟಿಸಿ ಪಾಯಿಂಟ್‌ಗಳ ಪಟ್ಟಿಯಲ್ಲಿ ಬಾಂಗ್ಲಾದೇಶವನ್ನು ಹಿಂದಿಕ್ಕುವುದು ಟೀಂ ಇಂಡಿಯಾಕ್ಕೆ ಈಗ ಸುಲಭದ ಕೆಲಸವಾಗಿದೆ.
ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ಡಬ್ಲ್ಯೂಟಿಸಿ ಪಾಯಿಂಟ್ ಪಟ್ಟಿಯಲ್ಲಿ ಕ್ರಮವಾಗಿ ಮೊದಲ ಮತ್ತು ನಾಲ್ಕನೇ ಸ್ಥಾನದಲ್ಲಿದ್ದವು. ಆಸ್ಟ್ರೇಲಿಯಾ 77.78% ಗೆಲುವಿನ ಶೇಕಡಾವಾರು ಹೊಂದಿದ್ದರೆ, ಬಾಂಗ್ಲಾದೇಶ 66.67% ಗೆಲುವಿನ ಶೇಕಡಾವಾರು ಹೊಂದಿತ್ತು. ದಕ್ಷಿಣ ಆಫ್ರಿಕಾ 75% ಗೆಲುವಿನ ಶೇಕಡಾವಾರುವಿನೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ 72.22% ಗೆಲುವಿನ ಶೇಕಡಾವಾರುವಿನೊಂದಿಗೆ ಮೂರನೇ ಸ್ಥಾನದಲ್ಲಿದೆ. ಏತನ್ಮಧ್ಯೆ, ಗಾಲೆ ಟೆಸ್ಟ್ ಗೆದ್ದ ನಂತರ, ಟೀಂ ಇಂಡಿಯಾ 53.33% ಗೆಲುವಿನ ಶೇಕಡಾವಾರು ಹೊಂದಿದ್ದು, ಐದನೇ ಸ್ಥಾನದಲ್ಲಿದೆ.
ಇದೀಗ ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ನಂತರ ಪಾಯಿಂಟ್ ಪಟ್ಟಿಯಲಾಗಿರುವ ಬದಲಾವಣೆಗಳೇನು ಎಂಬುದನ್ನು ನೋಡುವುದಾದರೆ… ನಂ. 1 ಸ್ಥಾನದಲ್ಲಿ ಉಳಿದಿರುವ ಆಸ್ಟ್ರೇಲಿಯಾ ತನ್ನ ಗೆಲುವಿನ ಶೇಕಡಾವಾರುವನ್ನು 77.78% ರಿಂದ 80% ಕ್ಕೆ ಏರಿಸಿಕೊಂಡಿದ್ದರೆ, ಇತ್ತ ಸೋಲಿನಿಂದಾಗಿ ಬಾಂಗ್ಲಾದೇಶದ ಗೆಲುವಿನ ಶೇಕಡಾವಾರು 66.67% ರಿಂದ 55.56% ಕ್ಕೆ ಕುಸಿದಿದೆ.
ಈಗ, ಟೀಂಇಂಡಿಯಾ ಕೊಲಂಬೊ ಟೆಸ್ಟ್ ಗೆದ್ದರೆ, ಅದರ ಗೆಲುವಿನ ಶೇಕಡಾವಾರು ಹೆಚ್ಚಾಗುವ ಎಲ್ಲಾ ಅವಕಾಶಗಳಿವೆ. ಅಲ್ಲದೆ ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಡಬ್ಲ್ಯೂಟಿಸಿ ಪಾಯಿಂಟ್‌ಗಳ ಪಟ್ಟಿಯಲ್ಲಿ ಬಾಂಗ್ಲಾದೇಶವನ್ನು ಹಿಂದಿಕ್ಕಿ ಐದನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಏರಲಿದೆ. ಅಲ್ಲದೆ ಟೀಂ ಇಂಡಿಯಾ ಕೊಲಂಬೊ ಟೆಸ್ಟ್ ಗೆದ್ದರೆ, ಅದರ ಗೆಲುವಿನ ಶೇಕಡಾವಾರು 57.57% ಕ್ಕೆ ಏರಿಕೆಯಾಗಲಿದೆ.
ಕೊಲಂಬೊ ಟೆಸ್ಟ್ ಸೇರಿದಂತೆ ಉಳಿದ ಎಲ್ಲಾ ಟೆಸ್ಟ್ ಪಂದ್ಯಗಳನ್ನು ಭಾರತ ಗೆದ್ದರೆ, ಅದು 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ನೇರವಾಗಿ ಅರ್ಹತೆ ಪಡೆಯಲಿದೆ. ಅಲ್ಲದೆ ಕೊಲಂಬೊ ಟೆಸ್ಟ್ ಸೇರಿದಂತೆ ಆರು ಪಂದ್ಯಗಳನ್ನು ಗೆದ್ದು, ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡರೂ ಮತ್ತು ಒಂದು ಪಂದ್ಯವನ್ನು ಸೋತರೂ, ಟೀಂ ಇಂಡಿಯಾ ಡಬ್ಲ್ಯೂಟಿಸಿ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ತಲುಪಬಹುದು. ಇದರರ್ಥ ಟೀಂ ಇಂಡಿಯಾ ಉಳಿದಿರುವ ಮೂರು ಟೆಸ್ಟ್ ಸರಣಿಯಲ್ಲಿ ಒಂದು ಪಂದ್ಯವನ್ನು ಸೋಲುವ ಅವಕಾಶ ಹೊಂದಿದೆ. ಒಂದು ವೇಳೆ ಎರಡು ಪಂದ್ಯಗಳಲ್ಲಿ ಸೋತರೆ, ಅದರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪುವ ಆಸೆ ಭಗ್ನವಾಗಲಿದೆ. ಇದಲ್ಲದೆ, ಓವರ್‌ಟೈಮ್ ಪೆನಾಲ್ಟಿಗಳನ್ನು ತಪ್ಪಿಸುವುದು ಸಹ ತಂಡಕ್ಕೆ ನಿರ್ಣಾಯಕವಾಗಿರುತ್ತದೆ.