‘ನಿಜವಾಗಿರಬಹುದು ಅಥವಾ ಇಲ್ಲದಿರಬಹುದು’; ವದಂತಿಯ ಬಗ್ಗೆ ಮೌನ ಮುರಿದ ಚಹಾಲ್

|

Updated on: Jan 10, 2025 | 3:58 PM

Yuzvendra Chahal & Dhanashree Verma's Relationship Rumors: ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ಅವರ ವಿಚ್ಛೇದನದ ವದಂತಿಗಳು ವ್ಯಾಪಕವಾಗಿ ಹರಡುತ್ತಿವೆ. ಹೀಗಾಗಿ ಚಹಾಲ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಊಹಾಪೋಹಗಳನ್ನು ಹರಡದಂತೆ ಮನವಿ ಮಾಡಿದ್ದಾರೆ. ಧನಶ್ರೀ ಕೂಡ ಆಧಾರರಹಿತ ಸುದ್ದಿಗಳಿಂದ ತಮ್ಮ ಗೌರವಕ್ಕೆ ಧಕ್ಕೆಯಾಗುತ್ತಿದೆ ಎಂದು ಹೇಳಿದ್ದಾರೆ.

‘ನಿಜವಾಗಿರಬಹುದು ಅಥವಾ ಇಲ್ಲದಿರಬಹುದು’; ವದಂತಿಯ ಬಗ್ಗೆ ಮೌನ ಮುರಿದ ಚಹಾಲ್
ಚಹಾಲ್- ಧನಶ್ರೀ
Follow us on

ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ನಡುವಿನ ಸಂಬಂಧದ ಬಗ್ಗೆ ಊಹಾಪೋಹಗಳು ಮತ್ತು ವದಂತಿಗಳು ವೇಗ ಪಡೆದುಕೊಳ್ಳುತ್ತಿವೆ. ಈ ಇಬ್ಬರ ವೈವಾಹಿಕ ಜೀವನ ಮುರಿದು ಬಿದ್ದಿದ್ದು, ಇಷ್ಟರಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲವರು ಚಹಾಲ್​ರನ್ನು ಟ್ರೋಲ್ ಮಾಡುತ್ತಿದ್ದರೆ, ಇನ್ನು ಕೆಲವರು ಧನಶ್ರೀ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಈ ವಿಷಯದ ಬಗ್ಗೆ ಇಬ್ಬರೂ ಇದುವರೆಗೆ ಏನನ್ನೂ ಹೇಳಿಲ್ಲ. ಆದರೆ ಈ ಇಬ್ಬರು ಟ್ರೋಲಿಂಗ್ ಬಗ್ಗೆ ಹೇಳಿಕೆಗಳನ್ನು ನೀಡಿದ್ದಾರೆ. ಈ ಮೊದಲು ಧನಶ್ರೀ ತನ್ನ ಗೌರವಕ್ಕೆ ದಕ್ಕೆಯನ್ನುಂಟು ಮಾಡಿದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರೆ, ಇದೀಗ ಚಹಾಲ್ ಕೂಡ ಹೇಳಿಕೆ ನೀಡಿದ್ದು, ತನಗೆ ಮತ್ತು ತನ್ನ ಕುಟುಂಬಕ್ಕೆ ತೊಂದರೆಯಾಗುವುದರಿಂದ ತನ್ನ ವೈಯಕ್ತಿಕ ಜೀವನದ ಬಗ್ಗೆ ಯಾವುದೇ ಊಹಾಪೋಹಗಳನ್ನು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ನಿಜವಿರಬಹುದು ಅಥವಾ ಇಲ್ಲದಿರಬಹುದು

ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಲೆಗ್ ಸ್ಪಿನ್ನರ್ ಚಹಾಲ್ ಅವರು ಜನವರಿ 9 ರ ಗುರುವಾರ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್​ವೊಂದನ್ನು ಮಾಡಿದ್ದಾರೆ. ಇದರಲ್ಲಿ ಅವರು, ‘ ತನಗೆ ಇಷ್ಟೊಂದು ಪ್ರೀತಿ ಮತ್ತು ಬೆಂಬಲ ನೀಡಿದ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಲ್ಲದೆ ಟೀಂ ಇಂಡಿಯಾದಲ್ಲಿ ತನ್ನ ಪ್ರಯಾಣ ಇನ್ನೂ ಮುಗಿದಿಲ್ಲ ಎಂದಿರುವ ಚಹಾಲ್, ನನ್ನ ದೇಶ, ನನ್ನ ತಂಡ ಮತ್ತು ನನ್ನ ಅಭಿಮಾನಿಗಳಿಗಾಗಿ ನಾನು ಇನ್ನೂ ಅನೇಕ ಉತ್ತಮ ಓವರ್‌ಗಳನ್ನು ಬೌಲ್ ಮಾಡಬೇಕಾಗಿದೆ ಎಂದಿದ್ದಾರೆ.

ಇದಾದ ನಂತರ, ಚಹಾಲ್ ತನ್ನ ವೈಯಕ್ತಿಕ ಜೀವನದ ಬಗ್ಗೆ ನಡೆಯುತ್ತಿರುವ ಸುದ್ದಿ ಮತ್ತು ವದಂತಿಗಳನ್ನು ಪ್ರಸ್ತಾಪಿಸಿದ್ದು, ‘ನಾನು ಆಟಗಾರನಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ಆದರೆ ನಾನೊಬ್ಬ ಮಗನಾಗಿ, ಸಹೋದರನಾಗಿ ಮತ್ತು ಸ್ನೇಹಿತನಾಗಿ ನಿಮ್ಮಲ್ಲಿ ಕೇಳಿಕೊಳ್ಳುವುದೆನೆಂದರೆ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ವಿಶೇಷವಾಗಿ ನನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಕೇಳಿಬರುತ್ತಿರುವ ವಿಚಾರಗಳ ಬಗ್ಗೆ ನಿಮಗೆಲ್ಲ ಕುತೂಹಲವಿದೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ನಾನು ಕೆಲವು ವಿಷಯಗಳ ಕುರಿತು ಹಲವು ಪೋಸ್ಟ್‌ಗಳನ್ನು ನೋಡಿದ್ದೇನೆ, ಅದರಲ್ಲಿ ಊಹಾಪೋಹಗಳನ್ನು ಮಾಡಲಾಗುತ್ತಿದೆ, ಅದು ನಿಜವಾಗಿರಬಹುದು ಅಥವಾ ಇಲ್ಲದಿರಬಹುದು. ಹೀಗಾಗಿ ನನಗೆ ಮತ್ತು ನನ್ನ ಕುಟುಂಬಕ್ಕೆ ಬಹಳಷ್ಟು ನೋವನ್ನು ಉಂಟುಮಾಡುವ ಇಂತಹ ಊಹಾಪೋಹಗಳನ್ನು ಹಬ್ಬಿಸದಂತೆ ನಾನು ಎಲ್ಲರಿಗೂ ವಿನಮ್ರವಾಗಿ ವಿನಂತಿಸುತ್ತೇನೆ ಎಂದಿದ್ದಾರೆ.

ಪ್ರೀತಿ ಬೇಕು, ಸಹಾನುಭೂತಿ ಅಲ್ಲ.

ಚಹಾಲ್ ವಿಚ್ಛೇದನವನ್ನು ದೃಢೀಕರಿಸದಿದ್ದರೂ, ಅವರ ಹೇಳಿಕೆಯು ಖಂಡಿತವಾಗಿಯೂ ಅದರ ಸತ್ಯವನ್ನು ಸೂಚಿಸುತ್ತದೆ. ಏಕೆಂದರೆ ಚಹಾಲ್ ತನ್ನ ಹೇಳಿಕೆಯಲ್ಲಿ ಎರಡು ಬಾರಿ ತನ್ನನ್ನು ಮಗ, ಸಹೋದರ ಮತ್ತು ಸ್ನೇಹಿತ ಎಂದು ಬಣ್ಣಿಸಿದ್ದಾರೆ. ಆದರೆ ಎಲ್ಲಿಯೂ ಅವರು ನಾನೊಬ್ಬರ ಪತಿ ಎಂದು ಉಲ್ಲೇಖಿಸಲಿಲ್ಲ. ಇದರಿಂದ ತಿಳಿಯುವುದೇನೆಂದರೆ ದಂಪತಿಗಳ ನಡುವೆ ಬಿರುಕು ಮೂಡಿರುವುದು ಸತ್ಯ ಎನ್ನಬಹುದು.

ಚಹಾಲ್ ಮುಂದುವರೆದು, ‘ನಾನು ಯಾವಾಗಲೂ ನನ್ನ ಕುಟುಂಬದಿಂದ ಕಲಿತ ಮೌಲ್ಯಗಳೆಂದರೆ ಎಲ್ಲರಿಗೂ ಒಳ್ಳೆಯದನ್ನು ಯೋಚಿಸುವುದು, ಸಂಪೂರ್ಣ ಬದ್ಧತೆ ಮತ್ತು ಕಠಿಣ ಪರಿಶ್ರಮದಿಂದ ಯಶಸ್ಸನ್ನು ಸಾಧಿಸುವಂತಹ ಮೌಲ್ಯಗಳಿಗೆ ನಾನು ಇನ್ನೂ ಬದ್ಧನಾಗಿದ್ದೇನೆ. ದೇವರ ಆಶೀರ್ವಾದದೊಂದಿಗೆ, ನಾನು ಯಾವಾಗಲೂ ನಿಮ್ಮ ಪ್ರೀತಿ ಮತ್ತು ಬೆಂಬಲವನ್ನು ಪಡೆಯಲು ಪ್ರಯತ್ನಿಸುತ್ತೇನೆ ಹೊರತು ಸಹಾನುಭೂತಿಯನ್ನಲ್ಲ ಎಂದಿದ್ದಾರೆ.

ಧನಶ್ರೀ ಹೇಳಿದ್ದೇನು?

ಚಹಾಲ್ ಹೇಳಿಕೆಗೂ ಮೊದಲು, ಧನಶ್ರೀ ಕೂಡ ವದಂತಿಗಳ ಬಗ್ಗೆ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ಕೂಡ ಚಹಾಲ್ ಜೊತೆಗಿನ ಸಂಬಂಧದ ಬಗ್ಗೆ ಎಲ್ಲಿಯೂ ಹೇಳಿಲ್ಲ. ಬದಲಿಗೆ ಅವರು, ಆಧಾರ ರಹಿತ ಸುದ್ದಿ ಮತ್ತು ದ್ವೇಷದ ಮೂಲಕ ತನ್ನ ಪ್ರತಿಷ್ಠೆಗೆ ಧಕ್ಕೆಯಾಗುತ್ತಿದೆ. ಯಾವಾಗಲೂ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದ ಆಧಾರದ ಮೇಲೆ ನಾನು ಈ ಸ್ಥಾನವನ್ನು ಸಾಧಿಸಿದ್ದೇನೆ. ನನ್ನ ಮೌನವನ್ನು ದೌರ್ಬಲ್ಯವೆಂದು ಪರಿಗಣಿಸಬೇಡಿ. ಸತ್ಯದೊಂದಿಗೆ ಮುನ್ನಡೆಯುವುದರ ಮೇಲೆ ಮಾತ್ರ ತನ್ನ ಗಮನವಿದೆ ಎಂದು ಬರೆದುಕೊಂಡಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:55 pm, Fri, 10 January 25