25 ವರ್ಷಗಳ ಬರಗಾಲ ಅಂತ್ಯ: ವಿದೇಶಿ ನೆಲದಲ್ಲಿ ಜಿಂಬಾಬ್ವೆ ಐತಿಹಾಸಿಕ ಗೆಲುವು

ಜಿಂಬಾಬ್ವೆ ಕ್ರಿಕೆಟ್ ತಂಡ 25 ವರ್ಷಗಳ ಸುದೀರ್ಘ ಕಾಯುವಿಕೆಯನ್ನು ಕೊನೆಗೊಳಿಸಿ, ಅಫ್ಘಾನಿಸ್ತಾನ ವಿರುದ್ಧ ವಿದೇಶಿ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದಿದೆ. ಶಾರ್ಜಾದಲ್ಲಿ ನಡೆದ ಎರಡನೇ ಪಂದ್ಯದಲ್ಲಿ 57 ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಜಿಂಬಾಬ್ವೆ ಇತಿಹಾಸ ನಿರ್ಮಿಸಿದೆ. ಬ್ರೆಂಡನ್ ಟೇಲರ್ ಶತಕ ಹಾಗೂ ಬೌಲರ್‌ಗಳ ಅದ್ಭುತ ಪ್ರದರ್ಶನದಿಂದ ಈ ಮಹತ್ವದ ಸಾಧನೆ ಸಾಧ್ಯವಾಯಿತು, ಇದು ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ.

25 ವರ್ಷಗಳ ಬರಗಾಲ ಅಂತ್ಯ: ವಿದೇಶಿ ನೆಲದಲ್ಲಿ ಜಿಂಬಾಬ್ವೆ ಐತಿಹಾಸಿಕ ಗೆಲುವು
ಜಿಂಬಾಬ್ವೆ ತಂಡ

Updated on: Nov 18, 2026 | 2:12 PM

ಜಿಂಬಾಬ್ವೆ ಕ್ರಿಕೆಟ್ ತಂಡದ ಬರೋಬ್ಬರಿ 25 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯಗೊಂಡಿದೆ. ವಿದೇಶಿ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಜಿಂಬಾಬ್ವೆ ತಂಡ ಇತಿಹಾಸ ನಿರ್ಮಿಸಿದೆ. ಶಾರ್ಜಾದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಜಿಂಬಾಬ್ವೆ 57 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಅಫ್ಘಾನಿಸ್ತಾನಕ್ಕೆ ಗೆಲ್ಲಲು ಜಿಂಬಾಬ್ವೆ 418 ರನ್‌ಗಳ ಕಠಿಣ ಗುರಿ ನೀಡಿತ್ತು. ಗುರಿ ಬೆನ್ನಟ್ಟಿದ ಅಫ್ಘಾನ್ ಪಡೆ 360 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಈ ಮೂಲಕ ಜಿಂಬಾಬ್ವೆ 25 ವರ್ಷಗಳ ಬಳಿಕ ವಿದೇಶಿ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಸಾಧನೆ ಮಾಡಿತು.

ಪಂದ್ಯದ ಕೊನೆಯ ಹಂತದವರೆಗೂ ಅಫ್ಘಾನಿಸ್ತಾನ ಡ್ರಾ ಮಾಡಿಕೊಳ್ಳುವ ಲಕ್ಷಣಗಳು ಕಂಡುಬಂದಿದ್ದವು. ಆದರೆ ಕೊನೆಯ ಕ್ಷಣದಲ್ಲಿ ಗ್ರೇಮ್ ಕ್ರೀಮರ್ ಎಸೆತದಲ್ಲಿ ಜಿಯಾವುರ್ ರೆಹಮಾನ್‌ ಔಟಾದರು. ಇದರೊಂದಿಗೆ ಜಿಂಬಾಬ್ವೆ ತಂಡಕ್ಕೆ ಐತಿಹಾಸಿಕ ಗೆಲುವು ಒಲಿಯಿತು.

Loading...

ಜಿಂಬಾಬ್ವೆ ಗೆಲುವಿನ ಹಾದಿ ಹೇಗಿತ್ತು?

ಶಾರ್ಜಾದಲ್ಲಿ ನಡೆದ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಜಿಂಬಾಬ್ವೆ 339 ರನ್ ಗಳಿಸಿತ್ತು. ತಂಡದ ಪರ ಇನ್ನೋಸೆಂಟ್ ಕೈಯಾ 96 ರನ್ ಗಳಿಸಿದರೆ, ಬ್ರೆಂಡನ್ ಟೇಲರ್ 119 ರನ್ ಸಿಡಿಸಿ ಶತಕದ ಸಂಭ್ರಮ ಆಚರಿಸಿದರು. ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಆಡಿದ ಅಫ್ಘಾನಿಸ್ತಾನ ಕೇವಲ 217 ರನ್‌ಗಳಿಗೆ ಆಲೌಟ್ ಆಯಿತು. ಜಿಂಬಾಬ್ವೆ ಪರ ಬ್ಲೆಸಿಂಗ್ ಮುಜರಬಾನಿ 3 ವಿಕೆಟ್ ಪಡೆದರೆ, ವಿನ್ಸೆಂಟ್ ಮಸೆಕೆಸಾ 4 ವಿಕೆಟ್ ಕಬಳಿಸಿ ಮಿಂಚಿದರು.

ಎರಡನೇ ಇನ್ನಿಂಗ್ಸ್‌ನಲ್ಲಿ ಜಿಂಬಾಬ್ವೆ 295 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಬ್ರೆಂಡನ್ ಟೇಲರ್ ಮತ್ತು ಗ್ರೇಮ್ ಕ್ರೀಮರ್ ತಲಾ 50 ರನ್ ಗಳಿಸಿದರು. ಬ್ಲೆಸಿಂಗ್ ಮುಜರಬಾನಿ ಕೂಡ 59 ರನ್‌ಗಳ ಕೊಡುಗೆ ನೀಡಿದರು. ಇದರಿಂದ ಅಫ್ಘಾನಿಸ್ತಾನಕ್ಕೆ 418 ರನ್‌ಗಳ ಬೃಹತ್ ಗುರಿ ಎದುರಾಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಅಫ್ಘಾನಿಸ್ತಾನ 360 ರನ್ ಗಳಿಸಿದರೂ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ನಸೀರ್ ಖಾನ್ ಮರೂಫಖಿಲ್ ಅಜೇಯ 101 ರನ್ ಗಳಿಸಿ ಹೋರಾಡಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

25 ವರ್ಷಗಳ ಬಳಿಕ ಸಿಕ್ಕ ಐತಿಹಾಸಿಕ ಗೆಲುವು

ಜಿಂಬಾಬ್ವೆ ತಂಡ ವಿದೇಶಿ ನೆಲದಲ್ಲಿ ಕೊನೆಯ ಬಾರಿಗೆ ಟೆಸ್ಟ್ ಸರಣಿ ಗೆದ್ದಿದ್ದು 2001ರಲ್ಲಿ. ಅಂದು ಬಾಂಗ್ಲಾದೇಶ ವಿರುದ್ಧ ಜಿಂಬಾಬ್ವೆ ಈ ಸಾಧನೆ ಮಾಡಿತ್ತು. ಇದೀಗ ಬರೋಬ್ಬರಿ 25 ವರ್ಷಗಳ ಬಳಿಕ ಮತ್ತೊಮ್ಮೆ ವಿದೇಶಿ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದು ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ. ವಿಶೇಷವೆಂದರೆ, 2001ರಲ್ಲಿ ಜಿಂಬಾಬ್ವೆ ವಿದೇಶಿ ನೆಲದಲ್ಲಿ ಕೊನೆಯ ಬಾರಿ ಟೆಸ್ಟ್ ಸರಣಿ ಗೆದ್ದಾಗಿನ ಮೂರು ವರ್ಷಗಳ ನಂತರ ತಂಡದ ನಾಯಕ ಬ್ರಿಯಾನ್ ಬೆನೆಟ್ ಜನಿಸಿದ್ದರು. ಇಂತಹ ಅಪರೂಪದ ಸಾಧನೆಯ ಮೂಲಕ ಜಿಂಬಾಬ್ವೆ ಕ್ರಿಕೆಟ್ ತಂಡ ಹೊಸ ಇತಿಹಾಸ ಬರೆದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:04 pm, Wed, 18 November 26

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us