149 ವರ್ಷಗಳ ಟೆಸ್ಟ್​ ಇತಿಹಾಸದಲ್ಲೇ ಹಿಂದೆಂದೂ ಕಾಣದ ವಿಶ್ವ ದಾಖಲೆ ಬರೆದ ಝಿಂಬಾಬ್ವೆ

ಟೆಸ್ಟ್ ಕ್ರಿಕೆಟ್ ಇತಿಹಾಸದ 149 ವರ್ಷಗಳ ಹಳೇ ಸಾಮ್ರಾಜ್ಯ ಅಲ್ಲೋಲ ಕಲ್ಲೋಲವಾಗಿದೆ! ಕ್ರಿಕೆಟ್ ಜಗತ್ತಿನ ದಿಗ್ಗಜ ತಂಡಗಳಾದ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ಪಡೆಗಳಿಗೂ ಅಸಾಧ್ಯವಾಗಿದ್ದ ಇತಿಹಾಸದ ಬ್ರಹ್ಮಾಂಡ ದಾಖಲೆಯೊಂದನ್ನು ಝಿಂಬಾಬ್ವೆ ಬ್ಯಾಟರ್‌ಗಳು ಬರೆದಿದ್ದಾರೆ. ಶಾರ್ಜಾದ ಮರಳುಗಾಡಿನಲ್ಲಿ ಅಫ್ಘಾನಿಸ್ತಾನ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಝಿಂಬಾಬ್ವೆ, ಟೆಸ್ಟ್ ಪಂದ್ಯವೊಂದರ ಎರಡೂ ಇನಿಂಗ್ಸ್‌ಗಳಲ್ಲಿ 500ಕ್ಕೂ ಹೆಚ್ಚು ರನ್ ಚಚ್ಚಿ ವಿಶ್ವದ ಮೊದಲ ತಂಡವಾಗಿ ಇತಿಹಾಸ ನಿರ್ಮಿಸಿದೆ.

149 ವರ್ಷಗಳ ಟೆಸ್ಟ್​ ಇತಿಹಾಸದಲ್ಲೇ ಹಿಂದೆಂದೂ ಕಾಣದ ವಿಶ್ವ ದಾಖಲೆ ಬರೆದ ಝಿಂಬಾಬ್ವೆ
Zimbabwe
Image Credit source: GettyImages

Updated on: Nov 10, 2026 | 7:37 AM

149 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅಪರೂಪದ ದಾಖಲೆಯೊಂದನ್ನು ಝಿಂಬಾಬ್ವೆ ಬ್ಯಾಟರ್‌ಗಳು ಬರೆದಿದ್ದಾರೆ. ಅದೂ ಸಹ ಭರ್ಜರಿ ಬ್ಯಾಟಿಂಗ್‌ ಮೂಲಕ! ಈ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ 500ಕ್ಕೂ ಹೆಚ್ಚು ರನ್ ಕಲೆಹಾಕಿದ ವಿಶ್ವದ ಮೊದಲ ತಂಡ ಎಂಬ ಹೆಗ್ಗಳಿಕೆಯನ್ನು ಝಿಂಬಾಬ್ವೆ ತನ್ನದಾಗಿಸಿಕೊಂಡಿದೆ.

ಹೊಸ ವಿಶ್ವ ದಾಖಲೆ:

ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಝಿಂಬಾಬ್ವೆ, ತನ್ನ ಮೊದಲ ಇನಿಂಗ್ಸ್‌ನಲ್ಲಿ ಭರ್ಜರಿ 504 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಇದಕ್ಕೆ ಉತ್ತರವಾಗಿ ಅಫ್ಘಾನಿಸ್ತಾನ್ ತಂಡ ಕೂಡ ಅದ್ಭುತ ಬ್ಯಾಟಿಂಗ್ ನಡೆಸಿ ತನ್ನ ಮೊದಲ ಇನಿಂಗ್ಸ್‌ನಲ್ಲಿ 514 ರನ್ ಕಲೆಹಾಕಿತು.

Loading...

ಇದರ ಬೆನ್ನಲ್ಲೇ ಪಂದ್ಯದ ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಝಿಂಬಾಬ್ವೆ ಮತ್ತೊಮ್ಮೆ ಬ್ಯಾಟಿಂಗ್ ದರ್ಬಾರ್ ನಡೆಸಿದ, 523/5 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಟೆಸ್ಟ್ ಇತಿಹಾಸದಲ್ಲಿ ಪಂದ್ಯವೊಂದರ ಎರಡೂ ಇನಿಂಗ್ಸ್‌ಗಳಲ್ಲಿ 500+ ರನ್ ಬಾರಿಸಿದ ಮೊದಲ ತಂಡವಾಗಿ ಝಿಂಬಾಬ್ವೆ ವಿಶ್ವದಾಖಲೆ ಬರೆಯಿತು. ಅಲ್ಲದೆ, ಟೆಸ್ಟ್ ಇತಿಹಾಸದಲ್ಲೇ ಪಂದ್ಯವೊಂದರ ಸತತ ಮೂರು ಇನಿಂಗ್ಸ್‌ಗಳಲ್ಲಿ 500+ ರನ್ ದಾಖಲಾದ ಅಪರೂಪದ ಕ್ಷಣಕ್ಕೂ ಶಾರ್ಜಾ ಕ್ರೀಡಾಂಗಣ ಸಾಕ್ಷಿಯಾಯಿತು.

  • ಝಿಂಬಾಬ್ವೆ ಮೊದಲ ಇನಿಂಗ್ಸ್​: 504/10
  • ಅಫ್ಘಾನಿಸ್ತಾನ್ ಮೊದಲ ಇನಿಂಗ್ಸ್​: 514/10
  • ಝಿಂಬಾಬ್ವೆ ದ್ವಿತೀಯ ಇನಿಂಗ್ಸ್​: 523/5

ದ್ವಿಶತಕ ವೈಭವ:

ಝಿಂಬಾಬ್ವೆ ತಂಡದ ಈ ಐತಿಹಾಸಿಕ ಸಾಧನೆಯ ರೂವಾರಿ 41 ವರ್ಷದ ಹಿರಿಯ ಆಟಗಾರ ಕ್ರೇಗ್ ಇರ್ವಿನ್. ದ್ವಿತೀಯ ಇನಿಂಗ್ಸ್‌ನಲ್ಲಿ ಅಫ್ಘಾನ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಇರ್ವಿನ್, ಅಜೇಯ 206 ರನ್ ಚಚ್ಚಿದರು. ಈ ದ್ವಿಶತಕದೊಂದಿಗೆ ಅವರು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ದ್ವಿಶತಕ ಸಿಡಿಸಿದ ವಿಶ್ವದ 3ನೇ ಅತ್ಯಂತ ಹಿರಿಯ ಆಟಗಾರ (41 ವರ್ಷ, 82 ದಿನ) ಎಂಬ ಅಪರೂಪದ ಗೌರವಕ್ಕೆ ಪಾತ್ರರಾದರು.

ಮಾಧೆವೆರೆ ಚೊಚ್ಚಲ ಶತಕ:

ಇರ್ವಿನ್ ಅವರಿಗೆ ಸಾಥ್ ನೀಡಿದ ಯುವ ಬ್ಯಾಟರ್ ವೆಸ್ಲಿ ಮಾಧೆವೆರೆ, ಆಕರ್ಷಕ ಬ್ಯಾಟಿಂಗ್ ಮೂಲಕ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು (ಅಜೇಯ 100) ಪೂರೈಸಿದರು. ಇವರಿಬ್ಬರು 6ನೇ ವಿಕೆಟ್‌ಗೆ ಮುರಿಯದ 208 ರನ್‌ಗಳ ದಾಖಲೆಯ ಜೊತೆಯಾಟವಾಡುವ ಮೂಲಕ ತಂಡದ ಮೊತ್ತ 500ರ ಗಡಿ ದಾಟಲು ಪ್ರಮುಖ ಕಾರಣರಾದರು.

ವಿಶ್ವ ದಾಖಲೆಯೊಂದಿಗೆ ಅಂತ್ಯ:

ಮೂರು ಇನಿಂಗ್ಸ್​ಗಳಿಂದ ಬರೋಬ್ಬರಿ 1,541 ರನ್‌ಗಳಿಗೆ ಸಾಕ್ಷಿಯಾಗಿದ್ದ ಈ ಪಂದ್ಯವು ಅಂತಿಮವಾಗಿ ಡ್ರಾನಲ್ಲಿ ಅಂತ್ಯಗೊಂಡಿತು. ಬೌಲರ್‌ಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ಶಾರ್ಜಾದ ಈ ಪಿಚ್‌ನಲ್ಲಿ ಬ್ಯಾಟರ್‌ಗಳು ತಮಗೆ ಸಿಕ್ಕ ರನ್‌ಗಳ ಹಬ್ಬವನ್ನು ಸಂಪೂರ್ಣವಾಗಿ ಆಸ್ವಾದಿಸಿದರು. ಟೆಸ್ಟ್ ಕ್ರಿಕೆಟ್‌ನ ಸೌಂದರ್ಯ ಮತ್ತು ತಾಳ್ಮೆಗೆ ಕನ್ನಡಿ ಹಿಡಿದ ಈ ಪಂದ್ಯ, ಫಲಿತಾಂಶ ಕಾಣದಿದ್ದರೂ ಜಾಗತಿಕ ಕ್ರಿಕೆಟ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.

ಇದನ್ನೂ ಓದಿ: ಅಭಿಷೇಕ್ ದಾಖಲೆ ಧೂಳೀಪಟ… ಮಿಚೆಲ್ ಓವನ್ ಹೊಸ ವಿಶ್ವ ದಾಖಲೆ

ಒಟ್ಟಾರೆಯಾಗಿ ಹೇಳುವುದಾದರೆ, ಈ ಪಂದ್ಯವು ಕೇವಲ ಒಂದು ಸಾಧಾರಣ ಡ್ರಾ ಪಂದ್ಯವಾಗಿ ಉಳಿಯದೆ, ಝಿಂಬಾಬ್ವೆ ಕ್ರಿಕೆಟ್‌ನ ಚಾರಿತ್ರಿಕ ಪುನರುತ್ಥಾನಕ್ಕೆ ಸಾಕ್ಷಿಯಾಯಿತು. 149 ವರ್ಷಗಳ ಸುದೀರ್ಘ ಟೆಸ್ಟ್ ಇತಿಹಾಸದಲ್ಲೇ ಯಾರೂ ಮಾಡದ ಅಸಾಧ್ಯ ದಾಖಲೆಯನ್ನು ಬರೆಯುವ ಮೂಲಕ ಝಿಬಾಬ್ವೆ ಬ್ಯಾಟರ್‌ಗಳು ವಿಶ್ವ ಕ್ರಿಕೆಟ್‌ಗೆ ತಮ್ಮ ಸಾಮರ್ಥ್ಯ ಏನೆಂಬುದನ್ನು ಮತ್ತೊಮ್ಮೆ ಸಾರಿದ್ದಾರೆ. ರನ್ ಹೊಳೆ ಹರಿದ ಈ ಮಹಾ ಸಂಗ್ರಾಮವು ಟೆಸ್ಟ್ ಕ್ರಿಕೆಟ್‌ನ ಇತಿಹಾಸದ ಪುಟಗಳಲ್ಲಿ ಎಂದೆಂದಿಗೂ ಸುವರ್ಣಾಕ್ಷರಗಳಲ್ಲಿ ಉಳಿಯುವುದಂತೂ ಖಚಿತ!

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us