Euro 2024: ಪೋರ್ಚುಗಲ್​ಗೆ ಸೋಲು: ಕ್ರಿಸ್ಟಿಯಾನೊ ರೊನಾಲ್ಡೊ ಯುರೋ ಕಪ್ ಕನಸು ಭಗ್ನ

|

Updated on: Jul 06, 2024 | 8:03 AM

Euro 2024: 2016 ರಲ್ಲಿ ನಡೆದ ಯುರೋ ಕಪ್​ನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ನಾಯಕತ್ವದ ಪೋರ್ಚುಗಲ್ ತಂಡ ಚಾಂಪಿಯನ್ ಪಟ್ಟಕ್ಕೇರಿತ್ತು. ಇದಾದ ಬಳಿಕ ವಿಶ್ವಕಪ್ ಹಾಗೂ ಯುರೋ ಕಪ್​ನಲ್ಲಿ ಪೋರ್ಚುಗಲ್ ತಂಡದಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಈ ಬಾರಿ ಕ್ವಾರ್ಟರ್​ ಫೈನಲ್ ಪ್ರವೇಶಿಸಿದರೂ, ನಾಕೌಟ್ ಹಂತದಲ್ಲಿ ಮುಗ್ಗರಿಸುವ ಮೂಲಕ ಪೋರ್ಚುಗಲ್ ಮತ್ತೊಮ್ಮೆ ನಿರಾಸೆ ಮೂಡಿಸಿದೆ.

Euro 2024: ಪೋರ್ಚುಗಲ್​ಗೆ ಸೋಲು: ಕ್ರಿಸ್ಟಿಯಾನೊ ರೊನಾಲ್ಡೊ ಯುರೋ ಕಪ್ ಕನಸು ಭಗ್ನ
Cristiano Ronaldo
Follow us on

ಜರ್ಮನಿಯಲ್ಲಿ ನಡೆಯುತ್ತಿರುವ ಯುರೋ ಕಪ್ (Euro Cup 2024) ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೋರ್ಚುಗಲ್ ವಿರುದ್ಧ ಫ್ರಾನ್ಸ್ ತಂಡ ಜಯಭೇರಿ ಬಾರಿಸಿದೆ. ಈ ಗೆಲುವಿನೊಂದಿಗೆ ಫ್ರಾನ್ಸ್ ಸೆಮಿಫೈನಲ್​ಗೇರಿದರೆ, ಇತ್ತ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಮುಂದಾಳತ್ವದ ಪೋರ್ಚುಗಲ್ ತಂಡ ಟೂರ್ನಿಯಿಂದ ಹೊರಬಿದ್ದಿದೆ.

ಹ್ಯಾಂಬರ್ಗ್​ನ ವೋಕ್ಸ್ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಕಿಲಿಯನ್ ಎಂಬಾಪ್ಪೆ (ಫ್ರಾನ್ಸ್) ಹಾಗೂ ಕ್ರಿಸ್ಟಿಯಾನೊ ರೊನಾಲ್ಡೊ (ಪೋರ್ಚುಗಲ್) ನಡುವಣ ಮುಖಾಮುಖಿ ಎಂದೇ ಬಿಂಬಿತವಾಗಿದ್ದ ಈ ಪಂದ್ಯದ ಆರಂಭದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡು ಬಂತು.

ಇದರ ನಡುವೆ ಗಾಯಗೊಂಡ ಎಂಬಾಪ್ಪೆ ಮೈದಾನ ತೊರೆದರು. ಈ ಅವಕಾಶವನ್ನು ಬಳಸಿಕೊಳ್ಳಲು ಯತ್ನಿಸಿದ ಪೋರ್ಚುಗಲ್​ ತಂಡಕ್ಕೆ ಹಲವು ಬಾರಿ ಗೋಲುಗಳಿಸುವ ಅವಕಾಶ ಸಿಕ್ಕರೂ, ಚೆಂಡನ್ನು ಗುರಿ ಮುಟ್ಟಿಸಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಮೊದಲಾರ್ಧವು ಯಾವುದೇ ಗೋಲುಗಳಿಲ್ಲದೆ ಅಂತ್ಯವಾಯಿತು.

ಇನ್ನು ದ್ವಿತೀಯಾರ್ಧದಲ್ಲಿ ಉತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸಿರೂ ಫ್ರಾನ್ಸ್ ಆಟಗಾರರಿಗೆ ಗೋಲುಗಳಿಸಲು ಮಾತ್ರ ವಿಫಲರಾದರು. ಪರಿಣಾಮ ಪಂದ್ಯವು ಪೆನಾಲ್ಟಿ ಶೂಟೌಟ್​ನತ್ತ ಸಾಗಿತು.

ಪೆನಾಲ್ಟಿ ಶೂಟೌಟ್​:

  • ಮೊದಲ ಅವಕಾಶದಲ್ಲಿ ಫ್ರಾನ್ಸ್ ಪರ ಡೆಂಬೆಲೆ ಗೋಲುಗಳಿಸಿದರೆ, ಪೋರ್ಚುಗಲ್ ಪರ ರೊನಾಲ್ಡೊ ಗೋಲು ಬಾರಿಸಿದರು.
  • ಎರಡನೇ ಅವಕಾಶದಲ್ಲಿ ಫ್ರಾನ್ಸ್ ಪರ ಫೋಫಾನಾ ಗೋಲು ಬಾರಿಸಿದರೆ, ಪೋರ್ಚುಗಲ್ ಪರ ಬರ್ನಾರ್ಡೊ ಗೋಲು ದಾಖಲಿಸಿದರು.
  • ಮೂರನೇ ಅವಕಾಶದಲ್ಲಿ ಕೌಂಡೆ ಫ್ರಾನ್ಸ್ ಪರ ಗೋಲುಗಳಿಸಿದರು. ಆದರೆ ಪೋರ್ಚುಗಲ್ ಪರ ಚೆಂಡನ್ನು ಗುರಿ ಮುಟ್ಟಿಸುವಲ್ಲಿ ಜೋ ಫೆಲಿಕ್ಸ್ ವಿಫಲರಾದರು.
  • ನಾಲ್ಕನೇ ಅವಕಾಶದಲ್ಲಿ ಫ್ರಾನ್ಸ್ ಪರ ಬಾರ್ಕೋಲಾ ಗೋಲು ದಾಖಲಿಸಿದರೆ, ಪೋರ್ಚುಗಲ್ ಪರ ನುನೊ ಮೆಂಡೆಸ್ ಗೋಲು ದಾಖಲಿಸಿದರು.
  • ಇನ್ನು ಐದನೇ ಅವಕಾಶದಲ್ಲಿ ಥಿಯೋ ಹೆರ್ನಾಂಡೆಜ್ ಗೋಲು ದಾಖಲಿಸುವುದರೊಂದಿಗೆ ಫ್ರಾನ್ಸ್ ತಂಡವು ಪೆನಾಲ್ಟಿ ಶೂಟೌಟ್​ ಅನ್ನು 5-3 ಅಂತರದಿಂದ ಗೆದ್ದುಕೊಂಡಿತು.

ಈ ಗೆಲುವಿನೊಂದಿಗೆ ಫ್ರಾನ್ಸ್ ತಂಡವು ಯುರೋ ಕಪ್​ 2024ರ ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಮತ್ತೊಂದೆಡೆ ಯುರೋ ಕಪ್​ನೊಂದಿಗೆ ವಿದಾಯ ಹೇಳುವ ನಿರೀಕ್ಷೆಯಲ್ಲಿದ್ದ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕನಸು ಭಗ್ನಗೊಂಡಿದೆ.

ಇದನ್ನೂ ಓದಿ: Cristiano Ronaldo: ದಿನಕ್ಕೆ 4.8 ಕೋಟಿ ರೂ: 5ನೇ ಕ್ಲಬ್ ಪರ ಕಣಕ್ಕಿಳಿಯಲಿರುವ ಕ್ರಿಸ್ಟಿಯಾನೊ ರೊನಾಲ್ಡೊ

ಗೆದ್ದು ಬೀಗಿದ ಸ್ಪೇನ್:

ಮೊದಲ ಕ್ವಾರ್ಟರ್ ಫೈನಲ್​ನಲ್ಲಿ ಆತಿಥೇಯ ಜರ್ಮನಿ ವಿರುದ್ಧ ಸ್ಪೇನ್ ತಂಡ ಭರ್ಜರಿ ಜಯ ಸಾಧಿಸಿದೆ. ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಪಂದ್ಯದ ದ್ವಿತೀಯಾರ್ದದ 51ನೇ ನಿಮಿಷದಲ್ಲಿ ಸ್ಪೇನ್​ನ ಡ್ಯಾನಿ ಓಲ್ಮೊ ಮೊದಲ ಗೋಲು ದಾಖಲಿಸಿದರು. ಆದರೆ 89ನೇ ನಿಮಿಷದಲ್ಲಿ ಜರ್ಮನಿಯ ಪ್ಲೋರಿಯನ್ ಆಕರ್ಷಕ ಗೋಲು ಬಾರಿಸಿ ಪಂದ್ಯವನ್ನು 1-1 ಅಂತರದಿಂದ ಸಮಗೊಳಿಸಿದರು.

ಪರಿಣಾಮ ಪಂದ್ಯದ ಫಲಿತಾಂಶಕ್ಕಾಗಿ ಹೆಚ್ಚುವರಿ ಸಮಯವನ್ನು ಬಳಸಿಕೊಳ್ಳಲಾಯಿತು. ಹೆಚ್ಚುವರಿ ಸಮಯ ಮೊದಲ 15 ನಿಮಿಷಗಳಲ್ಲಿ ಯಾವುದೇ ಗೋಲು ದಾಖಲಾಗಿರಲಿಲ್ಲ. ಆದರೆ ಪಂದ್ಯ ಅಂತಿಮ ನಿಮಿಷಗಳ ವೇಳೆ ದಾನಿ ಕವಾರ್ಜಲ್ ಆಕರ್ಷಕ ಹೆಡ್​ನೊಂದಿಗೆ ಸ್ಪೇನ್​ ಪರ ಅಮೂಲ್ಯ ಗೋಲು ದಾಖಲಿಸಿದರು. ಈ ಗೋಲಿನೊಂದಿಗೆ ಸ್ಪೇನ್ ತಂಡವು ಜರ್ಮನಿ ವಿರುದ್ಧ 2-1 ಅಂತರದಿಂದ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಸ್ಪೇನ್ ತಂಡ ಸೆಮಿಫೈನಲ್​ಗೆ ಎಂಟ್ರಿ ಕೊಟ್ಟಿದೆ.

Published On - 8:02 am, Sat, 6 July 24