Euro Cup 2024 Final: ಸ್ಪೇನ್ vs ಇಂಗ್ಲೆಂಡ್: ಫಿನಾಲೆಯಲ್ಲಿ ಮದಗಜಗಳ ಕಾದಾಟ
Euro Cup 2024 final: ಯುರೋ ಕಪ್ ಇತಿಹಾಸದಲ್ಲಿ ಸ್ಪೇನ್ ತಂಡವು ಕೇವಲ 3 ಬಾರಿ ಮಾತ್ರ ಚಾಂಪಿಯನ್ ಪಟ್ಟ ಅಲಂಕರಿಸಿದೆ. 1964 ರಲ್ಲಿ ಚೊಚ್ಚಲ ಬಾರಿ ಟ್ರೋಫಿ ಗೆದ್ದಿದ್ದ ಸ್ಪೇನ್ ಆ ಬಳಿಕ 2008 ಮತ್ತು 2012 ರಲ್ಲಿ ಯುರೋ ಕಪ್ ಗೆದ್ದುಕೊಂಡಿದ್ದರು. ಇನ್ನು ಇಂಗ್ಲೆಂಡ್ ತಂಡವು ಇದುವರೆಗೆ ಯುರೋ ಕಪ್ ಗೆದ್ದಿಲ್ಲ. ಹೀಗಾಗಿ ಚೊಚ್ಚಲ ಪ್ರಶಸ್ತಿ ಗೆಲ್ಲಲು ಇಂಗ್ಲೆಂಡ್ಗೆ ಸುವರ್ಣಾವಕಾಶವಿದೆ.
ಫುಟ್ಬಾಲ್ ಅಂಗಳದ ಪ್ರತಿಷ್ಠಿತ ಕದನ ಯುರೋ ಕಪ್ (Euro Cup 2024) ಅಂತಿಮ ಹಂತಕ್ಕೆ ಬಂದು ನಿಂತಿದೆ. ಜರ್ಮನಿಯಲ್ಲಿ ಇಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಸ್ಪೇನ್ ತಂಡಗಳು ಮುಖಾಮುಖಿಯಾಗಲಿದೆ. ಈ ಫಿನಾಲೆ ಫೈಟ್ ಅನ್ನು ಇದೀಗ ಮದಗಜಗಳ ಕಾಳಗವೆಂದೇ ಬಿಂಬಿಸಲಾಗುತ್ತಿದೆ. ಏಕೆಂದರೆ ಈ ಬಾರಿಯ ಯುರೋ ಕಪ್ನಲ್ಲಿ ಮುಖಾಮುಖಿಯಾಗುತ್ತಿರುವುದು ಇಂಗ್ಲಿಷ್ ಪ್ರೀಮಿಯರ್ ಫುಟ್ಬಾಲ್ ಲೀಗ್ ಅನ್ನು ಪ್ರತಿನಿಧಿಸುವ ಇಂಗ್ಲೆಂಡ್ ಹಾಗೂ ಲಾ ಲೀಗಾ ಫುಟ್ಬಾಲ್ ಲೀಗ್ನ್ನು ಪ್ರತಿನಿಧಿಸುವ ಸ್ಪೇನ್ ತಂಡಗಳು. ಹೀಗಾಗಿ ಈ ಎರಡು ಲೀಗ್ಗಳ ಅಭಿಮಾನಿಗಳು ಕೂಡ ಈ ಪಂದ್ಯವನ್ನು ಕಾತುರದಿಂದ ಎದುರು ನೋಡುತ್ತಿದ್ದಾರೆ.
ಇಂಗ್ಲೆಂಡ್ ಮತ್ತು ಸ್ಪೇನ್ ತಂಡಗಳು ಈವರೆಗೆ 27 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಇಂಗ್ಲೆಂಡ್ ತಂಡ 14 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನು ಸ್ಪೇನ್ ಗೆದ್ದಿರುವುದು ಕೇವಲ 10 ಪಂದ್ಯಗಳಲ್ಲಿ ಮಾತ್ರ. ಹಾಗೆಯೇ 3 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದೆ. ಇಲ್ಲಿ ಮೇಲ್ನೋಟಕ್ಕೆ ಇಂಗ್ಲೆಂಡ್ ತಂಡ ಬಲಿಷ್ಠವಾಗಿ ಕಾಣಿಸಿಕೊಂಡರೂ, ಈ ಬಾರಿಯ ಟೂರ್ನಿಯಲ್ಲಿ ಸ್ಪೇನ್ ಸೋಲಿಲ್ಲದ ಸರದಾರನಾಗಿ ಫೈನಲ್ಗೆ ಲಗ್ಗೆಯಿಟ್ಟಿದೆ. ಹೀಗಾಗಿ ಅಂತಿಮ ಹಣಾಹಣಿಯಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.
ಬರ್ಲಿನ್ನ ಒಲಿಂಪಿಯಾ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಭಾರತೀಯ ಕಾಲಮಾನ ಮಧ್ಯರಾತ್ರಿ 12.30 AM ನಿಂದ ಶುರುವಾಗಲಿದೆ. ಹಾಗೆಯೇ ಈ ಫೈನಲ್ ಫೈಟ್ ಅನ್ನು ಭಾರತದಲ್ಲಿ ಸೋನಿ ಲೈವ್ ಆ್ಯಪ್ ಹಾಗೂ ಸೋನಿ ಸ್ಪೋರ್ಟ್ಸ್ ಚಾನೆಲ್ಗಳಲ್ಲಿ ವೀಕ್ಷಿಸಬಹುದು.