French Open 2024: ಇಗಾ ಶ್ವಿಯಾಮ್​ಟೆಕ್ ಮುಡಿಗೆ ಸತತ ಮೂರನೇ ಕಿರೀಟ

|

Updated on: Jun 09, 2024 | 8:40 AM

French Open 2024: ಇಗಾ ಶ್ವಿಯಾಮ್​ಟೆಕ್ ನಾಲ್ಕನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿದ್ದಾರೆ. 2020 ರಲ್ಲಿ ಮೊದಲ ಬಾರಿ ಫ್ರೆಂಚ್ ಓಪನ್ ಕಿರೀಟ ಮುಡಿಗೇರಿಸಿಕೊಂಡಿದ್ದ ಇಗಾ, ಆ ಬಳಿಕ 2022, 2023 ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇದೀಗ 2024 ರಲ್ಲೂ ಗೆಲ್ಲುವ ಮೂಲಕ ಸತತ ಮೂರನೇ ಬಾರಿ ಪ್ರಶಸ್ತಿ ಗೆದ್ದ ಹಿರಿಮೆಗೆ ಪಾತ್ರರಾಗಿದ್ದಾರೆ.

French Open 2024: ಇಗಾ ಶ್ವಿಯಾಮ್​ಟೆಕ್ ಮುಡಿಗೆ ಸತತ ಮೂರನೇ ಕಿರೀಟ
Iga Swiatek
Follow us on

ಶನಿವಾರ ಪ್ಯಾರಿಸ್‌ನ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ನಡೆದ ಫ್ರೆಂಚ್ ಓಪನ್ (French Open 2024) ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ವಿಶ್ವದ ನಂಬರ್ 1 ತಾರೆ ಇಗಾ ಶ್ವಿಯಾಮ್​ಟೆಕ್ (Iga Swiatek) ಜಯಭೇರಿ ಬಾರಿಸಿದ್ದಾರೆ. ಈ ಗೆಲುವಿನೊಂದಿಗೆ ಸತತ ಮೂರನೇ ಬಾರಿ ಫ್ರೆಂಚ್ ಓಪನ್ ಕಿರೀಟವನ್ನು ಮುಡಿಗೇರಿಸಿಕೊಂಡ ವಿಶೇಷ ದಾಖಲೆಯನ್ನು ನಿರ್ಮಿಸಿದ್ದಾರೆ.

ಫೈನಲ್​ ಪಂದ್ಯದಲ್ಲಿ ಪೊಲಾಂಡ್​ನ ಇಗಾ ಶ್ವಿಯಾಮ್​ಟೆಕ್ ಹಾಗೂ ಇಟಲಿಯ ಜಾಸ್ಮಿನ್ ಪಾವೊಲಿನಿ ಮುಖಾಮುಖಿಯಾಗಿದ್ದರು. ನಿರೀಕ್ಷೆಯಂತೆ ಶ್ವಿಯಾಮ್​ಟೆಕ್ ಆರಂಭದಲ್ಲೇ 15ನೇ ಶ್ರೇಯಾಂಕದ ಆಟಗಾರ್ತಿ ವಿರುದ್ಧ ಮೇಲುಗೈ ಸಾಧಿಸಿದ್ದರು.

ಏಕಪಕ್ಷೀಯವಾಗಿ ಸಾಗಿದ ಈ ಪಂದ್ಯದ ಯಾವುದೇ ಹಂತದಲ್ಲೂ ಇಗಾ ಶ್ವಿಯಾಮ್​ಟೆಕ್ ತಮ್ಮ ಲಯವನ್ನು ಬಿಟ್ಟು ಕೊಟ್ಟಿರಲಿಲ್ಲ. ಅತ್ತ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಇಗಾ ಅವರ ಆಟಕ್ಕೆ ತದ್ವಿರುದ್ದವಾಗಿ ಪಾವೊಲಿನಿ ಕಂಡು ಬಂದರು.

ಆರಂಭದಿಂದಲೇ ಒತ್ತಡಕ್ಕೆ ಸಿಲುಕಿದ್ದ ಜಾಸ್ಮಿನ್ ಪಾವೊಲಿನಿ ಅವರ ತಪ್ಪುಗಳನ್ನೇ ಬಂಡವಾಳ ಮಾಡಿಕೊಂಡ 23 ವರ್ಷದ ಇಗಾ ಶ್ವಿಯಾಮ್​ಟೆಕ್ ಮೊದಲ ಸುತ್ತನ್ನು 6-2 ಅಂತರದಿಂದ ಗೆದ್ದು ಬೀಗಿದರು. ಇನ್ನು 2ನೇ ಸುತ್ತಿನಲ್ಲೂ ಅತ್ಯುತ್ತಮ ಸರ್ವ್​ಗಳ ಮೂಲಕ ಪಾವೊಲಿನಿ ಮೇಲೆ ಒತ್ತಡ ಹೇರುವಲ್ಲಿ ಇಗಾ ಯಶಸ್ವಿಯಾದರು.

ಪರಿಣಾಮ 2ನೇ ಸುತ್ತಿನಲ್ಲಿ ಜಾಸ್ಮಿನ್ ಪಾವೊಲಿನಿ 1 ಅಂಕ ಕಲೆಹಾಕುವಷ್ಟರಲ್ಲಿ ಇಗಾ ಶ್ವಿಯಾಮ್​ಟೆಕ್ 6 ಅಂಕಗಳನ್ನು ಗಳಿಸಿದ್ದರು. ಈ ಮೂಲಕ 6-2, 6-1 ಅಂತರಗಳ ನೇರ ಸೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡರು.

ಈ ಗೆಲುವಿನೊಂದಿಗೆ ಸತತ ಮೂರನೇ ಬಾರಿ ಫ್ರೆಂಚ್ ಓಪನ್ ಗೆದ್ದ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಇಗಾ ಶ್ವಿಯಾಮ್​ಟೆಕ್ ಪಾತ್ರರಾದರು. ಹಾಗೆಯೇ ನಾಲ್ಕನೇ ಬಾರಿ ಫ್ರೆಂಚ್ ಓಪನ್ ಮುಡಿಗೇರಿಸಿಕೊಂಡ ತಾರೆ ಎಂಬ ಹಿರಿಮೆಗೂ ಪಾತ್ರರಾದರು.

ಫ್ರೆಂಚ್ ಓಪನ್ ಪ್ರಶಸ್ತಿಯೊಂದಿಗೆ ಇಗಾ ಶ್ವಿಯಾಮ್​ಟೆಕ್

ಇದಕ್ಕೂ ಮುನ್ನ 2020, 2022, 2023 ರಲ್ಲಿ ಇಗಾ ಶ್ವಿಯಾಮ್​ಟೆಕ್ ಫ್ರೆಂಚ್ ಓಪನ್ ಗೆದ್ದಿದ್ದರು. ಇದೀಗ 2024 ರಲ್ಲೂ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

ಇಗಾ ಶ್ವಿಯಾಮ್​ಟೆಕ್ ಪ್ರಶಸ್ತಿ ಗೆದ್ದ ಕ್ಷಣದ ವಿಡಿಯೋ:

ಇಗಾ ಶ್ವಿಯಾಮ್​ಟೆಕ್ ನಿರ್ಮಿಸಿದ ದಾಖಲೆಗಳು:

  • ಸೆರೆನಾ ವಿಲಿಯಮ್ಸ್ (2013) ಬಳಿಕ ಕ್ಯಾಲೆಂಡರ್ ವರ್ಷದಲ್ಲಿ ಮ್ಯಾಡ್ರಿಡ್, ರೋಮ್ ಮತ್ತು ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಕಿರೀಟ ಮುಡಿಗೇರಿಸಿಕೊಂಡ 2ನೇ ಆಟಗಾರ್ತಿ ಎಂಬ ದಾಖಲೆಯನ್ನು ಶ್ವಿಯಾಮ್​ಟೆಕ್ ಬರೆದಿದ್ದಾರೆ.
  • ಜಸ್ಟಿನ್ ಹೆನಿನ್ (2005 – 2007) ಮತ್ತು ಮೋನಿಕಾ ಸೆಲೆಸ್ (1990-92) ನಂತರ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಸತತ ಮೂರು ಪ್ರಶಸ್ತಿಗಳನ್ನು ಗೆದ್ದ ಮೂರನೇ ಮಹಿಳಾ ಆಟಗಾರ್ತಿ ಶ್ವಿಯಾಮ್​ಟೆಕ್.
  • ಐದು ಮಹಿಳಾ ಸಿಂಗಲ್ಸ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದ ಆರನೇ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಇಗಾ ಶ್ವಿಯಾಮ್​ಟೆಕ್ ಪಾತ್ರರಾಗಿದ್ದಾರೆ.
  • ಈ ದಶಕದಲ್ಲಿ ಒಂದೇ ಗ್ರ್ಯಾಂಡ್ ಸ್ಲಾಮ್ ಈವೆಂಟ್‌ನಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಪಡೆದ ಮೊದಲ ಆಟಗಾರ್ತಿ ಶ್ವಿಯಾಮ್​ಟೆಕ್.
  • ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ನಾಲ್ಕನೇ ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ಗಳಿಸಿದ ಅತ್ಯಂತ ಕಿರಿಯ ಆಟಗಾರ್ತಿ ಇಗಾ ಶ್ವಿಯಾಮ್​ಟೆಕ್ (23 ವರ್ಷ, 9 ದಿನಗಳು).