India vs Australia Test Series | ಬ್ರಿಸ್ಬೇನ್​ನಲ್ಲಿ ಟೀಮ್ ಇಂಡಿಯಾ ಆಡಲು ನಿರಾಕರಿಸಿರುವ ಬಗ್ಗೆ ಅಧಿಕೃತ ಮಾಹಿತಿಯಿಲ್ಲ: ಹಾಕ್ಲೀ

|

Updated on: Jan 04, 2021 | 7:01 PM

ಮತ್ತೊಮ್ಮೆ ಕ್ವಾರಂಟೈನ್​ಗೆ ಒಳಗಾಗಲು ನಿರಾಕರಿಸಿರುವ ಟೀಮ್ ಇಂಡಿಯಾದ ಸದಸ್ಯರು ಬ್ರಿಸ್ಬೇನ್​ನಲ್ಲಿ ನಡೆಯುವ ಪ್ರಸಕ್ತ ಸರಣಿಯ ನಾಲ್ಕನೆ ಟೆಸ್ಟ್​ ಆಡುವುದಿಲ್ಲ ಅಂತ ಹೇಳಿರುವುದಾಗಿ ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿದೆ. ಕ್ರಿಕೆಟ್ ಅಸ್ಟ್ರೇಲಿಯ ಈ ಕುರಿತು ತನಗ್ಯಾವುದೇ ಮಾಹಿತಿ ಲಭ್ಯವಾಗಿಲ್ಲವೆಂದು ಹೇಳಿದೆ.

India vs Australia Test Series | ಬ್ರಿಸ್ಬೇನ್​ನಲ್ಲಿ ಟೀಮ್ ಇಂಡಿಯಾ ಆಡಲು ನಿರಾಕರಿಸಿರುವ ಬಗ್ಗೆ ಅಧಿಕೃತ ಮಾಹಿತಿಯಿಲ್ಲ: ಹಾಕ್ಲೀ
ಕ್ರಿಕೆಟ್ ಆಸ್ಟ್ರೇಲಿಯಾದ ಸಿಈಒ ನಿಕ್ ಹಾಕ್ಲೀ
Follow us on

ಅಸ್ಟ್ರೇಲಿಯ ವಿರುದ್ಧ ಬಿಸ್ಬೇನ್​ನಲ್ಲಿ ನಡೆಯುವ ನಾಲ್ಕನೇ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಆಡಲು ನಿರಾಕರಿಸಿರುವ ಕುರಿತು ಕ್ರಿಕೆಟ್ ಆಸ್ಟ್ರೇಲಿಯಾಗೆ (ಸಿಎ) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ ಯಾವುದೇ ಸೂಚನೆ ಲಭ್ಯವಾಗಿಲ್ಲವೆಂದು ಸಿಎ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಿಕ್ ಹಾಕ್ಲೀ ಹೇಳಿದ್ದಾರೆ.

ಈಗಾಗಲೇ ಎರಡೆರಡು ಬಾರಿ ಕ್ವಾರಂಟೈನ್​ಗೆ ಒಳಗಾಗಿರುವ ಭಾರತೀಯ ಕ್ರಿಕೆಟ್​ ತಂಡದ ಸದಸ್ಯರು ಬ್ರಿಸ್ಬೇನ್​ನಲ್ಲಿ ಮತ್ತೊಮ್ಮೆ 14-ದಿನ ಅವಧಿಯ ಕ್ವಾರಂಟೈನ್​ಗೆ ಹೋಗುವುದು ಸಾಧ್ಯವಿಲ್ಲ ಎಂದು ಹೇಳಿರುವುದಾಗಿ ಅಸ್ಟ್ರೇಲಿಯಾದ ಮಾಧ್ಯಮಗಳಲ್ಲಿ ವರದಿಯಾಗಿದೆ. ಅವರ ನಿರಾಕರಣೆಗೆ ಪ್ರತಿಕ್ರಿಯಿಸಿರುವ ಕ್ವೀನ್ಸ್​ಲ್ಯಾಂಡ್ ಸರ್ಕಾರ, ಭಾರತೀಯರಿಗೆ ಕ್ವಾರಂಟೈನ್​ಗೊಳಗಾಗುವುದು ಒಪ್ಪಿಗೆಯಿರದಿದ್ದರೆ, ಅವರು ಬ್ರಿಸ್ಬೇನ್​ಗೆ ಕಾಲಿಡುವ ಅವಶ್ಯತೆಯಿಲ್ಲ ಎಂದು ಹೇಳಿತ್ತು.

ಅಸ್ಟ್ರೇಲಿಯಾ ಪ್ರವಾಸಕ್ಕೆ ತೆರಳುವ ಮೊದಲು ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿ ಇಂಡಿಯನ್ ಪ್ರಿಮೀಯರ್ ಲೀಗ್​ನ 13 ನೇ ಆವೃತಿಯಲ್ಲಿ ಭಾಗವಹಿಸಿದ್ದ ಟೀಮ್ ಇಂಡಿಯಾದ ಸದಸ್ಯರು ಅಲ್ಲಿ ಎರಡು ವಾರ ಅವಧಿಯ ಕ್ವಾರಂಟೈನ್​ಗೆ ಒಳಗಾಗಿದ್ದರಲ್ಲದೆ, ಟೂರ್ನಿ ಮುಗಿಯುವವರೆಗೆ ಬಯೊ-ಬಬಲ್​ ಕವಚದಲ್ಲಿದ್ದರು. ಅಸ್ಟ್ರೇಲಿಯಾ ತಲುಪಿದ ನಂತರ ಸಿಡ್ನಿಯಲ್ಲಿ ಅವರನ್ನು ಪುನಃ 14-ದಿನಗಳ ಕ್ವಾರಂಟೈನ್​ನಲ್ಲಿ ಇಡಲಾಗಿತ್ತು. ಹಾಗಾಗಿ, ಕ್ವೀನ್ಸ್​ಲ್ಯಾಂಡ್ ಸರ್ಕಾರ ಜಾರಿಗೊಳಿಸಿರುವ ಐಸೊಲೇಷನ್​ನಲ್ಲಿರುವುದು ತಮಗಿಷ್ಟವಿಲ್ಲವೆಂದು ಭಾರತದ ಆಟಗಾರರರು ಹೇಳಿದ್ದಾರೆ ಎಂದು ಆಸ್ಟ್ರೇಲಿಯಾ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಕ್ರಿಕೆಟ್ ಆಸ್ಟ್ರೇಲಿಯಾಗೆ ಅಧಿಕೃತವಾಗಿ ಅಂಥ ಯಾವುದೇ ಮಾಹಿತಿ ಲಭ್ಯವಾಗಿಲ್ಲವೆಂದು ಹಾಕ್ಲೀ ಹೇಳಿದ್ದಾರೆ.

‘ಬಿಸಿಸಿಐ ಅಧಿಕಾರಿಗಳೊಂದಿಗೆ ನಾವು ಪ್ರತಿನಿತ್ಯ ಮಾತಾಡುತ್ತೇವೆ. ನಮಗೆ ಅಧಿಕೃತವಾಗಿ ಅವರು ಯಾವುದೇ ಮನವಿ ಮಾಡಿಲ್ಲ. ಬಿಸಿಸಿಐ ನಮ್ಮೊಂದಿಗೆ ಅದ್ಭುತವಾಗಿ ಸಹಕರಿಸುತ್ತಿದೆ. ಎರಡೂ ತಂಡಗಳು ನಿಗದಿತ ಶೆಡ್ಯೂಲ್ ಪ್ರಕಾರ ಟೆಸ್ಟ್​ಗಳನ್ನಾಡಲು ಸಮ್ಮತಿಸಿವೆ’ ಎಂದು ಹಾಕ್ಲೀ ಹೇಳಿದ್ದಾರೆ.

ಟೀಮ್ ಇಂಡಿಯಾ

ಆದರೆ ಕ್ವೀನ್ಸ್​ಲ್ಯಾಂಡ್ ಸರ್ಕಾರದ ಅರೋಗ್ಯ ಸಚಿವ ರಾಸ್ ಬೇಟ್ಸ್, ‘ಇಂಡಿಯಾ ಕ್ರಿಕೆಟ್ ಟೀಮಿನ ಸದಸ್ಯರಿಗೆ ಇಲ್ಲಿನ ನಿಯಮಗಳಿಗೆ ಬದ್ಧರಾಗುವುದು ಇಷ್ಟವಿಲ್ಲವಾದರೆ, ಅವರು ಬರುವುದೇ ಬೇಡ’ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಬಿಸ್ಬೇನ್​ನ ಗಬ್ಬಾ ಕ್ರಿಕೆಟ್ ಮೈದಾನ

ಬೇಟ್ಟ್ ಅವರ ಮಾತನ್ನೇ ಪುನರುಚ್ಛರಿಸಿರುವ ಕ್ವೀನ್ಸ್​ಲ್ಯಾಂಡ್ ಸರ್ಕಾರದ ಮತ್ತೊಬ್ಬ ಪ್ರತಿನಿಧಿ ಟಿಮ್ ಮ್ಯಾಂಡರ್, ‘ಕೊವಿಡ್-19ಗೆ ಸಂಬಂಧಿಸಿದ ಶಿಷ್ಟಾಚಾರಗಳನ್ನು ಕಡೆಗಣಿಸುವ ಪ್ರಶ್ನೆಯೇ ಉದ್ಭವಿಸದು. ಒಂದು ಪಕ್ಷ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ನಿಯಮಗಳನ್ನು ಉಲ್ಲಂಘಿಸಲು ಉತ್ಸುಕರಾಗಿದ್ದರೆ, ಅವರು ಬಾರದಿರುವುದು ನಮಗೆ ಹೆಚ್ಚು ಸಂತೋಷ ನೀಡುತ್ತದೆ. ಸರಳವಾಗಿ ಹೇಳುವುದಾದರೆ, ಇಲ್ಲಿನ ನಿಯಮಗಳು ಎಲ್ಲರಿಗೂ ಅನ್ವಯಿಸುತ್ತವೆ, ಅಷ್ಟೇ’ ಎಂದಿದ್ದಾರೆ.

India vs Australia Test Series | ಟೀಮ್ ಇಂಡಿಯಾದ ಸದಸ್ಯರ ವಿರುದ್ಧ ಸಲ್ಲದ ಆರೋಪ ಮಾಡಲಾರಂಭಿಸಿದ ಆಸ್ಸೀ ಮಿಡಿಯಾ

Published On - 6:09 pm, Mon, 4 January 21