ಐಸಿಸಿ ಮಹಿಳಾ ಟಿ-ಟ್ವೆಂಟಿ ಟೂರ್ನಿಯ ನಾಲ್ಕನೇ ಲೀಗ್ ಪಂದ್ಯದಲ್ಲಿ ಭಾರತೀಯ ವನಿತೆಯರು 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಲೀಗ್ ಹಂತದ ನಾಲ್ಕು ಪಂದ್ಯಗಳನ್ನ ಗೆದ್ದ ಹರ್ಮನ್ಪ್ರೀತ್ ಕೌರ್ ಪಡೆ, ಸೆಮೀಸ್ಗೆ ಎಂಟ್ರಿಕೊಟ್ಟ ಮೊದಲ ತಂಡವಾಗಿ ಹೊರಹೊಮ್ಮಿದೆ.
ರಾಧಾ ಯಾದವ್ ಸ್ಪಿನ್ ಮೋಡಿ.. ಲಂಕಾ ಕಕ್ಕಾಬಿಕ್ಕಿ!
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ, ಟೀಂ ಇಂಡಿಯಾದ ಸ್ಪಿನ್ ಜಾದೂ ಮುಂದೆ ಮಂಕಾಗಿ ಹೋಯ್ತು. ನಾಯಕ ಚಮರಿ ಅಥಾಪಟ್ಟು 5 ಬೌಂಡರಿ, 1ಸಿಕ್ಸರ್ ಸಿಡಿಸುವ ಮೂಲಕ, 33ರನ್ ಕಲೆಹಾಕಿದ್ದು ಬಿಟ್ರೆ, ಲಂಕಾ ಪರ ಉಳಿದ್ಯಾವ ಆಟಗಾರ್ತಿಯರೂ ಹೆಚ್ಚು ಹೊತ್ತು ಕ್ರಿಸ್ ಕಚ್ಚಿ ನಿಲ್ಲಲಿಲ್ಲ.
ಟೀಂ ಇಂಡಿಯಾದ ಸ್ಪಿನ್ ಮೋಡಿಗೆ ಗಿರಗಿಟ್ಲೆ ಹೊಡೆದ ಸಿಂಹಳೀಯರು, ಪೆವಿಲಿಯನ್ ಪರೇಡ್ ನಡೆಸಿದ್ರು. ರಾಧಾ ಯಾದವ್ ಕೈಚಳಕಕ್ಕೆ ಮಂಕಾದ ಸಿಂಹಳೀಯರು ಒಂದೊಂದು ರನ್ ಗಳಿಸೋದಕ್ಕೆ ಪರದಾಡಿದ್ರು. ಲಂಕಾ ಪರ ನಾಲ್ವರು ಆಟಗಾರ್ತಿಯರು ಎರಡಂಕಿ ಮೊತ್ತ ದಾಟಿದ್ದು ಬಿಟ್ರೆ ಉಳಿದವರು ಒಂದಕಿಗೆ ಸಿಮೀತವಾದ್ರು.
ರಾಧಾ ಯಾದವ್ 4ವಿಕೆಟ್, ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ 2 ವಿಕೆಟ್ ಪಡೆಯೋದ್ರೊಂದಿಗೆ ಶ್ರೀಲಂಕಾದ ಅದಃಪತನಕ್ಕೆ ಕಾರಣವಾದ್ರು. ಅಂತಿಮವಾಗಿ ಶ್ರೀಲಂಕಾ ನಿಗದಿತ 20ಓವರ್ಗಳಲ್ಲಿ 9 ವಿಕೆಟ್ಗಳನ್ನ ಕಳೆದುಕೊಂಡು 113ರನ್ ಗಳಿಸಲಷ್ಟೇ ಶಕ್ತವಾಯ್ತು.
ಮತ್ತೆ ಮಿಂಚಿದ ಶೆಫಾಲಿ.. ಕಂಗಾಲಾದ ಲಂಕಾ!
ಸ್ಮೃತಿ ಮಂದಾನಾ ವಿಕೆಟ್ ಕಳೆದುಕೊಂಡ್ರು ಸ್ಫೋಟಕ ಬ್ಯಾಟಿಂಗ್ ಮಾಡಿದ ಶೆಫಾಲಿ ವರ್ಮ, ಜಂಕ್ಷನ್ ಓವಲ್ ಮೈದಾನದಲ್ಲಿ ರನ್ ಮಳೆಯನ್ನ ಹರಿಸಿದ್ರು. 7ಬೌಂಡರಿ, 1ಸಿಕ್ಸರ್ ಸಿಡಿಸೋದ್ರೊಂದಿಗೆ ಅಭಿಮಾನಿಗಳನ್ನ ರಂಜಿಸಿದ್ದ ಶೆಫಾಲಿ, ಮತ್ತೊಮ್ಮೆ ಮ್ಯಾಚ್ ವಿನ್ನಿಂಗ್ಸ್ ಪ್ರದರ್ಶನ ನೀಡಿದ್ರು.
34ಎಸೆತಗಳಲ್ಲಿ 47ರನ್ಗಳಿಸಿದ್ದ ಶೆಫಾಲಿ ಇನ್ನೇನು ವಿಶ್ವಕಪ್ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸ್ತಾರೆ ಅನ್ನೋವಾಗಲೇ, ರನೌಟ್ ಆಗಿ ನಿರ್ಗಮಿಸಿದ್ರು. ಇನ್ನೂ ನಾಯಕ ಹರ್ಮನ್ಪ್ರೀತ್ ಕೌರ್, ಜೆಮಿಮಾ ರೋಡ್ರಿಗಿಸ್ ಹಾಗೂ ದೀಪ್ತಿ ಶರ್ಮಾ ತಲಾ 15ರನ್ ಗಳಿಸೋದ್ರೊಂದಿಗೆ 14.4ಓವರ್ಗಳಲ್ಲಿ ತಂಡವನ್ನ ಗೆಲುವಿನ ದಡ ಮುಟ್ಟಿಸಿದ್ರು. ಇದ್ರೊಂದಿಗೆ ಭಾರತ ಆಡಿದ ನಾಲ್ಕು ಪಂದ್ಯಗಳಲ್ಲೂ ವಿಜಯೋತ್ಸವನ್ನ ಆಚರಿಸಿತು.
ವಿಶ್ವಕಪ್ನಲ್ಲಿ ಸೋಲಿಲ್ಲದ ಸರದಾರರಂತೆ ಬೀಗ್ತಿರೋ ಭಾರತದ ನಾರಿಯರು, ಇನ್ನೆರೆಡು ಪಂದ್ಯಗಳಲ್ಲಿ ಗೆದ್ರೆ ಸಾಕು ವಿಶ್ವ ಕಿರೀಟಕ್ಕೆ ಮುತ್ತಿಕ್ಕಲಿದ್ದಾರೆ.
Published On - 10:12 am, Sun, 1 March 20