
ಜಪಾನ್ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ 4X400 ಮಹಿಳೆಯರ ರಿಲೇಯಲ್ಲಿ ಭಾರತಕ್ಕೆ ಚಿನ್ನದ ಪದಕ ಲಭಿಸಿತ್ತು. ಚಿನ್ನ ಗೆದ್ದ ಈ ತಂಡದಲ್ಲಿ ಕನ್ನಡತಿ ಪೂವಮ್ಮ ಕೂಡ ಇದ್ದರು. ಚಿನ್ನದ ಪದಕವನ್ನು ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದ ಪೂವಮ್ಮ ಚಿನ್ನದ ಪದಕದೊಂದಿಗೆ ತಾಯ್ನಾಡಿಗೆ ವಾಪಸ್ಸಾಗಿದ್ದಾರೆ. ಇಂದು ಟಿವಿ9 ಜೊತೆ ಮಾತಿಗೆ ಸಿಕ್ಕ ಪೂವಮ್ಮ, ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಕ್ಕೆ ಖುಷಿ ಆಗಿದೆ. ನಾನು ಮೂರು ಬಾರಿ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದೇನೆ. ಮೂರು ಕ್ರೀಡಾಕೂಟಗಳಲ್ಲೂ ಇದು ನಾನು ಗೆದ್ದ 6ನೇ ಪದಕವಾಗಿದೆ. ನನ್ನ ತಂದೆ-ತಾಯಿ, ಪತಿ ಹಾಗೂ ಕೋಚ್‌ಗಳ ಬೆಂಬಲವೇ ನನ್ನ ಈ ಸಾಧನೆಗೆ ಕಾರಣ ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಅವರು ರಾಜ್ಯ ಸರ್ಕಾರದ ನಿರ್ಲಕ್ಷ್ಯಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಈ ಬಾರಿ ಅಥ್ಲೆಟಿಕ್ಸ್‌ನಲ್ಲಿ ನಮ್ಮ 4×400 ಮಹಿಳೆಯರ ರಿಲೇ ತಂಡಕ್ಕೆ ಗೋಲ್ಡ್ ಮೆಡಲ್ ಲಭಿಸಿದೆ. ಇತರ ರಾಜ್ಯಗಳ ಅಥ್ಲೀಟ್‌ಗಳು ಪದಕ ಗೆಲ್ಲುತ್ತಿದ್ದಂತೆ ಅವರ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕ್ರೀಡಾ ಸಚಿವರು ತಕ್ಷಣ ಕರೆ ಮಾಡಿ ಶುಭ ಕೋರುತ್ತಿದ್ದರು. ಆದರೆ ನನಗೆ ಆರಂಭದಲ್ಲಿ ಯಾವುದೇ ಕರೆಗಳು ಬಂದಿರಲಿಲ್ಲ. ಬಳಿಕ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಹಾಗೂ ಜಿ. ಪರಮೇಶ್ವರ್ ಸರ್ ಕರೆ ಮಾಡಿ ಮಾತನಾಡಿದ್ದಾರೆ. ಇವತ್ತು ಮತ್ತೆ ಸಿಎಂ ಕರೆ ಮಾಡಿ ಬೆಂಗಳೂರು ಬರಲು ಹೇಳಿದ್ದಾರೆ.ನಾನು ಕೂಡ ಅಥ್ಲೀಟ್, ನಿಮ್ಮ ಸಾಧನೆ ಬಗ್ಗೆ ಗೌರವ ಇದೆ ಎಂದಿದ್ದಾರೆ.
ಆದರೆ ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಕರ್ನಾಟಕದಲ್ಲಿ ನೀಡಲಾಗುವ ನಗದು ಬಹುಮಾನ ತೀರಾ ಕಡಿಮೆಯಿದೆ. ಹರಿಯಾಣ ಸೇರಿದಂತೆ ಬೇರೆ ರಾಜ್ಯಗಳು ಚಿನ್ನ ಗೆದ್ದವರಿಗೆ 3 ಕೋಟಿ ರೂ. ಬಹುಮಾನ ನೀಡುತ್ತಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಕೇವಲ 35 ಲಕ್ಷ ಮಾತ್ರ ನೀಡಲಾಗುತ್ತಿದೆ. ಆದಾಗ್ಯೂ ಬಹುಮಾನದ ಮೊತ್ತವನ್ನು ಹೆಚ್ಚಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಬೇರೆ ರಾಜ್ಯಗಳ ಸ್ಪರ್ಧಿಗಳು ಬಂದು ದೀದಿ, ನಿಮಗೇನು ಸಿಗುತ್ತಿದೆ?’ ಎಂದು ಕೇಳುವಾಗ ನಮಗೂ ಬೇಸರವಾಗುತ್ತದೆ. ಕಳೆದ 22-23 ವರ್ಷಗಳಿಂದ ಈ ಕ್ರೀಡಾ ಕ್ಷೇತ್ರದಲ್ಲಿ ಕಠಿಣ ಪರಿಶ್ರಮ ಪಟ್ಟಿದ್ದೇನೆ.
ಏಷ್ಯನ್ ಗೇಮ್ಸ್ ಚಿನ್ನದ ವಿಜೇತೆ ಪೂವಮ್ಮಗೆ ಸಿಎಂ ಡಿಕೆ ಶಿವಕುಮಾರ್ ಕರೆ: ಅಕ್ಟೋಬರ್ 6ಕ್ಕೆ ಭೇಟಿಯಾಗಲು ಆಹ್ವಾನ
ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಕರ್ನಾಟಕ ರಾಜ್ಯಕ್ಕೆ ಸಿಕ್ಕ ಮೊದಲ ಬಂಗಾರದ ಪದಕವಿದು. ಆದ್ದರಿಂದ ರಾಜ್ಯ ಸರ್ಕಾರವು ಕ್ರೀಡಾಪಟುಗಳ ಸಾಧನೆಯನ್ನು ಪರಿಗಣಿಸಬೇಕು. ನಗದು ಬಹುಮಾನ ಹಾಗೂ ಕ್ರೀಡಾ ಸೌಲಭ್ಯಗಳನ್ನು ಹೆಚ್ಚಿಸಬೇಕು. ಇದು ಮುಂದೆ ಬರುವ ಯುವ ಅಥ್ಲೀಟ್‌ಗಳಿಗೂ ದೊಡ್ಡ ಬೆಂಬಲವಾಗಲಿದೆ ಎಂದಿದ್ದಾರೆ.
Published On - 8:31 pm, Sat, 3 October 26