ಚೆಸ್ ಜಗತ್ತಿನಲ್ಲಿ ಇಂದು ಅಂದರೆ 2024 ರ ಸೆಪ್ಟೆಂಬರ್ 22 ರಂದು ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಚೆಸ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಭಾರತ ಒಲಿಂಪಿಯಾಡ್‌ನಲ್ಲಿ ಚಿನ್ನದ ಪದಕ ಗೆದ್ದಿದೆ. ಹಂಗೇರಿಯಲ್ಲಿ ನಡೆಯುತ್ತಿರುವ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತವು ಮೊದಲ ಬಾರಿಗೆ ಮುಕ್ತ ವಿಭಾಗ (ಪುರುಷರು ಮತ್ತು ಮಹಿಳೆಯರ ವಿಭಾಗ) ದಲ್ಲಿ ಏಕಕಾಲದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಡಿ.ಗುಕೇಶ್, ಆರ್.ಪ್ರಗ್ನಾನಂದ್, ಅರ್ಜುನ್ ಎರಿಗೇಸಿ ಸೇರಿದಂತೆ 5 ಆಟಗಾರರನ್ನು ಒಳಗೊಂಡ ಭಾರತ ಪುರುಷರ ತಂಡ ಮುಕ್ತ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡರೆ, ಇತ್ತ ತಾನಿಯಾ ಸಚ್‌ದೇವ್, ಆರ್ ವೈಶಾಲಿ, ದಿವ್ಯಾ ದೇಶಮುಖ್ ಅವರಿದ್ದ ಮಹಿಳಾ ತಂಡವೂ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿತು. ಭಾರತ ಇದೇ ಮೊದಲ ಬಾರಿಗೆ ಎರಡೂ ವಿಭಾಗಗಳಲ್ಲಿ ಚಿನ್ನ ಗೆದ್ದುಕೊಂಡಿದ್ದಲ್ಲದೆ, ಎರಡೂ ಚಿನ್ನವನ್ನು ಏಕಕಾಲದಲ್ಲಿ ಗೆದ್ದು ಸಂಚಲನ ಮೂಡಿಸಿದೆ.
ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ನಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ 45ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತವನ್ನು ಈಗಾಗಲೇ ಪ್ರಶಸ್ತಿಗಾಗಿ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿತ್ತು. ಇದು ಅಂತರರಾಷ್ಟ್ರೀಯ ಚೆಸ್ ಫೆಡರೇಶನ್ (FIDE) ನಿಂದ ಆಯೋಜಿಸಲಾದ ಚೆಸ್‌ನ ವಿಶ್ವದ ಅತಿದೊಡ್ಡ ತಂಡ ಪಂದ್ಯಾವಳಿಯಾಗಿದ್ದು, ಇದರಲ್ಲಿ ವಿವಿಧ ದೇಶಗಳು ಭಾಗವಹಿಸುತ್ತವೆ. ಭಾರತ ಕೂಡ 2022 ರಲ್ಲಿ ಮೊದಲ ಬಾರಿಗೆ ಈ ಪಂದ್ಯಾವಳಿಯನ್ನು ಆಯೋಜಿಸಿತು. ಆಗ ಭಾರತ, ಮುಕ್ತ ವಿಭಾಗ ಮತ್ತು ಮಹಿಳೆಯರ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿತ್ತು.
ಈ ಬಾರಿ ಪುರುಷರ ವಿಭಾಗದಲ್ಲಿ ಗುಕೇಶ್, ಪ್ರಗ್ನಾನಂದ, ಅರ್ಜುನ್ ಎರಿಗೇಸಿ, ವಿದಿತ್ ಗುಜರಾತಿ ಮತ್ತು ಪಿ ಹರಿಕೃಷ್ಣ ಅವರ ನೇತೃತ್ವದ ಭಾರತ ತಂಡ ಮುಕ್ತ ವಿಭಾಗದಲ್ಲಿ ಸ್ಪರ್ಧಿಸಿತ್ತು. ಶನಿವಾರ ನಡೆದ ಪಂದ್ಯದಲ್ಲಿ ಅಮೆರಿಕ ವಿರುದ್ಧ ಗೆಲುವು ಸಾಧಿಸಿದ್ದ ಭಾರತ ತಂಡ 19 ಅಂಕ ಕಲೆಹಾಕುವ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡು ತನ್ನ ಚಿನ್ನದ ಪದಕವನ್ನು ಬಹುತೇಕ ಖಚಿತಪಡಿಸಿಕೊಂಡಿತ್ತು. ಭಾರತವನ್ನು ಹೊರತುಪಡಿಸಿ 17 ಅಂಕ ಪಡೆದಿದ್ದ ಚೀನಾ ಎರಡನೇ ಸ್ಥಾನದಲ್ಲಿತ್ತು.
🇮🇳 India wins the 45th FIDE #ChessOlympiad! 🏆 ♟️
Congratulations to Gukesh D, Praggnanandhaa R, Arjun Erigaisi, Vidit Gujrathi, Pentala Harikrishna and Srinath Narayanan (Captain)! 👏 👏
Gukesh D beats Vladimir Fedoseev, and Arjun Erigaisi prevails against Jan Subelj; India… pic.twitter.com/jOGrjwsyJc
— International Chess Federation (@FIDE_chess) September 22, 2024
ಇನ್ನು ಇಂದು ನಡೆದ 11 ನೇ ಮತ್ತು ಕೊನೆಯ ಸುತ್ತಿನಲ್ಲಿ ಭಾರತ ಕೇವಲ ಡ್ರಾ ಸಾಧಿಸಿದ್ದರೂ ಚಿನ್ನದ ಪದಕವನ್ನು ತನ್ನದಾಗಿಸಿಕೊಳ್ಳುತ್ತಿತ್ತು. ಆದರೆ ಈ ಸುತ್ತನ್ನು ಸಹ 3-0 ಅಂತರದಿಂದ ಗೆದ್ದುಕೊಂಡ ಭಾರತ ಪುರುಷ ತಂಡ ಪ್ರಶಸ್ತಿಯನ್ನು ವಶಪಡಿಸಿಕೊಂಡಿತು. ಗ್ರ್ಯಾಂಡ್‌ಮಾಸ್ಟರ್ ಗುಕೇಶ್, ಅರ್ಜುನ್ ಮತ್ತು ಪ್ರಗ್ನಾನಂದ್ ತಮ್ಮ ತಮ್ಮ ಪಂದ್ಯಗಳನ್ನು ಗೆದ್ದರು. ಹೀಗಾಗಿಯೇ ಭಾರತ ಈ ಸುತ್ತಿನ ಜೊತೆಗೆ ಒಂದು ಪಂದ್ಯ ಬಾಕಿ ಇರುವಂತೆಯೇ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಭಾರತವು ಎಲ್ಲಾ 11 ಸುತ್ತುಗಳ 22 ಅಂಕಗಳಿಗೆ 21 ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು.
🇮🇳India wins the 45th FIDE Women’s #ChessOlympiad! 🏆 ♟
Congratulations to Harika Dronavalli, Vaishali Rameshbabu, Divya Deshmukh, Vantika Agrawal, Tania Sachdev and Abhijit Kunte (Captain)! 👏 👏 pic.twitter.com/zsNde0tspo
— International Chess Federation (@FIDE_chess) September 22, 2024
ಮತ್ತೊಂದೆಡೆ, ಮಹಿಳೆಯರ ವಿಭಾಗದಲ್ಲಿ ವೈಶಾಲಿ, ತಾನಿಯಾ, ದಿವ್ಯಾ, ಡಿ ಹರಿಕಾ ಮತ್ತು ವಾಂತಿಕಾ ಅಗರ್ವಾಲ್ ಭಾರತವನ್ನು ಪ್ರತಿನಿಧಿಸಿದ್ದರು. ಕೊನೆಯ ಸುತ್ತಿಗೂ ಮೊದಲು, ಭಾರತ ಮತ್ತು ಕಜಕಿಸ್ತಾನ್ ಪಾಯಿಂಟ್ ಪಟ್ಟಿಯಲ್ಲಿ ಜಂಟಿಯಾಗಿ ಮೊದಲ ಸ್ಥಾನದಲ್ಲಿದ್ದವು. ಹೀಗಾಗಿ ಭಾರತ ತಂಡ ಚಿನ್ನದ ಪದಕವನ್ನು ತನ್ನದಾಗಿಸಿಕೊಳ್ಳಬೇಕೆಂದರೆ ಕೊನೆಯ ಸುತ್ತಿನ ಪಂದ್ಯದಲ್ಲಿ ಯಾವುದೇ ಬೆಲೆ ತೆತ್ತಾದರೂ ಅಜೆರ್ಬೈಜಾನ್ ತಂಡವನ್ನು ಸೋಲಿಸಬೇಕಿತ್ತು. ಈ ವೇಳೆ ಹರಿಕಾ, ದಿವ್ಯಾ ಮತ್ತು ವಾಂತಿಕಾ ತಮ್ಮ ತಮ್ಮ ಪಂದ್ಯಗಳನ್ನು ಗೆದ್ದರೆ, ವೈಶಾಲಿ ಅವರ ಪಂದ್ಯ ಡ್ರಾ ಆಗಿತ್ತು. ಈ ಮೂಲಕ ಭಾರತ ತಂಡ 3.5-0.5 ಅಂಕಗಳೊಂದಿಗೆ ಈ ಸುತ್ತನ್ನು ಗೆದ್ದು ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:44 pm, Sun, 22 September 24