ಫಿಫಾ ವಿಶ್ವಕಪ್ ಅಂಗಳದಲ್ಲಿ ನಾಲ್ವರು ಭಾರತೀಯ ಮೂಲದವರು!

ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಇದುವರೆಗೆ ಕೇವಲ ಒಬ್ಬರೇ ಒಬ್ಬರು ಭಾರತೀಯ ಮೂಲದ ಆಟಗಾರ ಆಡಿದ್ದಾರೆ. ಅವರೇ ವಿಕಾಶ್ ಧೋರಾಸೂ. 2006 ರ ವಿಶ್ವಕಪ್‌ನಲ್ಲಿ ಫ್ರಾನ್ಸ್ ಪರ ಆಂಧ್ರಪ್ರದೇಶ ಮೂಲದ ವಿಕಾಶ್ ಧೋರಾಸೂ ಕಣಕ್ಕಿಳಿದಿದ್ದರು. ಇದಾದ ಬಳಿಕ ಫಿಫಾ ವಿಶ್ವಕಪ್​ನಲ್ಲಿ ಯಾವುದೇ ಭಾರತೀಯ ಮೂಲದ ಆಟಗಾರ ಕಾಣಿಸಿಕೊಂಡಿರಲಿಲ್ಲ. ಇದೀಗ ಬರೋಬ್ಬರಿ 20 ವರ್ಷಗಳ ಬಳಿಕ ವಿಶ್ವಕಪ್ ಅಂಗಳದಲ್ಲಿ ಭಾರತೀಯ ಮೂಲದ ನಾಲ್ವರು ಆಟಗಾರರು ಕಣಕ್ಕಿಳಿಯಲು ತುದಿಗಾಲಲ್ಲಿ ನಿಂತಿದ್ದಾರೆ.

ಫಿಫಾ ವಿಶ್ವಕಪ್ ಅಂಗಳದಲ್ಲಿ ನಾಲ್ವರು ಭಾರತೀಯ ಮೂಲದವರು!
Fifa World Cup 2026
Image Credit source: revsportz.in

Updated on: Jun 10, 2026 | 11:12 AM

ಫುಟ್‌ಬಾಲ್ ಜಗತ್ತಿನ ಮಹಾಸಮರ ‘ಫಿಫಾ ವಿಶ್ವಕಪ್ 2026‘ ಕ್ಷಣಗಣನೆ ಶುರುವಾಗಿದೆ.  ಭಾರತ ಫುಟ್‌ಬಾಲ್ ತಂಡವು 2026ರ ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆಯದಿದ್ದರೂ, ಜಾಗತಿಕ ಫುಟ್‌ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಮೂಲದ ನಾಲ್ವರು ಆಟಗಾರರು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅದು ಸಹ ಮೂರು ವಿಭಿನ್ನ ಖಂಡಗಳ ನಾಲ್ಕು ಪ್ರಮುಖ ರಾಷ್ಟ್ರಗಳ ಪರವಾಗಿ ಎಂಬುದು ವಿಶೇಷ. ಆ ಆಟಗಾರರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

ಸರ್​ಪ್ರೀತ್ ಸಿಂಗ್ (ನ್ಯೂಝಿಲೆಂಡ್): ಆಕ್ಲೆಂಡ್‌ನಲ್ಲಿ ಜನಿಸಿದ 27 ವರ್ಷದ ಸರ್​ಪ್ರೀತ್ ಸಿಂಗ್ ಅವರ ಪೋಷಕರು ಪಂಜಾಬ್‌ನ ಜಲಂಧರ್ ಮೂಲದವರು. 2019 ರಲ್ಲಿ ಜರ್ಮನಿಯ ಪ್ರಸಿದ್ಧ ‘ಬಯರ್ನ್ ಮ್ಯೂನಿಚ್’ ಕ್ಲಬ್ ಪರ ಆಡುವ ಮೂಲಕ ಜರ್ಮನ್ ಬುಂಡೆಸ್ಲಿಗಾದಲ್ಲಿ ಆಡಿದ ಮೊದಲ ಭಾರತೀಯ ಮೂಲದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ನ್ಯೂಝಿಲೆಂಡ್ ಪರ ಚೊಚ್ಚಲ ವಿಶ್ವಕಪ್ ಪಂದ್ಯವಾಡಲು ಸರ್​ಪ್ರೀತ್ ಸಿಂಗ್ ಸಜ್ಜಾಗಿದ್ದಾರೆ.

ನಿಶಾನ್ ವೇಲುಪಿಳ್ಳೈ (ಆಸ್ಟ್ರೇಲಿಯಾ): ಮೆಲ್ಬೋರ್ನ್‌ನಲ್ಲಿ ಜನಿಸಿದ 25 ವರ್ಷದ ನಿಶಾನ್ ಅವರ ತಾಯಿ ಆಂಗ್ಲೋ-ಇಂಡಿಯನ್ ಮತ್ತು ತಂದೆ ಶ್ರೀಲಂಕಾ/ಮಲೇಷ್ಯಾ ತಮಿಳು ಮೂಲದವರು. ಆಸ್ಟ್ರೇಲಿಯಾದ ‘ಮೆಲ್ಬೋರ್ನ್ ವಿಕ್ಟರಿ’ ಅಕಾಡೆಮಿಯ ಮೂಲಕ ಫುಟ್​ಬಾಲ್ ಅಂಗಳಕ್ಕೆ ಕಾಲಿಟ್ಟ ನಿಶಾನ್, ಚೀನಾ ವಿರುದ್ಧ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಗೋಲು ಬಾರಿಸಿ ಮಿಂಚಿದ್ದರು. ಇದೀಗ ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿರುವ ನಿಶಾನ್ ವೇಲುಪಿಳ್ಳೆಯನ್ನು ಈ ಬಾರಿ ಆಸ್ಟ್ರೇಲಿಯಾದ ಮುನ್ಪಡೆ ಆಟಗಾರನಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ತಹ್ಸಿನ್ ಮೊಹಮ್ಮದ್ ಜಮ್ಶೀದ್ (ಖತಾರ್): ಖತಾರ್‌ನ ದೋಹಾದಲ್ಲಿ ಜನಿಸಿದ ಈ 19 ವರ್ಷದ ತಹ್ಸಿನ್ ಮೊಹಮ್ಮದ್ ಜಮ್ಶೀದ್ ಪೋಷಕರು ಕೇರಳದ ಕಣ್ಣೂರು (ತಲಶ್ಶೇರಿ) ಜಿಲ್ಲೆಯವರು. ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಇವರು, ಖತಾರ್‌ನ ಪ್ರತಿಷ್ಠಿತ ಆಸ್ಪೈರ್ ಅಕಾಡೆಮಿಯ ಪ್ರತಿಭೆ. ಇದೀಗ ಖತಾರ್ ಪರ ವಿಶ್ವಕಪ್​ ಆಡಲು ಸಜ್ಜಾಗಿದ್ದಾರೆ.

ಸ್ಯಾಮ್ಯುಯೆಲ್ ಮುಟುಸಾಮಿ (ಡಿಆರ್ ಕಾಂಗೋ): ಪ್ಯಾರಿಸ್‌ನಲ್ಲಿ ಜನಿಸಿದ 29 ವರ್ಷದ ಸ್ಯಾಮ್ಯುಯೆಲ್ ಅವರ ತಾಯಿ ಕಾಂಗೋ ದೇಶದವರಾದರೆ, ತಂದೆ ಭಾರತೀಯ (ತಮಿಳು) ಮೂಲದ ಗ್ವಾಡೆಲೋಪ್ ನಿವಾಸಿಯಾಗಿದ್ದಾರೆ. ಯುರೋಪಿಯನ್ ಫುಟ್‌ಬಾಲ್‌ನಲ್ಲಿ ದೀರ್ಘಕಾಲದ ಅನುಭವ ಹೊಂದಿರುವ ಇವರು, ಫ್ರಾನ್ಸ್‌ನ ಪ್ರಸಿದ್ಧ ಲೀಗ್ 1 ಕ್ಲಬ್ ಆದ ‘ನಾಂಟೆಸ್’ ಪರ 140 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ಇದೀಗ ಕಾಂಗೋ ಪರ ಮಿಡ್ ಫೀಲ್ಡರ್ ಆಗಿ ಫುಟ್​ಬಾಲ್ ವಿಶ್ವಕಪ್ ಆಡಲು ಸಜ್ಜಾಗಿ ನಿಂತಿದ್ದಾರೆ.

ಇದನ್ನೂ ಓದಿ: RCB ಆಟಗಾರನ ನಿಧಾನಗತಿಯ ಬ್ಯಾಟಿಂಗ್: ಆದರೂ ರೋಚಕ ಗೆಲುವು!

ಫಿಫಾ ವಿಶ್ವಕಪ್ ಯಾವಾಗ ಶುರು?

ಜಾಗತಿಕ ಫುಟ್‌ಬಾಲ್ ಮಹಾಸಮರಕ್ಕೆ ನಾಳೆ (ಜೂನ್ 11) ಚಾಲನೆ ಸಿಗಲಿದೆ. ಜೂನ್ 11 ರಿಂದ ಜುಲೈ 19, 2026 ರವರೆಗೆ ನಡೆಯಲಿರುವ ಈ ಟೂರ್ನಿಗೆ ಅಮೆರಿಕ, ಮೆಕ್ಸಿಕೋ ಹಾಗೂ ಕೆನಡಾ ಆತಿಥ್ಯವಹಿಸಲಿದೆ. ಇನ್ನು ಈ ಟೂರ್ನಿಯ ಪಂದ್ಯಗಳನ್ನು ಭಾರತೀಯ ಅಭಿಮಾನಿಗಳು  Zee5 (ಝೀ5) ಆಪ್ ಮೂಲಕ ಲೈವ್ ವೀಕ್ಷಿಸಬಹುದು.

 

Published On - 11:10 am, Wed, 10 June 26

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us