ಮಿಂಚಿನಾಟದೊಂದಿಗೆ ಹೊಸ ಇತಿಹಾಸ ಬರೆದ ಎಂಬಾಪೆ!

Kylian Mbappe: ಫಿಫಾ ವಿಶ್ವಕಪ್ 2026 ರಲ್ಲಿ ಫ್ರಾನ್ಸ್​ ನಾಯಕ ಕಿಲಿಯನ್ ಎಂಬಾಪ್ಪೆ ಶುಭಾರಂಭ ಮಾಡಿದ್ದಾರೆ. ಅದು ಸಹ ಎರಡು ಭರ್ಜರಿ ಗೋಲುಗಳೊಂದಿಗೆ. ಈ ಗೋಲುಗಳ ಮೂಲಕ ಎಂಬಾಪ್ಪೆ ಫ್ರಾನ್ಸ್ ಪರ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೆ ವಿಶ್ವ ದಾಖಲೆಯತ್ತ ದಾಪುಗಾಲಿಟ್ಟಿದ್ದಾರೆ.

ಮಿಂಚಿನಾಟದೊಂದಿಗೆ ಹೊಸ ಇತಿಹಾಸ ಬರೆದ ಎಂಬಾಪೆ!
Kylian Mbappe
Image Credit source: wtop.com

Updated on: Jun 17, 2026 | 9:46 AM

FIFA World Cup 2026: ಫಿಫಾ ವಿಶ್ವಕಪ್‌ನ ಗ್ರೂಪ್ ‘ಐ’ (Group I) ಆರಂಭಿಕ ಪಂದ್ಯದಲ್ಲಿ ಫ್ರಾನ್ಸ್ ತಂಡವು ಸೆನೆಗಲ್ ವಿರುದ್ಧ 3–1 ಗೋಲುಗಳ ಭರ್ಜರಿ ಗೆಲುವು ದಾಖಲಿಸಿದೆ. ಫ್ರಾನ್ಸ್ ತಂಡದ ನಾಯಕ ಕಿಲಿಯನ್ ಎಂಬಾಪೆ (Kylian Mbappé) ಈ ಪಂದ್ಯದಲ್ಲಿ ಎರಡು ಅದ್ಭುತ ಗೋಲುಗಳನ್ನು ಗಳಿಸುವ ಮೂಲಕ ತಮ್ಮ ದೇಶದ ಪರ ಹೊಸ ಇತಿಹಾಸ ಬರೆದಿದ್ದಾರೆ.

ನ್ಯೂಯಾರ್ಕ್ ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ನಡೆದ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ, 27 ವರ್ಷದ ಕಿಲಿಯನ್ ಎಂಬಾಪೆ ಫ್ರಾನ್ಸ್ ಪರ ಅತಿ ಹೆಚ್ಚು ಗೋಲು ಗಳಿಸಿದ ಸಾರ್ವಕಾಲಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ ಅವರು ಮಾಜಿ ಆಟಗಾರ ಒಲಿವಿಯರ್ ಗಿರೌಡ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಪಂದ್ಯದ ಮುಖ್ಯಾಂಶಗಳು:

  • ಮೊದಲಾರ್ಧದಲ್ಲಿ ಸೆನೆಗಲ್ ಮೇಲುಗೈ: ಪಂದ್ಯದ ಮೊದಲಾರ್ಧದಲ್ಲಿ ಆಫ್ರಿಕಾದ ಬಲಿಷ್ಠ ತಂಡವಾದ ಸೆನೆಗಲ್ ಭರ್ಜರಿ ಪೈಪೋಟಿ ನೀಡಿತು. ಫ್ರಾನ್ಸ್‌ನ ಮುಂಚೂಣಿ ಆಟಗಾರರಿಗೆ ಗೋಲು ಗಳಿಸಲು ಸೆನೆಗಲ್‌ನ ರಕ್ಷಣಾ ವಿಭಾಗ ಅವಕಾಶ ನೀಡಲಿಲ್ಲ.
  • ಎಂಬಾಪೆ ಮಿಂಚಿನಾಟ: ಪಂದ್ಯದ 66ನೇ ನಿಮಿಷದಲ್ಲಿ ಮೈಕೆಲ್ ಒಲಿಸೆ ನೀಡಿದ ಅದ್ಭುತ ಪಾಸ್ ಅನ್ನು ಬಳಸಿಕೊಂಡ ಕಿಲಿಯನ್ ಎಂಬಾಪೆ, ಸೆನೆಗಲ್‌ನ ಗೋಲ್‌ಕೀಪರ್ ಎಡ್ವರ್ಡ್ ಮೆಂಡಿ ಅವರನ್ನು ವಂಚಿಸಿ ಫ್ರಾನ್ಸ್ ಪರ ಮೊದಲ ಗೋಲು ದಾಖಲಿಸಿದರು.
  • ಬಾರ್ಕೋಲಾ ಸಾಥ್: ಪಂದ್ಯದ 82ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಬಂದ ಬ್ರಾಡ್ಲಿ ಬಾರ್ಕೋಲಾ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿ ಫ್ರಾನ್ಸ್‌ನ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು.
  • ಮೊದಲ ಗೋಲು: ಪಂದ್ಯದ ಇಂಜುರಿ ಟೈಮ್‌ನಲ್ಲಿ (90+5′ ನಿಮಿಷ) ಸೆನೆಗಲ್‌ನ 18 ವರ್ಷದ ಯುವ ಆಟಗಾರ ಇಬ್ರಾಹಿಂ ಎಂಬಾಯೆ ಒಂದು ಗೋಲು ಗಳಿಸಿ ಪಂದ್ಯದ ರೋಚಕತೆ ಹೆಚ್ಚಿಸಿದರು.
  • ಡಲಬ್ ಗೋಲು: ಸೆನೆಗೆಲ್ ಗೋಲು ದಾಖಲಿಸಿದ ಬೆನ್ನಲ್ಲೇ (90+6′ ನಿಮಿಷ) ಕಿಲಿಯನ್ ಎಂಬಾಪೆ 30 ಯಾರ್ಡ್ ದೂರದಿಂದ ಸಿಡಿಸಿದ ರಾಕೆಟ್​ನಂತಹ ಲಾಂಗ್-ರೇಂಜ್ ಗೋಲು ಫ್ರಾನ್ಸ್‌ಗೆ 3-1 ಅಂತರದ ಐತಿಹಾಸಿಕ ಜಯ ತಂದುಕೊಟ್ಟಿತು.

ಕಿಲಿಯನ್ ಎಂಬಾಪೆ ದಾಖಲೆಗಳು:

ಈ ಪಂದ್ಯದಲ್ಲಿ ದಾಖಲಿಸಿದ ಎರಡು ಗೋಲುಗಳೊಂದಿಗೆ ಕಿಲಿಯನ್ ಎಂಬಾಪೆ ಫ್ರಾನ್ಸ್ ಪರ ಅತ್ಯಧಿಕ ಗೋಲು ದಾಖಲಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಒಲಿವಿಯರ್ ಗಿರೌಡ್ ಹೆಸರಿನಲ್ಲಿತ್ತು.

  • ಫ್ರಾನ್ಸ್ ಪರ 137 ಪಂದ್ಯಗಳನ್ನಾಡಿರುವ ಒಲಿವಿಯರ್ ಗಿರೌಡ್ ಒಟ್ಟು 57 ಗೋಲು ದಾಖಲಿಸಿ ದಾಖಲೆ ನಿರ್ಮಿಸಿದ್ದರು.
  • ಫ್ರಾನ್ಸ್ ಪರ ಈವರೆಗೆ 99 ಮ್ಯಾಚ್​ಗಳನ್ನಾಡಿರುವ ಕಿಲಿಯನ್ ಎಂಬಾಪೆ 58 ಗೋಲುಗಳೊಂದಿಗೆ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಇನ್ನು ಸೆನೆಗೆಲ್ ವಿರುದ್ಧ ಬಾರಿಸಿದ ಎರಡು ಗೋಲುಗಳೊಂದಿಗೆ ಕಿಲಿಯನ್ ಎಂಬಾಪೆ ಅವರ ಒಟ್ಟು ವಿಶ್ವಕಪ್ ಗೋಲುಗಳ ಸಂಖ್ಯೆ 14ಕ್ಕೆ ಏರಿದೆ. ಈ ಮೂಲಕ ಅವರು ಜರ್ಮನಿಯ ದಿಗ್ಗಜ ಗೆರ್ಡ್ ಮುಲ್ಲರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಇದನ್ನೂ ಓದಿ: ಫಿಫಾ ವಿಶ್ವಕಪ್ ಅಂಗಳದಲ್ಲಿ ನಾಲ್ವರು ಭಾರತೀಯ ಮೂಲದವರು!

ಮುಂಬರುವ ಮ್ಯಾಚ್​ಗಳಲ್ಲಿ ಎಂಬಾಪೆ 3 ಗೋಲುಗಳನ್ನು ದಾಖಲಿಸಿದರೆ ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತೀ ಹೆಚ್ಚು ಗೋಲ್ ಬಾರಿಸಿದ ಆಟಗಾರ ಎನಿಸಿಕೊಳ್ಳಬಹುದು. ಸದ್ಯ ಈ ಪಟ್ಟಿಯಲ್ಲಿ ಜರ್ಮನಿಯ ಮಿರೋಸ್ಲಾವ್ ಕ್ಲೋಸ್ ಮೊದಲ ಸ್ಥಾನದಲ್ಲಿದ್ದಾರೆ. ಫಿಫಾ ವಿಶ್ವಕಪ್​ನಲ್ಲಿ 24 ಪಂದ್ಯಗಳನ್ನಾಡಿರುವ ಕ್ಲೋಸ್ ಒಟ್ಟು 16 ಗೋಲು ದಾಖಲಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

 

Published On - 8:01 am, Wed, 17 June 26

Follow Us