ಮೊದಲ ಗೇಮ್ ಸೋತರೂ ಛಲ ಬಿಡಲಿಲ್ಲ; ಜಪಾನ್‌ನಲ್ಲಿ ಚಾಂಪಿಯನ್ ಆದ ಲಕ್ಷ್ಯ ಸೇನ್

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಕುಮಾಮೊಟೊ ಮಾಸ್ಟರ್ಸ್ ಜಪಾನ್ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ. ಫೈನಲ್‌ನಲ್ಲಿ ಜಪಾನ್‌ನ ಕೋಕಿ ವಟನಾಬೆ ವಿರುದ್ಧ ರೋಚಕ ಕಮ್‌ಬ್ಯಾಕ್ ಗೆಲುವು ಸಾಧಿಸಿದ ಲಕ್ಷ್ಯ, ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾದರು. ಇದು ಅವರ ಸತತ ಎರಡನೇ ಬಿಡಬ್ಲ್ಯುಎಫ್ ಸೂಪರ್ 500 ಪ್ರಶಸ್ತಿಯಾಗಿದೆ.

ಮೊದಲ ಗೇಮ್ ಸೋತರೂ ಛಲ ಬಿಡಲಿಲ್ಲ; ಜಪಾನ್‌ನಲ್ಲಿ ಚಾಂಪಿಯನ್ ಆದ ಲಕ್ಷ್ಯ ಸೇನ್
Lakshya Sen
Image Credit source: PTI

Updated on: Nov 15, 2026 | 5:28 PM

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಜಪಾನ್‌ನಲ್ಲಿ ನಡೆದ ಕುಮಾಮೊಟೊ ಮಾಸ್ಟರ್ಸ್ ಜಪಾನ್ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಆಗುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ವಿಶ್ವ ಶ್ರೇಯಾಂಕದಲ್ಲಿ 13ನೇ ಸ್ಥಾನದಲ್ಲಿರುವ ಲಕ್ಷ್ಯ ಸೇನ್, ಫೈನಲ್ ಪಂದ್ಯದಲ್ಲಿ ಜಪಾನ್‌ನ ಕೋಕಿ ವಟನಾಬೆ ಅವರನ್ನು ಮಣಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಸುಮಾರು ಒಂದು ಗಂಟೆ ನಾಲ್ಕು ನಿಮಿಷಗಳ ಕಾಲ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಲಕ್ಷ್ಯ ಸೇನ್ ಆರಂಭದಲ್ಲಿ ಹಿನ್ನಡೆ ಅನುಭವಿಸಿದರು. ಮೊದಲ ಗೇಮ್‌ನಲ್ಲಿ ಸೋತರೂ ಎದೆಗುಂದದೆ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದ ಅವರು, ಅಂತಿಮವಾಗಿ 13-21, 21-18, 21-14ರ ಅಂತರದಲ್ಲಿ ಗೆಲುವು ಸಾಧಿಸಿದರು. ಈ ಮೂಲಕ 2023ರಲ್ಲಿ ಆರಂಭವಾದ ಕುಮಾಮೊಟೊ ಮಾಸ್ಟರ್ಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಛಲ ಬಿಡದ ಲಕ್ಷ್ಯ ಸೇನ್

ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಕಣಕ್ಕಿಳಿದ ಜಪಾನ್ ಆಟಗಾರ ಕೋಕಿ ವಟನಾಬೆ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಪರಿಣಾಮ, ಮೊದಲ ಗೇಮ್‌ನಲ್ಲಿ ಲಕ್ಷ್ಯ ಸೇನ್‌ಗೆ ತೀವ್ರ ಪೈಪೋಟಿ ನೀಡಿದ ವಟನಾಬೆ 21-13ರ ಅಂತರದಲ್ಲಿ ಸುಲಭವಾಗಿ ಗೆಲುವು ಸಾಧಿಸಿದರು. ಆದರೆ, ಎರಡನೇ ಗೇಮ್‌ನಲ್ಲಿ ಲಕ್ಷ್ಯ ಸೇನ್ ತಮ್ಮ ಆಟದ ವೈಖರಿಯನ್ನೇ ಬದಲಿಸಿಕೊಂಡರು. ನಿಖರವಾದ ಸ್ಮ್ಯಾಶ್‌ಗಳು ಮತ್ತು ಚುರುಕಿನ ಕೋರ್ಟ್ ಕವರೇಜ್ ಮೂಲಕ ಎದುರಾಳಿಗೆ ತಿರುಗೇಟು ನೀಡಿದರು. ಪರಿಣಾಮ, ಎರಡನೇ ಗೇಮ್ ಅನ್ನು 21-18ರಿಂದ ಗೆದ್ದು ಪಂದ್ಯವನ್ನು 1-1ರಿಂದ ಸಮಬಲಗೊಳಿಸಿದರು.

Loading...

ನಿರ್ಣಾಯಕ ಮೂರನೇ ಗೇಮ್‌ನಲ್ಲಿ ಲಕ್ಷ್ಯ ಸೇನ್ ಆರಂಭದಿಂದಲೇ ಮೇಲುಗೈ ಸಾಧಿಸಿದರು. ವಿರಾಮದ ವೇಳೆಗೆ 11-7ರ ಮುನ್ನಡೆ ಪಡೆದ ಅವರು, ಬಳಿಕ ತಮ್ಮ ಆಟದ ವೇಗವನ್ನು ಮತ್ತಷ್ಟು ಹೆಚ್ಚಿಸಿದರು. ಒಂದು ಹಂತದಲ್ಲಿ ಒಂಬತ್ತು ಪಾಯಿಂಟ್‌ಗಳ ಮುನ್ನಡೆ ಗಳಿಸುವ ಮೂಲಕ ವಟನಾಬೆ ಅವರಿಗೆ ಕಮ್‌ಬ್ಯಾಕ್ ಮಾಡುವ ಅವಕಾಶವನ್ನೇ ನೀಡಲಿಲ್ಲ. ಅಂತಿಮವಾಗಿ 21-14ರಿಂದ ಮೂರನೇ ಗೇಮ್ ಗೆದ್ದು ಪ್ರಶಸ್ತಿಗೆ ಮುತ್ತಿಟ್ಟರು.

ಸೇಡು ತೀರಿಸಿಕೊಂಡ ಲಕ್ಷ್ಯ

ಈ ಗೆಲುವಿನ ಮೂಲಕ ಲಕ್ಷ್ಯ ಸೇನ್ ಈ ವರ್ಷದ ಆರಂಭದಲ್ಲಿ ಸಿಂಗಾಪುರ ಓಪನ್ ಮತ್ತು ಜಪಾನ್ ಓಪನ್ ಟೂರ್ನಿಗಳಲ್ಲಿ ಕೋಕಿ ವಟನಾಬೆ ವಿರುದ್ಧ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ. ಈ ಗೆಲುವಿನೊಂದಿಗೆ ವಟನಾಬೆ ವಿರುದ್ಧದ ಮುಖಾಮುಖಿ ದಾಖಲೆ 5-3ಕ್ಕೆ ಸುಧಾರಿಸಿದೆ. ಇನ್ನು ಕುಮಾಮೊಟೊ ಮಾಸ್ಟರ್ಸ್ ಪ್ರಶಸ್ತಿ ಗೆಲ್ಲುವ ಹಾದಿಯಲ್ಲಿ ಲಕ್ಷ್ಯ ಸೇನ್ ಸತತ ಐದು ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದಾರೆ. ವಿಶೇಷವೆಂದರೆ, ಇದು ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಸೂಪರ್ 500 ಟೂರ್ನಿಯಲ್ಲಿ ಲಕ್ಷ್ಯ ಸೇನ್ ಗೆದ್ದ ಸತತ ಎರಡನೇ ಪ್ರಶಸ್ತಿಯಾಗಿದೆ. ಇದಕ್ಕೂ ಮೊದಲು ಜರ್ಮನಿಯಲ್ಲಿ ನಡೆದ ಹೈಲೊ ಓಪನ್ ಟೂರ್ನಿಯಲ್ಲೂ ಅವರು ಚಾಂಪಿಯನ್ ಆಗಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us