ಅದು ಫುಟ್‌ಬಾಲ್‌ಗೆ ಸಂಬಂಧಿಸಿದ್ದಲ್ಲ: ಕಣ್ಣೀರಿಟ್ಟ ಲಿಯೋನೆಲ್ ಮೆಸ್ಸಿ!

FIFA World Cup 2026: ಅಲ್ಜೀರಿಯಾ ವಿರುದ್ಧದ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ಬಾರಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನೊಂದಿಗೆ ಅರ್ಜೆಂಟೀನಾ ತಂಡವು 3-0 ಅಂತರದಿಂದ ಜಯಭೇರಿ ಬಾರಿಸಿದೆ. ಈ ಗೆಲುವಿನೊಂದಿಗೆ ಹಾಲಿ ಚಾಂಪಿಯನ್ ತಂಡ ಫಿಫಾ ವಿಶ್ವಕಪ್ 2026 ರಲ್ಲಿ ಶುಭಾರಂಭ ಮಾಡಿದೆ.

ಅದು ಫುಟ್‌ಬಾಲ್‌ಗೆ ಸಂಬಂಧಿಸಿದ್ದಲ್ಲ: ಕಣ್ಣೀರಿಟ್ಟ ಲಿಯೋನೆಲ್ ಮೆಸ್ಸಿ!
Lionel Messi
Image Credit source: FIFA

Updated on: Jun 17, 2026 | 12:39 PM

ಫಿಫಾ ವಿಶ್ವಕಪ್​ನ 19ನೇ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿ ಇತಿಹಾಸ ನಿರ್ಮಿಸಿದ ಲಿಯೋನೆಲ್ ಮೆಸ್ಸಿ (Lionel Messi) ಮೈದಾನದಲ್ಲೇ ಕಣ್ಣೀರೀಟಿದ್ದಾರೆ. ಅಲ್ಜೀರಿಯಾ ವಿರುದ್ಧದ ಈ ಪಂದ್ಯದಲ್ಲಿ ಅರ್ಜೆಂಟೀನಾ ತಂಡವನ್ನು ಮುನ್ನಡೆಸಿದ ಮೆಸ್ಸಿ 17ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಿಸಿದ್ದರು.

ಈ ಗೋಲಿನ ಬೆನ್ನಲ್ಲೇ ಎಂದಿನ ಶೈಲಿಯಲ್ಲಿ ಸಂಭ್ರಮಾಚರಣೆ ಮುಗಿಸುತ್ತಿದ್ದಂತೆ, ವೈಯಕ್ತಿಕ ಭಾವನೆಗಳನ್ನು ತಡೆಯಲಾರದೆ ಭಾವುಕರಾದರು. ಈ ವೇಳೆ ಅವರು ತಮ್ಮ ಜೆರ್ಸಿಯಿಂದ ಕಣ್ಣೀರು ಒರೆಸಿಕೊಳ್ಳುತ್ತಿರುವ ದೃಶ್ಯಗಳು ಟಿವಿ ಲೈವ್ ಬ್ರಾಡ್‌ಕಾಸ್ಟ್‌ನ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದವು.

ಮ್ಯಾಚ್ ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿದ ಲಿಯೋನೆಲ್ ಮೆಸ್ಸಿ, “ಹೌದು, ಮೊದಲ ಗೋಲು ಗಳಿಸಿದ ನಂತರ ನಾನು ಅತ್ತಿರುವುದು ನಿಜ. ಆದರೆ ಅದು ಫುಟ್‌ಬಾಲ್‌ಗೆ ಸಂಬಂಧಿಸದ ವಿಷಯ ” ಎಂದಿದ್ದಾರೆ.

“ನಾನು ಕಳೆದ ಕೆಲವು ದಿನಗಳಿಂದ ತೀವ್ರ ವೈಯಕ್ತಿಕ ಕಠಿಣ ದಿನಗಳನ್ನು ಎದುರಿಸುತ್ತಿದ್ದೇನೆ. ನನ್ನ ಇಡೀ ತಂಡ ಮತ್ತು ಸಹ ಆಟಗಾರರು ಈ ಕಷ್ಟದ ಸಮಯದಲ್ಲಿ ನನ್ನ ಬೆನ್ನಿಗೆ ನಿಂತಿದ್ದಾರೆ. ಅವರು ನನಗೆ ನಿರಂತರವಾಗಿ ಧೈರ್ಯ ತುಂಬಿದ್ದಾರೆ. ಅವರೆಲ್ಲರಿಗೂ ನಾನು ಸದಾ ಕೃತಜ್ಞನಾಗಿರುತ್ತೇನೆ” ಎಂದು ಮೆಸ್ಸಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ಇದಾಗ್ಯೂ ಮೆಸ್ಸಿ ಕಣ್ಣೀರಿನ ಹಿಂದಿರುವ ಕಾರಣಗಳನ್ನು ಬಹಿರಂಗಪಡಿಸಿಲ್ಲ. ಅಲ್ಲದೆ ಅದು ಫುಟ್​ಬಾಲ್​ಗೆ ಸಂಬಂಧಿಸದ ವಿಷಯ ಆಗದೇ ಇರುವುದರಿಂದ, ಆ ವಿಚಾರವನ್ನು ಹಂಚಿಕೊಳ್ಳಲು ಇಚ್ಛಿಸುತ್ತಿಲ್ಲ ಎಂದು ಮೆಸ್ಸಿ ತಿಳಿಸಿದ್ದಾರೆ.

ಮೈದಾನದಲ್ಲಿ ದಾಖಲೆಗಳ ಸುರಿಮಳೆ:

ವೈಯಕ್ತಿಕ ಜೀವನದಲ್ಲಿ ಸಂಕಷ್ಟವನ್ನು ಎದುರಿಸುತ್ತಿದ್ದರೂ, ಮೈದಾನದಲ್ಲಿ ಮೆಸ್ಸಿ ಅವರ ಆಟಕ್ಕೆ ಯಾವುದೇ ಅಡ್ಡಿಯಾಗಲಿಲ್ಲ. ಇದಕ್ಕೆ ಸಾಕ್ಷಿ ಮೊದಲ ಪಂದ್ಯದಲ್ಲೇ ಮೂಡಿಬಂದ ದಾಖಲೆಗಳು.

  • ಮೊದಲ ವಿಶ್ವಕಪ್ ಹ್ಯಾಟ್ರಿಕ್: ಮೆಸ್ಸಿ ಪಂದ್ಯದ 17, 60 ಮತ್ತು 76ನೇ ನಿಮಿಷಗಳಲ್ಲಿ ಗೋಲು ಗಳಿಸುವ ಮೂಲಕ ತಮ್ಮ ಸುದೀರ್ಘ ವೃತ್ತಿಜೀವನದ ಮೊದಲ ವಿಶ್ವಕಪ್ ಹ್ಯಾಟ್ರಿಕ್ ಸಾಧನೆ ಮಾಡಿದರು.
  • ಸರ್ವಕಾಲಿಕ ದಾಖಲೆ: ಈ 3 ಗೋಲುಗಳೊಂದಿಗೆ ಮೆಸ್ಸಿ ತಮ್ಮ ಒಟ್ಟಾರೆ ವಿಶ್ವಕಪ್ ಗೋಲುಗಳ ಸಂಖ್ಯೆಯನ್ನು 16ಕ್ಕೇರಿಸಿದರು. ಈ ಮೂಲಕ ಜರ್ಮನಿಯ ಮಿರೋಸ್ಲಾವ್ ಕ್ಲೋಸ್ ಅವರ ಸರ್ವಕಾಲಿಕ ಗರಿಷ್ಠ ಗೋಲುಗಳ ದಾಖಲೆಯನ್ನು ಸಮಗಟ್ಟಿದ್ದಾರೆ.
  • ವಯಸ್ಸಿನ ದಾಖಲೆ: 38ನೇ ವಯಸ್ಸಿನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡುವ ಮೂಲಕ ವಿಶ್ವಕಪ್ ಇತಿಹಾಸದಲ್ಲೇ ಈ ಸಾಧನೆ ಮಾಡಿದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
  • 6ನೇ ವಿಶ್ವಕಪ್: ಅಲ್ಜೀರಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ಸತತ 6 ಫಿಫಾ ವಿಶ್ವಕಪ್ ಆವೃತ್ತಿಗಳಲ್ಲಿ ಆಡಿದ ವಿಶ್ವದ ಮೊದಲ ಫುಟ್‌ಬಾಲ್ ಆಟಗಾರ ಎಂಬ ದಾಖಲೆ ಬರೆದರು.

ಇದನ್ನೂ ಓದಿ: ಬಿಬಿಎಲ್​ನಲ್ಲಿ ‘ಪತ್ಯೇಕ’ವಾಗಿಯೇ ಕಣಕ್ಕಿಳಿಯಲಿವೆ ‘ಮೆಲ್ಬೋರ್ನ್’ ತಂಡಗಳು..!

ಒಟ್ಟಾರೆಯಾಗಿ, ವೈಯಕ್ತಿಕ ನೋವಿನ ನಡುವೆಯೂ ದೇಶಕ್ಕಾಗಿ ಮೈದಾನದಲ್ಲಿ ಸರ್ವಸ್ವವನ್ನೂ ಧಾರೆ ಎರೆದ ಲಿಯೋನೆಲ್ ಮೆಸ್ಸಿ, ಕೇವಲ ಒಬ್ಬ ಶ್ರೇಷ್ಠ ಆಟಗಾರ ಮಾತ್ರವಲ್ಲ, ಅಪ್ರತಿಮ ನಾಯಕ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

 

 

 

Loading...
Unable to load recommendations.
Follow Us