ಸ್ಪೇನ್‌ನ ಮನೋಲೋ ಮಾರ್ಕ್ವೆಜ್ ಅವರನ್ನು ಭಾರತೀಯ ಪುರುಷರ ಫುಟ್ಬಾಲ್ ತಂಡದ ನೂತನ ಕೋಚ್ ಆಗಿ ನೇಮಿಸಲಾಗಿದೆ. ಪ್ರಸ್ತುತ ಅವರು ಇಂಡಿಯನ್ ಸೂಪರ್ ಲೀಗ್ನಲ್ಲಿ ಆಡುತ್ತಿರುವ ಎಫ್‌ಸಿ ಗೋವಾ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಭಾರತ ಫುಟ್ಬಾಲ್ ತಂಡದ ಸಾರಥಿಯಾಗಲಿದ್ದಾರೆ. ಇಂದು ನಡೆದ ಫುಟ್ಬಾಲ್ ಫೆಡರೇಶನ್‌ನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮನೋಲೋ ಮಾರ್ಕ್ವೆಜ್ ಒಪ್ಪಂದದ ಪ್ರಕಾರ 2024- 25 ರ ಆವೃತ್ತಿಯಲ್ಲಿ ಎಫ್‌ಸಿ ಗೋವಾ ತಂಡದಲ್ಲೂ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದು, ಇತ್ತ ಭಾರತ ಫುಟ್ಬಾಲ್ ತಂಡಕ್ಕೂ ತರಬೇತಿ ನೀಡಲಿದ್ದಾರೆ. ಎಫ್‌ಸಿ ಗೋವಾ ತಂಡದೊಂದಿಗಿನ ಒಪ್ಪಂದ ಮುಗಿದ ಬಳಿಕ ಅವರು ಪೂರ್ಣ ಪ್ರಮಾಣದಲ್ಲಿ ಭಾರತ ತಂಡಕ್ಕೆ ತರಬೇತುದಾರರಾಗಲಿದ್ದಾರೆ.
ವಾಸ್ತವವಾಗಿ ಎಐಎಫ್‌ಎಫ್ ಕಳೆದ ತಿಂಗಳಷ್ಟೇ ಮಾಜಿ ಕೋಚ್ ಇಗೊರ್ ಸ್ಟಿಮಾಚ್ ಅವರನ್ನು ಈ ಹುದ್ದೆಯಿಂದ ತೆಗೆದುಹಾಕಿತ್ತು. ಸ್ಟಿಮಾಚ್ ಅವರ ನೇತೃತ್ವದಲ್ಲಿ ಭಾರತ ಫುಟ್ಬಾಲ್ ತಂಡ ವಿಶ್ವಕಪ್ ಅರ್ಹತಾ ಸುತ್ತಿನ ಮೂರನೇ ಸುತ್ತನ್ನು ತಲುಪಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸ್ಟಿಮಾಚ್ ಅವರನ್ನು ಈ ಹುದ್ದೆಯಿಂದ ಕೆಳಗಿಳಿಸಿ, ಮುಖ್ಯ ಕೋಚ್ಗಾಗಿಹುಡುಕಾಟ ನಡೆಸಿತ್ತು. ಇದೀಗ ಕಳೆದ ನಾಲ್ಕು ವರ್ಷಗಳಿಂದ ಭಾರತದ ಅಗ್ರ ಲೀಗ್ ಐಎಸ್‌ಎಲ್‌ನಲ್ಲಿ ತರಬೇತಿ ನೀಡುತ್ತಿರುವ ಮಾರ್ಕ್ವೆಜ್ ಅವರನ್ನು ಈ ಸ್ಥಾನಕ್ಕೆ ತಂದುಕೂರಿಸಿದೆ.
ಫೆಡರೇಶನ್ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ, ತಕ್ಷಣವೇ ಜಾರಿಗೆ ಬರುವಂತೆ 55 ವರ್ಷದ ಮಾರ್ಕ್ವೆಜ್ ಭಾರತ ಫುಟ್ಬಾಲ್ ತಂಡದ ಮುಖ್ಯ ಕೋಚ್ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಅವರನ್ನು ಸ್ವಾಗತಿಸಲು ನಾವು ಸಂತೋಷಪಡುತ್ತೇವೆ. ನಾವು ಅವರ ಜೊತೆ ಬಹಳ ದಿನಗಳಿಂದ ಕೆಲಸ ಮಾಡಲು ಬಯಸಿದ್ದೆವು ಎಂದು ತಿಳಿಸಿದೆ. ಸದ್ಯಕ್ಕೆ ಮಾರ್ಕ್ವೆಜ್ ಅವರ ಅಧಿಕಾರಾವಧಿಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ನೀಡಲ್ಲವಾದರೂ, ಮುಂದಿನ 3 ವರ್ಷಗಳವರೆಗೆ ಅವರು ತಂಡಕ್ಕೆ ತರಬೇತಿ ನೀಡುವ ಸಾಧ್ಯತೆಗಳಿವೆ.
Manolo Marquez appointed head coach of Senior Men’s National Team!
Read full details here 👉🏻 https://t.co/iUUMAwB8vk#IndianFootball ⚽️ pic.twitter.com/Ni9beyul8B
— Indian Football Team (@IndianFootball) July 20, 2024
ಭಾರತ ರಾಷ್ಟ್ರೀಯ ಫುಟ್ಬಾಲ್ ತಂಡದ ಕೋಚ್ ಆಗಿ ನೇಮಕಗೊಂಡ ನಂತರ ಹರ್ಷವ್ಯಕ್ತಪಡಿಸಿರುವ ಮನೋಲೊ ಮಾರ್ಕ್ವೆಜ್, ‘ಇದು ನನಗೆ ಗೌರವವಾಗಿದೆ. ನಾನು ಭಾರತವನ್ನು ನನ್ನ ಎರಡನೇ ಮನೆ ಎಂದು ಪರಿಗಣಿಸುತ್ತೇನೆ. ನಾನು ಎಫ್‌ಸಿ ಗೋವಾ ಕ್ಲಬ್‌ನ ಮುಖ್ಯ ಕೋಚ್ ಆಗಿದ್ದರೂ ನನಗೆ ವಿನಾಯಿತಿ ನೀಡಿದ್ದಕ್ಕಾಗಿ ನಾನು ಎಫ್‌ಸಿ ಗೋವಾ ಕ್ಲಬ್‌ಗೆ ಕೃತಜ್ಞನಾಗಿದ್ದೇನೆ ಎಂದಿದ್ದಾರೆ.
ಮಾರ್ಕ್ವೆಜ್ 2020 ರಿಂದ ಇಂಡಿಯನ್ ಸೂಪರ್ ಲೀಗ್ನ ಭಾಗವಾಗಿದ್ದಾರೆ. ಈ ಸಮಯದಲ್ಲಿ ಅವರು ಎರಡು ವಿಭಿನ್ನ ಕ್ಲಬ್‌ಗಳೊಂದಿಗೆ ಕೆಲಸ ಮಾಡಿದ್ದಾರೆ. 2020 ರಲ್ಲಿ ಹೈದರಾಬಾದ್ ಎಫ್‌ಸಿಯ ತರಬೇತುದಾರರಾಗಿ ಆಯ್ಕೆಯಾದ ಅವರು 2023 ರವರೆಗೆ ಈ ತಂಡದ ಭಾಗವಾಗಿದ್ದರು. ಅವರ ಅವಧಿಯಲ್ಲಿ, ಹೈದರಾಬಾದ್ ಸತತ ಎರಡು ಬಾರಿ ಈ ಲೀಗ್ನ ಲೀಗ್ ಶೀಲ್ಡ್ ರೇಸ್‌ನಲ್ಲಿ ರನ್ನರ್ ಅಪ್ ಆದರೆ, ಒಮ್ಮೆ ಚಾಂಪಿಯನ್ ಆಗಿಯೂ ಹೊರಹೊಮ್ಮಿತ್ತು. ಇದಾದ ನಂತರ 2023ರಲ್ಲಿ ಅವರು ಎಪ್ಸಿ ಗೋವಾ ತಂಡವನ್ನು ಸೇರಿದರು. ಇದಕ್ಕೂ ಮೊದಲು, ಅವರು ಸ್ಪೇನ್‌ನ ಲಾ ಲಿಗಾದಲ್ಲಿ ಲಾಸ್ ಪಾಲ್ಮಾಸ್ ಕ್ಲಬ್‌ನ ವ್ಯವಸ್ಥಾಪಕರಾಗಿಯೂ ಕೆಲಸ ಮಾಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ