ಮೆಸ್ಸಿ ಪಡೆಯ ಮಿಂಚಿನಾಟ: ಫೈನಲ್​ಗೆ ಅರ್ಜೆಂಟೀನಾ

FIFA World Cup 2026: ರೋಚಕತೆಯ ರೋಲರ್ ಕೋಸ್ಟರ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿಶ್ವಕಪ್ ಕನಸನ್ನು ನುಚ್ಚುನೂರು ಮಾಡಿದ ಲಿಯೋನೆಲ್ ಮೆಸ್ಸಿ ಪಡೆ, 2-1 ಗೋಲುಗಳ ರೋಮಾಂಚಕ ಜಯದೊಂದಿಗೆ ಫಿಫಾ ವಿಶ್ವಕಪ್ 2026ರ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಮೂಲಕ ಅರ್ಜೆಂಟೀನಾ ತಂಡ ನಾಲ್ಕನೇ ವಿಶ್ವಕಪ್ ಗೆಲ್ಲುವ ಐತಿಹಾಸಿಕ ಹೊಸ್ತಿಲಲ್ಲಿ ಬಂದು ನಿಂತಿದೆ.

ಮೆಸ್ಸಿ ಪಡೆಯ ಮಿಂಚಿನಾಟ: ಫೈನಲ್​ಗೆ ಅರ್ಜೆಂಟೀನಾ
Messi
Image Credit source: FIFA

Updated on: Jul 16, 2026 | 7:41 AM

ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡ ಮತ್ತೊಮ್ಮೆ ತನ್ನ ಸಾಂಪ್ರದಾಯಿಕ ಹಾಗೂ ಕೊನೆಯ ಕ್ಷಣದ ಮಿಂಚಿನಾಟದ ಮೂಲಕ ಫಿಫಾ ವಿಶ್ವಕಪ್ 2026ರ ಫೈನಲ್ ಪ್ರವೇಶಿಸಿದೆ. ಅಮೆರಿಕದ ಅಟ್ಲಾಂಟಾ ಸ್ಟೇಡಿಯಂನಲ್ಲಿ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ಪಡೆ 2-1 ಗೋಲುಗಳ ಅಂತರದಿಂದ ಐತಿಹಾಸಿಕ ಜಯ ದಾಖಲಿಸಿ ಮಹಾ ಫೈನಲ್​ಗೆ ಎಂಟ್ರಿ ಕೊಟ್ಟಿದೆ.

ಮುನ್ನಡೆ ಸಾಧಿಸಿದ್ದ ಇಂಗ್ಲೆಂಡ್:

ಈ ಪಂದ್ಯದ ಮೊದಲಾರ್ಧದಲ್ಲಿ ಎರಡೂ ತಂಡಗಳು ಗೋಲು ಗಳಿಸಲು ಸಾಕಷ್ಟು ಹೆಣಗಾಡಿದವು. ಇಂಗ್ಲೆಂಡ್‌ನ ಬಲಿಷ್ಠ ರಕ್ಷಣಾತ್ಮಕ ಆಟದ ಮುಂದೆ ಅರ್ಜೆಂಟೀನಾ ಆರಂಭದಲ್ಲಿ ಮಂಕಾಗಿತ್ತು. ಪಂದ್ಯದ 55ನೇ ನಿಮಿಷದಲ್ಲಿ ಇಂಗ್ಲೆಂಡ್ ಪರ ಆಂಥೋನಿ ಗಾರ್ಡನ್ ಭರ್ಜರಿ ಗೋಲು ಬಾರಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಆ ಮೂಲಕ ಥಾಮಸ್ ಟುಚೆಲ್ ಮಾರ್ಗದರ್ಶನದ ಇಂಗ್ಲೆಂಡ್ ತಂಡ 1966ರ ನಂತರ ಮೊದಲ ಬಾರಿಗೆ ವಿಶ್ವಕಪ್ ಫೈನಲ್ ತಲುಪುವ ಸನಿಹಕ್ಕೆ ಬಂದಿತ್ತು.

ಕೊನೆಯ ನಿಮಿಷಗಳಲ್ಲಿ ತಿರುಗಿಬಿದ್ದ ಮೆಸ್ಸಿ ಪಡೆ:

ಪಂದ್ಯ ಮುಗಿಯಲು ಕೇವಲ 5 ನಿಮಿಷಗಳು ಬಾಕಿ ಇರುವಾಗ 39 ವರ್ಷದ ಮ್ಯಾಜಿಷಿಯನ್ ಲಿಯೋನೆಲ್ ಮೆಸ್ಸಿ ಪಂದ್ಯದ ಚಿತ್ರಣವನ್ನೇ ಬದಲಿಸಿದರು.

  • ಮೊದಲ ಗೋಲು (85ನೇ ನಿಮಿಷ): ಮೆಸ್ಸಿ ನೀಡಿದ ಅದ್ಭುತ ಕಾರ್ನರ್ ಕಿಕ್ ನೆರವಿನಿಂದ ಎಂಜೊ ಫೆರ್ನಾಂಡಿಸ್ ಚೆಂಡನ್ನು ನೆಟ್‌ಗೆ ತೂರಿಸಿ 1-1 ಗೋಲುಗಳ ಸಮಬಲ ತಂದರು.
  • ಗೆಲುವಿನ ಗೋಲು (92ನೇ ನಿಮಿಷ): ಪಂದ್ಯ ಮುಕ್ತಾಯದ ಇಂಜುರಿ ಸಮಯದಲ್ಲಿ (90+2ನೇ ನಿಮಿಷ) ಮೆಸ್ಸಿ ತಮ್ಮ ಬಲಗಾಲಿನಿಂದ ಮತ್ತೊಂದು ಅದ್ಭುತ ಕ್ರಾಸ್ ಪಾಸ್ ನೀಡಿದರು. ಇದನ್ನು ಚಾಣಾಕ್ಷತನದಿಂದ ಹೆಡರ್ ಮಾಡಿದ ಲೌಟಾರೊ ಮಾರ್ಟಿನೆಝ್ ವಿನ್ನಿಂಗ್ ಗೋಲು ಬಾರಿಸಿ ಅರ್ಜೆಂಟೀನಾಕ್ಕೆ 2-1 ಅದ್ಭುತ ಜಯ ತಂದುಕೊಟ್ಟರು.

ಫೈನಲ್‌ನಲ್ಲಿ ಯಾರು ಎದುರಾಳಿ?

ಈ ಗೆಲುವಿನೊಂದಿಗೆ ಅರ್ಜೆಂಟೀನಾ ಸತತ ಎರಡನೇ ಬಾರಿಗೆ ವಿಶ್ವಕಪ್ ಫೈನಲ್ ತಲುಪಿದ ಸಾಧನೆ ಮಾಡಿದೆ. ಅಲ್ಲದೆ ಮುಂದಿನ ಭಾನುವಾರ ನ್ಯೂಜೆರ್ಸಿಯಲ್ಲಿ ನಡೆಯಲಿರುವ ಮೆಗಾ ಫೈನಲ್ ಪಂದ್ಯದಲ್ಲಿ ಯೂರೋ ಚಾಂಪಿಯನ್ಸ್ ಆದ ಸ್ಪೇನ್ ವಿರುದ್ಧ ಅರ್ಜೆಂಟೀನಾ ಪ್ರಶಸ್ತಿಗಾಗಿ ಸೆಣಸಾಡಲಿದೆ.

ಇದನ್ನೂ ಓದಿ: ಸೋಲರಿಯದ ಸರದಾರರು: 37 ಪಂದ್ಯಗಳ ‘ಸ್ಪೇನ್’ ಸಾಮ್ರಾಜ್ಯ!

ಇದು ಲಿಯೋನೆಲ್ ಮೆಸ್ಸಿ ಅವರ ವೃತ್ತಿಜೀವನದ ಕೊನೆಯ ವಿಶ್ವಕಪ್ ಪಂದ್ಯವಾಗಲಿದ್ದು, ಇಡೀ ವಿಶ್ವವೇ ಈ ರೋಚಕ ಪಂದ್ಯಕ್ಕಾಗಿ ಕಾಯುತ್ತಿದೆ. ಈ ಪಂದ್ಯದ ಮೂಲಕ ಮೆಸ್ಸಿ ಮತ್ತೊಮ್ಮೆ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಳ್ಳಲಿದ್ದಾರಾ ಕಾದು ನೋಡಬೇಕಿದೆ.

 

 

Follow Us