
ಗ್ಲ್ಯಾಸ್ಗೋದಲ್ಲಿ ನಡೆದ 2026ರ ಕಾಮನ್‌ವೆಲ್ತ್ ಗೇಮ್ಸ್ (Commonwealth Games) ಕ್ರೀಡಾಕೂಟಕ್ಕೆ ಅದ್ಧೂರಿ ತೆರೆಬಿದ್ದಿದೆ. 11 ದಿನಗಳ ಕಾಲ ನಡೆದ ಈ ಕ್ರೀಡಾಕೂಟದಲ್ಲಿ ಒಟ್ಟು 74 ದೇಶಗಳು ಭಾಗವಹಿಸಿದ್ದವು. ಅದರಲ್ಲಿ ಆಸ್ಟ್ರೇಲಿಯಾ ಅತ್ಯಧಿಕ 171 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರೆ, 110 ಪದಕ ಗೆದ್ದ ಇಂಗ್ಲೆಂಡ್ಗೆ ಎರಡನೇ ಸ್ಥಾನ ಲಭಿಸಿತು. 3ನೇ ಸ್ಥಾನ ಪಡೆದ ಕೆನಡಾ 63 ಪದಕಗಳನ್ನು ಗೆದ್ದರೆ, ಭಾರತ ಒಟ್ಟು 39 ಪದಕಗಳೊಂದಿಗೆ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿತು. ಕಳೆದ ಆವೃತ್ತಿಗೆ ಹೋಲಿಸಿಕೊಂಡರೆ ಈ ಬಾರಿ ಭಾರತದ ಪ್ರದರ್ಶನ ಕೊಂಚ ನಿರಸವಾಗಿತ್ತು. ಇದಕ್ಕೆ ಕಾರಣ ಈ ಆವೃತ್ತಿಯಲ್ಲಿ ಭಾರತ ಪದಕ ಗೆಲ್ಲುವಂತಹ ಕೆಲವು ಸ್ಪರ್ಧೆಗಳನ್ನು ಕೈಬಿಟ್ಟಿದ್ದು, ಭಾರತದ ಪದಕಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿತ್ತು. ಇನ್ನು ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನ ಎಷ್ಟು ಪದಕಗಳನ್ನು ಗೆದ್ದಿತು ಎಂಬುದನ್ನು ನೋಡುವುದಾದರೆ.. ಪಾಕಿಸ್ತಾನದ ಪದಕಗಳ ಖಾತೆಗೆ ಬಿದ್ದಿದ್ದು, ಏಕೈಕ ಕಂಚಿನ ಪದಕ ಮಾತ್ರ.
ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪಾಕಿಸ್ತಾನದ ಪ್ರದರ್ಶನ ಕಳಪೆಯಾಗಿತ್ತು. ಈ ಕ್ರೀಡಾಕೂಟದಲ್ಲಿ ಪಾಕಿಸ್ತಾನದ ಒಟ್ಟು 21 ಸ್ಪರ್ಧಿಗಳು ಭಾಗವಹಿಸಿದ್ದರು. ಆದರೆ ಪದಕ ಗೆದ್ದಿದ್ದು ಮಾತ್ರ ಏಕೈಕ ಸ್ಪರ್ಧಿ ಮಾತ್ರ. 60ಕೆಜಿ ಮಹಿಳಾ ಬಾಕ್ಸಿಂಗ್ ವಿಭಾಗದಲ್ಲಿ ಮಹಿಳಾ ಬಾಕ್ಸರ್ ಫಾತಿಮಾ ಜಹ್ರಾ ಕಂಚಿನ ಪದಕ ಗೆದ್ದು ಪಾಕಿಸ್ತಾನದ ಮಾನ ಉಳಿಸಿದರು. ಇದರೊಂದಿಗೆ, ಫಾತಿಮಾ ಜಹ್ರಾ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಮೊದಲ ಪಾಕಿಸ್ತಾನಿ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹೀಗಾಗಿಯೇ ಕಾಮನ್‌ವೆಲ್ತ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಫಾತಿಮಾ ದೇಶದ ಧ್ವಜಧಾರಿಯಾಗಿದ್ದರು. ಫಾತಿಮಾ ಅವರ ಕಂಚಿನ ಪದಕದಿಂದಾಗಿ ಪಾಕಿಸ್ತಾನ ಪದಕಗಳ ಪಟ್ಟಿಯಲ್ಲಿ ಜಂಟಿಯಾಗಿ 36 ನೇ ಸ್ಥಾನ ಪಡೆದುಕೊಂಡಿತು. ಇನ್ನು ಇಲ್ಲೊಂದು ಗಮನಿಸಬೇಕಾದ ಸಂಗತಿಯೆಂದರೆ ಫಾತಿಮಾ ಜಹ್ರಾ ಕಂಚಿನ ಪದಕ ಗೆದ್ದ ಇದೇ ವಿಭಾಗದಲ್ಲಿ ಭಾರತದ ಮಹಿಳಾ ಬಾಕ್ಸರ್ ಪ್ರಿಯಾ ಘಂಘಾಸ್ ಚಿನ್ನದ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾದರು.
ಕಳೆದ 36 ವರ್ಷಗಳಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪಾಕಿಸ್ತಾನದ ಅತ್ಯಂತ ಕಳಪೆ ಪ್ರದರ್ಶನ ಇದಾಗಿದೆ. ಈ ಹಿಂದೆ ಅಂದರೆ 1990 ರ ಆವೃತ್ತಿಯಲ್ಲಿ ಪಾಕಿಸ್ತಾನ ಯಾವುದೇ ಪದಕವನ್ನು ಗೆದ್ದಿರಲಿಲ್ಲ. ಉಳಿದಂತೆ 1998 ರಲ್ಲಿ ಏಕೈಕ ಬೆಳ್ಳಿ ಪದಕವನ್ನು ಗೆದ್ದಿತ್ತು. ಇನ್ನು ಕಳೆದ ಆವೃತ್ತಿಯಲ್ಲಿ ಅಂದರೆ 2022 ರ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪಾಕಿಸ್ತಾನ ಎರಡು ಚಿನ್ನ, ಮೂರು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಒಳಗೊಂಡಂತೆ ಏಳು ಪದಕಗಳನ್ನು ಗೆದ್ದಿತ್ತು.
CWG 2026: 13 ಚಿನ್ನ, 39 ಪದಕ; ಭಾರತದ ಕಾಮನ್‌ವೆಲ್ತ್ ಪ್ರಯಾಣ ಅಂತ್ಯ
ಈ ಬಾರಿ ಪಾಕಿಸ್ತಾನದ ಚಿನ್ನದ ಪದಕದ ಭರವಸೆ ಇದ್ದಿದ್ದು ಒಲಿಂಪಿಕ್ಸ್ ಚಾಂಪಿಯನ್ ಅರ್ಷದ್ ನದೀಮ್ ಅವರ ಮೇಲೆ. ಹೀಗಾಗಿ ಅವರು ಉದ್ಘಾಟನಾ ಸಮಾರಂಭದಲ್ಲಿ ಪಾಕಿಸ್ತಾನದ ಧ್ವಜಧಾರಿಯಾಗಿದ್ದರು. ಆದರೆ ನದೀಮ್ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ 77.41 ಮೀಟರ್ ಅತ್ಯುತ್ತಮ ಎಸೆತದೊಂದಿಗೆ ಒಂಬತ್ತನೇ ಸ್ಥಾನ ಪಡೆದರು. ಹೀಗಾಗಿ ಪಾಕಿಸ್ತಾನದ ಚಿನ್ನದ ಪದಕದ ಕನಸು ಅರ್ಷದ್ ನದೀಮ್ ಸೋಲಿನೊಂದಿಗೆ ಕಮರಿ ಹೋಯಿತು. ಇನ್ನು 2030 ರಲ್ಲಿ ಭಾರತದಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಪಾಕಿಸ್ತಾನ ತನ್ನ ಸ್ಪರ್ಧಿಗಳನ್ನು ಕಳುಹಿಸುತ್ತಾ ಎಂಬುದನ್ನು ಕಾದುನೋಡಬೇಕಿದೆ.
Published On - 3:02 pm, Mon, 3 August 26