ಪ್ಯಾರಿಸ್ ಒಲಿಂಪಿಕ್ಸ್ ಅಂತಿಮ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 14 ದಿನಗಳು ಮುಕ್ತಾಯಗೊಂಡಿದ್ದು, ಇನ್ನುಳಿದಿರುವುದು ಕೇವಲ ಎರಡು ದಿನಗಳು ಮಾತ್ರ. ಈ ಎರಡು ದಿನಗಳಲ್ಲಿ ಅಗ್ರಸ್ಥಾನಕ್ಕೇರಲು ಚೀನಾ ಹಾಗೂ ಯುಎಸ್ಎ ನಡುವೆ ಪೈಪೋಟಿ ಏರ್ಪಟ್ಟಿದೆ. ಏಕೆಂದರೆ ಉಭಯ ದೇಶಗಳು ಈವರೆಗೆ (ಆಗಸ್ಟ್ 9) 33 ಚಿನ್ನದ ಪದಕ ಗೆದ್ದುಕೊಂಡಿದೆ. ಅಂತಿಮವಾಗಿ ಅತೀ ಹೆಚ್ಚು ಬಂಗಾರದ ಪದಕ ಗೆಲ್ಲುವ ದೇಶ ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದೆ. ಹೀಗಾಗಿ ಕೊನೆಯ ಎರಡು ದಿನಗಳಲ್ಲಿ ಈ ಬಾರಿಯ ಅಗ್ರಸ್ಥಾನಿ ಯಾರು ಎಂಬುದು ನಿರ್ಧಾರವಾಗುವ ಸಾಧ್ಯತೆಯಿದೆ.
ಇದಾಗ್ಯೂ ಪದಕಗಳ ಸಂಖ್ಯೆಯ ವಿಷಯದಲ್ಲಿ ಯುಎಸ್ಎ ಮೊದಲ ಸ್ಥಾನದಲ್ಲಿದ್ದಾರೆ. ಅಂದರೆ ನೂರಕ್ಕೂ ಅಧಿಕ ಪದಕ ಗೆಲ್ಲುವ ಮೂಲಕ ಒಟ್ಟು ಸಂಖ್ಯೆಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಇತ್ತ ಚೀನಾ 33 ಚಿನ್ನದ ಪದಕ ಗೆದ್ದರೂ, ಒಟ್ಟು ಪದಕ ಸಂಖ್ಯೆಯು 85 ಅನ್ನು ದಾಟಿಲ್ಲ. ಅತ್ತ ಯುಎಸ್ಎ ಬೆಳ್ಳಿ ಮತ್ತು ಕಂಚಿನ ವಿಭಾಗದಲ್ಲಿ ತಲಾ 39 ಪದಕಗಳನ್ನು ಗೆಲ್ಲುವ ಮೂಲಕ ತಮ್ಮ ಮೆಡಲ್ ಕೌಂಟ್ ಅನ್ನು 111 ಕ್ಕೇರಿಸಿದೆ. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ನೂರು ಪದಕಗಳನ್ನು ಗೆದ್ದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಯುಎಸ್ಎ ಪಾತ್ರವಾಗಿದೆ.
ಸಂಖ್ಯೆ | ದೇಶ | ಚಿನ್ನ | ಬೆಳ್ಳಿ | ಕಂಚು | ಒಟ್ಟು |
1 | ಯುನೈಟೆಡ್ ಸ್ಟೇಟ್ಸ್ | 33 | 39 | 39 | 111 |
2 | ಚೀನಾ | 33 | 26 | 23 | 82 |
3 | ಆಸ್ಟ್ರೇಲಿಯಾ | 18 | 16 | 14 | 48 |
4 | ಜಪಾನ್ | 16 | 8 | 13 | 37 |
5 | ಗ್ರೇಟ್ ಬ್ರಿಟನ್ | 14 | 20 | 23 | 57 |
6 | ಫ್ರಾನ್ಸ್ | 14 | 20 | 22 | 56 |
7 | ರಿಪಬ್ಲಿಕ್ ಆಫ್ ಕೊರಿಯಾ | 13 | 8 | 7 | 28 |
8 | ನೆದರ್ಲ್ಯಾಂಡ್ಸ್ | 13 | 6 | 10 | 29 |
9 | ಜರ್ಮನಿ | 12 | 9 | 8 | 29 |
10 | ಇಟಲಿ | 11 | 12 | 13 | 36 |
69 | ಭಾರತ | 0 | 1 | 5 | 6 |
ಈ ಬಾರಿಯ ಒಲಿಂಪಿಕ್ಸ್ನಲ್ಲಿ ಒಟ್ಟು 6 ಪದಕಗಳನ್ನು ಗೆದ್ದಿರುವ ಭಾರತವು ಪದಕ ಪಟ್ಟಿಯಲ್ಲಿ 69ನೇ ಸ್ಥಾನದಲ್ಲಿದೆ. ಇಲ್ಲಿ ಭಾರತ ಹಿಂದೆ ಉಳಿಯಲು ಮುಖ್ಯ ಕಾರಣ ಚಿನ್ನದ ಪದಕ ಗೆಲ್ಲದಿರುವುದು. ಒಂದು ವೇಳೆ ಕೊನೆಯ ಎರಡು ದಿನಗಳಲ್ಲಿ ಭಾರತೀಯ ಕ್ರೀಡಾಪಟುಗಳು ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದರೆ 40 ರ ಒಳಗೆ ಕಾಣಿಸಿಕೊಳ್ಳಲಿದೆ.
Published On - 8:58 am, Sat, 10 August 24