
ವಿಶ್ವದಲ್ಲೇ ಅತ್ಯಧಿಕ ಜನಸಂಖ್ಯೆ ಹೊಂದಿರುವ ಭಾರತ, ಒಲಿಂಪಿಕ್ಸ್‌ನಲ್ಲಿ ಪದಕಗಳ ಪಟ್ಟಿಯಲ್ಲಿ ಯಾಕೆ ಹಿಂದೆ ಬೀಳುತ್ತದೆ? ಈ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿನ ‘ಖೇಲೋ ಇಂಡಿಯಾ ಸಂವಾದ’ದಲ್ಲಿ ಕಹಿ ಸತ್ಯವನ್ನು ಬಿಚ್ಚಿಡುವ ಮೂಲಕ ಉತ್ತರಿಸಿದ್ದಾರೆ. ಭಾರತೀಯ ಕ್ರೀಡಾ ವ್ಯವಸ್ಥೆಯ ಕಣ್ಣು ತೆರೆಸುವ ಈ ಕಹಿ ಸತ್ಯದ ಜೊತೆಗೆ, ಮುಂದಿನ ದಿನಗಳಲ್ಲಿ ಭಾರತವನ್ನು ಕ್ರೀಡಾ ಜಗತ್ತಿನ ಮಹಾಶಕ್ತಿಯನ್ನಾಗಿ ಮಾಡಲು ಪ್ರಧಾನಿ ಮೋದಿ ಅವರು ಹೊಸ ದಿಕ್ಸೂಚಿಯನ್ನು ಸಹ ಮುಂದಿಟ್ಟಿದ್ದಾರೆ.
ಪ್ರಧಾನಿ ಮೋದಿ ಅವರ ಪ್ರಕಾರ, ಭಾರತದ ಅತಿ ದೊಡ್ಡ ದೌರ್ಬಲ್ಯ ಇರುವುದು ಕ್ರೀಡಾಪಟುಗಳ ಸಾಮರ್ಥ್ಯದಲ್ಲಲ್ಲ, ಬದಲಿಗೆ ನಮ್ಮ ‘ಸೀಮಿತ ಭಾಗವಹಿಸುವಿಕೆ’ಯಲ್ಲಿ.
ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಯಾಗಿರುವ ಒಟ್ಟು ಕ್ರೀಡೆಗಳ ಪೈಕಿ ಕೇವಲ ಅರ್ಧದಷ್ಟು ಕ್ರೀಡೆಗಳಲ್ಲಿ ಮಾತ್ರ ಭಾರತ ಭಾಗವಹಿಸುತ್ತದೆ. ಉಳಿದ ಅರ್ಧ ಭಾಗದ ಆಟಗಳಲ್ಲಿ ಭಾರತದ ಅಸ್ತಿತ್ವವೇ ಇಲ್ಲ.,
2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಒಟ್ಟು 32 ಕ್ರೀಡೆಗಳಿದ್ದವು. ಆದರೆ ಭಾರತ ಕೇವಲ 16 ಕ್ರೀಡೆಗಳಲ್ಲಿ ಮಾತ್ರ ಸ್ಪರ್ಧಿಸಿತ್ತು. ಅಂದರೆ, ಶೇ. 50 ರಷ್ಟು ಪದಕಗಳ ರೇಸ್‌ನಿಂದ ಭಾರತ ಮೊದಲೇ ಹೊರಗುಳಿದಿತ್ತು.
2012ರ ಒಲಿಂಪಿಕ್ಸ್‌ನಲ್ಲಿ ಭಾರತ ಕೇವಲ 13 ಕ್ರೀಡೆಗಳಲ್ಲಿ ಭಾಗವಹಿಸಿತ್ತು. ವರ್ಷಗಳು ಉರುಳಿದರೂ ಹೊಸ ಕ್ರೀಡೆಗಳನ್ನು ಅಪ್ಪಿಕೊಳ್ಳುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ.
ಜಗತ್ತಿನ ಇತರೆ ದೇಶಗಳು ನೂರಾರು ಪದಕಗಳನ್ನು ಬಾಚಿಕೊಳ್ಳುವ ಹಲವು ಒಲಿಂಪಿಕ್ಸ್ ಕ್ರೀಡೆಗಳ ಬಗ್ಗೆ ಭಾರತದ ಜನಸಾಮಾನ್ಯರಿಗೆ ಇಂದಿಗೂ ಸರಿಯಾದ ಮಾಹಿತಿಯೇ ಇಲ್ಲ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಈ ಕಹಿ ಸತ್ಯವನ್ನು ಬದಲಾಯಿಸಲು ಮತ್ತು ಭಾರತವನ್ನು ಪದಕದ ಪಟ್ಟಿಯಲ್ಲಿ ಮುಂಚೂಣಿಗೆ ತರಲು ಕೇಂದ್ರ ಸರ್ಕಾರ ಈಗ ಹೊಸದೊಂದು ಕ್ರೀಡಾ ಕ್ರಾಂತಿಗೆ ಮುನ್ನುಡಿ ಬರೆದಿದೆ. ಅದಕ್ಕಾಗಿ ಪ್ರಧಾನಿ ಮೋದಿ ಸೂಚಿಸಿರುವ ಪ್ರಮುಖ ಕಾರ್ಯತಂತ್ರಗಳು ಇಲ್ಲಿವೆ.
ಸಾಂಪ್ರದಾಯಿಕವಲ್ಲದ ಹೊಸ ಕ್ರೀಡೆಗಳತ್ತ ಗಮನ: ಇದುವರೆಗೆ ಭಾರತ ಕೇವಲ ಶೂಟಿಂಗ್, ಕುಸ್ತಿ, ಬ್ಯಾಡ್ಮಿಂಟನ್, ಬಾಕ್ಸಿಂಗ್ ಹಾಗೂ ಹಾಕಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಇನ್ನು ಮುಂದೆ ಸರ್ಫಿಂಗ್, ಸ್ಪೋರ್ಟ್ ಕ್ಲೈಂಬಿಂಗ್, ವಾಟರ್ ಸ್ಪೋರ್ಟ್ಸ್ ಹಾಗೂ ವಿಂಟರ್ ಸ್ಪೋರ್ಟ್ಸ್ (ಚಳಿಗಾಲದ ಕ್ರೀಡೆಗಳು) ನಂತಹ ಹೊಸ ಒಲಿಂಪಿಕ್ ಕ್ರೀಡೆಗಳ ಮೇಲೆ ಭಾರತ ಗಮನ ಹರಿಸಲಿದೆ.
ನೈಸರ್ಗಿಕ ಭೌಗೋಳಿಕತೆಯ ಬಳಕೆ: ಭಾರತಕ್ಕೆ ಸುದೀರ್ಘವಾದ ಸಮುದ್ರ ತೀರ ಮತ್ತು ವಿಶಾಲವಾದ ಪರ್ವತ ಶ್ರೇಣಿಗಳಿವೆ. ಕರಾವಳಿ ತೀರಗಳನ್ನು ಸರ್ಫಿಂಗ್ ಮತ್ತು ವಾಟರ್ ಸ್ಪೋರ್ಟ್ಸ್ ಕಲಿಯಲು ಹಾಗೂ ಹಿಮಾಲಯದಂತಹ ಪರ್ವತಗಳನ್ನು ಕ್ಲೈಂಬಿಂಗ್ ತರಬೇತಿಗೆ ಬಳಸಿಕೊಂಡು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ಸಿದ್ಧಪಡಿಸಲಾಗುತ್ತಿದೆ.
‘ಟ್ಯಾಲೆಂಟ್ ಹಂಟ್’: ಭವಿಷ್ಯದ ಒಲಿಂಪಿಕ್ ಚಾಂಪಿಯನ್‌ಗಳನ್ನು ಸೃಷ್ಟಿಸಲು ದೇಶಾದ್ಯಂತ ಶಾಲೆ ಹಾಗೂ ಹಳ್ಳಿಗಳ ಮಟ್ಟದಲ್ಲಿ 5 ರಿಂದ 15 ವರ್ಷದೊಳಗಿನ ಮಕ್ಕಳನ್ನು ಗುರುತಿಸುವ ಬೃಹತ್ ಪ್ರತಿಭಾ ಶೋಧ ಅಭಿಯಾನವನ್ನು ನಡೆಸಲಾಗುತ್ತಿದೆ. ಸಣ್ಣ ವಯಸ್ಸಿನಲ್ಲೇ ಅವರ ಕ್ರೀಡಾ ಆಸಕ್ತಿಯನ್ನು ಗುರುತಿಸಿ ವಿಶೇಷ ತರಬೇತಿ ನೀಡಲಾಗುತ್ತದೆ.
ವೃತ್ತಿಪರ ಮತ್ತು ತಜ್ಞರ ತರಬೇತಿ: ಆಯ್ಕೆಯಾದ ಕ್ರೀಡಾಪಟುಗಳಿಗೆ ಕೇವಲ ತರಬೇತಿ ಮಾತ್ರವಲ್ಲದೆ, ಸ್ಪೋರ್ಟ್ಸ್ ಸೈನ್ಸ್, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅಂತಾರಾಷ್ಟ್ಯ ಮಟ್ಟದ ತರಬೇತುದಾರರ ನೆರವನ್ನು ಸರ್ಕಾರ ಒದಗಿಸುತ್ತಿದೆ.
ಭಾರತವು 2036ರ ಒಲಿಂಪಿಕ್ಸ್ ಕ್ರೀಡಾಕೂಟದ ಆತಿಥ್ಯ ವಹಿಸಲು ಬಿಡ್ ಸಲ್ಲಿಸಿದೆ. ತನ್ನದೇ ನೆಲದಲ್ಲಿ ನಡೆಯಲಿರುವ ಈ ಮಹಾಕೂಟದಲ್ಲಿ ಭಾರತ ಇದುವರೆಗೆ ಎಂದೂ ಭಾಗವಹಿಸದ ಕ್ರೀಡೆಗಳಲ್ಲೂ ಅರ್ಹತೆ ಪಡೆದು, ದಾಖಲೆಯ ಪದಕಗಳನ್ನು ಗೆಲ್ಲುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ: ನೇಪಾಳ ಪ್ರವಾಹ: ಇಶಾ ಫೌಂಡೇಶನ್‌ನ 77 ಮಂದಿ ನಾಪತ್ತೆ
ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ, ಕ್ರೀಡೆ ಎನ್ನುವುದು ಕೇವಲ ಪದಕ ಗೆಲ್ಲುವ ವೇದಿಕೆಯಲ್ಲ, ಅದು ರಾಷ್ಟ್ರ ನಿರ್ಮಾಣದ ಶಕ್ತಿ. ಭಾರತೀಯ ಕ್ರೀಡಾ ಇತಿಹಾಸದಲ್ಲಿ ಈಗ ಹೊಸ ಅಧ್ಯಾಯ ಆರಂಭವಾಗಿದೆ. ಕ್ರೀಡಾಪಟುಗಳಿಗೆ ಸೂಕ್ತ ಮೂಲಸೌಕರ್ಯ ಹಾಗೂ ಹೊಸ ಆಟಗಳಿಗೆ ಪ್ರೋತ್ಸಾಹ ನೀಡುವ ಮೂಲಕ, ಮುಂಬರುವ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾರತ ಕ್ರೀಡಾ ಲೋಕದ ಸೂಪರ್ ಪವರ್ ಆಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂಶಯವಿಲ್ಲ.
Published On - 2:11 pm, Thu, 27 August 26