R. Praggnanandhaa: ವಿಶ್ವ ಚಾಂಪಿಯನ್​ಗೆ ಸೋಲುಣಿಸಿ ಅಗ್ರಸ್ಥಾನಕ್ಕೇರಿದ ಆರ್​. ಪ್ರಜ್ಞಾನಂದ

| Updated By: ಝಾಹಿರ್ ಯೂಸುಫ್

Updated on: Jan 17, 2024 | 1:27 PM

Tata Steel Masters 2024: ನೆದರ್​ಲೆಂಡ್ಸ್​ನ ವಿಜ್ಕ್ ಆನ್ ಝೀಯಲ್ಲಿ ನಡೆದ ಟಾಟಾ ಸ್ಟೀಲ್ ಮಾಸ್ಟರ್ಸ್‌ ಚೆಸ್ ಸ್ಪರ್ಧೆಯಲ್ಲಿ ಆರ್​. ಪ್ರಜ್ಞಾನಂದ ಜಾಣ ನಡೆಗಳ ಮೂಲಕ ಗಮನ ಸೆಳೆದರು. ಹಾಲಿ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಅವರ ತಂತ್ರಗಳಿಗೆ ಪ್ರತಿ ಹೆಣೆದ ಪ್ರಜ್ಞಾನಂದ ನಾಲ್ಕನೇ ಸುತ್ತಿನಲ್ಲಿ ಸೋಲುಣಿಸುವಲ್ಲಿ ಯಶಸ್ವಿಯಾದರು.

R. Praggnanandhaa: ವಿಶ್ವ ಚಾಂಪಿಯನ್​ಗೆ ಸೋಲುಣಿಸಿ ಅಗ್ರಸ್ಥಾನಕ್ಕೇರಿದ ಆರ್​. ಪ್ರಜ್ಞಾನಂದ
R. Praggnanandhaa
Follow us on

ಭಾರತದ ಚೆಸ್ ಚತುರ ಆರ್​. ಪ್ರಜ್ಞಾನಂದ (R. Praggnanandhaa) ಅವರು 2024 ರ ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್‌ನಲ್ಲಿ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಅವರಿಗೆ ಸೋಲುಣಿಸಿದ್ದಾರೆ. ಈ ಗೆಲುವಿನೊಂದಿಗೆ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿ ಆರ್​. ಪ್ರಜ್ಞಾನಂದ ಭಾರತದ ಅಗ್ರ ಶ್ರೇಯಾಂಕಿತ ಚೆಸ್ ಪಟುವಾಗಿ ಹೊರಹೊಮ್ಮಿದ್ದಾರೆ.

ಜನವರಿ 16 ರಂದು ನೆದರ್​ಲೆಂಡ್ಸ್​ನ ವಿಜ್ಕ್ ಆನ್ ಝೀಯಲ್ಲಿ ನಡೆದ ಟಾಟಾ ಸ್ಟೀಲ್ ಮಾಸ್ಟರ್ಸ್‌ ಚೆಸ್ ಸ್ಪರ್ಧೆಯಲ್ಲಿ ಆರ್​. ಪ್ರಜ್ಞಾನಂದ ಜಾಣ ನಡೆಗಳ ಮೂಲಕ ಗಮನ ಸೆಳೆದರು. ಹಾಲಿ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಅವರ ತಂತ್ರಗಳಿಗೆ ಪ್ರತಿ ಹೆಣೆದ ಪ್ರಜ್ಞಾನಂದ ನಾಲ್ಕನೇ ಸುತ್ತಿನಲ್ಲಿ ಸೋಲುಣಿಸುವಲ್ಲಿ ಯಶಸ್ವಿಯಾದರು.

ಈ ಮೂಲಕ ವರ್ಲ್ಡ್ ಕ್ಲಾಸಿಕ್ ಚೆಸ್ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್‌ನನ್ನು ಸೋಲಿಸಿದ ಎರಡನೇ ಭಾರತೀಯ ಎನಿಸಿಕೊಂಡರು. ಇದಕ್ಕೂ ಮುನ್ನ ವಿಶ್ವನಾಥನ್ ಆನಂದ್ ಈ ಸಾಧನೆ ಮಾಡಿದ್ದರು. ಇದೀಗ ನಾಲ್ಕನೇ ಶ್ರೇಯಾಂಕಿತ ಚೀನಾದ ಲಿರೆನ್ ವಿರುದ್ಧ ಗೆಲ್ಲುವ ಮೂಲಕ ಆರ್​. ಪ್ರಜ್ಞಾನಂದ ಈ ಸಾಧನೆ ಮಾಡಿದ್ದಾರೆ.

ನಂಬರ್-1 ಸ್ಥಾನಕ್ಕೇರಿದ ಪ್ರಜ್ಞಾನಂದ:

ಡಿಂಗ್ ಲಿರೆನ್ ವಿರುದ್ಧದ ಈ ಐತಿಹಾಸಿಕ ಗೆಲುವಿನೊಂದಿಗೆ ಆರ್​. ಪ್ರಜ್ಞಾನಂದ FIDE ರ್ಯಾಂಕಿಂಗ್​ನಲ್ಲಿ ಭಾರತದ ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿದ್ದಾರೆ. ಆನಂದ್ ಅವರು ಪ್ರಸ್ತುತ ಶ್ರೇಯಾಂಕ ಪಟ್ಟಿಯಲ್ಲಿ 2748 ರೇಟಿಂಗ್​ನೊಂದಿಗೆ 11ನೇ ಸ್ಥಾನದಲ್ಲಿದ್ದರೆ, ಪ್ರಜ್ಞಾನಂದ 2748.3 ರೇಟಿಂಗ್‌ನೊಂದಿಗೆ ಮೇಲೇರಿದ್ದಾರೆ.

ಇದನ್ನೂ ಓದಿ: NZ vs PAK: 2 ಓವರ್​ಗಳಲ್ಲಿ 51 ರನ್ಸ್​: ಪಾಕ್ ಬೌಲರ್​ಗಳ ಬೆಂಡೆತ್ತಿದ ಫಿನ್ ಅಲೆನ್

ಈ ಮೂಲಕ ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ನಂಬರ್ ಚೆಸ್ ಪಟುವಾಗಿ ಆರ್​. ಪ್ರಜ್ಞಾನಂದ ಹೊರಹೊಮ್ಮಿದ್ದಾರೆ. ಇನ್ನು ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಮ್ಯಾಗ್ನಸ್ ಕಾರ್ಲ್‌ಸೆನ್. ನಾರ್ವೆಯ ಚೆಸ್ ತಾರೆ ಒಟ್ಟು 2830 ರೇಟಿಂಗ್ ಪಡೆಯುವ ಮೂಲಕ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

 

Published On - 1:23 pm, Wed, 17 January 24