ಕಾರ್ಟೂನ್​ನಿಂದ…ಚೆಸ್​ ವಿಶ್ವಕಪ್​ ತನಕ: ಪ್ರಜ್ಞಾನಂದರ ಸಾಧನೆಯ ಹಿಂದಿದ್ದಾರೆ ಮಹಾತಾಯಿ

R Praggnanandhaa: 2016 ರಲ್ಲಿ 10 ವರ್ಷದ ಪ್ರಜ್ಞಾನಂದ ಅಂತರರಾಷ್ಟ್ರೀಯ ಚೆಸ್​ನಲ್ಲಿ ಲಿಟ್ಲ್​ ಮಾಸ್ಟರ್ ಆಗಿ ಹೊರಹೊಮ್ಮಿದ್ದರು. ಅಲ್ಲಿಂದಲೇ ಈ ಪುಟ್ಟ ಬಾಲಕನಿಗೆ ಚೆಸ್​ನಲ್ಲೇ ಭವಿಷ್ಯವಿದೆ ಎಂದು ತರಬೇತುದಾರರು ಕೂಡ ಷರಾ ಬರೆದಿದ್ದರು. ಆ ಎಲ್ಲಾ ನಿರೀಕ್ಷೆಗಳು ಈಗ ನಿಜವಾಗಿದೆ.

ಕಾರ್ಟೂನ್​ನಿಂದ...ಚೆಸ್​ ವಿಶ್ವಕಪ್​ ತನಕ: ಪ್ರಜ್ಞಾನಂದರ ಸಾಧನೆಯ ಹಿಂದಿದ್ದಾರೆ ಮಹಾತಾಯಿ
R Praggnanandhaa - Mother
Follow us
| Updated By: ಝಾಹಿರ್ ಯೂಸುಫ್

Updated on: Aug 24, 2023 | 6:52 PM

ಗ್ರ್ಯಾಂಡ್ ಮಾಸ್ಟರ್​ ಆರ್​​. ಪ್ರಜ್ಞಾನಂದ…ಖ್ಯಾತ ಚೆಸ್ ಪಟುಗಳಾದ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ , ಲೆವ್ ಅರೋನಿಯನ್, ರಷ್ಯಾದ ಆಂಡ್ರೆ ಎಸ್ಪಿಯೆಂಕೊ, ಮಾಜಿ ಮಹಿಳಾ ವಿಶ್ವ ಚಾಂಪಿಯನ್ ಅಲೆಕ್ಸಾಂಡ್ರಾ ಕೊಸ್ಟಾನ್ಯುಕ್ ಮತ್ತು ಕೆಮರ್…ಇವರ್ಯಾರು ಪ್ರಜ್ಞಾನಂದ ಎಂಬ ಹೆಸರನ್ನು ಈ ಜೀವಮಾನದಲ್ಲಿ ಮರೆಯಲ್ಲ. ಏಕೆಂದರೆ ಅತಿರಥ ಮಹಾರಥರನ್ನೇ ಸೋಲಿಸಿದ್ದ ಇವರಿಗೆ ತನ್ನ 16 ವಯಸ್ಸಿನಲ್ಲೇ ಪ್ರಜ್ಞಾನಂದ ಸೋಲಿನ ರುಚಿ ತೋರಿಸಿದ್ದರು.  ಅದರಲ್ಲೂ ಚೆಸ್​ನಲ್ಲಿ ಸೋಲನ್ನೇ ಮರೆತಂತಿದ್ದ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್​ಗೆ ಏರ್‌ಥಿಂಗ್ಸ್ ಮಾಸ್ಟರ್ಸ್‌ ಚಾಂಪಿಯನ್​ಶಿಪ್​ನಲ್ಲಿ ಸೋಲುಣಿಸಿ ನಿಬ್ಬೆರಗಾಗುವಂತೆ ಮಾಡಿದ್ದ. ಇದೀಗ ಚೆಸ್ ವಿಶ್ವಕಪ್​ ಮೂಲಕ  ಈ ಸೋಲಿನ ಸೇಡನ್ನು ತೀರಿಸಿಕೊಳ್ಳುವಲ್ಲಿ ಕಾರ್ಲ್​​ಸೆನ್ ಯಶಸ್ವಿಯಾಗಿದ್ದಾರೆ. ಆದರೆ ಈ ಯಶಸ್ಸಿಗೂ ಮುನ್ನ ಕಾರ್ಲ್​ಸೆನ್​ಗೆ 18 ವರ್ಷದ ಪ್ರಜ್ಞಾನಂದ ಸಾಕಷ್ಟು ಸವಾಲೊಡ್ಡಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ. ಹೀಗಾಗಿಯೇ ಮುಂಬರುವ ದಿನಗಳಲ್ಲಿ ಕಾರ್ಲ್​ಸೆನ್ ಹಾಗೂ ಪ್ರಜ್ಞಾನಂದ ನಡುವಣ ಪೈಪೋಟಿ ವಿಶ್ವದ ಕುತೂಹಲದ ಕೇಂದ್ರವಾಗಲಿದೆ.

ಸಾಧನೆಯ ಹಿಂದಿರುವುದು ವೈಶಾಲಿ:

ಕಿರಿಯ ವಯಸ್ಸಿನಲ್ಲಿಯೇ ಪ್ರಜ್ಞಾನಂದ ಅವರು ಇಷ್ಟೊಂದು ಸಾಧನೆ ಮಾಡಲು ಮುಖ್ಯ ಕಾರಣ ಸಹೋದರಿ ವೈಶಾಲಿ. ಇಬ್ಬರು ಚೆಸ್ ಆಟವನ್ನು ಅನ್ನು ವಿಪರೀತ ಪ್ರೀತಿಸಲು ಕಾರಣವಾಗಿದ್ದು ಟಿವಿ ಕಾರ್ಟೂನ್ ಎಂಬುದು ವಿಶೇಷ.

ಹೌದು, ಎಲ್ಲರಂತೆ ಬಾಲ್ಯದಲ್ಲಿ ಪ್ರಜ್ಞಾನಂದ ಕೂಡ ಟಿವಿ ಕಾರ್ಟೂನ್​ ಅನ್ನು ಹೆಚ್ಚಾಗಿ ವೀಕ್ಷಿಸುತ್ತಿದ್ದರು. ಅತ್ತ ಸಹೋದರಿ ವೈಶಾಲಿ ಕೂಡ ಅದಾಗಲೇ ಕಾರ್ಟೂನ್​ಗೆ ಮಾರು ಹೋಗಿದ್ದರು. ಇದರಿಂದ ಚಿಂತೆಗೀಡಾಗಿದ್ದು ಪೋಲಿಯೋ ಪೀಡಿತ ಬ್ಯಾಂಕ್ ಉದ್ಯೋಗಿ ತಂದೆ ರಮೇಶಬಾಬು ಮತ್ತು ತಾಯಿ ನಾಗಲಕ್ಷ್ಮಿ.

ಮಕ್ಕಳಿಬ್ಬರೂ ಟಿವಿ ಮುಂದೆ ಹೆಚ್ಚಿನ ಸಮಯ ಕಾಲ ಕಳೆಯುತ್ತಿರುವುದನ್ನು ಕಂಡು ಆತಂಕ ವ್ಯಕ್ತಪಡಿಸಿದ್ದರು. ಹೀಗಾಗಿ ಮಗಳನ್ನು ಟಿವಿಯಿಂದ ದೂರ ಮಾಡಲು ತಂದೆ ಚೆಸ್​ ಬೋರ್ಡ್​ಗಳನ್ನು ತಂದುಕೊಟ್ಟಿದ್ದರು. ಇತ್ತ ಟಿವಿಯಿಂದ ವೈಶಾಲಿ ಚೆಸ್​ನತ್ತ ಮುಖ ಮಾಡುತ್ತಿದ್ದಂತೆ 3 ವರ್ಷದ ಪ್ರಜ್ಞಾನಂದ ಕೂಡ ಅಕ್ಕನೊಂದಿಗೆ ಆಟ ವೀಕ್ಷಿಸಲಾರಂಭಿಸಿದ.

ವೈಶಾಲಿಯ ಹೊಸ ಹವ್ಯಾಸವು ಪ್ರಜ್ಞಾನಂದ ಅವರ ಆಸಕ್ತಿಯ ಕೇಂದ್ರವಾಯಿತು. ಅದರಂತೆ ಇಬ್ಬರೂ ಕಾರ್ಟೂನ್​ನಿಂದ ದೂರವಾಗಿ ಚೆಸ್​ ಆಡಲು ಆರಂಭಿಸಿದರು. ಅಲ್ಲದೆ ಬಾಲ್ಯದಲ್ಲೇ ಚೆಸ್​ ಆಟವನ್ನು ಕರಗತ ಮಾಡಿಕೊಂಡರು.

ಮಹಿಳಾ ಗ್ರ್ಯಾಂಡ್ ಮಾಸ್ಟರ್ ಆಗಿರುವ ವೈಶಾಲಿ ಅವರು ಪ್ರತಿ ಚಾಂಪಿಯನ್​ಶಿಪ್​ನಲ್ಲಿ ಗೆಲುವು ಸಾಧಿಸುತ್ತಿದ್ದಂತೆ  ಚೆಸ್‌ನಲ್ಲಿ ತನ್ನ ಆಸಕ್ತಿಯನ್ನು ತೀವ್ರಗೊಳಿಸಿದ್ದರು. ಅಷ್ಟೇ ಅಲ್ಲದೆ ಸಹೋದರನನ್ನೂ ಸಹ ಈ ಆಟದತ್ತ ಸೆಳೆದರು. ಅದರ ಪ್ರಭಾವ ಇದೀಗ ಫಲಿತಾಂಶವಾಗಿ ಮೂಡಿ ಬರುತ್ತಿದೆ.

ಆರು ವರ್ಷದವಳಿದ್ದಾಗ ನಾನು ತುಂಬಾ ಕಾರ್ಟೂನ್‌ ನೋಡುತ್ತಿದ್ದೆ. ನನ್ನ ಪೋಷಕರು ನನ್ನನ್ನು ಟಿವಿಯಿಂದ ದೂರವಿಡಲು ಬಯಸಿದ್ದರು. ಅದಕ್ಕಾಗಿ ನನ್ನನ್ನು ಚೆಸ್ ಮತ್ತು ಡ್ರಾಯಿಂಗ್ ತರಗತಿಗಳಿಗೆ ಸೇರಿಸಿದರು. ನನ್ನ ಹೊಸ ಹವ್ಯಾಸ ಪ್ರಜ್ಞಾನಂದ ನನ್ನು ಕೂಡ ಸೆಳೆಯಿತು. ಅದರಂತೆ ಇಬ್ಬರು ಚೆಸ್ ಪಟುಗಳಾಗಿದ್ದೇವೆ ಎಂದು ಖುಷಿ ಹಂಚಿಕೊಂಡಿದ್ದಾರೆ ವೈಶಾಲಿ.

ವಿಶೇಷ ಎಂದರೆ ಇಂತಹದೊಂದು ಬದಲಾವಣೆ ಖುದ್ದು ತಂದೆಯೇ ನಿರೀಕ್ಷಿಸಿರಲಿಲ್ಲ. “ಬಾಲ್ಯದಲ್ಲಿ ಟಿವಿ ನೋಡುವ ಹವ್ಯಾಸಕ್ಕೆ ಕಡಿವಾಣ ಹಾಕಲು ವೈಶಾಲಿಗೆ ಚೆಸ್‌ಗೆ ಪರಿಚಯಿಸಿದ್ದೆವು. ಇದಾದ ಬಳಿಕ ಮಕ್ಕಳಿಬ್ಬರು ಚೆಸ್ ಆಟವನ್ನು ಇಷ್ಟಪಟ್ಟರು. ಅದನ್ನು ಮುಂದುವರಿಸಲು ನಿರ್ಧರಿಸಿದರು. ಅದು ಇಂತಹ ಸಾಧನೆಗೆ ಕಾರಣವಾಗುತ್ತದೆ ಎಂದು ಎಂದಿಗೂ ನಿರೀಕ್ಷಿಸಿರಲಿಲ್ಲ” ಎನ್ನುತ್ತಾರೆ ರಮೇಶ್‌ಬಾಬು.

ಅದರಂತೆ 2016 ರಲ್ಲಿ 10 ವರ್ಷದ ಪ್ರಜ್ಞಾನಂದ ಅಂತರರಾಷ್ಟ್ರೀಯ ಚೆಸ್​ನಲ್ಲಿ ಲಿಟ್ಲ್​ ಮಾಸ್ಟರ್ ಆಗಿ ಹೊರಹೊಮ್ಮಿದ್ದರು. ಅಲ್ಲಿಂದಲೇ ಈ ಪುಟ್ಟ ಬಾಲಕನಿಗೆ ಚೆಸ್​ನಲ್ಲೇ ಭವಿಷ್ಯವಿದೆ ಎಂದು ತರಬೇತುದಾರರು ಕೂಡ ಷರಾ ಬರೆದಿದ್ದರು. ಆ ಎಲ್ಲಾ ನಿರೀಕ್ಷೆಗಳು ಈಗ ನಿಜವಾಗಿದೆ. ವಿಶ್ವ ಚಾಂಪಿಯನ್ ಎನಿಸಿಕೊಂಡವರ ಮುಂದೆ ಪ್ರಜ್ಞಾನಂದ ಗೆದ್ದು ತೋರಿಸಿದ್ದಾರೆ. ಚೆಸ್ ವಿಶ್ವಕಪ್​ನಲ್ಲಿ ಫೈನಲ್ ಆಡಿದ್ದಾರೆ. ಅಷ್ಟೇ ಅಲ್ಲದೆ ಭವಿಷ್ಯದ ಭಾರತದ ಚೆಸ್ ಮಾಸ್ಟರ್ ಎನಿಸಿಕೊಂಡಿದ್ದಾರೆ.

ಅಂದಹಾಗೆ ಮಕ್ಕಳಿಬ್ಬರ ಚದುರಂಗ ಆಟದ ನಿಗೂಢ ನಡೆಗೆ ಬೆನ್ನೆಲುಬಾಗಿ ನಿಂತಿದ್ದು ತಾಯಿ ನಾಗಲಕ್ಷ್ಮಿ ಎನ್ನುತ್ತಾರೆ ರಮೇಶ್ ಬಾಬು. ಏಕೆಂದರೆ ನಾಗಲಕ್ಷ್ಮಿ ಅವರಿಬ್ಬರನ್ನು ಟೂರ್ನಮೆಂಟ್‌ಗಳಿಗೆ ಕರೆದುಕೊಂಡು ಹೋಗುತ್ತಾರೆ. ಮನೆಯಿಂದಲೇ ಅವರ ಆಟಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಹೀಗಾಗಿ ಮಕ್ಕಳ ಸಾಧನೆಯ ಸಂಪೂರ್ಣ ಶ್ರೇಯಸ್ಸು ಹೆಂಡತಿಗೆ ಸಲ್ಲುತ್ತದೆ ಎಂದು ರಮೇಶ್ ಬಾಬು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸೋತರೂ ವಿಶ್ವ ಚಾಂಪಿಯನ್ನರಿಗೆ ನಡುಕ ಹುಟ್ಟಿಸಿದ ಪ್ರಜ್ಞಾನಂದ

ಹೌದು, ದೂರದ ಅಝರ್​ಬೈಜಾನ್​ನಲ್ಲಿ ನಡೆದ ಚೆಸ್ ವಿಶ್ವಕಪ್​ನಲ್ಲೂ ಗ್ರ್ಯಾಂಡ್ ಮಾಸ್ಟರ್ ಆರ್​. ಪ್ರಜ್ಞಾನಂದ ಜೊತೆಗೆ ಬೆನ್ನಲುಬಾಗಿದದ್ದು ತಾಯಿ ನಾಗಲಕ್ಷ್ಮಿ. ಒಂದು ಊರಿಂದ ಮತ್ತೊಂದು ಊರಿಗೆ ಹೋಗುವಷ್ಟರಲ್ಲಿ ಹೈರಾಣರಾಗುವ ಈ ಕಾಲದಲ್ಲಿ ನಾಡು-ನುಡಿ ಗೊತ್ತಿಲ್ಲದೇ ಇರುವ, ವಿಭಿನ್ನ ಸಂಸ್ಕೃತಿಗಳನ್ನು ಹೊಂದಿರುವ ದೂರದ ಊರುಗಳಿಗೆ ಮಗನನ್ನು ಕರೆದುಕೊಂಡು ಹೋಗಿ ಸಾಧಕರ ಸಾಲಿನಲ್ಲಿ ನಿಲ್ಲಿಸಿದ್ದಾರೆ ಎಂದರೆ ಆಕೆ ಮಹಾತಾಯಿಯೇ ಆಗಿರಬೇಕಲ್ಲವೇ…ಹೌದು, ಎಲ್ಲಾ ಸಾಧಕರ ಹಿಂದೆ ಮಹಿಳೆಯೊಬ್ಬರಿರುತ್ತಾರೆ ಎಂಬುದಂತು ನಿಜ. ಇಲ್ಲಿ ಪ್ರಜ್ಞಾನಂದನ ಸಾಧನೆಯ ಹಿಂದೆ ತಾಯಿ ಹಾಗೂ ಸಹೋದರಿ ಇದ್ದಾರೆ.