ಧೂಮಪಾನ ಮಾಡುವುದರಿಂದ ನಿಜಕ್ಕೂ ಒತ್ತಡ ಕಡಿಮೆಯಾಗುತ್ತದೆಯೇ? ತಜ್ಞರು ಈ ಬಗ್ಗೆ ಏನೆನ್ನುತ್ತಾರೆ
ಅನೇಕ ಜನರು ಒತ್ತಡ ಅಥವಾ ಮಾನಸಿಕ ಯಾತನೆ ಅನುಭವಿಸಿದಾಗ, ಧೂಮಪಾನವು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ ಎಂದು ಒತ್ತಡ ಕಡಿಮೆ ಮಾಡಲು ಸಿಗರೇಟ್‌ಗಳ ಮೊರೆ ಹೋಗ್ತಾರೆ. ಸ್ಟ್ರೆಸ್ ಆದಾಗಲೆಲ್ಲಾ ಸಿಗರೇಟ್ ಸೇದುತ್ತಾ ಕುಳಿತುಬಿಡುತ್ತಾರೆ. ಆದ್ರೆ ನಿಜಕ್ಕೂ ಧೂಮಪಾನ ಒತ್ತಡವನ್ನು ಕಡಿಮೆ ಮಾಡುತ್ತದೆಯೇ? ಇದರ ಹಿಂದಿನ ವೈಜ್ಞಾನಿಕ ಸತ್ಯವೇನು, ತಜ್ಞರು ಈ ಬಗ್ಗೆ ಏನೆನ್ನುತ್ತಾರೆ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.

ಸಿಗರೇಟ್ (cigarettes) ಸೇದುವ ಅಭ್ಯಾಸ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ ಎಂಬುದು ಗೊತ್ತಿದ್ದರೂ ಸಹ ಸಿಗರೇಟದ ಸೇದುದ್ದಾರೆ. ಅದರಲ್ಲೂ ಕೆಲವರಂತೂ ತಮ್ಮ ಮನಸ್ಸಿಗೆ ಏನಾದ್ರೂ ನೋವಾದಾಗ, ಒತ್ತಡದಲ್ಲಿದ್ದಾಗ ಸಿಗರೇಟ್ ಸೇದುತ್ತಾರೆ. ಹೌದು ಒತ್ತಡದಲ್ಲಿದ್ದಾಗ ಸಿಗರೇಟ್ ಸೇದುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ, ಒತ್ತಡ ದೂರವಾಗುತ್ತದೆ ಎಂದು ಹೇಳಿ ಧೂಮಪಾನ ಮಾಡುತ್ತಾರೆ. ಅನೇಕ ಜನರು ಈ ರೀತಿ ಹೇಳುವುದನ್ನು ನೀವು ಸಹ ಕೇಳಿರುತ್ತೀರಿ ಅಲ್ವಾ. ಹಾಗಿದ್ರೆ ನಿಜಕ್ಕೂ ಸಿಗರೇಟ್ ಸೇದುವುದರಿಂದ ಒತ್ತಡ ದೂರವಾಗುತ್ತದೆಯೇ, ಮನಸ್ಸಿಗೆ ನೆಮ್ಮದಿ ಸಿಗುತ್ತಾ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.
ಧೂಮಪಾನ ನಿಜಕ್ಕೂ ಒತ್ತಡವನ್ನು ಕಡಿಮೆ ಮಾಡುತ್ತದೆಯೇ?
ತಂಬಾಕಿನಲ್ಲಿ ನಿಕೋಟಿನ್ ಎಂಬ ರಾಸಾಯನಿಕವಿದ್ದು, ಇದು ಸೌಮ್ಯವಾದ ಉತ್ತೇಜಕ ಮತ್ತು ಕೆಲವು ನಿಮಿಷಗಳ ಕಾಲ ಇರುವ ಪರಿಹಾರದ ಭಾವನೆಯನ್ನು ಉತ್ಪಾದಿಸುತ್ತದೆ. ಈ ನಿಕೋಟಿನ್ ದೇಹದಲ್ಲಿ ಡೋಪಮೈನ್ ನಂತಹ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಇದು ಸಂತೋಷದ ಭಾವನೆಯನ್ನು ಮೂಡಿಸುವ ಹಾರ್ಮೋನ್ ಆಗಿದ್ದು, ಈ ಹಾರ್ಮೋನ್ ದೇಹದಲ್ಲಿ ಬಿಡುಗಡೆಯಾದಾಗ, ಮನಸ್ಸಿಗೆ ಖುಷಿ ಉಂಟಾಗುತ್ತದೆ. ಈ ಕಾರಣದಿಂದಲೇ ಅನೇಕ ಜನರು ಸಿಗರೇಟ್ ಸೇದಿದ ಬಳಿಕ ತಮ್ಮ ಒತ್ತಡ ನಿವಾರಣೆಯಾಗಿದೆ ಎಂದು ಹೇಳುತ್ತಾರೆ.
ನಿಕೋಟಿನ್ ಮನಸ್ಥಿತಿಯನ್ನು ಸುಧಾರಿಸಬಹುದು, ಆದರೆ ಅದು ಕೆಲವು ಸೆಕೆಂಡುಗಳಿಂದ ನಿಮಿಷಗಳವರೆಗೆ ಮಾತ್ರ ಇರುತ್ತದೆ. ಧೂಮಪಾನ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದಿಲ್ಲ, ಬದಲಾಗಿ, ಕಾಲಾನಂತರದಲ್ಲಿ, ದೇಹವು ನಿಕೋಟಿನ್ ಅನ್ನು ಕಳೆದುಕೊಂಡಂತೆ, ಅದು ಚಡಪಡಿಕೆ ಮತ್ತು ಕಿರಿಕಿರಿಯನ್ನು ಹೆಚ್ಚಿಸುತ್ತದೆ. ನಿಕೋಟಿನ್ ಮಟ್ಟ ಕಡಿಮೆಯಾದಾಗ, ವ್ಯಕ್ತಿಯು ಮತ್ತೆ ಧೂಮಪಾನ ಮಾಡುವ ಹಂಬಲವನ್ನು ಅನುಭವಿಸುತ್ತಾನೆ. ಈ ಚಕ್ರವು ದೇಹ ಮತ್ತು ಮನಸ್ಸಿನ ಮೇಲೆ ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅಲ್ಲದೆ ಇದು ಆತಂಕ, ಕಿರಿಕಿರಿ, ನಿದ್ರಾಹೀನತೆಯ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಜೊತೆಗೆ ದೀರ್ಘಕಾಲದವರೆಗೆ ಧೂಮಪಾನ ಮಾಡುವ ವ್ಯಕ್ತಿಗಳಿಗೆ ಶ್ವಾಸಕೋಶ ಸಂಬಂಧಿಕ ಕಾಯಿಲೆ, ಉಸಿರಾಟದ ತೊಂದತೆ, ಕೆಮ್ಮು ಮತ್ತು ಕ್ಯಾನ್ಸರ್ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯೆ ಇದೆ.
ಒಟ್ಟಾರೆಯಾಗಿ ಧೂಮಪಾನವು ಒತ್ತಡದಿಂದ ತಾತ್ಕಾಲಿಕ ಪರಿಹಾರವನ್ನು ಮಾತ್ರ ನೀಡುತ್ತದೆ, ಆದರೆ ದೀರ್ಘಾವಧಿಯಲ್ಲಿ, ಇದು ಮಾನಸಿಕ ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ಮಾನಸಿಕ, ದೈಹಿಕ ಆರೋಗ್ಯ ಎರಡನ್ನೂ ಹಾನಿಗೊಳಿಸುತ್ತದೆ. ಹಾಗಾಗಿ ಒತ್ತಡವನ್ನು ಕಡಿಮೆ ಮಾಡಲು, ಮನಸ್ಸನ್ನು ನಿರಾಳಗೊಳಿಸಲು ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಯಾವಾಗಲೂ ಉತ್ತಮ ಮತ್ತು ಸುರಕ್ಷಿತ ಆಯ್ಕೆಯಾಗಿದೆ.
ಇದನ್ನೂ ಓದಿ: ಹೆಲ್ತಿ, ಸೂಪರ್ ಫಿಟ್ ಆಗಿರಲು ಬೆಳಗಿನ ದಿನಚರಿಯಲ್ಲಿ ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ
ಒತ್ತಡದಿಂದ ಮುಕ್ತಿ ಪಡೆಯಲು ಆರೋಗ್ಯಕರ ಮಾರ್ಗಗಳು ಯಾವುವು?
ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಧೂಮಪಾನಕ್ಕೆ ಕೆಲವು ಆರೋಗ್ಯಕರ ಪರ್ಯಾಯಗಳು ಇಲ್ಲಿವೆ:
ವ್ಯಾಯಾಮ ಮತ್ತು ಯೋಗ: ಇದು ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಮನಸ್ಸನ್ನು ಶಾಂತಗೊಳಿಸುತ್ತದೆ.
ಧ್ಯಾನ ಮತ್ತು ಮೈಂಡ್‌ಫುಲ್‌ನೆಸ್: ಇದು ಮಾನಸಿಕ ಶಾಂತಿ, ನೆಮ್ಮದಿಯನ್ನು ನೀಡುತ್ತದೆ ಮತ್ತು ಗಮನವನ್ನು ಹೆಚ್ಚಿಸುತ್ತದೆ.
ಆರೋಗ್ಯಕರ ಆಹಾರ: ಸಕ್ಕರೆ ಮತ್ತು ಕೆಫೀನ್ ಸೇವನೆಯನ್ನು ನಿಯಂತ್ರಿಸುವುದರಿಂದ ಹಾಗೂ ಆರೋಗ್ಯಕರ ಆಹಾರ ಸೇವನೆ ಮಾಡುವುದು ನಿಮ್ಮ ಮನಸ್ಥಿತಿಯನ್ನು ಸಮತೋಲನಗೊಳಿಸಲು ಸಹಾಯವಾಗುತ್ತದೆ.
ಸಾಮಾಜಿಕ ಬೆಂಬಲ: ಒಂಟಿಯಾಗಿ ಕುಳಿತು ಸಿಗರೇಟ್ ಸೇದುವ ಬದಲು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮಾತನಾಡಿ. ಇದರಿಂದ ಒತ್ತಡ ಕಡಿಮೆಯಾಗುತ್ತದೆ.
ಹವ್ಯಾಸಗಳು ಮತ್ತು ಸೃಜನಶೀಲ ಚಟುವಟಿಕೆಗಳು: ಚಿತ್ರಕಲೆ, ಪೇಂಟಿಂಗ್, ಗಾರ್ಡನಿಂಗ್ ಇತ್ಯಾದಿ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ, ಇದು ಒತ್ತಡವನ್ನು ಕಡಿಮೆ ಮಾಡುತ್ತದೆ, ನಿಮ್ಮೊಳಗೆ ಸಕರಾತ್ಮಕತೆಯನ್ನು ಹೆಚ್ಚಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:54 pm, Sun, 22 February 26




