AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾ ಬದಲಾಗಲ್ಲ… ಅಭಿಷೇಕ್ ಶರ್ಮಾ ತಿರುಗೇಟು

Abhishek Sharma: ಚೊಚ್ಚಲ ಟಿ20 ವಿಶ್ವಕಪ್​ನಲ್ಲಿ ಅಭಿಷೇಕ್ ಶರ್ಮಾ ಇನ್ನೂ ಸಹ ರನ್ ಖಾತೆ ತೆರೆದಿಲ್ಲ. ಕಳೆದ ಮೂರು ಪಂದ್ಯಗಳಲ್ಲೂ ಅಭಿಷೇಕ್ ಶರ್ಮಾ ಶೂನ್ಯಕ್ಕೆ ಔಟಾಗಿದ್ದಾರೆ. ಇದಾಗ್ಯೂ ಅವರು ಸೌತ್ ಆಫ್ರಿಕಾ ವಿರುದ್ಧದ ಸೂಪರ್-8 ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಈ ಪಂದ್ಯದಲ್ಲೂ ಬ್ಯಾಟಿಂಗ್ ಶೈಲಿ ಬದಲಿಸಲ್ಲ ಎಂದು ಅಭಿಷೇಕ್ ಶರ್ಮಾ ಹೇಳಿದ್ದಾರೆ.

ನಾ ಬದಲಾಗಲ್ಲ... ಅಭಿಷೇಕ್ ಶರ್ಮಾ ತಿರುಗೇಟು
Abhishek Sharma
ಝಾಹಿರ್ ಯೂಸುಫ್
|

Updated on:Feb 22, 2026 | 1:21 PM

Share

ಟೀಮ್ ಇಂಡಿಯಾ ಆರಂಭಿಕ ದಾಂಡಿಗ ಅಭಿಷೇಕ್ ಶರ್ಮಾ ಫಾರ್ಮ್​ನಲ್ಲಿದ್ದಾರಾ? ಈ ಪ್ರಶ್ನೆಗೆ ಉತ್ತರ ಹುಡುಕುವುದೇ ದೊಡ್ಡ ಸವಾಲು. ಏಕೆಂದರೆ ಒಬ್ಬ ಆಟಗಾರ ಫಾರ್ಮ್​ನಲ್ಲಿ ಇಲ್ಲ ಎನ್ನಲು ಆತನ ಕೆಲ ಇನಿಂಗ್ಸ್​ಗಳನ್ನು ನೋಡಬೇಕಾಗುತ್ತದೆ. ಇನ್ನು ಫಾರ್ಮ್​ನಲ್ಲಿದ್ದಾರೆ ಎಂದು ಗೊತ್ತಾಗಲು ಒಂದೆರಡು ಇನಿಂಗ್ಸ್ ನೋಡಿದ್ರೂ ಸಾಕಾಗುತ್ತದೆ. ಆದರೆ ಅಭಿಷೇಕ್ ವಿಷಯದಲ್ಲಿ ಅವರು ಫಾರ್ಮ್​ನಲ್ಲಿದ್ದಾರಾ ಅಥವಾ ಇಲ್ಲವಾ ಎಂದೇಳುವುದೇ ಕಷ್ಟಕರ.

ಏಕೆಂದರೆ ಅಭಿಷೇಕ್ ಅಬ್ಬರಿಸಿದರೆ ಅದು ಸಿಡಿಲಬ್ಬರ. ಇಲ್ಲದಿದ್ದರೆ ಶೂನ್ಯ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸಾಕ್ಷಿ ಅವರು ಟಿ20 ವಿಶ್ವಕಪ್​ಗೂ ಮುನ್ನ ಎರಡು ಸಿಡಿಲಬ್ಬರದ ಅರ್ಧಶತಕ ಬಾರಿಸಿರುವುದು. ಆದರೆ ಟಿ20 ವಿಶ್ವಕಪ್​ನಲ್ಲಿ ಬ್ಯಾಕ್ ಟು ಬ್ಯಾಕ್ ಮೂರು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.

ಮೊದಲೇ ಹೇಳಿದಂತೆ ಒಂದೆರಡು ಎಸೆತಗಳಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸುತ್ತಿರುವುದರಿಂದ ಅವರ ಫಾರ್ಮ್​ನಲ್ಲಿದ್ದಾರಾ ಅಥವಾ ಇಲ್ಲವಾ ಎಂದೇಳಲು ಸಾಧ್ಯವಾಗುತ್ತಿಲ್ಲ. ಬದಲಾಗಿ ಅವರ ಇಂಟೆಟ್ ಮಾತ್ರ ಇಲ್ಲಿ ಎದ್ದು ಕಾಣುತ್ತಿದೆ.

ಹೀಗಾಗಿಯೇ ಸೌತ್ ಆಫ್ರಿಕಾ ವಿರುದ್ಧದ ಸೂಪರ್-8 ಪಂದ್ಯದಲ್ಲೂ ಅಭಿಷೇಕ್ ಶರ್ಮಾ ಟೀಮ್ ಇಂಡಿಯಾ ಪರ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಿದೆ. ಈ ಸಾಧ್ಯತೆಗಳ ನಡುವೆ ಅಭಿ ನೀಡಿರುವ ಹೇಳಿಕೆ ಕೂಡ ಭಾರೀ ವೈರಲ್ ಆಗಿದೆ.

ಖಾಸಗಿ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅಭಿಷೇಕ್ ಶರ್ಮಾ, ನನ್ನ ಆಟದ ಶೈಲಿ ಬದಲಾಯಿಸಲ್ಲ. ಸತತ ವೈಫಲ್ಯಗಳ ನಡುವೆಯೂ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಅಥವಾ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಾನು ಕಳೆದ ಎರಡು ವರ್ಷಗಳಿಂದ ಒತ್ತಡ ತೆಗೆದುಕೊಳ್ಳುವುದನ್ನು ಬಿಟ್ಟಿದ್ದೇನೆ. ಕೇವಲ ತನ್ನ ಸಿದ್ಧತೆ ಹಾಗೂ ತರಬೇತಿಯ ಮೇಲೆ ಮಾತ್ರ ಗಮನ ಹರಿಸುತ್ತಿದ್ದೇನೆ ಎಂದು ಅಭಿಷೇಕ್ ಶರ್ಮಾ ಹೇಳಿದ್ದಾರೆ.

ನನ್ನ ಬ್ಯಾಟಿಂಗ್ ಅನ್ನು ನಾನು ಆನಂದಿಸುತ್ತೇನೆ. ಅಭ್ಯಾಸ ಮತ್ತು ತರಬೇತಿ ಮಾತ್ರ ನಾನು ನಿಯಂತ್ರಿಸಿಕೊಳ್ಳಬಹುದು. ಇದರ ಹೊರತಾಗಿ ಆಕ್ರಮಣಕಾರಿ ಆಟದ ಮೇಲೆ ಗಮನವನ್ನು ಕೇಂದ್ರೀಕರಿಸುತ್ತೇನೆ. ಅದನ್ನು ಆನಂದಿಸುತ್ತಿದ್ದೇನೆ.

ಬ್ಯಾಟರ್‌ಗಳಲ್ಲಿ ಯಾವಾಗಲೂ ಏರಿಳಿತಗಳಿರುತ್ತವೆ. ಕೆಲವೊಮ್ಮೆ ರನ್‌ಗಳು ಬರುತ್ತವೆ, ಕೆಲವೊಮ್ಮೆ ರನ್ ಬರುವುದಿಲ್ಲ. ಆದರೆ ನಾನು ಒಂದು ನಿರ್ದಿಷ್ಟ ಉದ್ದೇಶದಿಂದ, ಒಂದು ನಿರ್ದಿಷ್ಟ ರೀತಿಯಲ್ಲಿ ಆಡುತ್ತೇನೆ ಎಂದು ನಿರ್ಧರಿಸಿದ್ದೇನೆ. ನಾನು ಯಶಸ್ವಿಯಾಗಬಹುದು ಅಥವಾ ಯಶಸ್ವಿಯಾಗದಿರಬಹುದು, ಆದರೆ ನಾನು ನನ್ನ ಪ್ರಕ್ರಿಯೆ ಅಥವಾ ಮನಸ್ಥಿತಿಯನ್ನು ಬದಲಾಯಿಸುವುದಿಲ್ಲ ಎಂದು ಅಭಿಷೇಕ್ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ: ‘ಪವರ್’​ ಇಲ್ಲ… ಬಾಬರ್ ಆಝಂ ಮಾನ ಕಳೆದ ಪಾಕ್ ಕೋಚ್

ಈ ಮೂಲಕ ಮುಂಬರುವ ಪಂದ್ಯಗಳಲ್ಲೂ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡುವುದಾಗಿ ಅಭಿಷೇಕ್ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಇದರ ಹೊರತಾಗಿ ಈ ಹಿಂದಿನ ವೈಫಲ್ಯಗಳ ಬಗ್ಗೆ ಚಿಂತಿಸುವುದಿಲ್ಲ. ಅಲ್ಲದೆ ಟೀಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಅಭಿಷೇಕ್ ಶರ್ಮಾ ವಿಮರ್ಶಕರಿಗೆ ಖಡಕ್ ತಿರುಗೇಟು ನೀಡಿದ್ದಾರೆ.

Published On - 1:19 pm, Sun, 22 February 26