‘ನಾನು ಹೆಮ್ಮೆಯ ಅಂಧಭಕ್ತೆ’ ಎಂದ ‘ಸೂರ್ಯವಂಶ’ ನಟಿ ಇಶಾ ಕೊಪ್ಪಿಕರ್; ವಿಡಿಯೋ ವೈರಲ್
ಬಹುಭಾಷಾ ನಟಿ ಇಶಾ ಕೊಪ್ಪಿಕರ್ ಅವರು ತಮ್ಮ ಅಭಿಪ್ರಾಯ ಹಂಚಿಕೊಳ್ಳುವಲ್ಲಿ ಹಿಂದೇಟು ಹಾಕಿಲ್ಲ. ‘ನಾನು ಹೆಮ್ಮೆಯ ಅಂಧಭಕ್ತೆ’ ಎಂದು ಅವರು ನೇರವಾಗಿ ಹೇಳಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಅವರು ಈ ವಿಷಯ ತಿಳಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ..

‘ಸೂರ್ಯವಂಶ’ ಸಿನಿಮಾದಲ್ಲಿ ವಿಷ್ಣವರ್ಧನ್ ಜೊತೆ ಅಭಿನಯಿಸಿದ ಖ್ಯಾತ ನಟಿ ಇಶಾ ಕೊಪ್ಪಿಕರ್ (Isha Koppikar) ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ ತಾವು ಹೆಮ್ಮೆಯ ‘ಅಂಧಭಕ್ತೆ’ (Andhbhakt) ಎಂದು ಹೇಳಿಕೊಂಡಿದ್ದಾರೆ. ತಮ್ಮ ದೇಶದ ಬೆಳವಣಿಗೆಯನ್ನು ಕಂಡು ಹೆಮ್ಮೆಪಡುವ ಯಾರನ್ನಾದರೂ ಭಕ್ತ ಎನ್ನುವುದಾದರೆ, ತಾವು ದೇಶದ ಭಕ್ತೆ ಎನ್ನಿಸಿಕೊಳ್ಳಲು ಯಾವುದೇ ಮುಜುಗರವಿಲ್ಲ ಎಂದು ಅವರು ತಿಳಿಸಿದ್ದಾರೆ.
ತಮ್ಮ ವಿಡಿಯೋದಲ್ಲಿ ಮಾತನಾಡಿರುವ ಇಶಾ, ‘ಹೌದು, ನಾನು ಅಂಧಭಕ್ತೆ. ದೇಶವನ್ನು ಪ್ರೀತಿಸುವುದು ಮತ್ತು ಅದು ಪ್ರಗತಿ ಹೊಂದುವುದನ್ನು ನೋಡುವುದು ಭಕ್ತಿ ಎಂದಾದರೆ, ನಾನು ಭಕ್ತೆ. ಅಂಧಭಕ್ತೆ ಎನ್ನಿಸಿಕೊಳ್ಳಲು ಹೆಮ್ಮೆಪಡುತ್ತೇನೆ. ಆದರೆ ನನ್ನ ಈ ಭಕ್ತಿ ಯಾವುದೇ ರಾಜಕೀಯ ಪಕ್ಷದ ಮೇಲಲ್ಲ, ನನ್ನ ದೇಶದ ಮೇಲೆ. ನನಗೆ ದೇಶವೇ ಮೊದಲು. ನಾನು ಸರ್ಕಾರದ ನೀತಿಗಳನ್ನು ಪ್ರಶ್ನಿಸಬಹುದು, ಭಿನ್ನಾಭಿಪ್ರಾಯ ಹೊಂದಿರಬಹುದು, ಆದರೂ ನನ್ನ ದೇಶವನ್ನು ಪೂರ್ಣಮನಸ್ಸಿನಿಂದ ಪ್ರೀತಿಸುತ್ತೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ‘ದೇಶ ನಮಗೆ ಏನು ಮಾಡಿದೆ ಎಂದು ಸದಾ ಪ್ರಶ್ನಿಸುವ ಬದಲು, ನಾವು ದೇಶಕ್ಕೆ ಏನು ಕೊಡುಗೆ ನೀಡಬಹುದು ಎಂದು ಯೋಚಿಸುವ ಸಮಯ ಬಂದಿದೆ. ಭಾರತ ಇಂದು ವೇಗವಾಗಿ ಬದಲಾಗುತ್ತಿದೆ. ಹೊಸ ಭಾರತವನ್ನು ನಿರ್ಮಿಸಲು ನಮ್ಮ ಆಲೋಚನೆಗಳನ್ನು ಬದಲಾಯಿಸಿಕೊಳ್ಳಬೇಕಿದೆ. ಆದ್ದರಿಂದ ನನ್ನನ್ನು ಭಕ್ತೆ ಎನ್ನಿ, ಅಂಧಭಕ್ತೆ ಎನ್ನಿ ಅಥವಾ ರಾಷ್ಟ್ರವಾದಿ ಎನ್ನಿ. ನಾನು ಭಾರತೀಯಳು, ನನ್ನ ದೇಶವನ್ನು ಪ್ರೀತಿಸುತ್ತೇನೆ’ ಎಂದಿದ್ದಾರೆ.
ಇಶಾ ಕೊಪ್ಪಿಕರ್ ಇನ್ಸ್ಟಾಗ್ರಾಮ್ ಪೋಸ್ಟ್:
View this post on Instagram
ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್‌ನ ಕ್ಯಾಪ್ಷನ್‌ನಲ್ಲಿಯೂ ಬರೆದುಕೊಂಡಿರುವ ಇಶಾ ಕೊಪ್ಪಿಕರ್, ‘ಭಾರತವನ್ನು ಪ್ರೀತಿಸುವುದು ‘ಅಂಧಭಕ್ತಿ’ ಎಂದಾದರೆ, ನಾನು ಆ ಹೆಸರನ್ನು ಹೆಮ್ಮೆಯಿಂದ ಸ್ವೀಕರಿಸುತ್ತೇನೆ. ತಪ್ಪು ಅನಿಸಿದ್ದನ್ನು ಪ್ರಶ್ನಿಸುವ ಮತ್ತು ಸರಿ ಅನಿಸಿದ್ದನ್ನು ಮೆಚ್ಚುವ ಹಕ್ಕು ನನಗಿದೆ. ಎಲ್ಲಕ್ಕಿಂತ ಮಿಗಿಲಾಗಿ ನನ್ನ ದೇಶವೇ ನನಗೆ ಮೊದಲು’ ಎಂದು ಉಲ್ಲೇಖಿಸಿದ್ದಾರೆ. ಸದ್ಯ ಇಶಾ ಕೊಪ್ಪಿಕರ್ ಅವರ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ‘ನಾನು ಮೋದಿಯ ಹೆಮ್ಮೆಯ ಅಂಧಭಕ್ತೆ’: ‘ಧುರಂಧರ್ 2’ ನೋಡಿ ಹೇಳಿಕೆ ನೀಡಿದ ನಟಿ ರೇಣು ದೇಸಾಯಿ
ಮುಂಬೈ ಮೂಲದ ಇಶಾ ಕೊಪ್ಪಿಕರ್ ಅವರು ಬಹುಭಾಷೆಯ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದಾರೆ. ‘ಸೂರ್ಯವಂಶ’ ಸಿನಿಮಾದಲ್ಲಿ ಅವರು ಮಾಡಿದ ಪಾತ್ರವನ್ನು ಪ್ರೇಕ್ಷಕರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಹಿಂದಿ, ಕನ್ನಡ, ತೆಲುಗು, ತಮಿಳು ಹಾಗೂ ಮರಾಠಿ ಭಾಷೆಯ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಈಗ ಇಶಾ ಕೊಪ್ಪಿಕರ್ ಅವರಿಗೆ 49 ವರ್ಷ ವಯಸ್ಸು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




