AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಮೋದಿಯ ಹೆಮ್ಮೆಯ ಅಂಧಭಕ್ತೆ’: ‘ಧುರಂಧರ್ 2’ ನೋಡಿ ಹೇಳಿಕೆ ನೀಡಿದ ನಟಿ ರೇಣು ದೇಸಾಯಿ

ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಅವರು ಈ ರೀತಿ ಪೋಸ್ಟ್ ಮಾಡಿದ್ದಾರೆ. ‘ಧುರಂಧರ್ 2’ ಸಿನಿಮಾ ನೋಡಿದ ಬಳಿಕ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ರೇಣು ದೇಸಾಯಿ ಅವರಿಗೆ ಈ ಸಿನಿಮಾ ಸಖತ್ ಇಷ್ಟ ಆಗಿದೆ. ಆದರೆ ಕೆಲವರಿಗೆ ಇಷ್ಟ ಆಗಿಲ್ಲ.

‘ನಾನು ಮೋದಿಯ ಹೆಮ್ಮೆಯ ಅಂಧಭಕ್ತೆ’: ‘ಧುರಂಧರ್ 2’ ನೋಡಿ ಹೇಳಿಕೆ ನೀಡಿದ ನಟಿ ರೇಣು ದೇಸಾಯಿ
Renu Desai, Ranveer Singh
ಮದನ್​ ಕುಮಾರ್​
|

Updated on: Mar 22, 2026 | 1:14 PM

Share

ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ (Dhurandhar 2) ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಜೊತೆಗೆ ಸೆಲೆಬ್ರಿಟಿಗಳ ಮೆಚ್ಚುಗೆಯನ್ನೂ ಗಳಿಸುತ್ತಿದೆ. ಪವನ್ ಕಲ್ಯಾಣ್ ಮಾಜಿ ಪತ್ನಿ, ನಟಿ ರೇಣು ದೇಸಾಯಿ (Renu Desai) ಅವರು ಈ ಸಿನಿಮಾ ನೋಡಿ ಫಿದಾ ಆಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ತಮಗಿರುವ ಅಭಿಮಾನವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ‘ನಾನು ಮೋದಿಜಿಯ ಹೆಮ್ಮೆಯ ಅಂಧಭಕ್ತೆ’ ಎಂದು ಅವರು ಹೇಳಿದ್ದಾರೆ. ಅವರ ಈ ಮಾತಿನ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ.

ರೇಣು ದೇಸಾಯಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಿನಿಮಾ ಆರಂಭದಲ್ಲಿ ಬರುವ ಭಗವದ್ಗೀತೆಯ ಶ್ಲೋಕವನ್ನು (ಅಧ್ಯಾಯ 2, ಶ್ಲೋಕ 47) ಹಂಚಿಕೊಂಡಿದ್ದಾರೆ. ಅದರ ಜೊತೆಗೆ, ‘ನಮ್ಮ ಸಶಸ್ತ್ರ ಪಡೆಗಳು ಮತ್ತು ಗುಪ್ತಚರ ಸಂಸ್ಥೆಗಳ ಬಗ್ಗೆ ನಿಮಗೆ ಕಿಂಚಿತ್ತಾದರೂ ಗೌರವವಿದ್ದರೆ, ಈ ಸಿನಿಮಾ ನೋಡಿ. ಅವರ ಕಾರಣದಿಂದಲೇ ನಾವು ಮನೆಯಲ್ಲಿ ಶಾಂತಿಯಿಂದ ನಿದ್ದೆ ಮಾಡುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.

‘ಧುರಂಧರ್ 2’ ಸಿನಿಮಾದ ಒಂದು ದೃಶ್ಯದಲ್ಲಿ ಭೂಗತ ಲೋಕದ ಡಾನ್ ದಾವೂದ್ ಇಬ್ರಾಹಿಂ (ಬಡೇ ಸಾಹಬ್ ಪಾತ್ರ), ‘ಈ ಚಾಯ್‌ವಾಲಾ ಭಾರತದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ನಮ್ಮವರಲ್ಲಿ ಭಯ ಹೆಚ್ಚಾಗಿದೆ’ ಎಂದು ಹೇಳುವ ಸಂಭಾಷಣೆಯಿದೆ. ಈ ದೃಶ್ಯದ ವಿಡಿಯೋವನ್ನು ಹಂಚಿಕೊಂಡಿರುವ ರೇಣು ದೇಸಾಯಿ, ‘ಬಿಜೆಪಿ ಮತ್ತು ನಮ್ಮ ಅದ್ಭುತ ಪ್ರಧಾನಿ ಮೋದಿಜಿಯ ಹೆಮ್ಮೆಯ ಅಂಧಭಕ್ತೆ ನಾನು’ ಎಂದು ಬರೆದುಕೊಳ್ಳುವ ಮೂಲಕ ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಈ ಸಿನಿಮಾದ ಬಗ್ಗೆ ಪ್ರೇಕ್ಷಕರ ವಲಯದಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಅನೇಕರು ಈ ಸಿನಿಮಾವನ್ನು ಒಂದು ಪ್ರೊಪಗಾಂಡ ಎಂದು ಕರೆದಿದ್ದಾರೆ. ಸಾಕಷ್ಟು ನೆಗೆಟಿವ್ ವಿಮರ್ಶೆಗಳು ಬರುತ್ತಿವೆ. ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲದೇ ಹಲವು ಸೆಲೆಬ್ರಿಟಿಗಳು ಕೂಡ ಈ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅದರ ನಡುವೆಯೂ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.

ಇದನ್ನೂ ಓದಿ: ‘ಧುರಂಧರ್ 2’ ಪ್ರೊಪಗಾಂಡ ಸಿನಿಮಾ ಎಂದವರಿಗೆ ತಿರುಗೇಟು ನೀಡಿದ ಅನುಪಮ್ ಖೇರ್

2025ರ ಸೂಪರ್ ಹಿಟ್ ‘ಧುರಂಧರ್’ ಚಿತ್ರದ ಸೀಕ್ವೆಲ್ ಆಗಿರುವ ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಿರ್ದೇಶಕ ಆದಿತ್ಯ ಧರ್ ಅವರು ಈ ಸಿನಿಮಾದಿಂದ ಜನಪ್ರಿಯತೆ ಹೆಚ್ಚಿಕೊಂಡಿದ್ದಾರೆ. ಈಗಾಗಲೇ ಭಾರತದಲ್ಲಿ ಈ ಸಿನಿಮಾದ ಕಲೆಕ್ಷನ್ 300 ಕೋಟಿ ರೂಪಾಯಿ ಮೀರಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us