AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪವರ್’​ ಇಲ್ಲ… ಬಾಬರ್ ಆಝಂ ಮಾನ ಕಳೆದ ಪಾಕ್ ಕೋಚ್

Babar Azam: ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಬಾಬರ್ ಆಝಂ ಮೂರು ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ ಕಲೆಹಾಕಿದ ಒಟ್ಟು ಸ್ಕೋರ್ ಕೇವಲ 66 ರನ್​ ಮಾತ್ರ. ಈ 66 ರನ್​ಗಳಿಸಲು ಬರೋಬ್ಬರಿ 57 ಎಸೆತಗಳನ್ನು ಎದುರಿಸಿದ್ದಾರೆ. ಅಂದರೆ ಕೇವಲ 115.78 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ.

'ಪವರ್'​ ಇಲ್ಲ... ಬಾಬರ್ ಆಝಂ ಮಾನ ಕಳೆದ ಪಾಕ್ ಕೋಚ್
Babar Azam
ಝಾಹಿರ್ ಯೂಸುಫ್
|

Updated on: Feb 22, 2026 | 11:33 AM

Share

ಪಾಕಿಸ್ತಾನ್ ತಂಡದಲ್ಲಿ ಬಾಬರ್ ಆಝಂ ಅವರ ರೋಲ್ ಏನು? ಈ ಪ್ರಶ್ನೆಗೆ ಪಾಕ್ ತಂಡ ಕೋಚ್ ಮೈಕ್ ಹೆಸ್ಸನ್ ಬಳಿಯೇ ಸ್ಪಷ್ಟ ಉತ್ತರವಿಲ್ಲ. ಇದಕ್ಕೆ ಸಾಕ್ಷಿ ಸುದ್ದಿಗೋಷ್ಠಿಯಲ್ಲಿ ಅವರು ನೀಡಿರುವ ಹೇಳಿಕೆ. ನಮೀಬಿಯ ವಿರುದ್ಧದ ಪಂದ್ಯದಲ್ಲಿ ಬಾಬರ್ ಆಝಂ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​ಗೆ ಇಳಿಸದೇ ಇರುವ ಕಾರಣವೇನು? ಎಂಬ ಪ್ರಶ್ನೆಯನ್ನು ಹೆಸ್ಸನ್ ಮುಂದಿಡಲಾಗಿತ್ತು.

ಈ ಪ್ರಶ್ನೆಗೆ ಅವರಿಂದ ಬಂದ ಉತ್ತರ ಪವರ್ ಇಲ್ಲ. ಅಂದರೆ ಪಾಕ್ ತಂಡದ ಮೂರನೇ ವಿಕೆಟ್ ಪತನವಾಗಿದ್ದು 12ನೇ ಓವರ್​ನಲ್ಲಿ. ಈ ವೇಳೆ ಬಿರುಸಿನ ಬ್ಯಾಟಿಂಗ್ ಮಾಡುವುದು ಅಗತ್ಯವಿತ್ತು. ಆದರೆ ಬಾಬರ್ ಆಝಂಗೆ ಆಕ್ರಮಣಕಾರಿ ಬ್ಯಾಟಿಂಗ್ ಬರುವುದಿಲ್ಲ. ಹೀಗಾಗಿ ಖ್ವಾಜಾ ನಫಾಯ್ ಹಾಗೂ ಶಾದಾಬ್ ಖಾನ್​ಗೆ ಮುಂಬಡ್ತಿ ನೀಡಲಾಯಿತು ಎಂದಿದ್ದಾರೆ.

ಇದೇ ವೇಳೆ ಬಾಬರ್ ಆಝಂ ಈ ಹಿಂದೆ ಪಾಕಿಸ್ತಾನ್ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದರು ಎಂಬುದನ್ನು ಪತ್ರಕರ್ತರು ಜ್ಞಾಪಿಸಿದರು. ಇದಕ್ಕೆ ಸ್ಪಷ್ಟನೆ ನೀಡಿದ ಮೈಕ್ ಹೆಸ್ಸನ್, ಬಾಬರ್ ಅವರ ಪವರ್‌ಪ್ಲೇ ಸ್ಟ್ರೈಕ್ ರೇಟ್ 100 ಕ್ಕಿಂತ ಕಡಿಮೆ ಇರುವುದರಿಂದ, ಅವರನ್ನು ಆರಂಭಿಕ ಆಟಗಾರನ ಸ್ಥಾನದಿಂದ ಕೆಳಗಿಳಿಸಿದ್ದೇವೆ. ಹೀಗಾಗಿ ಅವರು ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ.

ಮಧ್ಯಮ ಓವರ್‌ಗಳಲ್ಲಿ ತಂಡವು ಸಂಕಷ್ಟದಲ್ಲಿದ್ದಾಗ ಇನ್ನಿಂಗ್ಸ್‌ಗೆ ಸ್ಥಿರತೆ ನೀಡಲು ಬಾಬರ್ ಆಝಂ ಸೂಕ್ತ ಆಟಗಾರ. ಆದರೆ ಅವರು ಪವರ್ ಹಿಟ್ಟರ್ ಅಲ್ಲ ಎಂಬುದೇ ಸತ್ಯ.

ಪಂದ್ಯದ 12ನೇ ಓವರ್ ನಂತರ ಬಾಬರ್ ಆಝಂ ಕ್ರೀಸ್‌ಗೆ ಬರುವುದು ತಂಡಕ್ಕೆ ಅಷ್ಟೊಂದು ಲಾಭದಾಯಕವಲ್ಲ. ಆ ಸಮಯದಲ್ಲಿ ಅವರಿಗಿಂತ ವೇಗವಾಗಿ ರನ್ ಗಳಿಸುವ “ಪವರ್ ಹಿಟ್ಟರ್‌ಗಳು” ತಂಡಕ್ಕೆ ಅಗತ್ಯ ಎಂದು ಹೆಸ್ಸನ್ ಅಭಿಪ್ರಾಯಪಟ್ಟಿದ್ದಾರೆ.

ಇದೇ ಕಾರಣದಿಂದಾಗಿ ನಾವು ನಮೀಬಿಯ ವಿರುದ್ಧದ ಪಂದ್ಯದಲ್ಲಿ ಬಾಬರ್ ಆಝಂ ಅವರನ್ನು ಬ್ಯಾಟಿಂಗ್​ಗೆ ಇಳಿಸಿರಲಿಲ್ಲ. ಅವರ ಬದಲಿಗೆ ಖ್ವಾಜಾ ಹಾಗೂ ಶಾದಾಬ್​ ಖಾನ್​ಗೆ ಮುಂಬಡ್ತಿ ನೀಡಲಾಗಿದೆ ಎಂದು ಹೆಸ್ಸನ್ ತಿಳಿಸಿದ್ದಾರೆ.

ಇನ್ನು ಬಾಬರ್  ಆಝಂ ತಮ್ಮ ಸ್ಟ್ರೈಕ್ ರೇಟ್ ಹೆಚ್ಚಿಸಿಕೊಳ್ಳುವತ್ತ ಮತ್ತು ವಿಶೇಷವಾಗಿ ಸ್ಪಿನ್ ಬೌಲಿಂಗ್ ವಿರುದ್ಧ ಉತ್ತಮವಾಗಿ ಆಡುವತ್ತ ಗಮನಹರಿಸಬೇಕು ಎಂದು ಮೈಕ್ ಹೆಸ್ಸನ್ ಸೂಚಿಸಿದ್ದಾರೆ.

ಈ ಕಾರ್ಯತಂತ್ರದ ಬದಲಾವಣೆಗಳ ಬಗ್ಗೆ ಬಾಬರ್ ಅವರೂ ಅರಿವಿದ್ದು, ತಂಡದ ಹಿತದೃಷ್ಟಿಯಿಂದ ಇದನ್ನು ಒಪ್ಪಿಕೊಂಡಿದ್ದಾರೆ ಎಂದು ಪಾಕಿಸ್ತಾನ್ ತಂಡದ ಕೋಚ್ ತಿಳಿಸಿದ್ದಾರೆ.

ಕುತೂಹಲಕಾರಿ ವಿಷಯ ಎಂದರೆ, ಬಾಬರ್ ಆಝಂ ಅವರ ಈ ಎಲ್ಲಾ ನೂನ್ಯತೆಗಳನ್ನು ಮತ್ತು ದೌರ್ಬಲ್ಯಗಳನ್ನು ಪಾಕಿಸ್ತಾನ್ ಕೋಚ್ ಮೈಕ್ ಹೆಸ್ಸನ್ ತೆರೆದಿಟ್ಟಿರುವುದು ಸುದ್ದಿಗೋಷ್ಠಿಯಲ್ಲಿ. ಅಂದರೆ ಬಹಿರಂಗ ಹೇಳಿಕೆಯ ಮೂಲಕ ಎಂಬುದೇ ಅಚ್ಚರಿ.

ಕೋಚ್​ನ ಈ ಬಹಿರಂಗ ಹೇಳಿಕೆಯ ಬೆನ್ನಲ್ಲೇ, ಪವರ್​ಪ್ಲೇನಲ್ಲೂ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ, 12 ಓವರ್​ಗಳ ಬಳಿಕ ಬಿರುಸಿನಿಂದ ಬ್ಯಾಟ್ ಬೀಸಲು ಸಾಧ್ಯವಿಲ್ಲವಾದರೆ ಬಾಬರ್ ಆಝಂ ತಂಡದಲ್ಲಿ ಯಾಕಿದ್ದಾರೆ? ಎಂದು ಪಾಕಿಸ್ತಾನದ ಕೆಲ ಮಾಜಿ ಕ್ರಿಕೆಟಿಗರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಇದುವೇ ಟೀಮ್ ಇಂಡಿಯಾದ ಅತೀ ದೊಡ್ಡ ವೀಕ್​ನೆಸ್​​!

ಒಟ್ಟಿನಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕೇವಲ 128.19ರ ಸ್ಟ್ರೈಕ್ ರೇಟ್ ಹೊಂದಿರುವ ಬಾಬರ್ ಆಝಂ ಪಾಕ್ ತಂಡದ ಕೋಚ್​ನ ಹೇಳಿಕೆಯಿಂದ ಮುಜುಗರಕ್ಕೊಳಗಾಗಿರುವುದಂತು ದಿಟ. ಈ ಮುಜುಗರದಿಂದ ಪಾರಾಗಲು ಅವರು ಮುಂಬರುವ ಪಂದ್ಯಗಳಲ್ಲಿ ಸ್ಟ್ರೈಕ್ ರೇಟ್ ಹೆಚ್ಚಿಸಿಕೊಳ್ಳಲಿದ್ದಾರಾ ಅಥವಾ ಶೊಯೆಬ್ ಅಖ್ತರ್ ಹೇಳಿದಂತೆ ಬಾಬರ್ ಆಝಂ ಟುಕ್ ಟುಕ್ ಕಿಂಗ್ ಆಗಿ ಮುಂದುವರೆಯಲಿದ್ದಾರಾ ಕಾದು ನೋಡಬೇಕಿದೆ.