ಸೋತರೂ ವಿಶ್ವ ಚಾಂಪಿಯನ್ನರಿಗೆ ನಡುಕ ಹುಟ್ಟಿಸಿದ ಪ್ರಜ್ಞಾನಂದ

Chess World Cup 2023: ಮೊದಲ ಟೈಬ್ರೇಕ್​ ಅನ್ನು ಗೆಲ್ಲುವ ಮೂಲಕ ಒತ್ತಡ ಹೇರಿದರು. ಇನ್ನು 2ನೇ ಟೈಬ್ರೇಕ್​ನಲ್ಲಿ ಒತ್ತಡಕ್ಕೆ ಸಿಲುಕಿದ ಪ್ರಜ್ಞಾನಂದ ವಿರುದ್ಧ ಡ್ರಾ ಸಾಧಿಸುವಲ್ಲಿ ನಾರ್ವೆ ತಾರೆ ಯಶಸ್ವಿಯಾದರು.

ಸೋತರೂ ವಿಶ್ವ ಚಾಂಪಿಯನ್ನರಿಗೆ ನಡುಕ ಹುಟ್ಟಿಸಿದ ಪ್ರಜ್ಞಾನಂದ
, R Praggnanandhaa
Follow us
| Updated By: ಝಾಹಿರ್ ಯೂಸುಫ್

Updated on: Aug 24, 2023 | 6:19 PM

ಚೆಸ್ ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಭಾರತದ ಆರ್​. ಪ್ರಜ್ಞಾನಂದ (R Praggnanandhaa )ವಿರೋಚಿತವಾಗಿ ಸೋಲೊಪ್ಪಿಕೊಂಡಿದ್ದಾರೆ. ವಿಶ್ವದ ನಂಬರ್ 1 ಚೆಸ್ ತಾರೆ ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧದ ಈ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಕ್ಲಾಸಿಕ್​ ಗೇಮ್​ಗಳ ಮೂಲಕವೇ ಚಾಂಪಿಯನ್ ಪಟ್ಟ ಅಲಂಕರಿಸುವ ನಿರೀಕ್ಷೆಯಲ್ಲಿದ್ದ ಕಾರ್ಲ್​​ಸೆನ್​ಗೆ ಮೊದಲ ಗೇಮ್​ನಲ್ಲೇ ಡ್ರಾ ಮಾಡಿಕೊಳ್ಳುವ ಮೂಲಕ ಭಾರತೀಯ ತಾರೆ ಶಾಕ್ ನೀಡಿದ್ದರು. ಇನ್ನು 2ನೇ ಗೇಮ್​​ನಲ್ಲಿ ಪ್ರಜ್ಞಾನಂದನ ವಿರುದ್ಧ ಗೆಲುವು ಅಸಾಧ್ಯ ಎಂಬುದನ್ನು ಅರಿತ ಕಾರ್ಲ್​ಸೆನ್ ಡ್ರಾ ಮಾಡಿಕೊಂಡಿದ್ದರು.

ಇದರೊಂದಿಗೆ ಪಂದ್ಯವು ಟೈಬ್ರೇಕ್​ನತ್ತ ಸಾಗಿತು. ಆದರೆ ಇಲ್ಲಿ ತಮ್ಮೆಲ್ಲಾ ಅನುಭವವನ್ನು ಧಾರೆಯೆರೆದ ಕಾರ್ಲ್​ಸೆನ್ ಭಾರತೀಯ ಆಟಗಾರನ ಮೇಲೆ ಮೊದಲ ಸುತ್ತಿನಲ್ಲೇ ಹಿಡಿತ ಸಾಧಿಸಿದ್ದರು. ಅಲ್ಲದೆ ಮೊದಲ ಟೈಬ್ರೇಕ್​ ಅನ್ನು ಗೆಲ್ಲುವ ಮೂಲಕ ಒತ್ತಡ ಹೇರಿದರು. ಇನ್ನು 2ನೇ ಟೈಬ್ರೇಕ್​ನಲ್ಲಿ ಒತ್ತಡಕ್ಕೆ ಸಿಲುಕಿದ ಪ್ರಜ್ಞಾನಂದ ವಿರುದ್ಧ ಡ್ರಾ ಸಾಧಿಸುವಲ್ಲಿ ನಾರ್ವೆ ತಾರೆ ಯಶಸ್ವಿಯಾದರು. ಈ ಡ್ರಾನೊಂದಿಗೆ ಟೈಬ್ರೇಕ್ ಅನ್ನು 1-0 ಅಂತರದಿಂದ ಗೆದ್ದು ಕಾರ್ಲ್​ಸೆನ್ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದರು.

ವಿಶ್ವ ಚಾಂಪಿಯನ್ನರ ನಿದ್ದೆಗೆಡಿಸಿದ ಪ್ರಜ್ಞಾನಂದ:

ಫೈನಲ್ ಪಂದ್ಯದಲ್ಲಿ ಆರ್​ ಪ್ರಜ್ಞಾನಂದ ಸೋತಿರುವುದು ವಿಶ್ವದ ನಂಬರ್ 1 ಚೆಸ್ ತಾರೆ  ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ ಎಂಬುದು ಇಲ್ಲಿ ಉಲ್ಲೇಖಾರ್ಹ. ಏಕೆಂದರೆ ಕಾರ್ಲ್​ಸೆನ್ ಇಲ್ಲಿ ಅಗ್ರಸ್ಥಾನದಲ್ಲಿದ್ದರೆ, ಪ್ರಜ್ಞಾನಂದ ಅವರು 29ನೇ ಸ್ಥಾನದಲ್ಲಿದ್ದಾರೆ. ಅಂದರೆ ವಿಶ್ವ ಶ್ರೇಯಾಂಕದಲ್ಲಿ 29ನೇ ಸ್ಥಾನದಲ್ಲಿರುವ 18 ವರ್ಷದ ಭಾರತೀಯ ತಾರೆ ವಿಶ್ವದ ನಂಬರ್ ಒನ್ ತಾರೆಗೆ ಸವಾಲೊಡ್ಡಿದ್ದರು.

ಅಷ್ಟೇ ಯಾಕೆ, ವಿಶ್ವದ ನಂಬರ್-2 ಹಾಗೂ ನಂಬರ್-3 ಆಟಗಾರರಿಗೂ ಸೋಲುಣಿಸಿದ್ದರು. ಅಂದರೆ ಫೈನಲ್​ಗೂ ಮುನ್ನ ಪ್ರೀ ಕ್ವಾಟರ್​ಫೈನಲ್​ನಲ್ಲಿ ವಿಶ್ವದ ನಂಬರ್-2 ಚೆಸ್ ತಾರೆ ಅಮೆರಿಕದ ಹಿಕಾರು ನಕಮುರಾಗೆ ಪ್ರಜ್ಞಾನಂದ ಸೋಲುಣಿಸಿದ್ದರು. ಈ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದ ಭಾರತೀಯ ಚೆಸ್ ಚತುರನಿಗೆ ಎದುರಾಗಿದ್ದು ವಿಶ್ವದ 3ನೇ ಶ್ರೇಯಾಂಕದ ಫ್ಯಾಬಿಯಾನೋ ಕರುವಾನಾ.

ಅಮೆರಿಕದ ಕರುವಾನಾಗೆ ಭರ್ಜರಿ ಪೈಪೋಟಿ ನೀಡಿದ್ದ ಪ್ರಜ್ಞಾನಂದ ಪಂದ್ಯವನ್ನು ಟೈಬ್ರೇಕ್​ನತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ ಟೈಬ್ರೇಕ್​ನಲ್ಲಿ ಫ್ಯಾಬಿಯಾನೋ ಕರುವಾನಾಗೆ ಸೋಲುಣಿಸಿ ಫೈನಲ್​ಗೆ ಪ್ರವೇಶಿಸಿದ್ದರು.

ಇನ್ನು ಫೈನಲ್​ನಲ್ಲೂ ವಿಶ್ವದ ನಂಬರ್ ಒನ್ ಚೆಸ್ ಪಟು ಮ್ಯಾಗ್ನಸ್ ಕಾರ್ಲ್‌ಸೆನ್​ಗೂ ಎಲ್ಲಾ ರೀತಿಯಲ್ಲೂ ಸವಾಲೊಡ್ಡಿದ್ದರು. ಮೊದಲ ಗೇಮ್​ಗಳ ಮೂಲಕ ಚಾಂಪಿಯನ್ ಪಟ್ಟ ನಿರೀಕ್ಷೆಯಲ್ಲಿದ್ದ ಕಾರ್ಲ್​ಸೆನ್ ವಿರುದ್ಧ ಚಾಂಪಿಯನ್​ ಪಟ್ಟಕ್ಕಾಗಿ ಮೂರು ದಿನ ಸೆಣಸಾಡುವಲ್ಲಿ 29ನೇ ಶ್ರೇಯಾಂಕದಲ್ಲಿರುವ ಪ್ರಜ್ಞಾನಂದ ಯಶಸ್ವಿಯಾಗಿದ್ದರು.

ಇದಾಗ್ಯೂ ಟೈಬ್ರೇಕ್​ನಲ್ಲಿ ಮ್ಯಾಗ್ನಸ್ ಕಾರ್ಲ್‌ಸೆನ್ ಅವರ ಅನುಭವದ ಮುಂದೆ 18ರ ಹರೆಯದ ಆರ್​. ಪ್ರಜ್ಞಾನಂದ ತಲೆಬಾಗಲೇಬೇಕಾಯಿತು. ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಆರ್​. ಪ್ರಜ್ಞಾನಂದ ತಮ್ಮ ಮೂರು ಪಂದ್ಯಗಳಲ್ಲಿ ಎದುರಿಸಿರುವುದು ವಿಶ್ವ ಟಾಪ್-3 ಚೆಸ್​ ಪಟುಗಳನ್ನು ಎಂಬುದು.

ಇದನ್ನೂ ಓದಿ: 2 ಬಾರಿ ಚೆಸ್ ವಿಶ್ವಕಪ್ ಗೆದ್ದಿದ್ದ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್

ಅಂದರೆ ಮೂವರಲ್ಲಿ ಇಬ್ಬರಿಗೂ ಪ್ರಜ್ಞಾನಂದ ಸೋಲಿನ ರುಚಿ ತೋರಿಸಿದ್ದರು. ಇನ್ನು ಒಬ್ಬರಿಗೆ ಸೋಲಿನ ಭೀತಿ ಹುಟ್ಟಿಸಿದರೂ ವಿಜಯಮಾಲೆ ಮಾತ್ರ ಒಲಿಯಲಿಲ್ಲ. ಆದರೆ ಮುಂಬರುವ ದಿನಗಳಲ್ಲಿ ವಿಶ್ವ ಚಾಂಪಿಯನ್​ ಮ್ಯಾಗ್ನಸ್ ಕಾರ್ಲ್‌ಸೆನ್ ಅವರಿಗೆ  29ನೇ ಶ್ರೇಯಾಂಕದಲ್ಲಿರುವ ಆರ್​. ಪ್ರಜ್ಞಾನಂದ ಸವಾಲೊಡ್ಡುವುದರಲ್ಲಿ ಅನುಮಾನವೇ ಇಲ್ಲ. ಅದರ ಮೊದಲ ಟ್ರೈಲರ್ ಈಗ ಚೆಸ್ ವಿಶ್ವಕಪ್​ನಲ್ಲಿ ಕಂಡು ಬಂದಿರುವ ಭರ್ಜರಿ ಪೈಪೋಟಿ.