Vijay Hazare Trophy: ಕನ್ನಡಿಗ ಮಾಯಾಂಕ್ ಅಗರವಾಲ್ ದಾಖಲೆ ಮುರಿದ ಪೃಥ್ವಿ ಶಾ

ಕಳೆದ ವಾರ ಶಾ ಲಿಸ್ಟ್​ ಎ ಕ್ರಿಕೆಟ್​ನಲ್ಲಿ ಮೊತ್ತವೊಂದನ್ನು ಚೇಸ್​ ಮಾಡುವಾಗ ಭಾರತೀಯ ಆಟಗಾರರರು ಗಳಿಸಿದ ಅತ್ಯಧಿಕ ವೈಯಕ್ತಿಕ ಸ್ಕೋರಿನ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡರು. ಸೌರಾಷ್ಟ್ರ ವಿರುದ್ಧ ಅಢಿದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು 123 ಎಸೆತಗಳಲ್ಲಿ 185 ರನ್​ ಬಾರಿಸಿ ಮುಂಬೈ ಟೀಮನ್ನು ಸೆಮಿಫೈನಲ್​ಗೆ ಮುನ್ನಡೆಸಿದ್ದರು.

Vijay Hazare Trophy:  ಕನ್ನಡಿಗ ಮಾಯಾಂಕ್ ಅಗರವಾಲ್ ದಾಖಲೆ ಮುರಿದ ಪೃಥ್ವಿ ಶಾ
ಪೃಥ್ವಿ ಶಾ
ಅರುಣ್​ ಕುಮಾರ್​ ಬೆಳ್ಳಿ

Updated on: Mar 11, 2021 | 7:58 PM

ದೆಹಲಿ:  ಮುಂಬೈ ತಂಡದ ಆರಂಭ ಆಟಗಾರ ಪೃಥ್ವಿ ಶಾ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯ ಆಯ್ಕೆ ಸಮಿತಿಗೆ ತಲೆನೋವು ನೀಡುವುದನ್ನು ಮುಂದುವರೆಸಿದ್ದಾರೆ. ವಿಜಯ ಹಜಾರೆ ಟ್ರೋಫಿ ಟೂರ್ನಮೆಂಟ್​ನ ಸೆಮಿಫೈನಲ್​ನಲ್ಲಿ ಇಂದು (ಗುರುವಾರ) ಮತ್ತೊಂದು ಶಕತ ಬಾರಿಸಿದ ಶಾ ಈ ಟೂರ್ನಿಯ ಸೀಸನೊಂದರಲ್ಲಿ ಅತಿಹೆಚ್ಚು ರನ್ ಗಳಿಸಿರುವ ದಾಖಲೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ಸೆಮಿಫೈನಲ್ ಹಂತದವರೆಗೆ ಅವರು 754 ರನ್ ಗಳಿಸಿ ಕರ್ನಾಟಕದ ಮಾಯಾಂಕ್ ಅಗರ್​ವಾಲ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. 2018 ರ ಆವೃತ್ತಿಯಲ್ಲಿ ಮಾಯಾಂಕ್ 723 ರನ್​ ಗಳಿಸಿದ್ದರು.

ಹಾಗೆ ನೋಡಿದರೆ, ಮಾಯಾಂಕ್ ಅವರ ದಾಖಲೆಯನ್ನು ಇಂದು ಅವರ ರಾಜ್ಯದವರೇ ಆಗಿರುವ ದೇವದತ್ ಪಡಿಕ್ಕಲ್ ಸಹ ಉತ್ತಮ ಪಡಿಸಿದರು. ಈ ಸಾಲಿನಲ್ಲಿ ಪಡಿಕ್ಕಲ್ 4 ಶತಕಗಳೂ ಸೇರಿದಂತೆ 737 ರನ್ ಗಳಿಸಿದ್ದಾರೆ. ಕರ್ನಾಟಕ ಮತ್ತು ಮುಂಬೈ ವಿಜಯ ಹಜಾರೆ ಟ್ರೋಫಿಗಾಗಿ ಸೆಮಿಫೈನಲ್ ಪಂದ್ಯವನ್ನು ದೆಹಲಿಯಲ್ಲಿ ಆಡಿದ್ದು ಶಾ ಅವರ ತಂಡ 88 ರನ್​ಗಳ ಸುಲಭ ಜಯ ಸಾಧಿಸಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಮುಂಬೈ, ನಾಯಕ ಶಾ ಅವರ ಬಿರುಗಾಳಿ ವೇಗದ ಶತಕದ (165, 122 ಎಸೆತ, 17 ಬೌಂಡರಿ, 7 ಸಿಕ್ಸ್) ನೆರವಿನಿಂದ 50ನೇ ಓವರ್​ನಲ್ಲಿ ಎಲ್ಲ ವಿಕೆಟ್​ ಕಳೆದುಕೊಂಡು 322 ರನ್ ಗಳಿಸಿತು. ಶಾ ಅವರಂತೆ ಪ್ರಸಕ್ತ ಸಾಲಿನ ವಿಜಯ ಹಜಾರೆ ಟ್ರೋಫಿಯಲ್ಲಿ ರನ್ ಹೊಳೆ ಹರಿಸಿರುವ ಪಡಿಕ್ಕಲ್ 64 ರನ್ ಗಳಿಸಿ ಔಟಾದರು.

ದೇವದತ್ ಪಡಿಕ್ಕಲ್ ಇಂದು 64 ರನ್​ ಗಳಿಸಿ ಔಟಾದರು

ಗುರುವಾರದಂದು ಶಾ ಕೇವಲ 79 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಟೂರ್ನಮೆಂಟಿನ 3 ಪಂದ್ಯಗಳಲ್ಲಿ ಶಾ ಟೀಮಿನ ನಾಯಕತ್ವ ವಹಿಸಿದ್ದು ಆ ಮೂರು ಪಂದ್ಯಗಳಲ್ಲಿ ಒಂದು ದ್ವಿಶತಕ ಮತ್ತು ಎರಡು ಶತಕಗಳನ್ನುಬಾರಿಸಿದ್ದಾರೆ. ಅವರ 754 ರನ್​ಗಳು 188.5ರ ಸರಾಸರಿಯಲ್ಲಿ ಬಂದಿವೆ.

ಕಳೆದ ವಾರ ಶಾ ಲಿಸ್ಟ್​ ಎ ಕ್ರಿಕೆಟ್​ನಲ್ಲಿ ಮೊತ್ತವೊಂದನ್ನು ಚೇಸ್​ ಮಾಡುವಾಗ ಭಾರತೀಯ ಆಟಗಾರರರು ಗಳಿಸಿದ ಅತ್ಯಧಿಕ ವೈಯಕ್ತಿಕ ಸ್ಕೋರಿನ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡರು. ಸೌರಾಷ್ಟ್ರ ವಿರುದ್ಧ ಅಢಿದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು 123 ಎಸೆತಗಳಲ್ಲಿ 185 ರನ್​ ಬಾರಿಸಿ ಮುಂಬೈ ಟೀಮನ್ನು ಸೆಮಿಫೈನಲ್​ಗೆ ಮುನ್ನಡೆಸಿದ್ದರು.

ಇದಕ್ಕೆ ಮೊದಲು ಈ ದಾಖಲೆ ಭಾರತದ ಮಾಜಿ ಕ್ಯಾಪ್ಟನ್ ಮಹೇಂದ್ರಸಿಂಗ್ ಧೋನಿ ಮತ್ತು ಪ್ರಸಕ್ತ ನಾಯಕ ವಿರಾಟ್​ ಕೊಹ್ಲಿ ಅವರ ಹೆಸರಲ್ಲಿತ್ತು.

ಧೋನಿ 2005ರಲ್ಲಿ ಶ್ರೀಲಂಕಾ ವಿರುದ್ಧ ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಅಜೇಯ 183 ರನ್ ಬಾರಿಸಿದ್ದರು. ಢಾಕಾದಲ್ಲಿ ನಡೆದ 2012 ರ ಏಷ್ಯಾ ಕಪ್ ಪಂದ್ಯವೊಂದರಲ್ಲಿ ಕೊಹ್ಲಿ ಭಾರತದ ಕಟ್ಟಾ ವೈರಿ ಪಾಕಿಸ್ತಾನದ ವಿರುದ್ಧ 183 ರನ್ ಬಾರಿಸಿ ಭಾರತಕ್ಕೆ 6 ವಿಕೆಟ್​ ಜಯ ಕೊಡಿಸಿದ್ದರು.

ಇದನ್ನೂ ಓದಿ: Vijay Hazare Trophy: ಬಿಸಿಸಿಐನಿಂದ ಅವಕೃಪೆಗೊಳಗಾಗಿರುವ ಪೃಥ್ವಿ ಶಾ; ವಿಜಯ್ ಹಜಾರೆ ಟ್ರೋಫಿಯಲ್ಲಿ ದಾಖಲೆಯ ಡಬಲ್ ಸೆಂಚುರಿ!

Published On - 5:11 pm, Thu, 11 March 21

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us